ಇಬ್ಬರಿಗೂ ಸಾಕಾಗುವಷ್ಟು ಶಿಸ್ತು : ಝೆನ್ ಕಥೆ

ಒಂದು ದಿನ ಸುಝೂಕಿ ರೋಶಿ ಅವರ ಶಿಷ್ಯೆ, ಅವರ ಹತ್ತಿರ ಬಂದು ತನ್ನ ಮನಸ್ಸಿನ ತಳಮಳವನ್ನು ನಿವೇದಿಸಿಕೊಂಡಳು.

“ಮಾಸ್ಟರ್, ಯಾಕೋ ಗೊತ್ತಿಲ್ಲ ನಿಮ್ಮ ಮೇಲೆ ನನಗೆ ವಿಪರೀತ ಪ್ರೇಮ ಉಕ್ಕಿ ಬರುತ್ತಿದೆ. ಕೂತಲ್ಲಿ, ನಿಂತಲ್ಲಿ ಸದಾ ನಿಮ್ಮ ಯೋಚನೆ. ಇದು ತಪ್ಪೋ ಸರಿಯೋ ಗೊತ್ತಿಲ್ಲ, ತುಂಬ ಗೊಂದಲವಾಗುತ್ತಿದೆ.”

ಮಾಸ್ಟರ್ ರೋಶಿ ಉತ್ತರಿಸಿದರು, “ಹುಡುಗಿ, ಇದು ತಪ್ಪು ಒಪ್ಪಿನ ಪ್ರಶ್ನೆ ಅಲ್ಲ. ನಿನ್ನ ಗುರುವಿನ ಬಗ್ಗೆ ಯಾವ ಭಾವನೆ ಹೊಂದಲೂ ನೀನು ಸ್ವತಂತ್ರಳು. ಭಾವನೆಗಳನ್ನು ಹತ್ತಿಕ್ಕಬೇಡ, ಮುಕ್ತವಾಗಿ ವ್ಯಕ್ತಪಡಿಸು”

ಹುಡುಗಿ ಆಶ್ಚರ್ಯಚಕಿತಳಾಗಿ ಮಾಸ್ಟರ್ ರೋಶಿಯನ್ನೇ ನೋಡತೊಡಗಿದಳು.

ಮಾಸ್ಟರ್ ರೋಶಿ ಅವಳ ತಲೆ ಮೇಲೆ ಕೈಯಿಟ್ಟು ಹೇಳಿದರು.

“ಹೆದರಬೇಡ ಹುಡುಗಿ, ನನ್ನ ಹತ್ತಿರ ಇಬ್ಬರಿಗೂ ಸಾಕಾಗುವಷ್ಟು ಶಿಸ್ತು ಇದೆ”.

(ಸಂಗ್ರಹ ಮತ್ತು ನಿರೂಪಣೆ : ಚದಂಬರ ನರೇಂದ್ರ)

Leave a Reply