ಚೇತನದ ಜ್ಞಾನ ಮತ್ತು ಅಜ್ಞಾನಾವಸ್ಥೆ

photoವಸ್ತುತಃ ಚೇತನವು ಕನ್ನಡಿಯಂತೆ. ಚೇತನದ ಕನ್ನಡಿಯಲ್ಲಿ ಯಾವುದು ಪ್ರತಿಬಿಂಬಿತಗೊಳ್ಳುತ್ತದೆಯೋ, ಚೇತನದ ಕನ್ನಡಿಯಲ್ಲಿ ಯಾರು ಹಣಕುತ್ತಾರೋ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಆ ಪ್ರತಿಬಿಂಬವನ್ನು ಸ್ವತಃ ತಾನೇ ಎಂಬಂತೆ ಭ್ರಮಿಸತೊಡಗುತ್ತದೆ. ಚೇತನವು ಆ ಪ್ರತಿಬಿಂಬದೊಡನೆ ಕಲೆತುಹೋಗುತ್ತದೆ ~ Whosoever Ji

ಮೂಲ ಹಿಂದಿ: ಶಿವೋಹsಮ್ | ಕರ್ತೃ: ಹೂಸೋಎವರ್ ಜಿ | ಕನ್ನಡಕ್ಕೆ : ಚೇತನಾ

ಚೇತನದ ಗೈರಿನಲ್ಲಿ ದೇಹಕ್ಕೆ ಯಾವ ಮೌಲ್ಯವೂ ಇರುವುದಿಲ್ಲ. ಈ ದೇಹದ ಸಂಪೂರ್ಣ ವ್ಯವಸ್ಥೆಯ ಚಾಲಕ ಶಕ್ತಿ ಏನಿದೆ, ಅದು ಚೇತನವೇ ಆಗಿದೆ. ದೇಹದಲ್ಲಿ ಚೇತನವು ಉದಯಿಸಿದ ನಂತರ, ಚೇತನದ ಮೊದಲ ಅನುಭವವು ‘ಇರುವಿಕೆ’ಯ ರೂಪದಲ್ಲಾಗುತ್ತದೆ. ಅಂದರೆ, ಚೇತನದ ಮೊದಲ ಗುಣವೇ ‘ಇರುವಿಕೆ’ – ಇರುವಿಕೆಯ ಅನುಭವವನ್ನು ಪ್ರಕಟಗೊಳಿಸುವುದು. ಎರಡನೆಯ ಗುಣ – ‘ತಿಳಿಯುವುದು’ – ಅರಿವಿನ ಅನುಭವವನ್ನು ಜಾಗರಗೊಳಿಸುವುದು.

ವಸ್ತುತಃ ‘ಇರುವುದು’ ಹಾಗೂ ‘ಅರಿಯುವುದು’ ಇವೆರಡೂ ಚೇತನದ ಎರಡು ಆಯಾಮಗಳಾಗಿವೆ. ಆಗ ಹೇಳಿದಂತೆ, ಒಂದು ನಾಣ್ಯದ ಎರಡು ಮುಖಗಳು. ಅಸ್ತಿತ್ವದ ಅನುಭವ ಆಗುತ್ತಿದೆ ಎಂದರೆ, ಅಲ್ಲಿ ಅರಿಯುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದರ್ಥ. ಅರಿವು ರೂಪುಗೊಳ್ಳುತ್ತಿದೆ ಎಂದರೆ ಅಲ್ಲಿ ಅಸ್ತಿತ್ವ ಇದೆಯೆಂದೇ ಅರ್ಥ.

ಭೌತಿಕ ಶರೀರವು ಒಂದು ಜೈವಿಕ ಉಪಕರಣವಾಗಿದೆ. ಈ ಉಪಕರಣದಲ್ಲಿ ಏತನವು ಸಕ್ರಿಯಗೊಂಡಾಗ ಎಲ್ಲಕ್ಕಿಂತ ಮೊದಲು ನಾನು ಇದ್ದೇನೆ ಎನ್ನುವ ಅರಿವು ಉಂಟಾಗುತ್ತದೆ. ‘ನಾನು ಇದ್ದೇನೆ’ ಎನ್ನುವುದಕ್ಕಿಂತ ಮೊದಲೇ ಇರುವಿಕೆಯ ಭಾವವು ಹುಟ್ಟಿಕೊಳ್ಳುತ್ತದೆ. ಇರುವಿಕೆಯೆಂದರೆ ಅಸ್ತಿತ್ವ. ಇರುವಿಕೆಯೆಂದರೆ ಎಕ್ಸಿಸ್ಟೆನ್ಸ್‌.

