ಸೂಫಿ ಅನುಭಾವಿ ಸನಾಯಿ : ಪದ್ಯ ಮತ್ತು ಪರಿಚಯ

ಲಾಯೇಖ್ವಾರನ ಮಾತುಗಳು ಸನಾಯಿಯ ಎದೆ ನಾಟಿದವು. ಆತ ನದಿಯಿಂದ ಮರಳಿ ದರ್ಬಾರಿಗೆ ಹೋಗಲೇ ಇಲ್ಲ. ಸೂಫೀ ಗುರುವೊಬ್ಬನ ಮಾರ್ಗದರ್ಶನದಲ್ಲಿ ತಾನೊಬ್ಬ ದರವೇಶಿಯಾದ. ಅಧ್ಯಾತ್ಮ ಕವಿಯಾಗಿ ಮನ್ನಣೆಯನ್ನೂ ಶಿಷ್ಯವರ್ಗವನ್ನೂ ಹೊಂದಿದ ~ ಅಲಾವಿಕಾ

sanayi

ಶಿಲೆಯಲ್ಲಿ ಅಗ್ನಿಯನ್ನು ಅಡಗಿಸಿಟ್ಟವರು ಯಾರು?
ಕಪ್ಪು ಮಣ್ಣಿನಲ್ಲಿ ಕೆಂಪು ಹೂವನ್ನು ಬಿಡಿಸಿದವರು ಯಾರು?
ನದಿಯಲ್ಲಿ ಮುತ್ತಿನ ಚಿಪ್ಪುಗಳನ್ನು, ಕಾಡಿನಲ್ಲಿ ಚಿಗರೆಗಳನ್ನು ಇಟ್ಟವರು ಯಾರು?
ಅವೆಲ್ಲವನ್ನೂ ತಾವು ಇರುವಲ್ಲಿ ನೆಮ್ಮದಿಯಿಂದ ಇರುವಂತೆ ಮಾಡಿರುವುದು ಯಾರು?
~ ಎಂದು ಕೇಳುತ್ತಾನೆ ಸೂಫೀ ಕವಿ ಸನಾಯಿ. ಈತನ ಮೂಲ ಹೆಸರು ಅಬ್ದುಲ್ ಬಿನ್ ಆದಂ.

ನಾಯಿಯ ರಚನೆಗಳು ಸೂಫೀ ಅನುಭಾವ ಲೋಕದಲ್ಲಿ ವಿಶೇಷ ಸ್ಥಾನಮಾನ ಪಡೆದಿದ್ದು, ಈ ಕಾಲಮಾನಕ್ಕೆ ಹೆಚ್ಚು ಪರಿಚಿತನಿರುವ ರೂಮಿ ಕೂಡ “ನಾನು ಸನಾಯಿಯ ಪಾದಕ್ಕೆ ಸಮಾನ” ಎಂದಿದ್ದಾನೆ. ಹೀಗೆ ರೂಮಿ ಗೌರವದಿಂದ ನೆನೆಯುವ ಮತ್ತೊಂದು ಹೆಸರು ಸೂಫೀ ಅತ್ತಾರ್’ನದ್ದು.

