ಪ್ರಶ್ನೆಗಳ ಮೇಲೆ ರಚಿತಗೊಂಡಿರುವುದರಿಂದಲೇ ಈ ಉಪನಿಷತ್ತಿಗೆ ಪ್ರಶ್ನೋಪನಿಷತ್ತು ಎಂಬ ಹೆಸರು ಬಂದಿದೆ. ಆರು ಜಿಜ್ಞಾಸು ಋಷಿಗಳು ಕೇಳುವ ಪ್ರಶ್ನೆಗಳಾದ್ದರಿಂದ ‘ಷಟ್ ಪ್ರಶ್ನ ಉಪನಿಷತ್ತು’ ಎಂಬ ಹೆಸರೂ ಇದಕ್ಕಿದೆ. ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/06/28/sanatana10/
“ಲೋಕದಲ್ಲಿ ಪ್ರಜೆಗಳು ಹೇಗೆ, ಮತ್ತು ಎಲ್ಲಿಂದ ಜನಿಸುತ್ತಾರೆ?” ಎಂದು ಕಬಂಧಿ ಕಾತ್ಯಾಯನ ಮೊದಲ ಪ್ರಶ್ನೆ ಕೇಳುತ್ತಾನೆ. ಪ್ರಜಾಪತಿಯ ತಪಸ್ಸಿನ ಫಲವಾಗಿ ಆದಿತ್ಯನೂ (ಪ್ರಾಣ) ಚಂದ್ರಮನೂ (ರಯಿ) ಸೃಷ್ಟಿಯಾಗಿ ಅವರಿಂದ ಪ್ರಜಾಸೃಷ್ಟಿಯಾಯಿತು ಎಂಬುದು ಅದಕ್ಕೆ ಪಿಪ್ಪಲಾದರ ಉತ್ತರ.
ದೇವತೆಗಳೆಷ್ಟು ಮಂದಿ ಪ್ರಜೆಗಳಿಗೆ ಆಧಾರಭೂತರು ? ಅವರಲ್ಲಿ ವರಿಷ್ಠರು ಯಾರು ? ಎಂಬುದು ಭಾರ್ಗವ ವೈದರ್ಭಿ ಎರಡನೆಯ ಪ್ರಶ್ನೆ ಕೇಳುತ್ತಾನೆ.
ಆಕಾಶ, ವಾಯು, ಅಗ್ನಿ, ಆಪಃ, ಪೃಥಿವೀ, ವಾಕ್, ಮನಸ್ಸು, ಚಕ್ಷುಸ್ಸು, ಶ್ರೋತ್ರ ಇವರು ದೇವತೆಗಳು; ಇವರಲ್ಲಿ ವರಿಷ್ಠ ಪ್ರಾಣ ಎಂದು ಪಿಪ್ಪಲಾದರು ಉತ್ತರಿಸುತ್ತಾರೆ.
ಈ ಪ್ರಾಣ ಎಲ್ಲಿಂದ ಹುಟ್ಟಿತು? ಅದು ಈ ಶರೀರಕ್ಕೆ ಹೇಗೆ ಬಂದು ಪ್ರತಿಷ್ಠಿತವಾಗುತ್ತದೆ? ಎಂಬುದು ಅಶ್ವಲಾಯನ ಕೇಳಿದ ಮೂರನೆಯ ಪ್ರಶ್ನೆ.
ಇದಕ್ಕೆ ಪಿಪ್ಪಲಾದರ ಉತ್ತರ: ಪುರುಷನನ್ನು ನೆರಳು ಹಿಂಬಾಲಿಸುವಂತೆ, ಈ ಶರೀರದಲ್ಲಿ ಆತ್ಮನಿಂದ ಕರ್ಮನಿಮಿತ್ತವಾಗಿ ಪ್ರಾಣ ಜನಿಸುತ್ತದೆ. ಸಾಮ್ರಾಟನಾದವ ಬೇರೆ ಬೇರೆ ಗ್ರಾಮಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇದು ಇತರ ಪ್ರಾಣಗಳನ್ನು ನಿಯೋಜಿಸುತ್ತದೆ. ಪುಣ್ಯಾಧಿಕ್ಯವಾದರೆ ದೇವಲೋಕಕ್ಕೂ ಪಾಪಾಧಿಕ್ಯವಾದರೆ ನರಕಕ್ಕೂ ಮೇಲ್ಮುಖವಾದ ನಾಡಿಯಿಂದ ಇದು ಉತ್ಕ್ರಮಿಸುತ್ತದೆ.
