ಅನಾಪಾನಸತಿ ಧ್ಯಾನ ವಿಧಾನವನ್ನು ಬೌದ್ಧ ಸಾಹಿತ್ಯ ಮತ್ತು ಧ್ಯಾನ ವಿಧಾನಗಳ ವಿಶೇಷಜ್ಞ ಬರಹಗಾರರಾದ ಅನೀಶ್ ಬೋಧ್ ನಾಲ್ಕು ಹಂತಗಳಲ್ಲಿ ನಿರೂಪಿಸಿದ್ದಾರೆ…
ಹಂತ-1 : ಉಸಿರಾಟವು ದೀರ್ಘವಾಗಿದ್ದರೆ ನಾನು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾನೆ.
ಅಂದರೆ ಇಲ್ಲಿ ಉಸಿರಾಟವು ಸಾಮಾನ್ಯವಾಗಿ ದೀರ್ಘವಾಗಿರಬಹುದು ಅಥವಾ ಓಡಿಬಂದು ಹಾಗೆಯೇ ಧ್ಯಾನಕ್ಕೆ ಕುಳಿತಿದ್ದರೆ ಆಗಲೂ ಉಸಿರಾಟ ದೀರ್ಘವಾಗಿರಬಹುದು ಅಥವ ಗಾಬರಿಯಿಂದ ಉಸಿರಾಟ ದೀರ್ಘವಾಗಿರಬಹುದು. ಅಂದರೆ ಉಸಿರನ್ನು ಕಿಬ್ಬೊಟ್ಟೆಯವರೆಗೆ ತೆಗೆದುಕೊಂಡಾಗ ಅದು ದೀರ್ಘ ಉಸಿರಾಟ ಎನಿಸುತ್ತದೆ. ಒಟ್ಟಿನಲ್ಲಿ ಉಸಿರಾಟ ಈ ರೀತಿಯ ದೀರ್ಘ ಉಸಿರಾಟವಿದ್ದಾಗ ಅದನ್ನು ಹಾಗೆಯೇ ಅದು ಇರುವ ಹಾಗೆ ಯತಾಭೂತವಾಗಿ ಹಾಗೆಯೇ ಅರಿಯುವುದು. ಆದರೆ ಯೋಚಿಸುವ ಹಾಗಿಲ್ಲ.
ಉಸಿರಾಟವು ಮೂಗಿನ ತುದಿಗೆ ಅಥವಾ ಮೇಲ್ತುಟಿಗೆ ಸ್ಪಶರ್ಿಸುತ್ತಿರುತ್ತದೆ. ಅಲ್ಲೇ ಅಬಾಧಿತ ಏಕಾಗ್ರತೆಯನ್ನು ನಿಲ್ಲಿಸಬಹುದು ಅಥವಾ ಕೆಲವು ಸಾಧಕರು ಕಿಬ್ಬೊಟ್ಟೆಯ ಮೇಲೆ ಮನಸ್ಸು ಕೇಂದ್ರೀಕರಿಸುತ್ತಾರೆ. ಪ್ರತಿ ಒಳ ಉಸಿರು ಮತ್ತು ಹೊರ ಉಸಿರಿಗೂ ಕಿಬ್ಬೊಟ್ಟೆ ಏರಿಳಿತ ಮಾಡುತ್ತಿರುತ್ತದೆ. ಅಲ್ಲೂ ಸಹ ಮನಸ್ಸು ಕೇಂದ್ರೀಕರಿಸಬಹುದು. ಆಗ ಉತ್ಸಾಹ ಉಂಟಾಗುತ್ತಿರುತ್ತದೆ. ಆನಂದ ಉಂಟಾಗುತ್ತಿರುತ್ತದೆ. ಅವನ್ನೆಲ್ಲಾ ವೃದ್ಧಿ ಮಾಡಬೇಕು. ಆದರೆ ಮೂಗಿನ ತುದಿ ಅಥವಾ ಕಿಬ್ಬೊಟ್ಟೆ ಎಲ್ಲೇ ಆಗಲಿ ಒಂದುಕಡೆ ಮಾತ್ರ ಏಕಾಗ್ರತೆ ಬೆಳೆಸಬೇಕು. ಎರಡುಕಡೆ ಬೆಳೆಸಿದರೆ, ಮನಸ್ಸು ಚದುರಿ ಅಶಾಂತತೆ ಉಂಟಾಗುತ್ತದೆ. ಮಿಕ್ಕ ಎಲ್ಲಾ ವಿಷಯಗಳಿಂದ ಮನಸ್ಸು ವಿಮುಖಗೊಳಿಸಬೇಕು. ಉಸಿರಾಟದ ಗಮನದ ವಿನಃ ಬೇರಾವ ಯೋಚನೆ ಇರಬಾರದು. ಮುಂದೆ ಸಾಧನೆ ಮುಂದುವರೆದಂತೆ ಜಾಗ್ರತಾ ಸ್ಥಿತಿಯು ಸಹಜವಾಗುತ್ತಾ ಹೋಗುತ್ತದೆ.
