ಬುದ್ಧ ಬೋಧೆ : ಕಾಲಾಮ ಸುತ್ತದ ಹತ್ತು ಮುತ್ತುಗಳು

buddhaಆದರೋಪಚಾರವೆಲ್ಲ ಮುಗಿದ ಮೇಲೆ ಕಾಲಾಮರ ಮುಖ್ಯಸ್ಥ ಬುದ್ಧನ ಬಳಿ ಬಂದು, “ನಾವು ಗೊಂದಲಗೊಂಡಿದ್ದೇವೆ. ಸತ್ಯವಾದ ಧರ್ಮ ಯಾವುದು? ನಮಗೆ ತಿಳಿಹೇಳಿ” ಎಂದು ಕೇಳಿಕೊಂಡನು. ಅದಕ್ಕೆ ಉತ್ತರವಾಗಿ ಬುದ್ಧನು ನೀಡಿದ ಹತ್ತು ಬೋಧನೆಗಳು ‘ಕಾಲಾಮ ಸುತ್ತ’ ಎಂದೇ ಪ್ರಸಿದ್ಧವಾದವು. ಬುದ್ಧನಿಂದ ಹೊಮ್ಮಿದ ಆ ಹತ್ತು ಮುತ್ತುಗಳು ಇಲ್ಲಿವೆ ….

ಮ್ಮೆ ಭಗವಾನ್ ಬುದ್ಧನು ತನ್ನ ಬಿಕ್ಖುಗಣದೊಡನೆ ಕೋಸಲದ ಕೇಸಪುತ್ತ ಎಂಬ ಹಳ್ಳಿಗೆ ಬರುತ್ತಾನೆ. ಕೇಸಪುತ್ತದ ಕಾಲಾಮ ಜನಾಂಗೀಯರು ಅವರನ್ನು ಆದರದಿಂದ ಬರ ಮಾಡಿಕೊಳ್ಳುತ್ತಾರೆ. ಕಾಲಾಮರಿಗೆ ಆಧ್ಯಾತ್ಮಿಕ ವಿಚಾರಗಳಲ್ಲಿ, ಧಾರ್ಮಿಕ ಚರ್ಚೆಗಳಲ್ಲಿ ವಿಪರೀತ ಆಸಕ್ತಿ. ತಮ್ಮಲ್ಲಿಗೆ ಚಾರ್ವಾಕ, ಆಜೀವಕ, ಬ್ರಾಹ್ಮಣ – ಹೀಗೆ ಹಲವು ಮತಪಂಥಗಳ ಜ್ಞಾನಿಗಳನ್ನೂ ಗುರುಗಳನ್ನೂ ಕರೆಸಿಕೊಂಡು ಪ್ರವಚನಗಳನ್ನು ಏರ್ಪಡಿಸುವರು.

ಹೀಗೆ ಹಲವು ವಿಚಾರಧಾರೆಗಳ ಉಪದೇಶಗಳನ್ನು ಕೇಳಿದ ಕಾಲಾಮರು ಯಾವುದನ್ನು ಅನುಸರಿಸುವುದು ಎಂದು ತಿಳಿಯದೆ ಗೊಂದಲಕ್ಕೆ ಬಿದ್ದಿದ್ದರು. ಅದೇ ಸಮಯಕ್ಕೆ ಬುದ್ಧ ಅವರ ಹಳ್ಳಿಗೆ ಭೇಟಿ ನೀಡಿದ್ದು.

ಆದರೋಪಚಾರವೆಲ್ಲ ಮುಗಿದ ಮೇಲೆ ಕಾಲಾಮರ ಮುಖ್ಯಸ್ಥ ಬುದ್ಧನ ಬಳಿ ಬಂದು, “ನಾವು ಗೊಂದಲಗೊಂಡಿದ್ದೇವೆ. ಸತ್ಯವಾದ ಧರ್ಮ ಯಾವುದು? ನಮಗೆ ತಿಳಿಹೇಳಿ” ಎಂದು ಕೇಳಿಕೊಂಡನು. ಅದಕ್ಕೆ ಉತ್ತರವಾಗಿ ಬುದ್ಧನು ನೀಡಿದ ಹತ್ತು ಬೋಧನೆಗಳು ‘ಕಾಲಾಮ ಸುತ್ತ’ ಎಂದೇ ಪ್ರಸಿದ್ಧವಾದವು. ಆ ಹತ್ತು ಮುತ್ತುಗಳು ಹೀಗಿವೆ:

