ನಿರಾಕಾರವು ಮೌನವಾಗಿರುತ್ತದೆ, ಆಕಾರವು ಸೀಮೆಗಳನ್ನು ಸೃಷ್ಟಿಸುತ್ತದೆ !

photoಯಾವುದು ವಾಸ್ತವವೋ, ವಸ್ತುತಃ ಇದೆಯೋ ಅದು ಮೌನವಾಗಿರುತ್ತದೆ. ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ. ಅದು ತನ್ನ ಅಸ್ತಿತ್ವವನ್ನು ಘೋಷಿಸುವುದಿಲ್ಲ. ಆದರೆ ಎಲ್ಲ ಸಾಕಾರವೂ ಕೂಗಿಕೂಗಿ ತನ್ನನ್ನು ತೋರಿಸಿಕೊಳ್ಳುತ್ತವೆ. ನಾನು ಇದ್ದೀನಿ ಎಂದು ಘೋಷಿಸಿಕೊಳ್ಳುತ್ತವೆ. ಆಕಾರವು ಸೀಮೆಗಳನ್ನು ಸೃಷ್ಟಿಸುತ್ತವೆ. ~ Whosoever Ji

ಚೇತನವಿಲ್ಲದೆ ಹೋದರೆ ಯಾವುದಕ್ಕೂ ಅಸ್ತಿತ್ವವಿರದು. ‘ಇದ್ದೇನೆ’ ಅನ್ನುವ ಭಾವವೂ ಇಲ್ಲ, ‘ನಾನು ಇದ್ದೇನೆ’ ಎನ್ನುವ ಭಾವವೂ ಇಲ್ಲ…. ಜಗತ್ತು ಇಲ್ಲ, ಪರಮಾತ್ಮವೂ ಇಲ್ಲ, ಈಶ್ವರ – ಪರಮೇಶ್ವರರೂ ಇಲ್ಲ… ನೀವು ಭಗವಂತನ ಇರುವಿಕೆಯನ್ನು ನಂಬುತ್ತೀರಿ. ಮಂದಿರಗಳಿಗೆ ಹೋಗಿ ಪೂಜೆ ಸಲ್ಲಿಸುತ್ತೀರಿ. ನಿಮ್ಮೊಳಗೆ ಚೇತನ ಇಲ್ಲದೆ ಹೋದರೆ ಈ ಎಲ್ಲವನ್ನು ಮಾಡಲಾಗುತ್ತದೆಯೇನು? ಚೇತನದೊಳಗೆ ಆ ಮೂರ್ತಿಯು ಪ್ರತಿಬಿಂಬಿತವಾದೊಡನೆ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಚೇತನವು ಮೂರ್ತಿ ರೂಪವಾಗಿ, ದೇವರೂಪವಾಗಿ ಕಾಣಿಸತೊಡಗುತ್ತದೆ. ಹೀಗೆ ತಾದಾತ್ಮ್ಯಗೊಳ್ಳುವುದು ಒಂದು ಅತ್ಯಂತ ಸಹಜ, ಸ್ವಾಭಾವಿಕ ಹಾಗೂ ಸ್ವಯಂಚಾಲಿತ ವ್ಯವಸ್ಥೆಯಾಗಿದೆ.

ಚೇತನದೊಳಗೆ ಯಾವುದು ಪ್ರತಿಫಲನಗೊಳ್ಳುತ್ತದೆಯೋ ಅದು ವಾಸ್ತವವೆಂದು ತೋರತೊಡಗುತ್ತದೆ. ಆದರೆ ಅಲ್ಲಿ ರಿಉವುದು ಕೇವಲ ಪ್ರತಿಬಿಂಬವಷ್ಟೇ. ಒಂದು ಛಾಯೆ… ಒಂದು ಆಭಾಸವಷ್ಟೇ.

ನೀವು ಗಮನಿಸಿರಲಿಕ್ಕಿಲ್ಲ – ಪ್ರತಿಯೊಂದು ವಿಚಾರವೂ ಸಾಮಂತವಾದಿ ಸ್ವಭಾವವಾಗಿರುತ್ತದೆ. ಕಟ್ಟರ್‌ಪಂಥಿ, ದುರಾಗ್ರಹಪೂರಿತ, ಫೆನೆಟಿಕ್‌ ಸ್ವಭಾವವಾಗಿರುತ್ತದೆ. ಇದರಲ್ಲಿ ನಾನು ಸರಿಯಾಗಿದ್ದೇನೆ ಎನ್ನುವ ಭಾವವು ಪ್ರಬಲವಾಗಿರುತ್ತದೆ. ನನ್ನ ವಿಚಾರ ಇಂಥದ್ದು. ನನ್ನ ಭಾವನೆ ಇದು. ನನ್ನ ಆಲೋಚನೆ ಹೀಗಿದೆ- ಇತ್ಯಾದಿಗಳಿಗೆ ಹೆಚ್ಚಿನ ಒತ್ತು ಇರುತ್ತದೆ. ಆದರೆ ಆ ಎಲ್ಲವುಗಳಿಂದ ಚೇತನವನ್ನು ಹಿಂಪಡೆದರೆ ಆ ವಿಚಾರ, ಆ ಭಾವ, ಆ ಆಲೋಚನೆಗಳೆಲ್ಲವೂ ಅಲ್ಲಿಯೇ ಉಧ್ವಸ್ಥಗೊಳ್ಳುತ್ತವೆ, ನಾಶವಾಗುತ್ತವೆ.

ಚೇತನಕ್ಕೆ ತನ್ನದೇ ಆದ ಆಕಾರ ಇಲ್ಲದ ಕಾರಣ, ನಿರಾಕಾರವಾಗಿರುವ ಕಾರಣ ಅದು ಅರ್ಥೈಸಿಕೊಳ್ಳುತ್ತದೆಯೋ ಅದರೊಂದಿಗೆ ಸಮರೂಪ ಹೊಂದುತ್ತದೆ. ಆಕಾರಕ್ಕೆ ತನ್ನದೇ ಆದ ಅಸ್ತಿತ್ವ ಇರುವುದಿಲ್ಲ. ಅಸ್ತಿತ್ವ ಇರುವುದು ಚೇತನಕ್ಕೆ.

ನಮಗೆ ಆಕಾರವು ಕಾಣಿಸುತ್ತದೆ. ಆದರೆ ಆಕಾರಕ್ಕೆ ಯಾವುದು ಆಧಾರವಾಗಿದೆಯೋ ಅದು ಕಾಣಿಸುವುದಿಲ್ಲ. ಎಲ್ಲ ಭ್ರಾಂತಿಯ ಹಿನ್ನೆಲೆ ಇದೇ ಆಗಿದೆ. ಯಾವಾಗ ಈ ಭ್ರಾಂತಿಯು ತೊಡೆದುಹೋಗುವುದೋ ಯಾವಾಗ ಆಕಾರದ ಬದಲು ನಿರಾಕಾರ ಅಸ್ತಿತ್ವದೊಡನೆ ಸಂಬಂಧ ಸ್ಥಾಪನೆಯಾಗುವುದೋ ಆಗ ಎಲ್ಲ ಚಿಂತನೆಗಳೂ ತಲೆಕೆಳಗಾಗುವವು. ಯಾವಾಗ ಆಕಾರದಲ್ಲಿಯೂ ಕೂಡ ನಿರಾಕಾರವು ಕಾಣಿಸತೊಡಗುತ್ತದೆಯೋ, ಆಗ ಸಂಪೂರ್ಣ ದೃಷ್ಟಿಯೇ ಬದಲಾಗಿಹೋಗುವುದು.

ಇವೆಲ್ಲವೂ ಆಕಾರ ನಿರಾಕಾರಗಳನ್ನು ಆಧರಿಸಿವೆ. ಅದರಿಂದಲೇ ಹೊಮ್ಮುತ್ತವೆ, ಅದರಲ್ಲಿಯೇ ಮುಳುಗುತ್ತವೆ; ಅದರಿಂದಲೇ ಪ್ರಕಟಗೊಳ್ಳುತ್ತವೆ, ಅದರಲ್ಲಿಯೇ ಪುನಃ ಅಪ್ರಕಟವಾಗಿಹೋಗುತ್ತವೆ. ಯಾರಿಗೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆಯೋ ಅವರನ್ನು ನಾವು ಪ್ರಜ್ಞಾವಂತರೆಂದು ಕರೆಯುತ್ತೇವೆ. ಅಂಥವರು ಸಾಮಾನ್ಯ ವ್ಯಕ್ತಿಯಾಗಿರುವುದಿಲ್ಲ…. ಅವರು ಸಂತ, ಜ್ಞಾನಿ, ಬುದ್ಧ ಪುರುಷ ಅಥವಾ ಜೀವನ್ಮುಕ್ತರೆನ್ನಿಸಿಕೊಳ್ಳುತ್ತಾರೆ.

