ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ.
ಅಧ್ಯಾಯ 6 : ಆತ್ಮ ಸಂಯಮ ಯೋಗ
ಆರನೇ ಅಧ್ಯಾಯದಲ್ಲಿ ಧ್ಯಾನಯೋಗ ಮತ್ತು ಧ್ಯಾನಸಮಾಧಿಯನ್ನು ಕೃಷ್ಣ ತಳಸ್ಪರ್ಶಿಯಾಗಿ ವಿವರಿಸುತ್ತಾನೆ. ಯೋಗಭ್ಯಾಸ ಮಾಡಿ, ಭಗವಂತನ ಧ್ಯಾನಕ್ಕೆ ಪ್ರಯತ್ನಿಸಿ, ಕೆಲವು ಮೆಟ್ಟಲನ್ನೇರಿ ಯಾವುದೋ ಕಾರಣದಿಂದ, ಮನೋವಿಕ್ಷೇಪದಿಂದ ಅಥವಾ ಆಯಸ್ಸು ಮುಗಿದುದರಿಂದ, ಅಲ್ಲೇ ಅದನ್ನು ನಿಲ್ಲಿಸಿದವನ ಸಾಧನೆ ಎಂದೂ ವ್ಯರ್ಥವಲ್ಲ; ಸಾಧನೆಯ ದಾರಿಯಲ್ಲಿ ಸಾಗಿದವರು ಇಹದಲ್ಲಿ ಅಥವಾ ಪರದಲ್ಲಿ ಏನನ್ನೂ ಕಳೆದುಕೊಳ್ಳುವುದಿಲ್ಲ – ಎನ್ನುವ ಶ್ರೀಕೃಷ್ಣ, “ಒಳ್ಳೆಯದನ್ನು ಮಾಡಿದವರು ಎಂದೂ ಕೆಟ್ಟದ್ದನ್ನು ಪಡೆಯುವುದಿಲ್ಲ. ಇದು ಪ್ರಕೃತಿಯ ನಿಯಮ” ಎಂದು ಭರವಸೆ ನೀಡುತ್ತಾನೆ.
ಅಧ್ಯಾಯ 7 : ಜ್ಞಾನ ವಿಜ್ಞಾನ ಯೋಗ
ಮೊದಲ ಷಟ್ಕದಲ್ಲಿ (ಆರು ಅಧ್ಯಾಯಗಳು) ಕೃಷ್ಣನು ಸಾಧಕನಾದವನು ಯಾವ ರೀತಿ ಸಾಧನೆಗೆ ತೊಡಗಬೇಕು, ಕರ್ಮ ಹೇಗಿರಬೇಕು, ಧ್ಯಾನ ಹೇಗಿರಬೇಕು, ಇತ್ಯಾದಿ ಭಗವಂತನನ್ನು ತಿಳಿಯುವ ಸಾಧನದ ಬಗ್ಗೆ ಹೇಳುತ್ತಾನೆ. ಎರಡನೇ ಷಟ್ಕ (ಅ – 7ರಿಂದ 12)ದಲ್ಲಿ ಸಾಧನೆಯ ಮೂಲಕ ನಾವು ತಿಳಿದುಕೊಳ್ಳಬೇಕಾದ ಭಗವಂತನ ಸ್ವರೂಪವನ್ನು, ವಿಭೂತಿಯನ್ನು, ವೈಭವವನ್ನು, ಆತನ ಮಹಿಮೆಯನ್ನು ಹೇಳುತ್ತಾನೆ. ಈ ಅಧ್ಯಾಯದಲ್ಲಿ ಶ್ರೀಕೃಷ್ಣನು ಸೃಷ್ಟಿಯ ಅಗಾಧತೆ, ವೈಚಿತ್ರ್ಯಗಳು ಹಾಗೂ ಅನಂತ ಸಾಧ್ಯತೆಗಳನ್ನು ವಿವರಿಸುತ್ತಾನೆ.
ಏಳನೇ ಅಧ್ಯಾಯವು ಮನಸ್ಸನ್ನು ಮಣಿಸಿ, ಸಾಧನೆಯ ಹಾದಿಯಲ್ಲಿ ಅದನ್ನು ಪಕ್ವಗೊಳಿಸುವ ಕುರಿತು ಹೇಳುತ್ತದೆ. ಅರಿವಿನ ಸಾಮರ್ಥ್ಯವನ್ನು ವಿವರಿಸುತ್ತದೆ. ಈ ಅಧ್ಯಾಯದ ಕೊನೆಯಲ್ಲಿ ಕೃಷ್ಣ ಸಂಕ್ಷಿಪ್ತವಾಗಿ ಆರು ಮಹತ್ವದ ಸಂಗತಿಯನ್ನು ಮನುಷ್ಯ ತಿಳಿದಿರಬೇಕು ಎಂದು ಹೇಳುತ್ತಾನೆ. ಅಧ್ಯಾತ್ಮ, ಅಧಿಭೂತ, ಅಧಿದೈವ, ಅಧಿಯಜ್ಞ, ಬ್ರಹ್ಮ, ಕರ್ಮ – ಈ ಆರು ಸಂಗತಿಗಳನ್ನು ತಿಳಿದರೆ ಅದರಿಂದ ಮೇಲಕ್ಕೆ ಏರುವ ಇನ್ನೊಂದು ಮೆಟ್ಟಲಿರುವುದಿಲ್ಲ ಎಂದು ಸೂಚಿಸುತ್ತಾನೆ.
ಅಧಿಭೂತ ಎಂದರೆ ಭೌತಿಕ ಪ್ರಪಂಚ, ಅಧ್ಯಾತ್ಮ ಎಂದರೆ ಜಡದೊಳಗಿರುವ ಚೈತನ್ಯ, ಅಧಿದೈವ ಎಂದರೆ ಚೇತನವನ್ನು ನಿಯಂತ್ರಿಸುವ ದೇವತಾಶಕ್ತಿ, ಅಧಿಯಜ್ಞ ಎಂದರೆ ದೇವತೆಗಳನ್ನು ನಿಯಂತ್ರಿಸುವ ಭಗವಂತ; ಈ ಅಧಿಯಜ್ಞ ಜಗತ್ತಿನಲ್ಲೆಲ್ಲಾ ತುಂಬಿದ್ದಾನೆ ಎನ್ನುವುದು ಬ್ರಹ್ಮ ಕಲ್ಪನೆ, ಅವನಿಂದಲೇ ಎಲ್ಲಾ ಕ್ರಿಯೆಗಳೂ ನಡೆಯುತ್ತವೆ, ಆತನೇ ಸೂತ್ರಧಾರ. ಈ ಅರಿವು ಸಾವಿನ ಸಮಯದಲ್ಲೂ ಎಚ್ಚರವಾಗಿರಬೇಕು; ಆಗ ಆ ಸಾವು ಮಂಗಲಕರವಾಗಿರುತ್ತದೆ – ಇಷ್ಟು ವಿಚಾರಗಳು ಈ ಅಧ್ಯಾಯದಲ್ಲಿ ಚರ್ಚೆಯಾಗುತ್ತವೆ.