“ನನ್ನ ಪ್ರೀತಿಯ ಕಲಾಮರೇ, ಮಾ ಅನುಸ್ಸೇವನಾ – ಇದನ್ನು ದಿವ್ಯವಾಣಿ ಎಂದು ಭಾವಿಸಿ ಅನುಸರಿಸಬೇಡಿ; ಮಾ ಪರಂಪರಾಯ – ಇದನ್ನು ಸಂಪ್ರದಾಯವೆಂದು ಆಚರಿಸಬೇಡಿ; ಮಾ ಇತಿಕಿರಾಯ – ಇವರು ಹಾಗೆ ಹೇಳಿದ್ದಾರೆಂದು ಆ ರೀತಿ ಮಾಡಬೇಡಿ; ಮಾ ಪಿಟಕಸಂಪಾದನೇನ – ಧರ್ಮಗ್ರಂಥಗಳು ಹೀಗೆ ಹೇಳಿವೆ ಎಂದು ಅನುಸರಿಸಲು ಹೋಗಬೇಡಿ; ಮಾ ತಕ್ಖಹೇತು – ತಾರ್ಕಿಕವಾಗಿದೆ ಎಂದು ಭಾವಿಸಿ ಅದನ್ನು ನಿಮ್ಮದಾಗಿಸಿಕೊಳ್ಳಬೇಡಿ; ಮಾ ನಯಹೇತು –  ಕಾರಣಬದ್ಧವಾಗಿ ತೋರುತ್ತದೆ ಎಂದು ಭಾವಿಸಿ ಹೋಗಬೇಡಿ; ಮಾ ಆಕಾರಪರಿವಿತಕ್ಕೇನ – ಕೇವಲ ನೋಟಕ್ಕೆ ಮಾರುಹೋಗಬೇಡಿ; ಮಾ ದಿಟ್ಠಿ ನಿಜ್ಝನಕ್ಖಂತಿಯಾ – ಅವರ ಮಾತು ನಿಮ್ಮ ವಿಚಾರಕ್ಕೆ ತಾಳೆಯಾಗುತ್ತದೆ ಎಂದು ಹೋಗಬೇಡಿ; ಮಾ ಭವ್ಯ ರೂಪತಾಯ – ಅವರು ಸಮರ್ಥರು, ಆದ್ದರಿಂದ ಅವರ ಮಾತನ್ನು ಕೇಳಬೇಕು ಎಂದು ಹೋಗಬೇಡಿ; ಮಾ ಸಮಣೊ ನೊ ಗುರತಿ – ವಿರಾಗಿಯಾಗಿ ನಮ್ಮ ಗುರುಗಳು ಹೇಳಿದ್ದಾರೆಂದು ಹೋಗಬೇಡಿ.

“ಕೇವಲ ನಂಬಿಕೆಯಿಂದ ಯಾವುದೂ ನಡೆಯುವುದಿಲ್ಲ. ಚಿಕಿತ್ಸಕ ಬುದ್ಧಿಯಿಂದ ಮುನ್ನಡೆಯಬೇಕು” ಅನ್ನುವುದು ಬುದ್ಧನ ಚಿಂತನೆ. ಆದ್ದರಿಂದಲೇ ಬುದ್ಧನು ಮೇಲಿನಂತೆ ಬೋಧನೆ ನೀಡಿದನು. ಯಾರೋ ಹೇಳಿದ್ದನ್ನು ಕೇಳಿದರೆ ಅದು ಮಾಹಿತಿ ಸಂಗ್ರಹವಾಗುತ್ತದೆ ಹೊರತು ಜ್ಞಾನವಾಗುವುದಿಲ್ಲ. ಆದ್ದರಿಂದ ಯಾರ ಬೋಧನೆಗಳನ್ನು ಕೇಳಿದರೂ, ಎಷ್ಟು ಮಾತುಗಳನ್ನು ಕೇಳಿದರೂ ಸ್ವತಃ ಆಲೋಚಿಸಿ, ವಿವೇಚನೆಯಿಂದ ಮುಂದಿನ ಆಯ್ಕೆ ಮಾಡಿಕೊಳ್ಳಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.