ಭಗವದ್ಗೀತೆ; ಅಧ್ಯಾಯ 14 ಮತ್ತು 15 : ಸನಾತನ ಸಾಹಿತ್ಯ ~ ಮೂಲಪಾಠಗಳು #21

ಈ ಸರಣಿಯಲ್ಲಿ ನಾವು ಸನಾತನ ಸಾಹಿತ್ಯದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತಾ ಬಂದಿದ್ದೇವೆ. ವಿಶೇಷವಾಗಿ ಈ ಸಾಹಿತ್ಯದ ಕುರಿತು ಸಂಪೂರ್ಣ ಹೊಸತಾಗಿ ತಿಳಿಯಲು ಬಯಸುವ ಆಸಕ್ತರಿಗೆ ಮತ್ತು ಮಕ್ಕಳಿಗೆಂದೇ ಈ ಸರಣಿ ರೂಪಿಸಲಾಗಿದೆ. 

BG

ಅಧ್ಯಾಯ 14 : ಗುಣತ್ರಯ ವಿಭಾಗ ಯೋಗ

ಪುರುಷನೊಂದಿಗೆ ಮಿಲನಗೊಂಡು ಸೃಷ್ಟಿಗೆ ಕಾರಣವಾಗುವ ಪ್ರಕೃತಿಯ ಕುರಿತಾಗಿ, ಸೃಷ್ಟಿ ಕ್ರಿಯೆಯ ಕುರಿತಾಗಿ ಹದಿನಾಲ್ಕನೆಯ ಅಧ್ಯಾಯವು ಅಧ್ಯಾಯವು ಚರ್ಚಿಸುತ್ತದೆ.

ಪ್ರಕೃತಿಯಿಲ್ಲದೇ ಸೃಷ್ಟಿ ಇಲ್ಲ ಅನ್ನುವುದನ್ನು ಸಾಬೀತುಪಡಿಸುತ್ತಾ ಅದರ ಮಹತ್ವವನ್ನು ಈ ಅಧ್ಯಾಯವು ವಿವರಿಸುತ್ತದೆ. ಜೊತೆಗೆ; ತ್ರಿಗುಣಗಳ  ವಿಶ್ಲೇಷಣೆ ಮಾಡಿ, ನಮ್ಮಲ್ಲಿರುವ  ರಾಜಸ ಮತ್ತು ತಾಮಸ ಅಂಶವನ್ನು ತಿದ್ದಿಕೊಂಡು, ಹೇಗೆ ಸಾತ್ವಿಕ ದಾರಿಯಲ್ಲಿ ಸಾಧನೆಯನ್ನು ಮಾಡಬಹುದು ಎನ್ನುವ ಅಂಶವನ್ನು ಈ ಅಧ್ಯಾಯದಲ್ಲಿ ಪ್ರಸ್ತಾಪಿಸಲಾಗಿದೆ.

ತ್ರಿಗುಣಗಳ ಲಕ್ಷಣಗಳನ್ನು ವಿವರಿಸುತ್ತಾ ಅವುಗಳ ಪರಿಣಾಮವನ್ನು ಗೀತಾಚಾರ್ಯನು ಮನದಟ್ಟಾಗುವಂತೆ ನಿರೂಪಿಸುತ್ತಾನೆ. ನಮ್ಮಲ್ಲಿ ಯಾವ ಗುಣ ಕೆಲಸ ಮಾಡುತ್ತಿದೆ ಅನ್ನುವುದನ್ನು ತಿಳಿಯುವುದು ಹೇಗೆ? ಈ ಪ್ರಶ್ನೆಗೆ ಕೃಷ್ಣನ ಉತ್ತರ ಇದು – ನಮ್ಮಲ್ಲಿ ಜ್ಞಾನದ ಹಸಿವು ಇದ್ದರೆ ಅದು ಸಾತ್ವಿಕ ಗುಣ. ಎಲ್ಲವೂ ನನಗೇ ಸಿಗಬೇಕು, ಮಿಕ್ಕವರಿಗೆ ಏನೂ ಲಭಿಸಬಾರದು ಎನ್ನುವ ಲೋಭವಿದ್ದರೆ ಅದು ರಜಸ್ಸು. ಯಾವುದೋ ಒಂದು ಭೌತಿಕ ವಸ್ತುವಿನ ಮೇಲೆ ಅತಿಯಾದ ಮಮಕಾರ, ವ್ಯಾಮೋಹಗಳನ್ನು ಬೆಳೆಸಿಕೊಂಡರೆ ಅದು ತಮಸ್ಸಿನ ಕೆಲಸ. ಇವುಗಳಲ್ಲಿ ಮೋಕ್ಷ ಸಾಧನೆಯ ಹಾದಿಯಲ್ಲಿ ನಡೆಸುವ ಸಾತ್ವಿಕ ಗುಣವನ್ನು ರೂಢಿಸಿಕೊಳ್ಳುವ ಬಗೆಯನ್ನು ಗೀತಾಚಾರ್ಯನು ತಿಳಿಸುತ್ತಾನೆ.

