ಭಗವದ್ಗೀತೆ; ಅಧ್ಯಾಯ 4 ಮತ್ತು 5 : ಸನಾತನ ಸಾಹಿತ್ಯ ~ ಮೂಲಪಾಠಗಳು #16

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ. 

ಅಧ್ಯಾಯ 4 : ಜ್ಞಾನ – ಕರ್ಮ- ಸಂನ್ಯಾಸ ಯೋಗ

ಈ ಅಧ್ಯಾಯದಲ್ಲಿ ಜ್ಞಾನಮಾರ್ಗ ಮತ್ತು ಕರ್ಮಮಾರ್ಗದ ಬಗ್ಗೆ ಪ್ರಸ್ತಾಪಿಸುವ ಕೃಷ್ಣ, ಆ ನಂತರ ಕರ್ಮಯೋಗದ ವಿಸ್ತಾರವನ್ನು ತಿಳಿಸುತ್ತಾನೆ.

ಮೊದಲಿಗೆ ಈ ಅಧ್ಯಾಯದಲ್ಲಿ ಜ್ಞಾನದ ಆಯಾಮ ಮತ್ತು ಕರ್ಮದ ಪ್ರಭೇದಗಳನ್ನು ಗೀತಾಚಾರ್ಯನು ವಿವರಿಸುತ್ತಾನೆ. ಹಿಂದೆ ಹೇಳಿದ ಜ್ಞಾನಯೋಗ ಮತ್ತು ಕರ್ಮಯೋಗವನ್ನೇ ವಿಸ್ತರಿಸಿ ಜ್ಞಾನದ ಮಹತ್ವ ಮತ್ತು ಕರ್ಮದ ಪ್ರಭೇದಗಳ ಜೊತೆಗೆ ಈ ಎರಡು ಮಾರ್ಗದಿಂದ ನಾವು ಆತ್ಯಂತಿಕವಾಗಿ ಪಡೆಯುವಂಥ ಫಲದ ಬಗ್ಗೆ ಕೃಷ್ಣ ವಿವರಿಸುವುದನ್ನು ಈ ಅಧ್ಯಾಯದಲ್ಲಿ ಕಾಣಬಹುದು. 

ಸೃಷ್ಟಿಯ ಆದಿಯಿಂದ ಈ ಜ್ಞಾನದ ಪರಂಪರೆ ಹೇಗೆ ಬೆಳೆದು ಬಂತು ಎನ್ನುವ ಚಿತ್ರಣವನ್ನು ಈ ಅಧ್ಯಾಯದಲ್ಲಿ ಕೃಷ್ಣ ನಿರೂಪಿಸುತ್ತಾನೆ.

ಜ್ಞಾನ ಎನ್ನುವುದು ಅನಾದಿನಿತ್ಯ. ಇದು ಅಳಿವಿರದ ವಿದ್ಯೆ. ಪ್ರತೀ ಸೃಷ್ಟಿಯ ಆದಿಯಲ್ಲೂ ಈ ವಿದ್ಯೆ ಭಗವಂತನಿಂದ ಹೇಳಲ್ಪಡುತ್ತದೆ. ನಂತರ ದೇವತೆಗಳು, ದೇವತೆಗಳಿಂದ ರಾಜರ್ಷಿಗಳು, ನಂತರ ಋಷಿಗಳು ಹೀಗೆ ಜ್ಞಾನ ಪರಂಪರೆ ಬೆಳೆಯುತ್ತದೆ. ಇಂದು ಈ ರೀತಿ ಹರಿದು ಬಂದ ವಿದ್ಯೆ ಕಣ್ಮರೆಯಾಗುತ್ತಿದೆ; ಜನ ಮರೆಯುತ್ತಿದ್ದಾರೆ. ಅರ್ಜುನನೂ ಈ ವಿಸ್ಮೃತಿಗೆ ಒಳಗಾದವರಲ್ಲಿ ಒಬ್ಬ. ವಾಸ್ತವದಲ್ಲಿ ಜ್ಞಾನ ನಾಶವಾಗಿಲ್ಲ, ಆದರೆ ಮೋಹದ ಪರದೆ ಅದನ್ನು ತಡೆದಿದೆ. ಆದ್ದರಿಂದ ನಿನಗೆ ನಾನು ಈಗ ಆ ಜ್ಞಾನವನ್ನು ಪುನಃ ಹೇಳುತ್ತಿದ್ದೇನೆ ಎನ್ನುತ್ತಾನೆ ಕೃಷ್ಣ.

ಅರ್ಜುನ ಕೃಷ್ಣನ ಮೇಲಿಟ್ಟಿರುವ ಅಪಾರ ಗೌರವ, ಭಕ್ತಿ  ಹಾಗು ಆತ್ಮೀಯತೆಯನ್ನು ಗುರುತಿಸಿ, ಅನಾದಿನಿತ್ಯವಾದ, ಅಪೂರ್ವವೂ ರಹಸ್ಯವೂ ಆದ ಈ ಜ್ಞಾನವನ್ನು ಕೃಷ್ಣನು ಅರ್ಜುನನಿಗೆ ಬೋಧಿಸುವ ಪ್ರಕ್ರಿಯೆಗೆ ಈ ಅಧ್ಯಾಯವು ಮೀಸಲಾಗಿದೆ. 

ಅಧ್ಯಾಯ 5 : ಕರ್ಮ ಸಂನ್ಯಾಸ ಯೋಗ

ರ್ಮಯೋಗದ ಬಗ್ಗೆ ನಾಲ್ಕನೇ ಅಧ್ಯಾಯದಲ್ಲಿ ಹೇಳುವ ಕೃಷ್ಣ, ಕೊನೆಯಲ್ಲಿ ಕರ್ಮಸಂನ್ಯಾಸದ ಬಗ್ಗೆಯೂ ಹೇಳುತ್ತಾನೆ. ಶಾಸ್ತ್ರೀಯವಾಗಿ ಕರ್ಮಸಂನ್ಯಾಸ ಎಂದರೆ  ದ್ವಂದ್ವಾತೀತವಾಗಿ, ಕರ್ಮಫಲದ ಬಯಕೆಯಿಲ್ಲದೆ ಕರ್ಮ  ಮಾಡುವುದು. ಇಲ್ಲಿ ರಾಗ-ದ್ವೇಷಗಳಿಗೆ, ಕಾಮ – ಕ್ರೋಧಗಳಿಗೆ ಎಡೆಯಿಲ್ಲ.

ಕರ್ಮಸಂನ್ಯಾಸ  ಎಂದರೆ ಕರ್ಮವನ್ನು ಬಿಡುವುದಲ್ಲ, ಕರ್ಮದಲ್ಲಿ ಕಾಮ ಕ್ರೋಧಗಳನ್ನು ಬಿಡುವುದು. ಆದರೆ ಕಾಮ – ಕ್ರೋಧಗಳ ಅತೀತನಾಗಿ ಜ್ಞಾನಮಾರ್ಗದಲ್ಲಿ ಯುದ್ಧ ಮಾಡುವುದು ಹೇಗೆ? ಇದನ್ನು ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟ. ಈ ಕುರಿತು ಕೃಷ್ಣನಲ್ಲಿ ಅರ್ಜುನ ವಿವರಣೆಯನ್ನು ಕೇಳುತ್ತಾನೆ. ಇದರೊಂದಿಗೆ ಐದನೇ ಅಧ್ಯಾಯ ಆರಂಭವಾಗುತ್ತದೆ. 

Leave a Reply