ಅರಿವಿನ ಚಾರಣಕ್ಕೆ ಕೈಬೀಸಿ ಕರೆಯುವ ಹಿಮಾಲಯ

ಇದು ಅಮರನಾಥ ಯಾತ್ರೆ, ಮಾನಸ ಸರೋವರ ಯಾತ್ರೆಗಳ ಕಾಲ. ಪ್ರತಿ ವರ್ಷ ಸಾವಿರಾರು ಆಸ್ತಿಕರೂ ಆಸಕ್ತ ನಾಸ್ತಿಕರೂ ಈ ಚಾರಣ – ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಧ್ಯಾತ್ಮಕ್ಕೂ ಹಿಮಾಲಯಕ್ಕೂ ಅವಿನಾಭಾವ ಸಂಬಂಧವಿದೆ. ಹಾಗೆಯೇ ಧಾರ್ಮಿಕ ನಂಬುಗೆಗಳೊಂದಿಗೂ ಹಿಮಾಲಯ ಬೆಸೆದುಕೊಂಡಿದೆ…

ಹಿಮಾಲಯ!
ಈ ಹೆಸರನ್ನು ಕೇಳುವಾಗಲೇ ಒಂದು ಅಗಾಧತೆಯ ಭಾವ ಆವರಿಸಿಕೊಳ್ಳುವುದು. ಹಿಮಾಲಯವೆಂದರೆ, ಅದೊಂದು ನಿಗೂಢ ಜಗತ್ತು. ಸಾಧಕರ ಮಾತಿನಲ್ಲಿ ಹೇಳುವುದಾದರೆ, ಅದು ಜೀವಂತ ಪರ್ವತ. ಸಾವಿರಾರು ವರ್ಷಗಳಿಂದ ಸಾಧಕರು ಹಿಮಾಲಯದತ್ತ ಹೆಜ್ಜೆ ಹಾಕುತ್ತಲೇ ಇದ್ದಾರೆ. ಜ್ಞಾನಕ್ಕೆ, ಧ್ಯಾನಕ್ಕೆ, ಶಾಂತಿಗೆ, ಮುಕ್ತಿಗೆ- ಸಕಲಕ್ಕೂ ತನ್ನ ಅಗಾಧ ಬಾಹುಗಳನ್ನು ತೆರೆದು ಅಖಂಡವಾಗಿ ನಿಂತಿದೆ ಈ ಹಿಮಬೆಟ್ಟ.

ಪಶ್ಚಿಮದಲ್ಲಿ ಪಾಕಿಸ್ತಾನದ ನಂಗಾ ಪರ್ಬತ್‍ನಿಂದ ಪೂರ್ವದಲ್ಲಿ ಟಿಬೆಟ್‍ನ ನಮ್ಚಾ ಬರ್ವದವರೆಗೆ 2,400 ಕಿಲೋ ಮೀಟರ್‍ಗಳಷ್ಟು ವಿಸ್ತಾರಕ್ಕೆ ಚಾಚಿಕೊಂಡಿರುವ ಹಿಮಾಲಯ ಶ್ರೇಣಿ ಮುಮುಕ್ಷುಗಳ ಪಾಲಿನ ನೆಚ್ಚಿನ ತಾಣ. ಈ ಶ್ರೇಣಿಯಲ್ಲಿ ಬದರೀ ನಾಥ, ಕೇದಾರ ನಾಥ, ಹೃಷಿಕೇಶ, ಹರಿದ್ವಾರ, ಗೋಮುಖ, ದೇವಪ್ರಯಾಗ, ಮಾನಸ ಸರೋವರ, ಅಮರ ನಾಥ, ವೈಷ್ಣೋದೇವಿ ಮೊದಲಾದ ತೀರ್ಥಕ್ಷೇತ್ರಗಳಿವೆ. ಹಿಂದೂಗಳಿಗೆ ಮಾತ್ರವಲ್ಲ, ಈ ಶ್ರೇಣಿ ಬೌದ್ಧರ ಪಾಲಿಗೂ ಪರಮ ಪವಿತ್ರ. ಟಿಬೆಟಿನಲ್ಲಿ ಬೌದ್ಧರ ಪಾಲಿನ ಪವಿತ್ರಸ್ಥಳವಾದ ದಲೈಲಾಮಾ ನಿವಾಸವಿದೆ. ಅಲ್ಲದೆ, ಈ ಶ್ರೇಣಿಯುದ್ದಕ್ಕೂ ಅಲ್ಲಲ್ಲಿ ಬೌದ್ಧ ವಿಹಾರಗಳು ನೆಲೆಗೊಂಡಿವೆ. ಹಾಗೆಯೇ ಸಿಕ್ಖ್ ಪಂಥೀಯರ ಪುಣ್ಯಕ್ಷೇತ್ರ ಹೇಮಕುಂಡ್, ಪತ್ಥರ್ ಸಾಹಿಬ್ ಮೊದಲಾದವು ಕೂಡ ಈ ಶ್ರೇಣಿಯಲ್ಲಿವೆ. ದೇವತೆಗಳು ಹಿಮಾಯ ಶ್ರೇಣಿಯಲ್ಲಿ ವಿಹಾರ ನಡೆಸುತ್ತಾರೆ ಎಂಬ ನಂಬಿಕೆಯಿದೆ. ಆದ್ದರಿಂದಲೇ ಈ ಪ್ರಾಂತ್ಯದ ಕಂಪನವು ವಿಶಿಷ್ಟವಾಗಿದ್ದು, ಅಧ್ಯಾತ್ಮ ಸಾಧನೆಗೆ ಪೂರಕವಾಗಿದೆ ಎನ್ನಲಾಗುತ್ತದೆ. ಆದ್ದರಿಂದಲೇ `ದೇವಾತ್ಮ’ ಎಂದು ಕರೆಸಿಕೊಳ್ಳುವ ಈ ಶ್ರೇಣಿಯು `ತಪೋಭೂಮಿ’ ಎಂಬ ಮನ್ನಣೆಯನ್ನೂ ಪಡೆದಿದೆ.

