ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನು ತನ್ನ ಪಾಡಿಗೆ ತಾನು ಹೊಲದಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ.
ಒಂದು ದಿನ ಅವನ ಕುದುರೆ ಲಾಯದಿಂದ ಕಣ್ಮರೆಯಾಯಿತು. ಎಷ್ಟು ಹುಡುಕಿದರೂ ಸಿಗಲಿಲ್ಲ.
ಸುದ್ದಿ ತಿಳಿದ ನೆರೆಹೊರೆಯವರು ಬಂದರು. ರೈತನೆದುರು ನಿಂತು, “ನಿನ್ನ ಕುದುರೆ ಕಣ್ಮರೆಯಾಗಿದೆ ಎಂದು ಕೇಳಿಪಟ್ಟೆವು. ಛೆ!! ಎಂಥಾ ದುರದೃಷ್ಟ! ” ಎಂದು ಸಂತಾಪ ಸೂಚಿಸಿದರು.
ರೈತ ಅವರ ಮುಖವನ್ನೊಮ್ಮೆ ನೋಡಿ ‘ಇರಬಹುದು’ ಅಂದ.
ಮಾರನೆ ದಿನ ಆ ಕುದುರೆ ಮೂರು ಇತರ ಕಾಡು ಕುದುರೆಗಳೊಡನೆ ಹೊಲಕ್ಕೆ ಹಿಂದಿರುಗಿತು.
ಸುದ್ದಿ ತಿಳಿದ ನೆರೆಹೊರೆಯವರು ಬಂದರು. ರೈತನೆದುರು ನಿಂತು, “ನಿನ್ನ ಕುದುರೆಯ ಜೊತೆ ಇನ್ನೂ ಮೂರು ಕುದುರೆಗಳು ಬಂದಿವೆ ಎಂದು ಕೇಳಿಪಟ್ಟೆವು. ಅಬ್ಬಾ! ನಿನ್ನದು ಎಂಥಾ ಅದೃಷ್ಟ! ” ಎಂದು ಅಭಿನಂದನೆ ಹೇಳಿದರು.
ರೈತ ಅವರ ಮುಖವನ್ನೊಮ್ಮೆ ನೋಡಿ ‘ಇರಬಹುದು’ ಅಂದ.
ಅದಕ್ಕೆ ಮರು ದಿನ ಕಾಡು ಕುದುರೆಗಳಲ್ಲಿ ಒಂದರ ಮೇಲೆ ಕುಳಿತು ಸವಾರಿ ಮಾಡಲು ಹೋದ ರೈತನ ಹದಿಹರೆಯದ ಮಗ, ಕೆಳಗೆ ಬಿದ್ದು ಕಾಲು ಮುರಿದುಕೊಂಡ.
ಸುದ್ದಿ ತಿಳಿದ ನೆರೆಹೊರೆಯವರು ಬಂದರು. ರೈತನೆದುರು ನಿಂತು, “ನಿನ್ನ ಮಗ ಕಾಡು ಕುದುರೆಯಿಂದ ಕೆಳಗೆ ಬಿದ್ದು ಕಾಲು ಮುರಿದುಕೊಂಡ ಎಂದು ಕೇಳಿಪಟ್ಟೆವು. ಛೆ!! ಎಂಥಾ ದುರದೃಷ್ಟ! ” ಎಂದು ಸಂತಾಪ ಸೂಚಿಸಿದರು.
ರೈತ ಅವರ ಮುಖವನ್ನೊಮ್ಮೆ ನೋಡಿ ‘ಇರಬಹುದು’ ಅಂದ.
ಆ ದಿನಗಳಲ್ಲಿ ಯುದ್ಧದ ಸಲುವಾಗಿ ಯುವಜನರನ್ನು ಆಯ್ದು ಸೇನೆಗೆ ಭರ್ತಿ ಮಾಡಿಕೊಳ್ಳಲು ಸೇನಾಪತಿ ಊರೂರು ತಿರುಗುತ್ತಿದ್ದ. ಅವನು ರೈತನ ಊರಿಗೂ ಬಂದ. ಎಲ್ಲರ ಮನೆಯ ಹುಡುಗರನ್ನೂ ಆಯ್ಕೆ ಮಾಡಿದ. ರೈತನ ಮಗನ ಕಾಲು ಮುರಿದ ಸ್ಥಿತಿಯಲ್ಲಿ ಇದ್ದುದರಿಂದ ಅವನನ್ನು ಹಾಗೇ ಬಿಟ್ಟ.
ಸುದ್ದಿ ತಿಳಿದ ನೆರೆಹೊರೆಯವರು ಬಂದರು. ರೈತನೆದುರು ನಿಂತು, “ನಿನ್ನ ಮಗ ಪುಣ್ಯವಂತ. ಸೇನೆಗೆ ಸಾಯಲು ಹೋಗದೆ ಇಲ್ಲೇ ಉಳಿದುಕೊಂಡ. ನಿನ್ನ ಆಸರೆ ಕೈತಪ್ಪಿಹೋಗಲಿಲ್ಲ. ನಿಜಕ್ಕೂ ನೀನು ಅದೃಷ್ಟವಂತ” ಎಂದು ಅಭಿನಂದನೆ ಹೇಳಿದರು.
ರೈತ ಅವರ ಮುಖವನ್ನೊಮ್ಮೆ ನೋಡಿ ‘ಇರಬಹುದು’ ಅಂದ.
(ಸಂಗ್ರಹ ಮತ್ತು ಅನುವಾದ: ಅಲಾವಿಕಾ)