ಅಧ್ಯಾಯ 15 : ಪುರುಷೋತ್ತಮ ಯೋಗ

ಹದಿನೈದನೆಯ ಅಧ್ಯಾಯ ಗೀತೆಯಲ್ಲೇ ಅತ್ಯಂತ ಚಿಕ್ಕ ಅಧ್ಯಾಯ. ಇಲ್ಲಿ ಫಲಶ್ರುತಿಯ ಎರಡು ಶ್ಲೋಕಗಳನ್ನು ಬಿಟ್ಟರೆ, ಪ್ರಮೇಯ ಭಾಗವನ್ನು ಹೇಳುವ ಹದಿನೆಂಟು ಶ್ಲೋಕಗಳಿವೆ. ಈ ಹದಿನೆಂಟು ಶ್ಲೋಕದಲ್ಲಿ ಕೃಷ್ಣ ಇಡೀ ವಿಶ್ವದ ರಹಸ್ಯವನ್ನು ತೆರೆದಿಟ್ಟಿದ್ದಾನೆ.
ಮಹಾಭಾರತ ಭಾರತೀಯ ತತ್ವಶಾಸ್ತ್ರದ ಸಾರವಾದರೆ, ಭಗವದ್ಗೀತೆ ಮಹಾಭಾರತದ ಸಾರ. ಇಂಥಹ ಭಗವದ್ಗೀತೆಯ ಒಟ್ಟು ಸಾರವೇ ಈ ಹದಿನೈದನೇ ಅಧ್ಯಾಯ. ಈ ಅಧ್ಯಾಯವನ್ನು ಅರ್ಥ ಮಾಡಿಕೊಂಡರೆ ಇಡೀ ಗೀತೆಯನ್ನಷ್ಟೇ ಅಲ್ಲ, ಇಡೀ ಭಾರತೀಯ ತತ್ವಶಾಸ್ತ್ರವನ್ನು ಅರ್ಥ ಮಾಡಿಕೊಂಡಂತೆ. 

ಹಿಂದಿನ ಅಧ್ಯಾಯಗಳಲ್ಲಿ ವಿವರಿಸಿದ ವಿಶ್ವ ಮತ್ತು ವಿಶ್ವದ ನಿಯಾಮಕನ ವಿಷಯವನ್ನೇ ಇನ್ನೂ ಸ್ಪಷ್ಟವಾಗಿ, ಇನ್ನೊಂದು ಆಯಾಮದೊಂದಿಗೆ ಈ ಅಧ್ಯಾಯದಲ್ಲಿ ಕೃಷ್ಣ ವಿವರಿಸುತ್ತಾನೆ. ಪ್ರಕೃತಿ ಮತ್ತು ಪ್ರಾಕೃತ ವಿಶ್ವ; ಆ ವಿಶ್ವವನ್ನು ದಾಟುವ ಬಗೆ; ಮತ್ತು ಕೊನೆಯದಾಗಿ ಇಡೀ ತತ್ವಜ್ಞಾನದ ಸಂಗ್ರಹ ಈ ಅಧ್ಯಾಯದಲ್ಲಿದೆ.

ನಾವು ತಿಳಿದುಕೊಳ್ಳಬೇಕಾದ ವಿಶಿಷ್ಟವಾದ ಅರಿವಿನ ಸಂದೇಶವನ್ನು ಕೃಷ್ಣ ಈ ಅಧ್ಯಾಯದ ಮೂಲಕ ಕೊಟ್ಟಿದ್ದಾನೆ. ಚೇತನಾಚೇತನ ವಿಶ್ವವು ‘ಕ್ಷರ’. ಅದರಿಂದಾಚೆಗೆ ಇರುವ ಚಿತ್ ಪ್ರಕೃತಿಯು ಅಕ್ಷರಳು. ಅದರಿಂದಾಚೆಗಿರುವ ಸರ್ವ ನಿಯಾಮಕ ಭಗವಂತನೇ ಪುರುಷೋತ್ತಮನು. ಹನ್ನೆರಡನೆ ಅಧ್ಯಾಯದ ಪ್ರಾರಂಭದಲ್ಲಿ ವಿವರಿಸಿದಂತೆ – ಹದಿನೈದು ಬೇಲಿಗಳಿಂದ ಆವೃತವಾಗಿರುವ ಹದಿನಾರನೆಯವ ಜೀವ. ಈ ಹದಿನೈದನ್ನು ಹದಿನಾರರ ಸುತ್ತ ಬಿಗಿದವಳು ಹದಿನೇಳನೆಯವಳಾದ ಪ್ರಕೃತಿ. ಈ ಬೇಲಿಯಿಂದ  ಬಿಡಿಸಿ ನಮಗೆ ಮೋಕ್ಷ ಕೊಡತಕ್ಕವನು ಹದಿನೆಂಟನೆಯವನಾದ ಪರಮಾತ್ಮ ಎಂಬುದನ್ನು ಇದು ಪುನರುಚ್ಚರಿಸುತ್ತದೆ. 

‘ಹದಿನೆಂಟು’ ತತ್ವಶಾಸ್ತ್ರದ ಸಮಷ್ಠಿಯನ್ನು ನಮ್ಮ ಮುಂದಿಡುವಂತಹ ಒಂದು ಸಂಖ್ಯೆ. ಈ ಅಧ್ಯಾಯದಲ್ಲಿ ಹದಿನೆಂಟು ಶ್ಲೋಕಗಳ ಮೂಲಕ ಕೃಷ್ಣ ಸಮಸ್ತ ಶಾಸ್ತ್ರದ ಸಾರವನ್ನು ನಮ್ಮ ಮುಂದೆ ತೆರೆದಿಟ್ಟಿದ್ದಾನೆ. 

Leave a Reply