ಭಗವದ್ಗೀತೆ : ಸನಾತನ ಸಾಹಿತ್ಯ ~ ಮೂಲಪಾಠಗಳು #13

ಭಗವದ್ಗೀತೆಯು ಜ್ಞಾನ ಸಾಗರವನ್ನೆ ಹುಗಿದಿಟ್ಟುಕೊಂಡ ಮಧು ಪಾತ್ರೆ. ಶ್ರೀಕೃಷ್ಣ ಅತ್ಯಂತ ಸರಳವಾಗಿ, ಕಾವ್ಯಾತ್ಮಕವಾಗಿ ಇದನ್ನು ಬೋಧಿಸುತ್ತಾನೆ. ಆದ್ದರಿಂದಲೇ ಇದು “ಗೀತೆ”.

ನುಷ್ಟುಪ್ ಛಂದಸ್ಸಿನಲ್ಲಿ ಸಲಿಲದಂತೆ ಸಾಗುವ ಗೀತೆಯ ಪ್ರತಿ ಶ್ಲೋಕದಲ್ಲೂ 32 ಪದಗಳಿವೆ. ಕೆಲವು ಶ್ಲೋಕಗಳಲ್ಲಿ ತ್ರಿಷ್ಟುಪ್ ಛಂದಸ್ಸನ್ನು ಬಳಸಲಾಗಿದೆ. 700 ಶ್ಲೋಕಗಳುಳ್ಳ ಭಗವದ್ಗೀತೆಯು 18 ಅಧ್ಯಾಯಗಳಲ್ಲಿ ನಿರೂಪಣೆಗೊಂಡಿದೆ.

ಭಗವದ್ಗೀತೆ ತನ್ನದೇ ಸಂಬಂಧಿಗಳೊಡನೆ ಯುದ್ಧ ಮಾಡಲಾಗದ ರಾಜಕುಮಾರನೊಬ್ಬನನ್ನು ಹುರಿದುಂಬಿಸುವ ಸಂವಾದವಷ್ಟೇ ಅಲ್ಲ. ಈ ನೆವದಲ್ಲಿ ಸೃಷ್ಟಿಯ ಆದ್ಯಂತಗಳನ್ನೂ ನಡುವಿನ ವಿದ್ಯಮಾನಗಳನ್ನೂ ವೈಜ್ಞಾನಿಕವಾಗಿ ವಿವರಿಸುತ್ತಾ ಮಾನವ ಈ ಅನಂತ ಶಕ್ತಿಯ ಇಚ್ಛೆಯ ಎದುರು ತೃಣ ಮಾತ್ರದವನು ಎಂಬುದನ್ನು ಮನದಟ್ಟು ಮಾಡಿಸುವ ಶ್ರೇಷ್ಠ ಪಾಠ. ಮಹಾಭಾರತದಲ್ಲಿ ಭಗವದ್ಗೀತೆಯು ಅಡಕವಾಗಿದ್ದರೂ ಅದು ವ್ಯಾಸ ಪ್ರಣೀತವಲ್ಲ. ಸ್ವತಃ ಭಗವಂತನೇ ಇದನ್ನು ಬೋಧಿಸಿರುವುದರಿಂದ ಇದು ‘ಶೃತಿ’ಯಾಗಿಯೂ ವ್ಯಾಸರಿಂದ ಮಹಾಭಾರತದಲ್ಲಿ ನಿರೂಪಿಸಲ್ಪಟ್ಟಿರುವುದರಿಂದ ‘ಸ್ಮೃತಿ’ಯಾಗಿಯೂ ಪರಿಗಣಿಸಲ್ಪಡುತ್ತದೆ. ಮೂಲತಃ ಭಗವಂತನು (ಮಹಾವಿಷ್ಣು) ಭಗವದ್ಗೀತೆಯನ್ನು ವಿವಸ್ವಾನನಿಗೆ (ಸೂರ್ಯದೇವ) ಬೋಧಿಸುತ್ತಾನೆ. ವಿವಸ್ವಾನನು ತನ್ನಮನುವಿಗೆ, ಮನುವು ತ್ರೇತಾಯುಗದಲ್ಲಿ ಅರಸ ಇಕ್ಷ್ವಾಕುವಿಗೆ ಬೋಧಿಸುತ್ತಾರೆ. 