ಇದ್ದೇನೆ ಎನ್ನುವ ಅರಿವಿನೊಡನೆಯೇ ಚೇತನವು ದೇಹದೊಂದಿಗೆ ತಾದಾತ್ಮ್ಯಗೊಂಡು, ಅದರೊಡನೆ ಗುರುತಿಸಿಕೊಳ್ಳುತ್ತದೆ. ಯಾವ ದೇಹದಲ್ಲಿ ಪ್ರಕಟಗೊಳ್ಳುತ್ತದೆಯೋ ಆ ದೇಹದಲ್ಲಿಯೇ ತಾದಾತ್ಮ್ಯಗೊಳ್ಳುವುದು ಚೇತನದ ಸ್ವಭಾವ. ಅಂದರೆ, ಅದು ತಾನು ಯಾವ ದೇಹದ ಮೂಲಕ ವ್ಯಕ್ತಗೊಳ್ಳುತ್ತದೆಯೋ ಅದನ್ನೇ ತಾನೆಂದು ಭಾವಿಸತೊಡಗುತ್ತದೆ.

ಅದು ಯಾವುದೇ ದೇಹವಾಗಿರಲಿ, ನೊಣ ಆಗಿರಲಿ ಅಥವಾ ಸೊಳ್ಳೆಯಾಗಿರಲಿ… ಕ್ರಿಮಿಯಾಗಿರಲಿ ಅಥವಾ ಕೀಟ. ಪಶು – ಪಕ್ಷಿಯಾಗಿರಲಿ ಅಥವಾ ಯಾವುದಾದರೂ ಪ್ರಾಣಿಯಾಗಿರಲಿ, ಖೇಚರವಾಗಿರಲಿ ಅಥವಾ ಜಲಚರ…. ಆ ಜೀವಿಯ ದೇಹದೊಂದಿಗೆ ಚೇತನವು ತಾದಾತ್ಮ್ಯ ಸಾಧಿಸುತ್ತದೆ. ಚೇತನವು ದೇಹದೊಂದಿಗೆ ತಾದಾತ್ಮ್ಯಗೊಳ್ಳುತ್ತಲೇ ಅದರಲ್ಲಿ ನಾನು ಈ ದೇಹವೇ ಆಗಿದ್ದೇನೆ ಎನ್ನುವ ಭಾವೋದಯವಾಗುತ್ತದೆ. ಚೇತನವು ಆ ದೇಹವಿಶೇಷದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತ ತನ್ನನ್ನು ತಾನು ಮರೆತು ಕೂರುತ್ತದೆ.

ಯಾವಾಗ ಚೇತನವು ನಾನು ಈ ದೇಹವೇ ಆಗಿದ್ದೇನೆ ಎಂದು ಭಾವಿಸತೊಡಗುತ್ತದೆಯೋ ಆ ಕ್ಷಣದಿಂದ ಆ ದೇಹ ವಿಶೇಷದ ಲಕ್ಷಣಗಳು ಪ್ರಕಟಗೊಳ್ಳತೊಡಗುತ್ತದೆ. ತನ್ನ ಸ್ವಂತದ ಯಾವ ನಾಮ ರೂಪವೂ ಇಲ್ಲದ ಚೇತನವು ತನ್ನನ್ನು ಆ ದೇಹ ವಿಶೇಷದೊಂದಿಗೆ ಜೋಡಿಸಿಕೊಳ್ಳುತ್ತದೆ. ಇಲ್ಲಿಂದಲೇ ಮರೆವಿನ ಮೆರವಣಿಗೆ ಶುರುವಾಗೋದು. ಇಲ್ಲಿಂದಲೇ ಅಜ್ಞಾನಾವಸ್ಥೆಯು ಪ್ರಾರಂಭವಾಗೋದು. ಈಗ ಏನು ಘಟಿಸಿದರೂ ಅಜ್ಞಾನದಿಂದಲೇ ಘಟಿಸುತ್ತದೆ. ಚೇತನವು ದೇಹದೊಂದಿಗೆ ತಾದಾತ್ಮ್ಯಗೊಂಡ ಕ್ಷಣದಿಂದ ಅಜ್ಞಾನದ ಆರಂಭವಾಗುತ್ತದೆ. ಇದು ತಾದಾತ್ಮ್ಯಗೊಂಡ ಚೇತನವನ್ನು ಮುಸುಕಿ ಒಂದು ಆವರಣ ನಿರ್ಮಿಸುತ್ತದೆ. ಚೇತನವು ದೇಹಬುದ್ಧಿಯಿಂದ ಆವೃತಗೊಳ್ಳುತ್ತದೆ ಮತ್ತು ಅದಕ್ಕೆ ತಕ್ಕಂತೆ ವ್ಯವಹರಿಸತೊಡಗುತ್ತದೆ.