ಪುರಾಣಗಳಲ್ಲಿ…
ವಿಷ್ಣು ಪುರಾಣದಲ್ಲಿ ಕೈಲಾಸ ಪರ್ವತವನ್ನು ಶಿವನ ನೆಲೆಯೆಂದೂ ಭೂಮಿಯ ನಡುಸ್ತಂಭವೆಂದೂ ಹೇಳಲಾಗಿದೆ. ಕೈಲಾಸ ಪರ್ವತವು ನಾಲ್ಕೂ ದಿಕ್ಕುಗಳು ಸೇರುವ ಬಿಂದು ಎಂದು ಹೇಳಲಾಗುತ್ತದೆ. ಇದು ಭೂಮಿ-ಬಾನುಗಳನ್ನು ಬೆಸೆಯುವ ಮಾಧ್ಯಮವೂ ಹೌದು. ಈ ಬೆಸುಗೆ ಕೇವಲ ಭೌತಿಕ ಸ್ತರದಲ್ಲಿ ಮಾತ್ರವಲ್ಲ, ಆಧ್ಯಾತ್ಮಿಕ ಸ್ತರದಲ್ಲಿಯೂ. ಹಾಗೆಂದೇ ಹಿಮಾಲಯ ಶ್ರೇಣಿ, ಅದರಲ್ಲಿಯೂ ಕೈಲಾಸ ಪರ್ವತ ಹೆಚ್ಚಿನ ಸಂಖ್ಯೆಯ ಮುಮುಕ್ಷುಗಳನ್ನು ತನ್ನತ್ತ ಸೆಳೆಯುತ್ತದೆ.
ಬೌದ್ಧರ ಐತಿಹ್ಯಗಳ ಪ್ರಕಾರ ಕೈಲಾಸ ಪರ್ವತದಲ್ಲಿ `ಶಾಂಬಲಾ’ ಎಂಬ ನಿಗೂಢ ನಗರಿಯಿದೆ. ಇದು ಅದ್ಭುತ ಆಧ್ಯಾತ್ಮಿಕ ನಗರಿ. ಇದನ್ನು ಕಂಡವರಾರೂ ಇಲ್ಲ. ಆಧ್ಯಾತ್ಮಿಕ ಔನ್ನತ್ಯ ಸಾಧಿಸಿದವರಿಗೆ ಮಾತ್ರ ಇಲ್ಲಿ ಪ್ರವೇಶ. ಈ ನಗರಿ ತಂತ್ರಸಾಧಕರ ನೆಲೆವೀಡು ಎಂದು ಬೌದ್ಧರು ನಂಬುತ್ತಾರೆ. ಇದನ್ನು ಕಲ್ಕಿಗಳೆಂಬ ರಾಜರು ಆಳುತ್ತಾರೆಂದೂ ಭೂಮಿಯಲ್ಲಿ ಕೆಡುಕು ಮಿತಿಮೀರಿದಾಗ ಕಲ್ಕಿಗಳ 25ನೇ ಅರಸ ತನ್ನ ಸೇನೆಯೊಂದಿಗೆ ಶಾಂಬಲಾ ನಗರಿಯಿಂದ ಹೊರಬಂದು ದುಷ್ಟರನ್ನೆಲ್ಲ ಶಿಕ್ಷಿಸಿ ಭೂಮಿಯನ್ನು ರಕ್ಷಿಸುತ್ತಾರೆಂದೂ ಕಾಲಚಕ್ರ ಪ್ರವಾದವು ಹೇಳುತ್ತದೆ.

