ಪಾಟಲೀಪುರದಲ್ಲಿ ಶೂದ್ರಕ ಮಹಾರಾಜನೆಂಬುವನು ಆಳುತ್ತಿದ್ದ. ಅವನು ಉತ್ತಮ ಪ್ರಜಾಪಾಲಕನೆಂದು ಹೆಸರು ಪಡೆದಿದ್ದ. ಶೂದ್ರಕನ ಪ್ರಜೆಗಳೂ ಅವನನ್ನು ಗೌರವಾದರಗಳಿಂದ ಕಾಣುತ್ತಿದ್ದರು.
ಒಂದು ದಿನ ವೀರವರನೆಂಬ ರಾಜಕುಮಾರನೊಬ್ಬ ಅವನ ಬಳಿಗೆ ಬಂದು ‘ಮಹಾಪ್ರಭೂ, ನನ್ನಿಂದ ನಿಮಗೆ ಉಪಯೋಗವಾಗುವುದಿದ್ದರೆ ನನ್ನನ್ನು ಸಂಬಳಕ್ಕೆ ನಿಮ್ಮಲ್ಲಿ ಇಟ್ಟುಕೊಳ್ಳಬಹುದು’ ಎಂದ. ವೀರವರ ಒಬ್ಬ ಉತ್ತಮ ವಂಶದ ತರುಣ. ದುರದೃಷ್ಟವಶಾತ್ ಯಾರದೋ ವಂಚನೆಗೆ ಸಿಲುಕಿ ರಾಜ್ಯವನ್ನು ಕಳೆದುಕೊಂಡಿದ್ದ.
ವೀರವರನ ಆಳ್ತನ, ವಿನಯವಂತಿಕೆಗಳನ್ನು ನೋಡಿ ಸಂತಸಪಟ್ಟ ಶೂದ್ರಕನು, ‘ನಿನ್ನ ವೇತನ ಎಷ್ಟು ಬಯಸುತ್ತೀಯಾ?’ ಎಂದು ಕೇಳಿದ.
‘ಐನೂರು ವರಹಗಳು’ ಎಂದು ವೀರವರ ವಿನಯದಿಂದ ಉತ್ತರಿಸಿದ. ವಾಸ್ತವದಲ್ಲಿ ಅದು ಬಹಳ ಹೆಚ್ಚಿನ ಮೊತ್ತವಾಗಿತ್ತು. ಆದರೂ ವೀರವರನ ಬಗ್ಗೆ ಆಸಕ್ತಿ ತಾಳಿದ್ದ ಮಹಾರಾಜ ಅವನ ಕೋರಿಕೆ ಒಪ್ಪಿಕೊಂಡ. ಅರಮನೆಯ ದ್ವಾರ ಕಾಯಲು ನೇಮಿಸಿಕೊಂಡ.
ಒಂದು ದಿನ ರಾತ್ರಿ ಯಾರೋ ಜೋರಾಗಿ ಅಳುತ್ತಿರುವ ಸದ್ದು ಕೇಳಿಸಿತು. ಶೂದ್ರಕ ಮಹಾರಾಜನ ನಿದ್ದೆ ಕೆಟ್ಟು, ‘ಬಾಗಿಲಲ್ಲಿ ಯಾರಿದ್ದೀರಿ?’ ಎಂದು ಕೂಗಿ ಕರೆದ. ‘ನಾನು ಮಹಾರಾಜ’ ಎಂದ ವೀರವರ.
‘ಹೊರಗೆಲ್ಲೋ ಯಾರೋ ಅಳುತ್ತಿರುವ ಸದ್ದು ಕೇಳಿಸುತ್ತಿದೆ. ಅದು ಯಾರು ಎಂದು ನೋಡಿ ಬಾ’ ಎನ್ನುತ್ತ ವೀರವರನನ್ನು ಕಳುಹಿಸಿಕೊಟ್ಟ. ಅವನು ಅತ್ತ ಹೋದೊಡನೆಯೇ ರಾಜನೂ ಕುತೂಹಲದಿಂದ ಅವನನ್ನು ಹಿಂಬಾಲಿಸಿದ.
ದಿಡ್ಡಿ ಬಾಗಿಲಿನಲ್ಲಿ ಸರ್ವಾಭರಣಭೂಷಿತೆಯಾದ ಯುವತಿಯೊಬ್ಬಳು ಕುಳಿತು ಅಳುತ್ತಿದ್ದಳು.
‘ನೀನ್ಯಾರಮ್ಮಾ? ಯಾಕೆ ಅಳುತ್ತೀ?’ ಎಂದು ಕೇಳಿದ ವೀರವರ.
‘ನಾನು ಶೂದ್ರಕ ಮಹಾರಾಜನ ರಾಜ್ಯದ ಲಕ್ಷ್ಮಿ. ಇನ್ನು ಮೂರು ದಿನಗಳಲ್ಲಿ ಶೂದ್ರಕ ಸಾಯುವುದರಿಂದ ನಾನು ಅನಾಥಳಾಗ್ತೇನೆ, ಅದಕ್ಕೇ ಅಳ್ತಿದೇನೆ’ ಎಂದಳು ಆ ಯುವತಿ.
‘ರಾಜ ಸಾಯದಂತೆ ಮಾಡಲು ಏನೂ ಉಪಾಯ ಇಲ್ಲವೆ?’ ಎಂದು ಪ್ರಶ್ನಿಸಿದ ವೀರವರ.
‘ಉಪಾಯವಿದೆ. ಸಕಲ ಲಕ್ಷಣ ಸಂಪನ್ನನಾದ ನಿನ್ನ ಮಗುವನ್ನು ಕಾಳಿದೇವಿಗೆ ಬಲಿಕೊಟ್ಟರೆ ರಾಜ ಉಳೀತಾನೆ’ ಎಂದಳು ರಾಜ್ಯಲಕ್ಷ್ಮಿ.