ವಸ್ತುತಃ ಚೇತನವು ಕನ್ನಡಿಯಂತೆ. ಚೇತನದ ಕನ್ನಡಿಯಲ್ಲಿ ಯಾವುದು ಪ್ರತಿಬಿಂಬಿತಗೊಳ್ಳುತ್ತದೆಯೋ, ಚೇತನದ ಕನ್ನಡಿಯಲ್ಲಿ ಯಾರು ಹಣಕುತ್ತಾರೋ, ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತದೆ. ಆ ಪ್ರತಿಬಿಂಬವನ್ನು ಸ್ವತಃ ತಾನೇ ಎಂಬಂತೆ ಭ್ರಮಿಸತೊಡಗುತ್ತದೆ. ಚೇತನವು ಆ ಪ್ರತಿಬಿಂಬದೊಡನೆ ಕಲೆತುಹೋಗುತ್ತದೆ. ಹೀಗೆ ತದನುರೂಪಗೊಳ್ಳುವುದು ಅದರ ವಿಶೇಷ ಸಾಮರ್ಥ್ಯವೇ ಆಗಿದೆ. ಇಲ್ಲಿ ನಾವು ಒಂದು ಸಂಗತಿಯನ್ನು ನೆನಪಿಟ್ಟುಕೊಳ್ಳುವುದು ಅವಶ್ಯವಿದೆ. ಏನೆಲ್ಲವೂ ತಿಳಿಯಲ್ಪಡುತ್ತದೆಯೋ ಅವೆಲ್ಲವೂ ಚೇತನವು ಪ್ರಕಟಗೊಂಡ ನಂತರವಷ್ಟೆ ತಿಳಿವಿಗೆ ಬರುವಂಥವಾಗಿರುತ್ತವೆ. ಇದರರ್ಥ ಹೀಗಾಯಿತು – ಚೇತನದಲ್ಲಿ ಪ್ರತಿಕ್ಷಣ ಒಂದಲ್ಲ ಒಂದು ಪ್ರಕಟವೂ ಅಪ್ರಕಟವೂ ಆಗುತ್ತಿರುತ್ತದೆ, ಹಾಗೂ ಚೇತನವು ಅದರೊಂದಿಗೆ ತಾದಾತ್ಮ್ಯಗೊಳ್ಳುತ್ತ ಇರುತ್ತದೆ. ಚೇತನದ ತದ್ರೂಪಾವಸ್ಥೆ ಎಂದು ಕರೆಯುವುದು ಇದನ್ನೇ. ಯಾವಾಗ ಚೇತನವು ದೇಹವನ್ನು ಅರಿಯುತ್ತದೆಯೋ, ಆಗ ಅದು ದೇಹರೂಪವಾಗಿಬಿಡುತ್ತದೆ. ಯಾವುದಾದರೂ ವಿಚಾರವನ್ನು ಅರಿಯುತ್ತದೆಯೋ ಆಗ ವಿಚಾರರೂಪವಾಗುತ್ತದೆ. ಯಾವುದಾದರೂ ಭಾವವನ್ನು ಅರಿತಾಗ ಆ ಕೂಡಲೇ ತಾನೂ ಅದೇ ಭಾವರೂಪ ಧಾರಣೆ ಮಾಡಿಬಿಡುತ್ತದೆ. ಅದು ಏನೆನಲ್ಲವನ್ನು ತಿಳಿಯುತ್ತ ಹೋಗುತ್ತದೆಯೋ ಅವೆಲ್ಲವೂ ಆಗುತ್ತ ಸಾಗುತ್ತದೆ.

