ಬಟಾಕ್ ಪುರಾಣ ಕಥನಗಳ ಪ್ರಕಾರ :ಸಿದಿಯಾಕಳ ಮಕ್ಕಳು ತೋಬಾ ಸರೋವರದ ಪಶ್ಚಿಮ ದಡದಲ್ಲಿರುವ ಪುಸುಕ್ ಬುಹಿತ್ ಜ್ವಾಲಾಮುಖಿ ಬಳಿ ನೆಲೆಸಿದರು. ಅಲ್ಲಿಯೇ ‘ಸಿ ಅಂಜೂರ್ ಮೂಲಾಮೂಲ’ ಹೆಸರಿನ ಹಳ್ಳಿಯನ್ನು ನಿರ್ಮಿಸಿದರು. ಅಲ್ಲಿಯೇ ಸಂತಾನ ಬೆಳೆಸಿ, ಭೂಮಿಯನ್ನು ಮನುಷ್ಯರಿಂದ ತುಂಬುತ್ತಾ ಹೋದರು…
ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

ಮೊದಲು ಇದ್ದುದು ಆಕಾಶ ಮತ್ತು ಸಮುದ್ರ ಮಾತ್ರ. ಆಕಾಶದಲ್ಲಿ ಏಳು ಪದರಗಳಿದ್ದು, ಎಲ್ಲಕ್ಕಿಂತ ಮೇಲಿನ ಪದರದಲ್ಲಿ ದೇವತೆಗಳ ತಂದೆ, ಆದಿ ದೇವ ಮೂಲ ಜಾದಿ ನಬೋಲನ್ (ಅಥವಾ ಮೂಲಜಾದಿ – ಸೃಷ್ಟಿಯ ಆದಿ) ನೆಲೆಸಿದ್ದ. ಮತ್ತು ಸಮುದ್ರದ ತಳದಲ್ಲಿ ಆದಿ ಡ್ರ್ಯಾಗನ್ ನಾಗಾ ಪದೋಹಾ ವಾಸಿಸಿದ್ದ. ಆಕಾಶ ಮತ್ತು ಸಮುದ್ರ ಬಿಟ್ಟರೆ ಮತ್ತೇನೂ ಇರಲೇ ಇಲ್ಲ.
ಮೂಲೋಜಾದಿಯ ಕಾರಣದಿಂದ ಕೋಳಿಯೊಂದು ಮೂರು ಮೊಟ್ಟೆಗಳನ್ನಿಟ್ಟಿತು. ಈ ಮೊಟ್ಟೆಗಳಿಂದ ಬಟಾರಾ ಗುರು, ಮಂಗಲಭೂಲನ್ ಮತ್ತು ಸೋರಿ ಪಾದ ಎಂಬ ಮಕ್ಕಳು ಹುಟ್ಟಿದರು. ಆಮೇಲೆ ಮೂಲಜಾದಿಯು ಮೂವರು ಹೆಣ್ಣುಗಳನ್ನು ಸೃಷ್ಟಿಸಿ, ಅವರನ್ನು ತನ್ನ ಗಂಡುಮಕ್ಕಳಿಗೆ ಮದುವೆ ಮಾಡಿಸಿದ. ಈಗ ಮೂಲೋಜಾದಿಯೊಡನೆ ಒಟ್ಟು ಆರು ದೇವತೆಗಳು ಆಕಾಶದಲ್ಲಿದ್ದುಕೊಂಡು ಸೃಷ್ಟಿ ಕ್ರಿಯೆಯನ್ನು ಆರಂಭಿಸಿದರು. ಆದರೆ ಅವರು ಇನ್ನೂ ಭೂಮಿಯನ್ನಾಗಲೀ ಮನುಷ್ಯರನ್ನಾಗಲೀ ಸೃಷ್ಟಿಸುವ ಕೆಲಸ ಆರಂಭಿಸಿರಲಿಲ್ಲ. ಈ ಕೆಲಸ ಆಗಿದ್ದು ಬಟಾರಾ ಗುರುವಿನ ಮಗಳು ಸಿದಿಯಾಕ್ ಪರುಜಾರಳಿಂದ.