ದ್ವಾಪರ ಯುಗದಲ್ಲಿ ಗೀತಾಚಾರ್ಯನಾದ ಶ್ರೀಕೃಷ್ಣನು ಅರ್ಜುನನಿಗೆ ರಣಾಂಗಣದಲ್ಲಿ ಭಗವದ್ಗೀತೆಯ ಉಪದೇಶ ನೀಡುತ್ತಾನೆ. ಭಕ್ತಿ ಯೋಗ, ಕರ್ಮ ಯೋಗ, ಧ್ಯಾನ ಯೋಗ ಮತ್ತು ಜ್ಞಾನ ಯೋಗಗಳೆಂಬ ನಾಲ್ಕು ಮಾರ್ಗಗಳಿಂದ ಸೃಷ್ಟಿ – ಸ್ಥಿತಿ – ಲಯಗಳನ್ನು ವಿವರಿಸುತ್ತಾನೆ. ಈ ಮೂರು ಸತ್ಯ ಸತ್ಯಗಳ ನಡುವೆ ಹಾದು ಹೋಗುವ ಪ್ರತಿಯೊಂದು ಸಂಗತಿಯೂ ಈ ಚಿಕ್ಕ ಕೃತಿಯಲ್ಲಿ ಬಹಳ ಸಾಂದ್ರವಾಗಿ, ಅಧಿಕೃತವಾಗಿ ಹೇಳಲ್ಪಟ್ಟಿದೆ. ಹಾಗೆಂದೇ ಜಗತ್ತಿನ ಹಲವಾರು ತತ್ತ್ವಶಾಸ್ತ್ರಜ್ಞರು ಭಗವದ್ಗೀತೆಯನ್ನು ಆಳವಾಗಿ ಅಧ್ಯಯನ ಮಾಡಿ ಅದರೊಳಗಿನ ಸಾರವನ್ನು ಹೆಕ್ಕಿ ತಮ್ಮ ತಮ್ಮ ವ್ಯಾಖ್ಯಾನಗಳೊಂದಿಗೆ, ನಿರ್ವಚನೆಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ.

ವೈಜ್ಞಾನಿಕ ಸಂಶೋಧನೆಗಳು ಭಗವದ್ಗೀತೆಯ ಕಾಲವನ್ನು ಕ್ರಿ.ಪೂ.3102 ಎಂದು ಗುರುತಿಸುತ್ತವೆ. ಈವರೆಗೆ ಭಗವದ್ಗೀತೆಯು ಜಗತ್ತಿನ ಸುಮಾರು 175 ಭಾಷೆಗಳಿಗೆ ಅನುವಾದಗೊಂಡಿದೆ. ಈ ಕೃತಿಯು ಉನ್ನತ ಆಧ್ಯಾತ್ಮಿಕ ಲಾಭಗಳಿಗೆ ಮಾತ್ರವಲ್ಲದೆ, ಆ ಗುರಿಯನ್ನು ತಲುಪುವ ಪುಟ್ಟ ಪುಟ್ಟ ಹೆಜ್ಜೆಗಳಾದ ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೂ ಗೀತೆ ಮಾರ್ಗದರ್ಶನ ಮಾಡುತ್ತದೆ.