ಹಂತ-2 : ಉಸಿರಾಟವು ಕಿರಿದಾಗಿದ್ದಾಗ ನಾನು ಕಿರಿದಾಗಿ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಅರಿಯುತ್ತಿರುತ್ತಾರೆ.
ಅಂದರೆ ಇಲ್ಲಿ ಉಸಿರಾಟ ಸಾಮಾನ್ಯವಾಗಿ ಕಿರಿದಾಗಿರಬಹುದು ಅಥವಾ ಇಲ್ಲಿ ಉಸಿರಾಟಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿಲ್ಲ ಅಥವಾ ಉಸಿರಾಟದ ಗಾತ್ರ ಕಿರಿದಾಗಿರಬಹುದು. ಅಂದರೆ ಬಲವಂತವಾಗಿ ಉಸಿರಾಟವನ್ನು ದೀರ್ಘ ಅಥವಾ ಕಿರಿದಾಗಿ ಮಾಡಬಾರದು. ಈ ರೀತಿ ಕಿರಿದಾಗಿ ಉಸಿರಾಟವು ನಡೆಯುತ್ತಿರುವಾಗ ದೇಹವು ಅತ್ಯಂತ ಸಮತೋಲನವಾಗಿ, ಸ್ಥಿರವಾಗಿರುತ್ತದೆ ಮತ್ತು ಅಲುಗಾಡುವುದಿಲ್ಲ. ಉಸಿರಾಟವನ್ನು ಆಡುತ್ತಿದ್ದರೂ ಸಹ ಅದರ ಚಲನೆಯನ್ನು ಬೇರೆಯವರು ಗಮನಿಸಲು ಆಗುವುದಿಲ್ಲ. ಅಂದರೆ ಎದೆ ಅಥವಾ ಕಿಬ್ಬೊಟ್ಟೆಯಲ್ಲಿ ಚಲನೆ ಕಾಣದ ರೀತಿ ನಡೆಯುತ್ತಿರುತ್ತದೆ. ಅದು ಹೇಗೇ ನಡೆಯುತ್ತಿರಲಿ ಅದನ್ನು ಹಾಗೆಯೇ ಗಮನಿಸುತ್ತಿರಬೇಕು. ಈ ಸ್ಥಿತಿಯಲ್ಲಿ ಯೋಚನೆಗಳು ನಿಂತಿರುತ್ತದೆ. ಭೂತಕಾಲದಲ್ಲಿಯಾಗಲಿ ಅಥವಾ ಭವಿಷ್ಯತ್ತಿನಲ್ಲಿ ಆಗಲಿ ಮನಸ್ಸು ಚಲಿಸುವುದಿಲ್ಲ.
ಹಂತ-3 : ಇಡೀ (ಉಸಿರಿನ) ದೇಹವನ್ನು ಅನುಭವಿಸಿ ನಾನು ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಅಥವಾ ಬಿಡುತ್ತಿದ್ದೇನೆ ಎಂದು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ.
ಇಡೀ ಉಸಿರಿನ ಕಾಯವನ್ನು ಅನುಭವಿಸಿ ನಾನು ಉಸಿರಾಡುತ್ತಿದ್ದೇನೆ ಎಂಬ ಜಾಗರೂಕತೆ ಸ್ಥಾಪಿಸುತ್ತಾನೆ. ಆತನು ಅತ್ಯಂತ ಜಾಗೃತನು ವಿಶ್ಲೇಷಣೆಯಿಂದ ಕೂಡಿರುತ್ತಾನೆ. ಉಸಿರನ್ನು ಬಿಟ್ಟು ಬೇರೇನನ್ನು ಯೋಚಿಸಲಾರ, ಗ್ರಹಿಸಲಾರ, ಅರಿಯಲಾರ, ಅನುಭವಿಸಲಾರ. ಆತನು ಕೇವಲ ಉಸಿರಿನಲ್ಲೇ ಗಮನವಿಟ್ಟು ಉಸಿರಿನ ಆದಿ ಅಂತ್ಯ ಮತ್ತು ಮಧ್ಯದ ಪ್ರಕ್ರಿಯೆಯ ಎಲ್ಲವನ್ನು ಅರಿಯುತ್ತಾನೆ. ಉಸಿರು ಮೊದಲು ಮೂಗಿನ ತುದಿಯಲ್ಲಿ ಆರಂಭವಾಗುತ್ತದೆ ಮತ್ತು ನಾಭಿಯ ಬಳಿ ಅಂತಿಮವಾಗುತ್ತದೆ. ಮೂಗು ಮತ್ತು ನಾಭಿಯ ಮಧ್ಯದ ಭಾಗವೇ ಮಧ್ಯ (ಅಥವಾ ಹೃದಯ ಮತ್ತು ಪುಪ್ಪಸ). ಆತ ಮೂಗಿನ ತುದಿ ಮಾತ್ರವಲ್ಲ ಅಥವಾ ಎದೆಯ ಭಾಗ ಮಾತ್ರವಲ್ಲ ಅಥವಾ ನಾಬಿಯ ಭಾಗ ಮಾತ್ರವಲ್ಲ, ಆತ ಈ ಮೂರು ಅವಸ್ಥೆಯಲ್ಲೂ ಅಂದರೆ ಆರಂಭ, ಮಧ್ಯ ಮತ್ತು ಅಂತ್ಯದಲ್ಲಿಯೂ ಪೂರ್ಣವಾಗಿ ಪ್ರಕ್ರಿಯೆ ಅರಿಯುತ್ತಾನೆ. ಹೀಗೆ ಆತನು ಉಸಿರಿನ ಕಾಯವನ್ನು ಅನುಭವಿಸಿ ಉಸಿರಾಟದಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾನೆ. ಉದಾಹರಣೆಗೆ ತಾಯಿಯು ಮಗುವನ್ನು ತೊಟ್ಟಿಲಲ್ಲಿ ತೂಗಾಡಿಸುತ್ತಾ ಇರುವಾಗ ಬಹಳ ಜಾಗ್ರತೆಯಿಂದ ಇರುತ್ತಾಳೆ. ಮಗುವು ನಿದ್ರಿಸಿದರೂ ಮತ್ತೆ ಎಚ್ಚರಗೊಂಡಾಗ ಎಲ್ಲಿ ಎದ್ದು ಅಥವಾ ನಿಂತು ತೊಟ್ಟಿಲಿನಿಂದ ಬೀಳುವುದೋ ಎಂದು ಮಮತೆಯಿಂದ ಪೂರ್ಣ ಜಾಗ್ರತೆಯಿಂದ ಕೂಡಿ ಕಾಪಾಡುತ್ತಾಳೆ. ತನ್ನ ಗಮನವೆಲ್ಲಾ ಆ ಮಗುವಿನ ಮೇಲೆಯೇ ಇಟ್ಟಿರುತ್ತಾಳೆ. ಆ ಮಗುವಿನ ತೊಟ್ಟಿಲಿನ ಪ್ರತಿ ಅವಸ್ಥೆಯಲ್ಲಿ ಜಾಗ್ರತೆ ಸ್ಥಾಪಿಸಿರುತ್ತಾಳೆ. ಹಾಗೆಯೇ ನಾವು ಸಹ ಉಸಿರಾಟದ ಪ್ರತಿ ಸ್ಥಿತಿಯಲ್ಲೂ ಜಾಗ್ರತೆ ಸ್ಥಾಪಿಸಬೇಕಾಗಿದೆ. ಕಾಯವನ್ನು ಅನುಭವಿಸಿ ಅಂದರೆ ವಿಶಾಲ ಅರ್ಥದಲ್ಲಿ ಇಡೀ ಶರೀರದ ರೂಪಕಾಯದಲ್ಲಿ ಮತ್ತು ನಾಮಕಾಯ (ಮನಸ್ಸು)ದಲ್ಲಿ ಅನುಭವಿಸಿ ಉಸಿರಾಡುತ್ತಿದ್ದೇವೆ ಎಂದರ್ಥವಾಗುತ್ತದೆ. ಆದರೆ ಪರಿಣಿತರು ಕೇವಲ ಉಸಿರಿನ ಕಾಯ ಮಾತ್ರ ಎಂದು ಹೇಳುತ್ತಾರೆ.
4. ಆತನು ಹೀಗೆ ಸುಶಿಕ್ಷಣ ಪಡೆದು ಅರಿಯುತ್ತಿರುತ್ತಾನೆ. ಹೇಗೆಂದರೆ : ನಾನು ಕಾಯಸಂಖಾರ (ದೇಹದ ಚಟುವಟಿಕೆ)ಗಳನ್ನು ಶಾಂತಗೊಳಿಸುತ್ತ ಉಸಿರನ್ನು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಉಸಿರನ್ನು ಹೊರ ಬಿಡುತ್ತಿದ್ದೇನೆ.
ಇಲ್ಲಿ ಆತನು ದೇಹದ ಚಟುವಟಿಕೆಗಳನ್ನೆಲ್ಲಾ ಶಾಂತಗೊಳಿಸುತ್ತಾನೆ, ನಿಲ್ಲಿಸುತ್ತಾನೆ. ಸೂಕ್ಷ್ಮಗೊಳಿಸುತ್ತಾನೆ ಮತ್ತು ಪರಿಶುದ್ಧಿಗೊಳಿಸುತ್ತಾನೆ.
ಇಲ್ಲಿ ಶರೀರವು ಅಲ್ಲಾಡದೆ, ಬಾಗದೆ ಇರಬೇಕಾಗುತ್ತದೆ ಮತ್ತು ಯೋಚಿಸದೆ ಇರುವಾಗ ಶರೀರದಲ್ಲಿ ನಾನಾ ವಿಧವಾದ ಕಸಿವಿಸಿ, ಒತ್ತಡ, ಕಠಿಣತೆ, ಕ್ಷೊಭೆ, ನೋವು ನಿಲ್ಲುತ್ತದೆ. ಆತನ ದೃಢನಿಧರ್ಾರದಿಂದ ನೋವು ಎಲ್ಲವನ್ನು ಮೀರಿದ್ದರಿಂದ ಶರೀರವು ಶಾಂತವಾಗುತ್ತದೆ, ಪಳಗುತ್ತದೆ, ಮೆದುವಾಗುತ್ತದೆ ತುಂಬಾ ಸೂಕ್ಷ್ಮವಾಗುತ್ತದೆ. ಹೇಗೆಂದರೆ ಒಬ್ಬ ತಲೆಯ ಮೇಲೆ ಭಾರವನ್ನು ಎತ್ತಿಕೊಂಡು ಓಡುವುದು ಅಥವಾ ಬೆಟ್ಟ ಹತ್ತುವುದು ಮಾಡಿದಾಗ ಆತನ ಉಸಿರು ತಾರಕಕ್ಕೆ ಏರುತ್ತದೆ, ಅತಿಯಾಗುತ್ತದೆ. ಮೂಗಿನ ಹೊಳ್ಳೆಗೆ ಉಸಿರು ಜೋರಾಗಿ ಬೀಸುತ್ತದೆ. ದೇಹವೆಲ್ಲಾ ಕ್ಷೊಭೆಗೆ ಗುರಿಯಾಗಿ ದೇಹದಲ್ಲಿ ಅಶಾಂತತೆ ಮೂಡುತ್ತದೆ. ಆದರೆ ಅದೇ ವ್ಯಕ್ತಿ, ಭಾರವನ್ನು ಬಿಸಾಕಿ, ಓಡುವುದನ್ನು ನಿಲ್ಲಿಸಿ, ವಿಶ್ರಾಂತಿ ತೆಗೆದುಕೊಳ್ಳುತ್ತಾ ನಂತರ ಸ್ನಾನವನ್ನು ಮಾಡಿ, ತಂಪಾದ ನೆರಳಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾ ಉಸಿರಾಟವನ್ನು ಗಮನಿಸಿದಾಗ ಉಸಿರಾಟವು ತುಂಬಾ ಶಾಂತವಾಗಿ, ಸೂಕ್ಷ್ಮವಾಗಿ ಗೋಚರಿಸುತ್ತದೆ. ಉಸಿರೇ ಇಲ್ಲವೇನೋ ಎಂಬಂತೆ ಭಾಸವಾಗುತ್ತದೆ. ಇದೇರೀತಿಯ ಅನುಭವವು ಆತನಿಗೆ ಕಾಯದ ಸಂಖಾರಗಳನ್ನು ಸೂಕ್ಷ್ಮಗೊಳಿಸುವುದ ರಿಂದಾಗಿ ಉಂಟಾಗುತ್ತದೆ.
ಕಾಯದ ಸಂಖಾರಗಳನ್ನು ಶಾಂತಗೊಳಿಸುವುದು ಅಥವಾ ಸೂಕ್ಷ್ಮಗೊಳಿಸುವುದು ಹೇಗೆ? ಒಂದು ಸಮಾಧಿಯಿಂದ ಹೇಗೆಂದರೆ ಪಂಚನೀವರಣಗಳನ್ನು ಮೀರುವುದರಿಂದಾಗಿ ನಂತರ ಸಮಾಧಿಯ ಹಂತಗಳನ್ನು ದಾಟುತ್ತಿದ್ದಂತೆ ಹಿಂದಿನದಕ್ಕಿಂತ ಈಗಿನ ಸ್ಥಿತಿಯು ಶಾಂತವಾಗಿ, ಸೂಕ್ಷ್ಮವಾಗಿ ಕಾಣುವುದು. ಇದೇರೀತಿ ಪ್ರತಿಯೊಂದು ಹಂತದಲ್ಲೂ ಮೇಲೆ ಹೋಗುತ್ತಿದ್ದಂತೆ ಹಿಂದಿನ ಹಂತವು ಸ್ಥೂಲವಾಗಿ ಕಾಣುತ್ತದೆ. ಈಗಿನ ಹಂತವು ಶಾಂತವಾಗಿ ಸೂಕ್ಷ್ಮವಾಗಿ ಕಾಣುತ್ತದೆ.