ದಾರಿ ಮತ್ತು ಗುರಿ
ಅದು ಆಚಾರ್ಯ ಶಂಕರರಿರಬಹುದು, ಮಧ್ವಾಚಾರ್ಯರು, ಗುರು ನಾನಕರಿರಬಹುದು… ಆಧುನಿಕ ಕಾಲದ ಸ್ವಾಮಿ ವಿವೇಕಾನಂದರು. ರಾಮತೀರ್ಥರು, ಸ್ವಾಮಿ ರಾಮ, ಪರಮಹಂಸ ಯೋಗಾನಂದ ಹೀಗೆ ಯಾವುದೇ ಶ್ರೇಷ್ಠ ಸಂತ- ಸನ್ಯಾಸಿಯಾಗಿರಬಹುದು, ಅನಂತರದಲ್ಲಿ ವಿಜ್ಞಾನಿಯಾಗಿ ಖ್ಯಾತರಾದ ಜಗದೀಶ್ಚಂದ್ರ ಬೋಸ್ ಇರಬಹುದು, ಕೊನೆಗೆ `ಆ್ಯಪಲ್’ ಸಂಸ್ಥಾಪಕ ಸ್ಟೀವ್‍ಜಾಬ್ಸ್ ಇರಬಹುದು… ಅವರೆಲ್ಲರೂ ಹಿಮಾಲಯದತ್ತ ಚಾರಣ ಮಾಡಿದವರು. ಅದರ ದಿವ್ಯ ಕಂಪನದ ಒಡಲಲ್ಲಿ ಕುಳಿತು ಜ್ಞಾನದ ಬೆಳಕು ಕಂಡುಂಡು ಬಂದು, ಜಗತ್ತಿಗೆ ಹಂಚಿದವರು.
ನಮ್ಮ ಹಿಂದಿನ ಸಾಧಕರ ಈ ಹಾದಿಯಲ್ಲಿ ಇಂದಿನ ಮುಮುಕ್ಷುಗಳೂ ನಡೆಯುತ್ತಿದ್ದಾರೆ. ಭಾರತ ಮಾತ್ರವಲ್ಲ, ವಿದೇಶಗಳ ನೂರಾರು ಆಧ್ಯಾತ್ಮಿಕ ಜೀವಿಗಳು ಈ ಹಿಮ ಬೆಟ್ಟದತ್ತ ಆಕರ್ಷಿತರಾಗಿ, ತಮ್ಮ ಜ್ಞಾನ ದಾಹವನ್ನು ನೀಗಿಸುವ, ಅಧ್ಯಾತ್ಮಬೋಧೆ ಒದಗಿಸುವ ಗುರುಗಳನ್ನರಸಿ ಇಂದಿಗೂ ಇತ್ತ ಧಾವಿಸುತ್ತಲೇ ಇದ್ದಾರೆ.