ನಾಲ್ಕನೆಯ ಪ್ರಶ್ನೆಯನ್ನು ಸೌರ್ಯಾಯಣಿ ಗಾರ್ಗ್ಯರು ಕೇಳುತ್ತಾರೆ: ಪುರುಷನಲ್ಲಿ ನಿದ್ರಿಸುವವರು ಯಾರು? ಜಾಗೃತರಾಗಿರುವವರು ಯಾರು ? ಸ್ವಪ್ನಗಳನ್ನು ಕಾಣುವವರೂ ಅನುಭವಿಸುವವರೂ ಯಾರು ? ಯಾರಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗುತ್ತಾರೆ?
ಪಿಪ್ಪಲಾದರ ಉತ್ತರ: ಶ್ರೋತ್ರಾದಿ ಇಂದ್ರಿಯಗಳು ಮನಸ್ಸಿನಲ್ಲಿ ಏಕೀಭವಿಸಿ ನಿದ್ರಿಸುವವು. ಪ್ರಾಣಾದಿ ಪಂಚವಾಯುಗಳು ಎಚ್ಚರವಾಗಿರುವುವು. ಮನಸ್ಸೆಂಬ ದೇವ ಸ್ವಪ್ನಗಳನ್ನು ಕಾಣುವಾತ. ಪಕ್ಷಿಗಳು ವೃಕ್ಷದಲ್ಲಿರುವಂತೆ ಅಕ್ಷರರೂಪಿಯಾದ ಪರಮಾತ್ಮನಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗಿರುತ್ತಾರೆ.
ಶೈಬ್ಯ ಸತ್ಯಕಾಮರು ಐದನೆಯ ಪ್ರಶ್ನೆ ಕೇಳುತ್ತಾರೆ : ಪ್ರಣವೋಪಾಸಕ ಯಾವ ಲೋಕವನ್ನು ಜಯಿಸುತ್ತಾನೆ?
ಪ್ರಣವೋಪಾಸಕನು ಸೂರ್ಯನಲ್ಲಿ ಸಂಗತವಾಗಿ ಪಾಪವಿಮುಕ್ತನಾಗಿ ಬ್ರಹ್ಮಲೋಕವನ್ನು ಸೇರುತ್ತಾನೆಂದು ಪಿಪ್ಪಲಾದರು ಉತ್ತರಿಸುತ್ತಾರೆ.
ಸುರೇಶ ಭಾರದ್ವಾಜರು ಷೋಡಶ ಕಲಾ ಪುರುಷನ ವಿಚಾರವಾಗಿ ಆರನೆಯ ಪ್ರಶ್ನೆ ಕೇಳುತ್ತಾರೆ.
ಪ್ರಾಣಾದಿ ಷೋಡಶ ಕಲೆಗಳು ಹೃದಯ ಪುಂಡರೀಕಾಕ್ಷದ ಮಧ್ಯದಲ್ಲಿ ಸಂಭವಿಸುವುದರಿಂದ ಆ ಪುರುಷ ಶರೀರದೊಳಗಿದ್ದಾನೆಂದು ಅದಕ್ಕೆ ಪಿಪ್ಪಲಾದರು ಉತ್ತರ ನೀಡುತ್ತಾರೆ. ಅನಂತರ ಆರು ಮಂದಿ ಶಿಷ್ಯರೂ ತಮ್ಮ ಅವಿದ್ಯೆಯನ್ನು ಹೋಗಲಾಡಿಸಿದ ಋಷಿವರ್ಯರನ್ನು ವಂದಿಸುತ್ತಾರೆ.
1 Comment