ಸಿದಿಯಾಕಳ ಮದುವೆ ಮಂಗಲಭೂಲನ್’ನ ಮಗನೊಡನೆ ನಿಶ್ಚಯವಾಗಿತ್ತು. ಅವನು ಹಲ್ಲಿಯಾಕಾರದ ಜಂತುವಾಗಿದ್ದ. ಅವನನ್ನು ಮದುವೆಯಾಗಲು ಸಿದಿಯಾಕಳಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಆದ್ದರಿಂದ ಅವಳು ಮನೆಯಿಂದ ತಪ್ಪಿಸಿಕೊಂಡು, ಆಕಾಶದಿಂದ ಹತ್ತಿಯ ಲಡಿಯನ್ನು ಸಮುದ್ರದೆಡೆ ಬಿಟ್ಟು, ಅದರ ಮೂಲಕ ಕೆಳಗಿಳಿದಳು. ಆದರೆ ಕೆಳಗೆ ಸಮುದ್ರ ಮತ್ತು ದೇವತೆಗಳ ವಿರೋಧಿ ಡ್ರ್ಯಾಗನ್ ಇದೆ! ಕಾಲೂರಲು ಹೆಜ್ಜೆಯಷ್ಟೂ ಜಾಗವಿಲ್ಲ! ಹಾಗಂತ ಮನೆಗೆ ವಾಪಸು ಹೋಗಲೂ ಅವಳಿಗೆ ಇಷ್ಟವಿಲ್ಲ!!
ಮೂಲಜಾದಿ ತನ್ನ ಮೊಮ್ಮಗಳ ಕಷ್ಟ ಕಂಡು ಕರಗಿದ. ಮೇಲಿಂದಲೇ ಒಂದು ತುಂಡು ಭೂಮಿಯನ್ನು ಅವಳತ್ತ ಎಸೆದು, “ಇದರ ಮೇಲೆ ಕಾಲೂರಿ ಎಲ್ಲಾದರೂ ನೆಲೆ ನಿಲ್ಲು. ಆಮೇಲೆ ಈ ಭೂಮಿಯ ತುಂಡನ್ನು ವಿಸ್ತರಿಸಿಕೋ” ಎಂದು ಸೂಚಿಸಿದ.
ಸಿದಿಯಾಕಳು ಸಮುದ್ರದ ಮೇಲೆ ಭೂಮಿಯ ತುಂಡನ್ನು ಇಟ್ಟು ಕಾಲೂರಿದಳು. ನಿಲ್ಲಲೊಂದು ಜಾಗ ಸಿದ್ಧವಾದ ಮೇಲೆ ಭೂಮಿಯನ್ನು ಉದ್ದಕ್ಕೂ ಅಡ್ಡಕ್ಕೂ ಎಳೆಯುತ್ತಾ ವಿಸ್ತರಣೆಯ ಕೆಲಸದಲ್ಲಿ ತೊಡಗಿದಳು. ನೆಲದ ವಿಸ್ತಾರ ಹೆಚ್ಚಾದಂತೆಲ್ಲ ಸಮುದ್ರದ ತಳದಲ್ಲಿದ್ದ ಡ್ರ್ಯಾಗನ್ ನಾಗಾ ಪದೋಹನ ಮೇಲೆ ವಜ್ಜೆ ಬೀಳಲಾರಂಬಿಸಿತು. ನಾಗಾ ಹೂಂಕರಿಸುತ್ತಾ ತನ್ನ ಬಾಲ ಅಲ್ಲಾಡಿಸಿದಾಗ ಸಮುದ್ರದ ನೀರೆಲ್ಲ ಭೂಮಿಯ ಮೇಲೆ ಉಕ್ಕಿ ನೆಲ ನೆಂದು ಹೋಯಿತು.
ನಾಗಾನನ್ನು ಸುಮ್ಮನಾಗಿಸಲು ಸಿದಿಯಾಕ್ ತನ್ನ ಖಡ್ಗವನ್ನು ಅದರ ದೇಹಕ್ಕೆ ತೂರಿಸಿ, ಕಾಲುಗಳಿಗೆ ಕೋಳ ತೊಡಿಸಿದಳು. (ಈ ಕೋಳಗಳಿಂದ ತಪ್ಪಿಸಿಕೊಳ್ಳಲು ಡ್ರ್ಯಾಗನ್ ಕಾಲುಗಳನ್ನು ಬಡಿದಾಗಲೆಲ್ಲ ಭೂಕಂಪವಾಗುತ್ತದೆ ಅನ್ನುವುದು ಬಟಾಕಾ ಜಾನಪದ ನಂಬಿಕೆ). ಆಮೇಲೆ ತನ್ನ ಭೂಮಿ ವಿಸ್ತರಣೆಯ ಕೆಲಸವನ್ನು ನಿರಾತಂಕವಾಗಿ ಮುಂದುವರೆಸಿದಳು.