ಮತ್ತೊಂದು ವಿಧಾನವೆಂದರೆ ವಿಪಶ್ಶನ ಧ್ಯಾನದಿಂದ ಅಂದರೆ ವಿಪಶ್ಶನ ಧ್ಯಾನದಲ್ಲಿ ಕಾಯ ಸಂಖಾರಗಳು (ಸಂಸ್ಕಾರ) ಸ್ಥೂಲವಾಗಿ ಕಾಣುತ್ತದೆ. ಧಾತುಗಳು ಸೂಕ್ಷ್ಮವಾಗಿ ಕಾಣುತ್ತದೆ. ಹಾಗೆಯೇ ಅರೂಪ ಸಮಾಧಿಗೆ ಹೋಲಿಸಿದರೆ ರೂಪ ಸಮಾಧಿಯು ಸ್ಥೂಲವಾಗಿರುತ್ತದೆ. ಅರೂಪ ಸಮಾಧಿಯು ಸೂಕ್ಷ್ಮವಾಗಿರುತ್ತದೆ. ಆದರೆ ನಾಮ ರೂಪಗಳನ್ನು ಅರಿಯುತ್ತಿರುವಾಗ ಅರೂಪವು ಸ್ಥೂಲವಾಗಿ ಕಂಡುಬರುತ್ತದೆ. ಹಾಗೆಯೇ ತ್ರಿಲಕ್ಷಣವನ್ನು ಅರಿಯುವಾಗ ನಾಮರೂಪದ ವಿಶ್ಲೇಷಣೆಯು ಸ್ಥೂಲವಾಗಿ ಕಂಡುಬರುತ್ತದೆ. ಇದೇರೀತಿ ಸಾಧನೆ ಮುಂದುವರೆಯುತ್ತಿರುತ್ತದೆ.
ಗಾಳಿಯ ಬಗ್ಗೆ, ಉಸಿರಾಟದ ಬಗ್ಗೆ ಜಾಗ್ರತೆಯು ಸ್ಥಾಪಿತವಾಗಿ, ನಿಮಿತ್ತಗಳಲ್ಲಿ ಕೌಶಲ್ಯಹೊಂದಿ ಮತ್ತು ಧ್ಯಾನಂಗಗಳಲ್ಲಿ ಕೌಶಲ್ಯ ಹೊಂದಿ, ಸಮಾಧಿಯಲ್ಲಿ ನೈಪುಣ್ಯತೆ ಪಡೆದು, ಹಂತ ಹಂತವು ಶುದ್ಧಿ ಹೊಂದುತ್ತಾನೆ. ಹಂತಹಂತವು ಸೂಕ್ಷ್ಮಕ್ಕೆ ಏರುತ್ತಾನೆ. ಹೇಗೆಂದರೆ ಗಂಟೆಯ ಶಬ್ದದಂತೆ, ಗಂಟೆಯ ಶಬ್ದವು ಹೊರಹೊಮ್ಮಿದಾಗ ಗಂಟೆಯ ಶಬ್ದ ಕೇಳಿಸುತ್ತದೆ. ನಂತರ ಗಾಳಿಯಲ್ಲಿ ಶಬ್ದದ ಕಂಪನಗಳು ಅಲೆಗಳಿಂದಲೂ ಸೂಕ್ಷ್ಮವಾಗಿ ಗಂಟೆ ನಿಂತ ನಂತರವೂ ಕೇಳಿಸುತ್ತಿರುತ್ತದೆ. ಇದೇರೀತಿ ಸೂಕ್ಷ್ಮವನ್ನು ಅವಲಂಬಿಸಿ ಮತ್ತಷ್ಟು ಅಭಿವೃದ್ಧಿ ಆಗುತ್ತಿರುತ್ತದೆ.
ಆಯ್ಕೆಗಳು :
ಇಲ್ಲಿ ಆತನು ಚತುರ್ಥ ಸಮಾಧಿ ಪ್ರಾಪ್ತಿ ಮಾಡಿ ವಿಪಶ್ಶನ ಧ್ಯಾನ ಮಾಡಬಹುದು ಅಥವಾ ಪ್ರಥಮ ಧ್ಯಾನದ ನಂತರವೇ ವಿಪಶ್ಶನವನ್ನು ಪ್ರಾರಂಭಿಸಬಹುದು. ಅಥವಾ ಅರೂಪ ಸಮಾಧಿಯ ನಂತರವೂ ಪ್ರಾರಂಭಿಸಬಹುದು. ವಿಪಶ್ಶನದ ಪ್ರಾರಂಭಕ್ಕೆ ಯಾವ ಸ್ಥಿತಿಯು ಅಡ್ಡಿಯಿಲ್ಲ. ಆದರೆ ಸಮಥ ಧ್ಯಾನ ಮಾತ್ರ ಪ್ರಾರಂಭದಿಂದಲೇ ಆರಂಭಿಸಬೇಕಾಗುತ್ತದೆ