ಆತ್ಮಗತವಾಗುವುದೇ ಅರಿವು : ಯೋಗಿ ಅರವಿಂದ

ಅರಿವು ಬೇರೆ, ಮಾಹಿತಿ ಸಂಗ್ರಹ ಬೇರೆ. ನಾವು ಜೀವನದಲ್ಲಿ ಬಹುತೇಕ ಮಾಡುವುದು ಮಾಹಿತಿ ಸಂಗ್ರಹಣೆಯನ್ನಷ್ಟೆ. ಆತ್ಮಗತವಾಗದ ಯಾವುದೇ ಸಂಗತಿ ಅರಿವು ಹೇಗಾಗುತ್ತದೆ? 

aravindo 2

ನಾವು ಪ್ರತಿ ದಿನವೂ ಒಂದಲ್ಲ ಒಂದು ಬಗೆಯ ಕಲಿಕೆಗೆ ಎದುರಾಗುತ್ತಲೇ ಇದರುತ್ತೇವೆ. ಆದರೆ ನಾವು ಅದನ್ನು ಗುರುತಿಸುವುದು ಕಡಿಮೆ. ಯಾವುದೋ ಸಂಗತಿ, ಯಾರದೋ ಬದುಕು, ಮತ್ಯಾವುದೋ ಘಟನೆ ನಮಗೆ ಬದುಕಿನ ಮೌಲ್ಯವನ್ನು ತಿಳಿಸುತ್ತಲೇ ಇರುತ್ತದೆ. ಆದರೆ ನಾವು ಅವ್ಯಾವುದರ ಒಳಹೊಕ್ಕು ನೋಡುವ ಉಸಾಬರಿಗೇ ಹೋಗುವುದಿಲ್ಲ. ಪದರವನ್ನಷ್ಟೆ ಸ್ಪರ್ಶಿಸಿ ನಮಗದು ತಿಳಿದುಬಿಟ್ಟಿತು ಎಂದು ಭ್ರಮಿಸುತ್ತೇವೆ. ಹೀಗಾಗಿಯೇ ನಾವು ಯಾವುದನ್ನೂ ಸಂಪೂರ್ಣವಾಗಿ ಅರಿಯಲು ಸಾಧ್ಯವಾಗದೆ ಹೋಗುತ್ತದೆ. 

ಕೇವಲ ಪದರವನ್ನು ಸ್ಪರ್ಶಿಸುವುದರಿಂದ ನಮಗೆ ಆ ಸಂಗತಿ/ವ್ಯಕ್ತಿ/ಘಟನೆಯ ಬಗ್ಗೆ ಒಂದಷ್ಟು ಮಾಹಿತಿಯಷ್ಟೆ ತಿಳಿಯುತ್ತದೆ. ಅಥವಾ ನಮಗೆ ಆ ಕುರಿತು ಯಾರು ವಿವರಿಸುತ್ತಾರೋ ಅವರ ಅಭಿಪ್ರಾಯವಷ್ಟೆ ನಮ್ಮನ್ನು ತಲುಪುತ್ತದೆ. ಯಾವುದೇ ಸಂಗತಿಯನ್ನು ನಾವು ಸ್ವತಃ ಪ್ರಾಮಾಣೀಕರಿಸಿ ಗ್ರಹಿಸದೆ ಹೋದರೆ, ನಮ್ಮ ಪೂರ್ವಗ್ರಹಗಳ ಕಾರಣದಿಂದ ಅಪಾರ್ಥಕ್ಕೀಡಾಗುವ ಸಾಧ್ಯತೆಯೂ ಇರುತ್ತದೆ. ಮತ್ತು ಬಹುತೇಕವಾಗಿ ಹೀಗೆ ನಾವು ಕೇಳಿಸಿಕೊಂಡು ಅಥವಾ ಕೇವಲ ನೋಡಿ ಸಂಗ್ರಹಿಸುವುದೆಲ್ಲಾ ಕೇವಲ ಮಾಹಿತಿಯಷ್ಟೆ ಆಗಿರುತ್ತದೆ ಹೊರತು ಅರಿವು ಅನ್ನಿಸಿಕೊಳ್ಳುವುದಿಲ್ಲ. 

ಯೋಗಿ ಅರವಿಂದರು ಹೇಳುತ್ತಿರುವುದು ಅದನ್ನೇ. “ಆತ್ಮವು ಯಾವುದನ್ನು ಕಾಣುತ್ತದೆಯೋ, ಅನುಭವಿಸುತ್ತದೆಯೋ, ಅದನ್ನು ಮಾತ್ರ ನಾವು ಅರಿಯಲು ಸಾಧ್ಯವಾಗುತ್ತದೆ. ಉಳಿದದ್ದೆಲ್ಲ ಕೇವಲ ತೋರುಗಾಣಿಕೆ, ಪೂರ್ವಾಗ್ರಹ ಅಥವಾ ಅಭಿಪ್ರಾಯಗಳಷ್ಟೇ” ಎಂದು. 

ಹಾಗೆಂದು ಪ್ರತಿಯೊಂದನ್ನೂ ನಾವು ಸ್ವತಃ ಅನುಭವಿಸಿ ತಿಳಿಯಲು ಸಾಧ್ಯವಿಲ್ಲ. ಆದರೆ, ಆಳವಾದ ಅಧ್ಯಯನ, ಪರಿಭಾವ, ಅನ್ವಯ  ಸ್ವಯಂಗ್ರಹಿಕೆ ಮತ್ತು ಚಿಂತನಮಂಥನಗಳಿಂದ ಅವನ್ನು ಆತ್ಮಗತ ಮಾಡಿಕೊಳ್ಳಬಹುದು. ಹಾಗೆ ಮಾಡಿದಾಗ ನಮಗೆ ಆಯಾ ಸಂಗತಿಯ ‘ಅರಿವು’ ಸಾಧ್ಯವಾಗುತ್ತದೆ. ನಮ್ಮೊಳಗು ತಿಳಿವಿನಿಂದ ತುಂಬಿಕೊಳ್ಳುತ್ತದೆ. ಹೀಗೆ ಪಡೆದ ಜ್ಞಾನವು ನಮ್ಮನ್ನು ಸತ್ವಶಾಲಿ ವ್ಯಕ್ತಿಯನ್ನಾಗಿ ರೂಪಿಸುತ್ತದೆ. 

Leave a Reply