ಮಾಸ್ಟರ್ ಮತ್ತು ಟೀಚರ್ ನಡುವಿನ ಝೆನ್ ಸಂಭಾಷಣೆ

ಝೆನ್ ಮಾಸ್ಟರ್ ತನ್ನ ವಿದ್ಯಾರ್ಥಿಗಳಿಗೆ, ತಾನು ವಿದ್ಯಾರ್ಥಿಯಾಗಿದ್ದಾಗ ನಡೆದ ಘಟನೆಯೊಂದನ್ನು ವಿವರಿಸಿ ಹೇಳುತ್ತಿದ್ದ.

ನಮ್ಮ ಟೀಚರ್ ಮಧ್ಯಾಹ್ನ ಊಟ ಆಗುತ್ತಿದ್ದಂತೆಯೇ ಕ್ಲಾಸಿನಲ್ಲಿ ನಿದ್ದೆ ಹೋಗಿಬಿಡುತ್ತಿದ್ದ, ಯಾಕೆ ಹೀಗೆ ಎಂದು ಕೇಳಿದಾಗಲೆಲ್ಲ

“ಪ್ರತೀ ಮಧ್ಯಾಹ್ನ ನಾನು ನಿದ್ದೆಯಲ್ಲಿ ಕನಸಿನೂರಿಗೆ ಹೋಗಿ ಜ್ಞಾನಿಗಳಾದ ಪೂರ್ವಜರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ, ಕನ್ಫ್ಯೂಸಿಯಸ್ ನಂತೆ.” ಎಂದು ಸಮಜಾಯಿಷಿ ಕೊಡುತ್ತಿದ್ದ.

ಒಂದು ಮಧ್ಯಾಹ್ನ, ಸಿಕ್ಕಾಪಟ್ಟೆ ಬಿಸಿಲಿತ್ತು. ನಾವು ಕೆಲವು ಹುಡುಗರು ಮಧ್ಯಾಹ್ನ ಊಟ ಆದ ಮೇಲೆ ಕ್ಲಾಸಿನಲ್ಲಿ ನಿದ್ದೆ ಹೋಗಿ ಬಿಟ್ಟಿದ್ದೆವು. ಕ್ಲಾಸಿಗೆ ಬಂದ ಟೀಚರ್ ನಮ್ಮನ್ನೆಲ್ಲ ನೋಡಿ ಬಯ್ಯತೊಡಗಿದ.

ನಾನು ಎದ್ದು ನಿಂತು “ನಾವೂ ಕನ್ಫ್ಯೂಸಿಯಸ್ ನಂತೆ ಕನಸಿನೂರಿಗೆ ಹೋಗಿ ಪೂರ್ವಜರನ್ನು ಭೇಟಿ ಮಾಡಿದೆವು” ಎಂದು ಉತ್ತರಿಸಿದೆ.

“ಹೌದಾ, ಹಾಗಾದರೆ ಏನು ಹೇಳಿದರು ಪೂರ್ವಜರು?”

ಟೀಚರ್ ಪಟ್ಟು ಸಡಿಲಿಸಲಿಲ್ಲ.

“ಪ್ರತೀ ಮಧ್ಯಾಹ್ನ ನಮ್ಮ ಟೀಚರ್ ಇಲ್ಲಿ ಬರುತ್ತಾರಾ ಎಂದು ಕೇಳಿದೆವು, ಆದರೆ ಆ ಥರದ ಯಾವ ಟೀಚರ್ ನನ್ನೂ ಅಲ್ಲಿ ಅವರು ನೋಡಿಯೇ ಇಲ್ಲವೆಂದು ಹೇಳಿದರು” ನಾನು ಉತ್ತರಿಸಿದೆ.

ಟೀಚರ್ ಮತ್ತೆ ಯಾವ ಪ್ರಶ್ನೆಯನ್ನೂ ಕೇಳಲಿಲ್ಲ.

(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)

 

Leave a Reply