ಯಮೊಕಾ ಮತ್ತು ಡುಕುಒನ್ : ಒಂದು ಝೆನ್ ಕಥೆ

ಮಒಕಾ ತೆಶ್ಶು ಒಬ್ಬ ತರುಣ ಝೆನ್ ವಿದ್ಯಾರ್ಥಿ. ಅವನು ಝೆನ್ ಕಲಿಯಲು ಗುರುವಿನಿಂದ ಗುರುವಿಗೆ ಎಡತಾಕುತ್ತಿದ್ದ. ಅವನಿಗೆ ತಾನು ಎಲ್ಲವನ್ನೂ ತಿಳಿದಿದ್ದೇನೆ, ತಾನು ತಿಳಿದಿರುವುದಕ್ಕಿಂತ ಹೆಚ್ಚಿನದನ್ನು ಕಲಿಸುವ ಗುರುವನ್ನು ಹುಡುಕಿಕೊಳ್ಳಬೇಕು ಅನ್ನುವ ಭಾವನೆ ಇತ್ತು.  

ಹೀಗೆ ಅಲೆಯುತ್ತಾ ಅಲೆಯುತ್ತಾ ಅವನು ಶೊಕೋಕುವಿನಲ್ಲಿ ನೆಲೆಸಿದ್ದ ಡುಕುಒನ್ ಎಂಬ ಗುರುವಿನ ಬಳಿ ಬಂದ. ಚುಟ್ಟಾ ಸೇದುತ್ತ ಕುಳಿತಿದ್ದ ಡುಕುಒನ್, “ನಿನಗೇನು ಬೇಕು?” ಎಂದು ಕೇಳಿದ.

ತನ್ನ ಪಾಂಡಿತ್ಯ ಪ್ರದರ್ಶನ ಶುರು ಮಾಡಿದ ಯಮಒಕಾ, “ಮನಸೆಂಬುದಿಲ್ಲ, ಬುದ್ಧ ಎಂಬುವನಿಲ್ಲ, ಜ್ಞಾನೋದಯ ಎಂಬುದಿಲ್ಲ, ಭ್ರಮೆ ಎಂಬುದಿಲ್ಲ, ಸಂತನೆಂಬುವನಿಲ್ಲ, ಪಾಪಿ ಎಂಬುವನಿಲ್ಲ; ಎಲ್ಲವೂ ಖಾಲಿ, ಅಸ್ತಿತ್ವ ಎಂಬುದೇ ಇಲ್ಲ; ಕೊಡುವಂಥದೇನಿಲ್ಲ, ಪಡೆಯುವಂಥದೂ ಇಲ್ಲ” ಅಂದ.

ಚುಟ್ಟಾದ ಹೊಗೆ ಹೀರುತ್ತಾ ಕುಳಿತಿದ್ದ ಡುಕುಒನ್, ಥಟ್ಟನೆ ಅದರ ಹೊಗೆಯನ್ನು ಯಮಒಕಾನ ಮುಖದ ಮೇಲೆ ಬಿಟ್ಟ.

ತರುಣ ಝೆನ್ ವಿದ್ಯಾರ್ಥಿಗೆ ಇದರಿಂದ ಸಿಟ್ಟೇ ಬಂದಿತು. “ನೀನೆಂಥಾ ಗುರು? ನಿನ್ನಂಥವರನ್ನೆಲ್ಲ ಗುರು ಅಂತ ಕರೆಯೋದರಿಂದಲೇ ಝೆನ್ ಹಾಳಾಗ್ತಿರೋದು” ಅಂತೆಲ್ಲಾ ಕೂಗಾಡತೊಡಗಿದ.

“ಎಲ್ಲವೂ ಖಾಲಿ ಅಂದ ಮೇಲೆ ನಿನಗೆ ಈ ಕೋಪ ಬಂದಿದ್ದೆಲ್ಲಿಂದ?” ಕೇಳಿದ ಡುಕುಒನ್.

ಯಮಒಕಾ ಮರು ಮಾತಾಡದೆ ತನ್ನ ಬಟ್ಟೆ ಗಂಟನ್ನು ಆಶ್ರಮದ ಒಳಗಿಟ್ಟು ಅಂಗಳದ ಕಸ ಗುಡಿಸಲು ಶುರು ಮಾಡಿದ.

(ಸಂಗ್ರಹ ಮತ್ತು ಅನುವಾದ : ಮಿಲಿಂದ)

Leave a Reply