ಸಂತ, ಜ್ಞಾನಿ, ಪ್ರಜ್ಞಾವಂತ ಪುರುಷ, ಜೀವನ್ಮುಕ್ತ – ಹೀಗೆಲ್ಲ ಕರೆಸಿಕೊಳ್ಳುವವರು ಆಕಾರದ ಹಿನ್ನೆಲೆಯಲ್ಲಿ ನಿರಾಕಾರವನ್ನು ಕಂಡು, ತಿಳಿದು, ಅರಿವು ಹೊಂದಿ ಅನುಭವ ಪಡೆದಿರುತ್ತಾರೆ. ಅವರ ಚೇತನವು ಇಲ್ಲಿಂದಲ್ಲಿಗೆ ಜಿಗಿದಾಡುತ್ತಿರುವುದಿಲ್ಲ. ಇಷ್ಟೆಲ್ಲ ತಿಳಿದ ನಂತರದಲ್ಲೂ ಅವರಿಗೆ ಆಕಾರವು ಗೋಚರಿಸುತ್ತದೆ. ಆದರೆ ಅದು ಅವರ ಪಾಲಿಗೆ ಆಭಾಸ ಮಾತ್ರವಾಗಿರುತ್ತದೆಯೇ ಹೊರತು ಸತ್ಯವಾಗಿ ಉಳಿದಿರುವುದಿಲ್ಲ. ಅವರ ಪಾಲಿಗೆ ಸತ್ಯವು ಎಲ್ಲ ಆಕಾರಗಳ ಆಧಾರವಾಗಿರುವ ನಿರಾಕಾರವಾಗಿ ಗೋಚರಿಸುತ್ತದೆ. ಅದರ ಮೂಲಕವೇ ಅವರು ಎಲ್ಲ ಆಕಾರಗಳನ್ನು ನೋಡುತ್ತಾರೆ, ತಿಳಿಯುತ್ತಾರೆ, ಅರಿಯುತ್ತಾರೆ ಮತ್ತು ಅನುಭವಿಸುತ್ತಾರೆ.

ಯಾವಾಗ ಆಕಾರ ಅಥವಾ ವಿಚಾರ ಇರಲಿಲ್ಲವೋ, ಆಗಲೂ ಅದು ನಿರಾಕಾರವೇ ಆಗಿತ್ತು. ಅನಂತರದಲ್ಲಿ ಆಕಾರವು ರೂಪುಗೊಂಡಾಗಲೂ ಅದು ನಿರಾಕಾರವಾಗಿಯೇ ಉಳಿಯಿತು. ಮತ್ತೆ ಅದು ಆಕಾರ ಕಳಕೊಂಡಾಗಲೂ ಅದು ನಿರಾಕಾರವಾಗಿಯೇ ಉಳಿಯುತ್ತದೆ. ಅದು ಮೊದಲೂ ನಿರಾಕಾರವಾಗಿಯೇ ಇತ್ತು, ಅದು ಈಗಲೂ ನಿರಾಕಾರವಾಗಿಯೇ ಇದೆ, ಅದು ಪುನಃ ನಿರಾಕಾರವಾಗಿಯೇ ಉಳಿಯುತ್ತದೆ. ಈ ಸತ್ಯದಲ್ಲಿ ಅವರು ಸದೃಢರಾಗಿ ಕಾಲೂರಿರುತ್ತಾರೆ. ಈ ಸತ್ಯದಲ್ಲಿ ಅವರು ಸ್ಥಾಪಿತವಾಗಿರುತ್ತಾರೆ.

ದುಃಖವು ಕಾಣಿಸಿಕೊಂಡಿತು, ಆಲಸ್ಯ ಅನುಭವಕ್ಕೆ ಬಂತು, ದ್ವೇಷ ಮತ್ಸರಗಳು ಹಣಕಿದವು – ಈ ಎಲ್ಲವೂ ರೂಪು ಪಡೆದು ತನ್ನನ್ನು, ಸ್ವಯಮಿಕೆಯನ್ನು ಮರೆಯಿತು. ನಾನು ಪುನರುಚ್ಚರಿಸುತ್ತೇನೆ, `ತನ್ನನ್ನು’, `ಸ್ವಯಮ್‌’ ಅನ್ನು…. ಈ ಸ್ವಯಮ್‌ ಅಥವಾ ಸ್ವಯಮಿಕೆ ಅಂದರೇನು? ಇದು ಇಲ್ಲದೆ ಹೋದರೆ ದೇಹವಾಗಲೀ ಮನಸ್ಸಾಗಲೀ ಪ್ರಾಣವಾಗಲೀ ಕಣ್ಣು ಕಿವಿ ಇತ್ಯಾದಿ ಇಂದ್ರಿಯಗಳಾಗಲೀ ಇರುವುದಿಲ್ಲ. ಹಾಗಾದರೆ ಇದು ಏನು?

