ಮರಳು ಮತ್ತು ನೊರೆ ~ ಖಲೀಲ್ ಗಿಬ್ರಾನ್ : ಕಾವ್ಯ ವಿರಾಮ #4

ಖಲೀಲ್ ಗಿಬ್ರಾನ್’ರ ‘SAND AND FOAM’ ಕೃತಿಯಲ್ಲಿ ಗದ್ಯ – ಪದ್ಯಗಳ ಹದ ಬೆರಕೆಯ ರಚನೆಗಳಿವೆ. ಕಾವ್ಯ, ಅನುಭಾವ, ತಾತ್ತ್ವಿಕತೆಯೇ ಮೊದಲಾದ ಗುಣಗಳು ಮೆಳೈಸಿರುವ ಈ ರಚನೆಗಳನ್ನು ನಿರ್ದಿಷ್ಟವಾಗಿ ಯಾವ ಪ್ರಕಾರಕ್ಕೆ ಸೇರಿಸಬೇಕೆಂಬುದೇ ಗೊಂದಲ. ಈ ರಚನೆಗಳು ಎಲ್ಲ ಕಡೆಗೂ, ಎಲ್ಲ ಕಾಲಕ್ಕೂ ಸಲ್ಲುತ್ತವೆ ಅನ್ನುವುದು ಮಾತ್ರ ನಿರ್ವಿವಾದ. SAND AND FOAM ಕೃತಿಯ ಈ ರಚನೆಗಳನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ, ‘ಅರಳಿ ಬಳಗ’ದ ಬರಹಗಾರ ಚಿದಂಬರ ನರೇಂದ್ರ. 

khaleel

1.
ಅಪರಾಧ, ಅವಶ್ಯಕತೆಯ ಇನ್ನೊಂದು ಹೆಸರು
ಅಥವಾ
ಕಾಯಿಲೆಯ ಇನ್ನೊಂದು ರೂಪ.

2.
ಅತಿಶಯೋಕ್ತಿ,
ಸಹನೆ ಕಳೆದುಕೊಂಡ
ಒಂದು ಸತ್ಯ.

3.
ಆಸೆ ಅರ್ಧ ಬದುಕಾದರೆ
ನಿರುತ್ಸಾಹ ಅರ್ಧ ಸಾವು.

4.
ವಿನೀತ ಸೋಲು
ಧಿಮಾಕಿನ ಗೆಲುವಿಗಿಂತ ಶ್ರೇಷ್ಠ.

5.
ನಿರರ್ಗಳ ಮಾತುಗಾರ ಒಬ್ಬ ದಡ್ಡ.
ಭಾಷಣಕಾರನಿಗೂ ಹರಾಜು ಕೂಗುವವನಿಗೂ
ಅಂಥ ವ್ಯತ್ಯಾಸವೇನಿಲ್ಲ.

6.
ನಿನ್ನೆಯ ಸಿಹಿ ನೆನಪುಗಳೇ
ಇಂದಿನ ಕಹಿ ದುಃಖಕ್ಕೆ ಕಾರಣ.

7.
ನೆನಪು, ನಮಗೆ ಭೇಟಿ ಮಾಡಿಸಿದರೆ,
ಮರೆವು, ನಮಗೆ ಸ್ವಾತಂತ್ರ್ಯ ಕೊಡಿಸುತ್ತದೆ

8.
ನನಗೆ ನಿನ್ನ ಕಿವಿ ಕೊಡು,
ನಾನು ನಿನಗೆ ಧ್ವನಿ ಕೊಡುತ್ತೇನೆ.

9.
ನೀನು, ಮೀನು ಕೇಳಿದಾಗ
ಸರ್ಪಗಳನ್ನು ಕೊಡುವವರ ಬಗ್ಗೆ ಹೆಚ್ಚಾಗಿ ಕೊರಗದಿರು.
ಪಾಪ! ಅವರ ಬಳಿ ಬರೀ ಸರ್ಪಗಳೇ ಇರಬಹುದು.
ಅಷ್ಟರಮಟ್ಟಿಗೆ ಅವರೂ ಉದಾರಿಗಳೇ.

10.
ನಮ್ಮೊಳಗಿರುವ ಸತ್ಯ ಮಹಾ ಮೌನಿ.
ಕಲಿತದ್ದು ಮಾತ್ರ ಬಲು ವಾಚಾಳಿ.

(ಮುಂದುವರೆಯುವುದು…..)

ಅನುವಾದಕರ ಟಿಪ್ಪಣಿ :
ಖಲೀಲ್ ಗಿಬ್ರಾನ್ ನ ಆಯ್ದ (ಆಯ್ದ ಎಂದರೆ ತಪ್ಪಾಗಬಹುದು. ನನ್ನನ್ನು ತಾಕಿದ ಎನ್ನಬಹುದೇನೋ) ವಚನಗಳು. ಈ ವಚನಗಳು ನಾನು ಅರ್ಥ ಮಾಡಿಕೊಳ್ಳಲಿಕ್ಕೆ ಕನ್ನಡಿಸಿರುವಂಥವು. ಕೆಲವು ರಚನೆಗಳು ಎಷ್ಟು ಸರಳ ಮತ್ತು ಹೃದ್ಯವಾಗಿವೆಯೆಂದರೆ, ಬೇರೆ ರೀತಿ ಅನುವಾದಿಸಲು ಸಾಧ್ಯವಿಲ್ಲವೇನೋ. ಆದ್ದರಿಂದ ನನ್ನ ಪ್ರಯತ್ನ, ಬೇರೆಯವರ ಪ್ರಯತ್ನ ಕೆಲವೊಮ್ಮೆ ತುಂಬ ಹತ್ತಿರವಾಗಿದೆ. ಆದರೆ ನನ್ನ ಮುಖ್ಯ ಉದ್ದೇಶ ಈ ವಚನಗಳನ್ನ ಅರಿಯುವುದಾಗಿರುವದರಿಂದ ಜಾಸ್ತಿ ಸರ್ಕಸ್ ಮಾಡಲು ಹೋಗಿಲ್ಲ. ಕಾವ್ಯ ಗುಣಗಳಿಂದ ತುಂಬಿ ತುಳುಕುತ್ತಿದ್ದರೂ, ಯಾಕೋ ಗಿಬ್ರಾನ್ ಈ ರಚನೆಗಳನ್ನ ಗದ್ಯ ರೂಪದಲ್ಲಿ, ಹೇಳಿಕೆಗಳ(quotation) ರೂಪದಲ್ಲಿ ಕೊಟ್ಟಿದ್ದಾನೆ. “Obvious becomes obvious when someone says in simple form” ಅಂತಾನೆ ಗಿಬ್ರಾನ್.

1 Comment

Leave a Reply