ಸನಾಯಿಯ ಕಥೆ ಆಸಕ್ತಿಕರವಾಗಿದೆ. ಸನಾಯಿ ಮೂಲತಃ ಒಬ್ಬ ಆಸ್ಥಾನ ಕವಿಯಾಗಿದ್ದು, ಸುಲ್ತಾನ ಮಹಮೂದನ ಆಶ್ರಯದಲ್ಲಿದ್ದ. ದೊರೆಯನ್ನು ಹೊಗಳಿ `ಕಸೀದಾ’ (ಸ್ತುತಿ ಗೀತೆ) ಬರೆಯುವುದು ಅವನ ಉದ್ಯೋಗವಾಗಿತ್ತು.
ಒಮ್ಮೆ ಹೀಗಾಯ್ತು. ಎಂದಿನಂತೆ ಸನಾಯಿ ದರ್ಬಾರಿನಲ್ಲಿ ಕಸೀದಾ ಹಾಡಿ ನದಿಯ ಕಡೆಗೆ ಹೊರಟಿದ್ದ. ದಾರಿಯಲ್ಲಿ ಅವನು ಪಾನಗೃಹವೊಂದನ್ನು ಹಾದುಹೋಗಬೇಕಿತ್ತು. ಅದರ ಖಾಯಂ ಗ್ರಾಹಕರಲ್ಲೊಬ್ಬನ ಹೆಸರು ಲಾಯೇಖ್ವಾರ್. ಆತ ಸನಾಯಿ ಸಮೀಪಿಸುವ ಹೊತ್ತಿಗೆ ಸರಿಯಾಗಿ, ಆತನನ್ನು ಗಮನಿಸದೆ ಸಾಕಿಯನ್ನು (ಮದ್ಯ ತುಂಬಿಕೊಡುವ ಪರಿಚಾರಿಕೆ) ಕುರಿತು, `ಸಾಕೀ, ಸುಲ್ತಾನ್ ಮಹಮ್ಮೂದನ ಕುರುಡಿನ ಹೆಸರಲ್ಲೊಂದು ಬಟ್ಟಲು ಮಧು ತುಂಬಿಕೊಡು’ ಅನ್ನುತ್ತಿದ್ದ. ಸಾಕಿಯು ಅವನನ್ನು ಸುಮ್ಮನಾಗಿಸುತ್ತಾ, `ಓ! ಮಹಮ್ಮೂದರು ನಮ್ಮ ಬಾದಷಹ. ಅವರ ಬಗ್ಗೆ ಹೀಗೆಲ್ಲ ಮಾತಾಡಬಾರದು’ ಅಂದಳು. ಅದಕ್ಕೆ ಪ್ರತಿಯಾಗಿ ಲಾಯೇಖ್ವಾರ್, `ಅವನೆಂಥ ಬಾದಷಾಹ್? ತನ್ನ ದೇಶದೊಳಗಿನ ಜನರನ್ನೆ ಅಂಕೆಯಲ್ಲಿಟ್ಟುಕೊಳ್ಳಲಾಗದವ, ಪರದೇಶಿಗಳನ್ನು ಗೆಲ್ಲಲು ಹೊರಟಿದ್ದಾನೆ’ ಎನ್ನುತ್ತ ಮಧುಬಟ್ಟಲನ್ನು ಎತ್ತಿ ಗಟಗಟನೆ ಕುಡಿದ. 
ಅನಂತರ ಮತ್ತೆ, `ಸಾಕಿ, ಈಗ ದರ್ಬಾರೀ ದಾಸ ಸನಾಯಿಯ ಹೆಸರಲ್ಲಿ ಬಟ್ಟಲು ತುಂಬಿಕೊಡು’ ಅಂದ. ಆಗ ಸಾಕಿಯು, `ಸನಾಯಿಯ ಹೆಸರಲ್ಲೆ? ಆತನ ಕವಿತೆಗಳೇ ಒಂದು ನಶೆ. ಅವನು ಉತ್ಕೃಷ್ಟ ಕವಿ. ಹಾಗೆಲ್ಲ ಅವನ ಹೆಸರು ಇಲ್ಲಿ ತರಕೂಡದು’ ಅಂದಳು. ಅದಕ್ಕೆ ಲಾಯೆಖ್ವಾರ್ ಪರಿಹಾಸ್ಯದ ನಗೆ ನಗುತ್ತ, `ಮೂರ್ಖ ಮಹಮ್ಮೂದನ ಗುಣಗಾನ ಮಾಡುವ ಗುಲಾಮನಾತ. ಏನೋ ಒಂದಷ್ಟು ಇಲ್ಲದ್ದನ್ನು ರಮ್ಯವಾಗಿ ಗೀಚಿಟ್ಟುಕೊಂಡಿರುತ್ತಾನೆ. ಅದೇ ಸವಕಲು ಹಾಡನ್ನು ಹಾಡುತ್ತ ಇರುತ್ತಾನೆ. ಅವನೆಂಥ ಕವಿ? ಈ ಗುಲಾಮಿತನಕ್ಕೆ ತಾನು ಹುಟ್ಟಿಕೊಂಡಿದ್ದೇನೆ ಅಂದುಕೊಂಡಿದ್ದಾನೆ. ವಾಸ್ತವದಲ್ಲಿ ತಾನೇಕೆ ಹುಟ್ಟಿದ್ದೇನೆ ಅನ್ನುವ ಅರಿವಾದರೂ ಅವನಿಗೆ ಇದೆಯೆ?’ ಎಂದುಬಿಟ್ಟ.

ಲಾಯೇಖ್ವಾರನ ಮಾತುಗಳು ಸನಾಯಿಯ ಎದೆ ನಾಟಿದವು. ಆತ ನದಿಯಿಂದ ಮರಳಿ ದರ್ಬಾರಿಗೆ ಹೋಗಲೇ ಇಲ್ಲ. ಸೂಫೀ ಗುರುವೊಬ್ಬನ ಮಾರ್ಗದರ್ಶನದಲ್ಲಿ ತಾನೊಬ್ಬ ದರವೇಶಿಯಾದ. ಅಧ್ಯಾತ್ಮ ಕವಿಯಾಗಿ ಮನ್ನಣೆಯನ್ನೂ ಶಿಷ್ಯವರ್ಗವನ್ನೂ ಹೊಂದಿದ. 12ನೇ ಶತಮಾನದಲ್ಲಿ ಬದುಕಿದ್ದ ಸನಾಯಿ; ದೀವಾನ್, ಹದೀಕುಲ್ ಹಕೀಕತ್, ಗರೀಬ್’ನಾಮಾ, ಅಕ್ಲ್’ನಾಮಾ, ಸೈರುಲ್ ಇಬಾಬುಲ್ ಉಲ್ಮ್’ದ್, ಇಶ್ಕ್’ನಾಮಾ – ಮೊದಲಾದ ಪ್ರಮುಖ ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಬಹುಪಾಲು ಆಂಗ್ಲ ಭಾಷೆಯ ಮೂಲಕ ಜಗತ್ತಿನ ಇತರ ಭಾಗಗಳನ್ನು ತಲುಪಿವೆ.

ವಿಶೇಷ ಅಭ್ಯಾಸ : ಈ ಲೇಖನದ ಆರಂಭದಲ್ಲಿ ನೀಡಲಾಗಿರುವ ಸನಾಯಿಯ ಪದ್ಯ, ನಮ್ಮ ಕನ್ನಡ ಅನುಭಾವ ಸಾಹಿತ್ಯದ ಎರಡು ರಚನೆಗಳನ್ನು ನೆನಪಿಸುತ್ತವೆ; ಅವು ಯಾವುವು?

4 Comments

  1. ಇವೆಲ್ಲವೂ ಒಟ್ಟಾಗಿ ಎಲ್ಲು ದೊರೆಯುತ್ತವೆ

Leave a Reply