ಒಬ್ಬ ಯುವಕ ತಾನು ಬಡವನಾಗಿದ್ದಕ್ಕೆ ತುಂಬಾ ಬೇಜಾರು ಮಾಡಿಕೊಂಡಿದ್ದ. ಗೆಳೆಯನೊಬ್ಬನ ಸಲಹೆಯ ಮೇರೆಗೆ ಝೆನ್ ಮಾಸ್ಟರ್ ನ ಭೇಟಿಯಾಗಿ ತನ್ನ ಸಂಕಟವನ್ನು ಹೇಳಿಕೊಂಡ.
“ಯಾಕೋ ಗೊತ್ತಿಲ್ಲ…. ನಾನು ಯಾವಾಗಲೂ ಬಡವ.”
“ನೀನು ನಿಜವಾಗಿಯೂ ಬಡವನಾ? ನನಗ್ಯಾಕೋ ನೀನು ಸುಳ್ಳು ಹೇಳುತ್ತಿರುವೆ ಎಂದು ಅನಿಸುತ್ತದೆ.”
“ಇಲ್ಲ ನಿಜವಾಗಿಯೂ ನಾನು ಬಡವನೇ. ನನಗೆ ಮನೆಯಿಲ್ಲ, ಹೊಲ ಇಲ್ಲ, ಆಸ್ತಿ ಇಲ್ಲ.”
“ಸಾವಿರ ನಾಣ್ಯ ಕೊಡುತ್ತೇನೆ ನಿನ್ನ ಬೆರಳು ಕತ್ತರಿಸಿ ಕೊಡುತ್ತೀಯಾ ಹಾಗಾದರೆ?”
“ಇಲ್ಲ, ಸಾಧ್ಯವಿಲ್ಲ.”
“ಹಾಗಾದರೆ ಕೈ ಕತ್ತರಿಸಿ ಕೊಡು, ಲಕ್ಷ ನಾಣ್ಯ ಕೊಡುತ್ತೇನೆ.”
“ಉಹೂಂ. ಇಲ್ಲ ಇಲ್ಲ. ಅದು ಹೇಗಾದೀತು?”
“ಕಣ್ಣು ಕೊಡು ಮತ್ತೆ, ಐದು ಲಕ್ಷ ನಾಣ್ಯ ಕೊಡುತ್ತೇನೆ.”
“ಸತ್ತರೂ ಸಾಧ್ಯವಿಲ್ಲ.”
“ಹೋಗಲಿ, ಹತ್ತು ಲಕ್ಷ ನಾಣ್ಯ ಕೊಡುತ್ತೇನೆ, ನಿನ್ನ ಯೌವ್ವನ ಕೊಡು,
ನೀನು ಹೂಂ ಎಂದರೆ ಒಂದು ಸೆಕೆಂಡಿನಲ್ಲಿ ನಿನ್ನ 80 ವರ್ಷದ ಮುದುಕನನ್ನಾಗಿ ಮಾಡುತ್ತೇನೆ.”
ಈ ಮಾತು ಕೇಳುತ್ತಿದ್ದಂತೆಯೇ ಯುವಕ ಸುಮ್ಮನಾಗಿಬಿಟ್ಟ.
ತಾನು ಎಷ್ಟು ಶ್ರೀಮಂತ ಎನ್ನುವುದು ಅವನಿಗೆ ಗೊತ್ತಾಗಿಬಿಟ್ಟಿತ್ತು.
(ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ)