ಆನಂದವನ್ನು ಹೊರಗೆ ಹುಡುಕಬೇಡಿ, ನಿಮ್ಮೊಳಗೇ ಹುಡುಕಿಕೊಳ್ಳಿ : ರಮಣ ಮಹರ್ಷಿ

ಆನಂದದಿಂದ ಬದುಕುವುದು, ಆನಂದಕ್ಕಾಗಿ ಹಂಬಲಿಸುವುದು ಪ್ರತಿಯೊಂದು ಜೀವಿಯ ಹಕ್ಕು. ಆದರೆ ಆ ಆನಂದವನ್ನು ಹುಡುಕಿ ಎಲ್ಲೆಲ್ಲೋ ಅಲೆದಾಡಬೇಕಿಲ್ಲ, ನಮ್ಮೊಳಗೇ ಹುಡುಕಿಕೊಳ್ಳಬೇಕು ಅನ್ನುತ್ತಾರೆ ರಮಣ ಮಹರ್ಷಿಗಳು. 

ramana 1

ನುಷ್ಯ ಜೀವನದ ಒಂದು ವಿಪರ್ಯಾಸವೆಂದರೆ ಆನಂದ ಬೇಕೆಂದು ಸಂಕಟಪಡುವುದು. ಆನಂದದ ಬದುಕು ನಮಗೆ ಬೇಕೆಂದು ಚಿಂತಿಸುತ್ತಾ, ಅದು ದೊರೆಯುತ್ತಿಲ್ಲವೆಂದು ದುಃಖಿಸುವುದು! 

ಸಂಕಟಪಟ್ಟರೆ, ದುಃಖಿಸಿದರೆ, ಮರುಗಿದರೆ, ಅಥವಾ ಇನ್ಯಾರೋ ಆನಂದದಿಂದ ಇದ್ದಾರೆಂದು ಹೊಟ್ಟೆ ಉರಿಸಿಕೊಂಡರೆ ನಮಗೆ ಆನಂದ ಸಿಗುತ್ತದೆಯೇ? ಖಂಡಿತಾ ಇಲ್ಲ. ಈ ಎಲ್ಲ ನಕಾರಾತ್ಮಕ ಪ್ರಕ್ರಿಯೆಗಳಿಂದ ನಾವು ಮತ್ತಷ್ಟು ದುಃಖದ ಮಡುವಿನಲ್ಲಿ ಬೀಳುತ್ತೇವೆ ಅಷ್ಟೇ. ನಮಗೆ ಆನಂದದಿಂದ ಇರುವುದು ಬೇಕಿದ್ದರೆ ಅದನ್ನು ಪಡೆಯುವ ನಿಟ್ಟಿನಲ್ಲಿ ಹೆಜ್ಜೆಯಿಡಬೇಕು. ಮತ್ತು, ಈ ಹೆಜ್ಜೆಯನ್ನು ಹೊರಗೆಲ್ಲೋ ಅಲ್ಲ, ನಮ್ಮ ಅಂತರಂಗದೆಡೆ ಇರಬೇಕು. ಏಕೆಂದರೆ ಆನಂದದ ಅಕ್ಷಯ ಗಣಿ ನಮ್ಮೊಳಗೇ ಇದೆ. ಅದನ್ನು ನಮ್ಮ ಬೆಳಕಿನ ಕಣ್ಣುಗಳಿಂದ ಹುಡುಕಿಕೊಳ್ಳಬೇಕು. 

ಅಂತರಂಗದಲ್ಲಿ ಅಡಗಿರುವ ಈ ಆನಂದವನ್ನು ಪತ್ತೆ ಮಾಡುವ ಬೆಳಕಿನ ಕಣ್ಣುಗಳು ಮೂಡುವುದು ಹೇಗೆ?
ಜ್ಞಾನವನ್ನು ಪಡೆದಾಗ… 
ಎಂತಹಾ ಜ್ಞಾನ?

ಸೃಷ್ಟಿಯಲ್ಲಿ ದುಃಖ ಎಂಬುದೇ ಇಲ್ಲ. ಇರುವುದೆಲ್ಲವೂ ಭ್ರಮೆ. ನಮ್ಮ ಗುರುತಿಸಿಕೊಳ್ಳುವಿಕೆ, ದುರಾಸೆ, ನಿರೀಕ್ಷೆ ಮತ್ತು ಹೋಲಿಕೆಯ ಸ್ವಭಾವಗಳಿಂದ; ಅವಲಂಬನೆ, ಆಕರ್ಷಣೆಗಳಿಂದ ದುಃಖವನ್ನು ನಾವೇ ನಮ್ಮ ಮೇಲೆ ಹೇರಿಕೊಳ್ಳುತ್ತೇವೆ ಹೊರತು, ದುಃಖ ನಮ್ಮೊಳಗೆ ಇರುವುದೇ ಇಲ್ಲ. ನಮ್ಮೊಳಗೆ ಏನಾದರೂ ಇದ್ದರೆ ಅದು ಸಂತೋಷ ಮಾತ್ರ, ಆನಂದ ಮಾತ್ರ. 

ರಮಣ ಮಹರ್ಷಿಗಳು ಹೇಳುತ್ತಿರುವುದು ಇದನ್ನೇ. “ಆನಂದದಿಂದ ಇರುವುದು ನಮ್ಮ ಸ್ವಭಾವ. ದುಃಖವನ್ನು ಹೇರಿಕೊಳ್ಳಬೇಡಿ. ಆನಂದವನ್ನು ಹುಡುಕುತ್ತಾ ಹೊರಗೆ ಎಲ್ಲೆಲ್ಲೋ ಅಲೆಯುವ ಬದಲು, ನಿಮ್ಮೊಳಗೆ ಹುಡುಕಿಕೊಳ್ಳಿ” ಎಂದು. 

ಈ ಹುಡುಕಾಟವೇ ನಮಗೆ ಬದುಕಾಗಬೇಕು. ಆನಂದವನ್ನು ಹುಡುಕುವ ದಾರಿಯೇ ಸ್ವತಃ ಆನಂದ ತರುವುದು. ಹೂವನ್ನು ಅರಸಿ ಹೊರಟಾಗ ಅದರ ಘಮಲೇ ನಮಗೆ ದಿಕ್ಕು ತೋರುತ್ತದೆ ಅಲ್ಲವೆ? ಹಾಗೆಯೇ ಈ ಹುಡುಕಾಟದ ನಿಟ್ಟಿನಲ್ಲಿ ನಮ್ಮ ಸಕಾರಾತ್ಮಕ ಚಿಂತನೆಗಳು ನಮ್ಮನ್ನು ಆನಂದದ ಅಲೆಯ ಮೇಲೆ ತೇಲಿಸುತ್ತಾ ನಿಜಾನಂದದ ಕಡಲ ಒಡಲನ್ನು ತಲುಪಿಸುವುದು.

 

Leave a Reply