ಇತ್ತ ಮಂಗಲಭೂಲನ್’ನ ಮಗ ತನ್ನ ಹಲ್ಲಿಯ ರೂಪವನ್ನು ತೊರೆದು ಬೇರೆ ರೂಪವನ್ನೂ, ಹೆಸರನ್ನೂ ಧರಿಸಿದ. ಅದರಿಂದ ಸಿದಿಯಾಕಳಿಗೂ ಸಮಾಧಾನವಾಯಿತು. ಅವಳು ಅವನನ್ನು ಮದುವೆಯಾದಳು. ಅವರಿಬ್ಬರೂ ಭೂಮಿಯಲ್ಲೇ ನೆಲೆಸಿ ಸೃಷ್ಟಿ ಕೆಲಸದಲ್ಲಿ ತೊಡಗಿಕೊಂಡರು. ಅವರಿಬ್ಬರ ದಾಂಪತ್ಯದ ಫಲವಾಗಿ ಸಿದಿಯಾಕ್ ಗಂಡು – ಹೆಣ್ಣು ಅವಳಿ ಮಕ್ಕಳನ್ನು ಹಡೆದಳು. ಆ ಇಬ್ಬರು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅವರಿಬ್ಬರಿಗೆ ಮದುವೆ ಮಾಡಿಸಿ ತಾವು ದೇವಲೋಕಕ್ಕೆ ತೆರಳಿದರು.
ಸಿದಿಯಾಕಳ ಮಕ್ಕಳು ತೋಬಾ ಸರೋವರದ ಪಶ್ಚಿಮ ದಡದಲ್ಲಿರುವ ಪುಸುಕ್ ಬುಹಿತ್ ಜ್ವಾಲಾಮುಖಿ ಬಳಿ ನೆಲೆಸಿದರು. ಅಲ್ಲಿಯೇ ‘ಸಿ ಅಂಜೂರ್ ಮೂಲಾಮೂಲ’ ಹೆಸರಿನ ಹಳ್ಳಿಯನ್ನು ನಿರ್ಮಿಸಿದರು. ಅಲ್ಲಿಯೇ ಸಂತಾನ ಬೆಳೆಸಿ, ಭೂಮಿಯನ್ನು ಮನುಷ್ಯರಿಂದ ತುಂಬುತ್ತಾ ಹೋದರು.
ಬಟಾಕ್ ಜನಾಂಗ್ ಪ್ರಮುಖ ಪೂರ್ವಜ ಸಿ ರಾಜಾ ಬಟಾಕ್ ಈ ಮೂಲ ದಂಪತಿಯ ಮೊಮ್ಮಕ್ಕಳಲ್ಲಿ ಒಬ್ಬನು.
ಹೆಚ್ಚಿನ ಮಾಹಿತಿ : ಬಟಾಕ್ ಜನಾಂಗದ ಮೂಲ ಮತ್ತು ಪೌರಾಣಿಕ ಹಿನ್ನೆಲೆಯ ಹಲವು ಪಾಠಾಂತರಗಳಿದ್ದು, ಇಂಡೋನೇಶಿಯಾದಲ್ಲಿ ಪ್ರಚಲಿತದಲ್ಲಿರುವ ಕಥನವನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇಂಡೋನೇಶಿಯಾ, ಸುಮಾತ್ರ, ಫಿಲಿಪ್ಪೀನ್ಸ್, ಮಲೇಶಿಯಾ, ಸಿಂಗಾಪುರ್ ಮೊದಲಾದ ದೇಶಗಳಲ್ಲಿ ಬಟಾಕ್ ಜನಾಂಗದ ಜನರು ವಾಸಿಸುತ್ತಿದ್ದು, ಇಂಡೋನೇಶಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.