2 Comments

  1. BEAUTIFUL PRESENTATION. — ಶ್ರೀಮದ್ಭಗವದ್ಗೀತೆಯ ಮೊದಲ ವಾಕ್ಯವೇ — “ಧರ್ಮ ಕ್ಷೇತ್ರೇ -ಕುರು ಕ್ಷೇತ್ರೇ” — || (ಕ್ಷೇತ್ರ -ಎಂದರೆ ದೇಹ ಎಂಬ ಅರ್ಥವಿದೆ) ಇಹದಲ್ಲಿ ಪ್ರತಿಯೊಬ್ಬನಿಗೂ ಪರಮಾತ್ಮನು – ಅವರವರ ಮಾತೃ ದೇವತೆಯ ಪವಿತ್ರ ಗರ್ಭ ದಲ್ಲಿ – ಧರ್ಮ ಕ್ಷೇತ್ರವನ್ನೇ ಕರುಣಿಸಿದ್ದಾನೆ || ಆದರೆ ಮಾನವರಾದ ನಾವೆಲ್ಲರೂ – ಅತ್ಯಂತ ವಿಷಯಾಸಕ್ತರಾಗಿ – ಚಿಕ್ಕಂದಿನಿಂದಲೇ – ಈ ಪವಿತ್ರ “ಧರ್ಮ ಕ್ಷೇತ್ರವನ್ನು” – ಕುರುಕ್ಷೇತ್ರ ವನ್ನಾಗಿ ಪರಿವರ್ತಿಸಿಕೊಂಡಿದ್ದೇವೆ || ಪ್ರಾತಃ ಕ್ಕಾಲದಲ್ಲಿ ಚಾಪೆಯಿಂದ ಎದ್ದೊಡನೆಯೇ ಪ್ರತಿಯೋರ್ವನೂ – ಕುರುಕ್ಷೇತ್ರದ ಮಹಾಭಾರತ ಯುದ್ಧದಂತೆಯೇ ನಿತ್ಯ ಕಾರ್ಯ ಗಳನ್ನು ಎದುರಿಸುತ್ತೇವೆ || ದಂತ ಶುಚಿಗೊಳಿಸುವಿಕೆಯಿಂದ ಹಿಡಿದು – ಪ್ರಾರ್ಥನೆ, ಪೂಜೆ, ಆಹಾರ ಸೇವನೆ, ಪತ್ರಿಕೆಯ ಪಠನ, ಮನೆಯೊಡತಿಗೆ -ಅಡುಗೆ ಮನೆ ಉಸ್ತುವಾರಿ, ಯಜಮಾನನಿಗೆ ಕಾರ್ಯಾಲಯದ ಚಿಂತೆ – ಹೀಗೆ ಮುಗಿಯದ ಅನಂತ ಕಾರ್ಯಗಳು – ಮಕ್ಕಳನ್ನೂ ಇದು ಬಿಟ್ಟಿಲ್ಲ – ಅವರಿಗೆ – ಪಾಠ ಗಳ ಅಭ್ಯಾಸ, ದಪ್ಪವಾದ ಭಾರವಾದ ಪುಸ್ತಕ ಗಳ ರಾಶಿಯನ್ನು – ಶಾಲೆಗೆ ಒಯ್ಯುವಿಕೆ – ಶಾಲೆ ವ್ಯಾನಿಗಾಗಿ ಕಾಯುವಿಕೆ – ಶಾಲಾ ಗುರುಗಳಿಂದ (ಮಿಸ್) ಗದರಿಸುವಿಕೆ – ಹಲವು ಮಕ್ಕಳಿಂದ ಕೀಟಲೆ ಇತ್ಯಾದಿ ಮುಗಿಯದ ಮಹಾಭಾರತ ಯುದ್ಧ – ಎಂದೇ ಹೇಳ ಬಹುದು || — ಗೀತಾಜ್ಞಾನವು ಏನನ್ನು ಕೊಡಬಲ್ಲುದು ? – ಈ ದೈನಂದಿನ ಮಹಾಭಾರತ ಯುದ್ಧದ ಸಮರ್ಪಕವಾದ “ನಿರ್ವಹಣೆ” ಯನ್ನು ಯಾವ ಪ್ರಮಾದಾವೂ ಇಲ್ಲದೆ ಎದುರಿಸುವ ಕಲೆಯನ್ನು ನಿಶ್ಚಯವಾಗಿಯೂ – ಶ್ರೀ ಕೃಷ್ಣ ಪರಮಾತ್ಮನು – ಶ್ರೀಮದ್ಭಗವದ್ಗೀತೆಯಲ್ಲಿ ಜನ ಸಾಗರಕ್ಕೆ ತಲಪುವಂತೇ ಸ್ಫಷ್ಟವಾದ ನುಡಿಗಳಲ್ಲಿ ಹೇಳಿರುತ್ತಾನೆ || ಹಾಗೆಯೇ ಇನ್ನೂ ಮುಂದುವರಿಯುವ ಬಯಕೆ ಇರುವವರಿಗೆ ಆಧ್ಯಾತ್ಮ ಚಿಂತನೆಯೊಂದಿಗೆ ಈ ಕುರುಕ್ಷೇತ್ರವನ್ನು ಪುನಃ “ಧರ್ಮ ಕ್ಷೇತ್ರವನ್ನಾಗಿ ” – ಪರಿವರ್ತಿಸುವ ಮಹಾನ್ ವಿದ್ಯೆ ಯನ್ನು – “ಶ್ರೀಮದ್ಭಗವದ್ಗೀತೆ” ಯು ಬಿಡಿ ಬಿಡಿ ಯಾಗಿ ವಿವರಿಸುತ್ತದೆ |

Leave a Reply