ಈ ಸ್ವಯಮಿಕೆಯೇ ಸ್ವಯಂ ನ ಅಸ್ತಿತ್ವ. ಈ ಸ್ವ ಅಸ್ತಿತ್ವವೇ ಸರ್ವ ಅಸ್ತಿತ್ವ. ಈ `ಸ್ವ’ ಅನ್ನುವುದು ಸರ್ವ ಅಸ್ತಿತ್ವಕ್ಕಿಂತ ಭಿನ್ನವಾದುದಲ್ಲ. ಬಲ್ಬಿನಲ್ಲಿ ಹರಿಯುತ್ತಿರುವ ವಿದ್ಯುತ್‌ ಧಾರೆ ಏನಿದೆ, ಅದೇ ಬಲ್ಬಿನಲ್ಲೂ ಇದೆ, ಟ್ಯೂಬಿನಲ್ಲೂ ಇದೆ, ಫ್ಯಾನಿನಲ್ಲೂ ಇದೆ, ಎಲ್ಲದರಲ್ಲೂ ಇದೆ. ಅದು ಒಂದರಿಂದ ಮತ್ತೊಂದರಲ್ಲಿ ಭಿನ್ನಭಿನ್ನವಾಗಿಯೇನೂ ಇಲ್ಲ. ಫ್ಯಾನ್‌ ತಿರುಗುತ್ತ ನಾನು ಫ್ಯಾನ್‌ ಎಂದು ಹೇಳಿಕೊಳ್ಳಬಹುದು. ಆದರೆ ವಿದ್ಯುತ್ ಧಾರೆ ಹೀಗೆ ಹೇಳಲಾಗುತ್ತದೆಯೇನು? ಅದು ತಿರುಗುವುದೂ ಇಲ್ಲ, ಹಾಗೆಲ್ಲ ಹೇಳಿಕೊಳ್ಳುವುದೂ ಇಲ್ಲ. ಅದು ಮೌನವಾಗಿರುತ್ತದೆ. ಅದರಲ್ಲಿ ಘೋಷಣೆಯ ಯಾವ ಸದ್ದೂ ಹೊರಡುವುದಿಲ್ಲ.

ಯಾವುದು ವಾಸ್ತವವೋ, ವಸ್ತುತಃ ಇದೆಯೋ ಅದು ಮೌನವಾಗಿರುತ್ತದೆ. ಮೌನವಾಗಿರುವುದು ಅದರ ಸ್ವಭಾವ. ನಿರಾಕಾರವು ಯಾವಾಗಲೂ ಇರುವುದು ಮೌನದಲ್ಲಿಯೇ. ಅದರೊಳಗೆ ಘೋಷಣೆಯ ಭಾವವು ಗೈರಾಗಿರುತ್ತದೆ. ಅಲ್ಲಿ ಘೋಷಣಾ ಪ್ರವೃತ್ತಿ ಇರುವುದಿಲ್ಲ. ಅದು ತನ್ನ ಅಸ್ತಿತ್ವವನ್ನು ಘೋಷಿಸುವುದಿಲ್ಲ. ಆದರೆ ಎಲ್ಲ ಸಾಕಾರವೂ ಕೂಗಿಕೂಗಿ ತನ್ನನ್ನು ತೋರಿಸಿಕೊಳ್ಳುತ್ತವೆ. ನಾನು ಇದ್ದೀನಿ ಎಂದು ಘೋಷಿಸಿಕೊಳ್ಳುತ್ತವೆ. ಆಕಾರವು ಸೀಮೆಗಳನ್ನು ಸೃಷ್ಟಿಸುತ್ತವೆ, ಚಿಕ್ಕದು – ದೊಡ್ಡದು ಎಂಬ ತುಲನೆಯನ್ನೂ ಮಾಡುತ್ತದೆ.

ಆದರೆ ಈ ಎಲ್ಲ ಆಕಾರಗಳ ಮೂಲ ಸ್ರೋತವಾದ ನಿರಾಕಾರವು ಮಾತ್ರ ಮೌನವಾಗಿರುತ್ತದೆ. ಅದರಲ್ಲಿ ಘೋಷಣೆಯ ಹಂಬಲ ಸ್ವಲ್ಪ ಮಾತ್ರವೂ ಇರುವುದಿಲ್ಲ. ಏಕೆಂದರೆ ಅದರಲ್ಲಿ ಅನ್ಯವಾದ್ದು ಏನೂ ಇರುವುದಿಲ್ಲ. ಮತ್ತೊಂದರ ಇರುವಿಕೆಯೇ ಇಲ್ಲ. ಅದು ಎರಡಿಲ್ಲದ್ದು. ಅದು ಅದ್ವೈತವಾದುದು.

(ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.