ಸಾಧಾರಣ ಕನ್ನಡಿಗೇನಾದರೂ ಈ ಕ್ಷಮತೆ ಇದ್ದಿದ್ದರೆ, ಅದು ಕೂಡ ಚೇತನದರ್ಪಣದಂತೆಯೇ ತನ್ನೊಳಗಿನ ಬಿಂಬವನ್ನು ತಾನೇ ಎಂದು ಭ್ರಮಿಸಿಬಿಡುತ್ತಿತ್ತು. ವಸ್ತುತಃ ಕನ್ನಡಿಯಲ್ಲಿ ಕೇವಲ ಛವಿ ಉಂಟಾಗುತ್ತದೆ. ಅಲ್ಲಿ ತೋರುವುದು ಕೇವಲ ಪ್ರತಿಬಿಂಬ. ಈ ಛವಿ ಅಥವಾ ಪ್ರತಿಬಿಂಬಕ್ಕೆ ತನ್ನದೇ ಆದ ಯಾವ ಅಸ್ತಿತ್ವವೂ ಇರುವುದಿಲ್ಲ. ಇದು ಕೇವಲ ಆಭಾಸಮಾತ್ರವಾಗಿರುತ್ತದೆ. ವಸ್ತುತಃ ಇದು ಇರುವುದಿಲ್ಲ. ಆದರೆ ಚೇತನವು ತನ್ನೊಳಗೆ ಹುಟ್ಟಿಕೊಂಡ ಈ ಆಭಾಸವನ್ನು ಏಕಾತ್ಮಗೊಳಿಸಿಕೊಳ್ಳುತ್ತದೆ. ಪರಿಣಾಮವಾಗಿ ಅದಕ್ಕೆ ತಕ್ಕಂತೆ ವ್ಯವಹರಿಸತೊಡಗುತ್ತದೆ.

ಗಮನದಲ್ಲಿರಲಿ! ಮೂಲತಃ ಯಾವ ಆಭಾಸವೂ ಯಾವ ಛವಿ ಅಥವಾ ಪ್ರತಿಬಿಂಬವೂ ಚೇತನವನ್ನು ದೂಷಿಸುವುದಿಲ್ಲ. ಅಷ್ಟೇ ಅಲ್ಲ, ಹಾಗೆ ದೂಷಿಸುವುದು ಸಾಧ್ಯವೂ ಇಲ್ಲ. ಚೇತನವನ್ನು ಅದರೊಂದಿಗೆ ಏಕಾತ್ಮಗೊಳಿಸಿಕೊಳ್ಳುವುದೇ ಒಂದು ಪ್ರಮಾದ. ಪ್ರತಿಬಿಂಬದೊಡನೆ ಅದರ ಏಕಾತ್ಮತೆ, ಅದರ ತಾದಾತ್ಮ್ಯ – ಇವೆಲ್ಲವೂ ಪ್ರಮಾದಕ್ಕೆ ಕಾರಣಗಳು.

ಇದೇ ಚೇತನದ ಅಜ್ಞಾನಕ್ಕೆ ಕಾರಣ. ಅಜ್ಞಾನದ ಪ್ರಾರಂಭವಾಗುವುದು ಇಲ್ಲಿಂದಲೇ. ಈ ಅಜ್ಞಾನದ ಕಾರಣದಿಂದ ಘಟಿಸುವ ಪ್ರತಿಯೊಂದು ವ್ಯವಹಾರವೂ ಇನ್ನಷ್ಟು ಅಧಿಕ ಅಜ್ಞಾದೆಡೆಗೆ ಸೆಳೆದೊಯ್ಯುತ್ತದೆ.

(ಮುಂದುವರಿಯುವುದು…..)

Leave a Reply