ವೀರವರ ತಕ್ಷಣ ತನ್ನ ಮನೆಗೆ ಹೋದ. ಹೆಂಡತಿಗೆ ರಾಜ್ಯಲಕ್ಷ್ಮಿ ಹೇಳಿದುದನ್ನು ತಿಳಿಸಿದಾಗ ಅವಳು ಹಿಂದೆ ಮುಂದೆ ನೋಡದೆ, ‘ರಾಜನಿಗಾಗಿ ನಾವು ಏನು ಬೇಕಾದರೂ ತ್ಯಾಗ ಮಾಡಬೇಕು’ ಎನ್ನುತ್ತಾ ಮಗುವನ್ನು ಕೊಟ್ಟಳು.
ವೀರವರ ಕಾಳಿಯ ಮುಂದೆ ಮಗುವಿನ ತಲೆ ಕತ್ತರಿಸಿದ.
‘ಅಂಥ ಮಗ ಸತ್ತ ಮೇಲೆ ನಾನ್ಯಾಕೆ ಇರಬೇಕು?’ ಎಂದುಕೊಳ್ಳುತ್ತ ತನ್ನ ತಲೆಯನ್ನೂ ಕತ್ತರಿಸಿಕೊಂಡ. ವೀರವರನ ಹೆಂಡತಿ ತಾನೂ ತಲೆ ಕತ್ತರಿಸಿಕೊಂಡಳು.
ಕನಸೋ ಎಂಬಂತೆ ಇದನ್ನೆಲ್ಲಾ ನೋಡುತ್ತಾ ನಿಂತ ಶೂದ್ರಕ ಮಹಾರಾಜನಿಗೆ ತುಂಬಾ ದುಃಖವಾಯಿತು. ಅವನಿನ್ನೂ ಆಘಾತದಿಂದ ಚೇತರಿಸಿಕೊಂಡಿಲ್ಲ. ಇವ್ಯಾವುದೂ ಕನಸಲ್ಲ, ನಿಜವೇ ಎಂಬುದು ಅವನಿಗೆ ಎಷ್ಟೋ ಹೊತ್ತಿನ ನಂತರ ತಿಳಿಯಿತು.
ಶೂದ್ರಕನು ಮಹಾಕಾಳಿಗೆ ನಮಸ್ಕಾರ ಮಾಡುತ್ತಾ ದೀನತೆಯಿಂದ, ‘ತಾಯೀ ಇಂಥಾ ನಿಸ್ವಾರ್ಥಿ ಮಹಾನುಭಾವರು ಸತ್ತಮೇಲೆ ನನ್ನಂಥ ಕ್ಷುದ್ರ ಮನುಷ್ಯ ಯಾಕೆ ತಾನೇ ಬದುಕಿರಬೇಕು ನನ್ನನ್ನೂ ಸ್ವೀಕರಿಸು’ ಎನ್ನುತ್ತ ಕತ್ತಿಯನ್ನೆತ್ತಿದ.
ಆಗ ಮಹಾಕಾಳಿ ಪ್ರತ್ಯಕ್ಷಳಾಗಿ ‘ವತ್ಸ, ನಿನ್ನ ನಿಷ್ಠೆಗೆ ಮೆಚ್ಚಿದೆ. ರಾಜ್ಯಲಕ್ಷ್ಮಿ ಯಾವಾಗಲೂ ನಿನ್ನವಳಾಗಿರುತ್ತಾಳೆ’ ಎಂದು ಹರಸಿದಳು.
‘ಮಹಾದೇವಿ, ವೀರವರನಂಥವರು ಇಲ್ಲದೆ ನಾನು ಉಳಿದು ಏನು ಪ್ರಯೋಜನ? ಅವನನ್ನು ಪತ್ನೀಪುತ್ರರೊಂದಿಗೆ ಬದುಕಿಸು. ಇಲ್ಲದಿದ್ದರೆ ನಾನೀಗಲೇ ಸಾಯ್ತೇನೆ’ ಎಂದ ಶೂದ್ರಕ.
‘ಹಾಗೆಯೇ ಆಗಲಿ. ನಿನ್ನಷ್ಟದಂತೆ ವೀರವರ ಅವನ ಹೆಂಡತಿ ಮಗನ ಸಮೇತ ಬದುಕಲಿ’ ಎಂದು ಹರಸಿ ಕಾಳಿ ಮಾಯವಾದಳು.
ವೀರವರ, ಅವನ ಮಗ ಮತ್ತು ಹೆಂಡತಿ ನಿದ್ದೆ ತಿಳಿದೆದ್ದವರಂತೆ ಮೇಲೆದ್ದರು. ರಾಜನಿಗೆ ಅದನ್ನು ನೋಡಿ ಅತ್ಯಾನಂದ ಆಯಿತು. ವೀರವರನಿಗೆ ದಕ್ಷಿಣ ರಾಜ್ಯದ ಜವಾಬ್ದಾರಿ ವಹಿಸಿ, ಆತನನ್ನು ತನ್ನ ಸಾಮಂತನನ್ನಾಗಿ ಮಾಡಿಕೊಂಡ. ಮುಂದೆ ವೀರವರ, ತನ್ನದೇ ಸೇನೆಯನ್ನು ಕಟ್ಟಿ, ಪರರ ಪಾಲಾಗಿದ್ದ ತನ್ನ ರಾಜ್ಯವನ್ನು ಮರಳಿ ಗೆದ್ದುಕೊಂಡ. ವೀರವರ ಹಾಗೂ ಶೂದ್ರಕರು ಕೊನೆತನಕ ಗೆಳೆಯರಾಗಿ ಬಾಳಿದರು.