ಅಗಾಧವಾಗಿ ತಲೆ ಎತ್ತಿ ನಿಂತಿರುವ ಈ ಹಿಮಪರ್ವತಗಳೇ ಸ್ವತಃ ಒಂದು ಬೋಧೆಯಾಗಿ ದಾರಿ ತೋರುತ್ತವೆ. ಮೆತ್ತನೆ ಹಿಮ ಮುಚ್ಚಿದ ಕಗ್ಗಲ್ಲುಗಳು, ಒಳಗೆ ಹರಿವ ನೀರನ್ನು ಬಚ್ಚಿಟ್ಟುಕೊಂಡು, ಹಿಮದ ಮೇಲ್ಪದರ ಹೊದ್ದ ನದಿಗಳು, ನೆಲದ ಭ್ರಮೆ ಮೂಡಿಸುತ್ತಾ ಕಾಲಿಟ್ಟರೆ ಕುಸಿದು ಬೀಳುವ ಮಂಜುಗಡ್ಡೆಗಳು, ಕಣ್‍ಹಾಯಿಸ್ದಿಷ್ಟೂ ದೂರ ಬಂಗಾರ ಲೇಪದ ಬಿಳಿ ಮುದ್ದೆಯಂತೆ ಕಾಣುವ ಪರ್ವತ ಶಿಖರಗಳು, ನಮ್ಮೊಳಗನ್ನು ಸ್ಪಷ್ಟವಾಗಿ ನಮ್ಮೆದುರು ಬಿಚ್ಚಿಡುವ ಪ್ರಶಾಂತತೆ… ಈ ಎಲ್ಲವೂ ನಮ್ಮನ್ನು ಸ್ವಯಂ ಅರಿವಿಗೆ ಪ್ರೇರೇಪಿಸುತ್ತವೆ. ಹಿಮಾಲಯದ ಅಗಾಧತೆ ನಮಗೆ ನಾವೆಷ್ಟು ಚಿಕ್ಕವರು ಎನ್ನುವುದನ್ನು ಮನದಟ್ಟು ಮಾಡಿಸುತ್ತದೆ. ಸ್ವತಃ ಹಿಮಾಲಯ, ನಮ್ಮ ಅಂತರಂಗದ ರೂಪಕದಂತೆ ತೋರತೊಡಗುತ್ತದೆ. ಕೈಲಾಸದಲ್ಲಿ ಶಿವ ನೆಲೆಸಿರುವಂತೆಯೇ ನಮ್ಮೆದೆಯಲ್ಲೂ ಭಗವಂತನಿರುತ್ತಾನೆ. ಒಮ್ಮೆ ಈ ಬೋಧೆ ದಕ್ಕಿಸಿಕೊಂಡವರು ತಪಸ್ಸು ಮುಗಿದ ಸೂಚನೆ ದೊರೆತು ಹಿಂದಿರುಗುತ್ತಾರೆ. ಮತ್ತೆ ಕೆಲವರು ಈ ತಿಳಿವಿನ ಹರಿವಲ್ಲಿ ಲೀನರಾಗಿ ನಿತ್ಯಾನಂದದಲ್ಲಿ ಮುಳುಗಿಹೋಗುತ್ತಾರೆ, ಅಲ್ಲಿಯೇ ಸಾಧನೆ ನಡೆಸುತ್ತಾ ಉಳಿಯುತ್ತಾರೆ.

ಲೌಕಿಕಕ್ಕೆ ಕೊಡುಗೆ
ಹಿಮಾಲಯ ಭಾರತದ ಹೆಮ್ಮೆ. ಈ ಶ್ರೇಣಿಯು ಪಾಕಿಸ್ತಾನದಿಂದ ಟಿಬೆಟ್‍ವರೆಗೆ 5 ದೇಶಗಳನ್ನು ಹಾದು ಹೋಗಿದ್ದರೂ ಹಿಮಾಲಯವು ವಿಶೇಷವಾಗಿ ಭಾರತದೊಂದಿಗೆ ಬೆಸೆದುಕೊಂಡಿದೆ. ಈ ದೇಶಗಳು ವಿಭಿನ್ನ ಸಂಸ್ಕøತಿಗಳನ್ನು ಹೊಂದಿದ್ದರೂ ರಾಜಕೀಯ ಒಳಜಗಳಗಳಿದ್ದರೂ ಭಾವನಾತ್ಮಕವಾಗಿ ಪೂರಕವಾಗಿರುವುದಕ್ಕೆ ಈ ಶ್ರೇಣಿಯೇ ಕಾರಣ ಎನ್ನಬಹುದು. ಜಗತ್ತಿನ ಛಾವಣಿಯಂತಿರುವ ಹಿಮಾಲಯ ಶ್ರೇಣಿಯು ಏಷ್ಯಾ ಖಂಡದ ಹತ್ತು ಪ್ರಮುಖ ನದಿಗಳ ಮೂಲನೆಲೆಯೂ ಆಗಿದೆ. ವಿಶೇಷವಾಗಿ ಭಾರತಕ್ಕೆ ಗಂಗಾ, ಯಮುನಾ, ಸಿಂಧೂ, ಝೀಲಮ್, ಬ್ರಹ್ಮಪುತ್ರ ಮೊದಲಾದ ಜೀವನದಿಗಳನ್ನು ನೀಡಿದೆ. ದೇಶದ ಉತ್ತರ ಭಾಗದಲ್ಲಿರುವ ಈ ಎತ್ತರದ ಪ್ರಬಲ ಪರ್ವತ ಶಿಖರಗಳು ಶೀತ ಮಾರುತಗಳನ್ನು ಮಾತ್ರವಲ್ಲ ಶತ್ರುಗಳನ್ನೂ ತಡೆಯುತ್ತವೆ. ಈ ಎಲ್ಲ ನಿಟ್ಟಿನಿಂದ ಹಿಮಾಲಯ ಭಾರತಕ್ಕೊಂದು ವರದಾನವೇ ಸರಿ.

 

 

Leave a Reply