ಮುಂಡಕ ಉಪನಿಷತ್ತಿನ ಈ ಶ್ಲೋಕವು ಜೀವಾತ್ಮ – ಪರಮಾತ್ಮರನ್ನು ಗೆಳೆಯರೆಂದು ಕರೆದಿದೆ!!
ದ್ವಾ ಸುಪರ್ಣಾ ಸಯುಜಾ ಸಖಾಯ ಸಮಾನಂ ವೃಕ್ಷಂ ಪರಿಷಸ್ವಜಾತೆ |
ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತ್ಯನಶ್ನನ್ನನ್ಯೋ ಅಭಿಚಾಕಶೀತಿ ||
ಸಮಾನೇ ವೃಕ್ಷೇ ಪುರುಷೋಂ ನಿಹಗ್ನೋsನಾಶಯಾ ಶೋಚತಿ ಮುಹ್ಯಮಾನಃ |
ಜುಷ್ಟಂ ಯದಾ ಪಶ್ಯತ್ಯನ್ಯಮೀಶಮಸ್ಯ ಮಹಿಮಾನಮಿತಿ ವೀತಶೋಕ ||
ಯದಾ ಪಶ್ಯಃ ಪಶ್ಯತೇ ರುಕ್ಮವರ್ಣಂ ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ |
ತದಾ ವಿದ್ವಾನ್ಪುಣ್ಯಪಾಪೇ ವಿಧೂಯ ನಿರಂಜನಃ ಪರಮಂ ಸಾಮ್ಯಮುಪೈತಿ ||
ಗೆಳೆಯರಾದ ಎರಡು ಹಕ್ಕಿಗಳು ಒಂದೇ ಮರದ (ಪಿಪ್ಪಲ ವೃಕ್ಷ) ಮೇಲೆ ಕುಳಿತಿವೆ. ಅವುಗಳಲ್ಲೊಂದು ಹಕ್ಕಿ ಹಣ್ಣುಗಳನ್ನು ತಿನ್ನುವುದರಲ್ಲಿ ಮುಳುಗಿಹೋಗಿದೆ. ಮತ್ತೊಂದು ಸುಮ್ಮನೆ ನೋಡುತ್ತಾ ಕುಳಿತಿದೆ. ಹಣ್ಣು ತಿನ್ನುವ ಹಕ್ಕಿ ತಿನ್ನುವ ಧಾವಂತದ ನಡುವೆಯೇ ಒಮ್ಮೆ ಕತ್ತೆತ್ತಿ ಗೆಳೆಯ ಹಕ್ಕಿಯನ್ನು ನೋಡುತ್ತದೆ. ಆಗ ಅದಕ್ಕೆ ತಾನು ಎಂತಹ ಹಣ್ಣುಗಳನ್ನು ತಿನ್ನುತ್ತಿದ್ದೇನೆ, ಸುಮ್ಮನೆ ಕುಳಿತ ಹಕ್ಕಿಯ ವಿಶೇಷತೆ ಏನಿದೆ ಎಂಬ ಸ್ಮರಣೆ ಉಂಟಾಗುತ್ತದೆ. ಈ ಸ್ಮರಣೆ ಅಥವಾ ಅರಿವಿನೊಂದಿಗೆ ಅದು ಹಣ್ಣು ತಿನ್ನುವುದನ್ನು ಬಿಟ್ಟು, ತಾನೂ ಗೆಳೆಯ ಹಕ್ಕಿಯಂತೆ ಸಾಕ್ಷೀಭಾವ ತಾಳುತ್ತದೆ.
ಮುಂಡಕ ಉಪನಿಷತ್ತಿನ ಈ ಸುಂದರ ಶ್ಲೋಕವು ಜೀವಾತ್ಮ ಮತ್ತು ಪರಮಾತ್ಮನ ನಡುವಿನ ಸಂಬಂಧವನ್ನು ಸೂಚಿಸುತ್ತದೆ. ಜೀವಾತ್ಮ – ಪರಮಾತ್ಮರನ್ನು ಅದು ಗೆಳೆಯರು ಎಂದು ಕರೆಯುತ್ತದೆ. ಇಲ್ಲಿ ಗೆಳೆಯ ಹಕ್ಕಿಗಳಲ್ಲಿ ಹಣ್ಣು ತಿನ್ನುತ್ತಿರುವ ಹಕ್ಕಿಯೇ ಜೀವಾತ್ಮ. ಸಾಕ್ಷಿಯಾಗಿ ಸುಮ್ಮನೆ ನೋಡುತ್ತಾ ಕುಳಿತಿರುವ ಹಕ್ಕಿಯೇ ಪರಮಾತ್ಮ. ಹಣ್ಣುಗಳೆಂದರೆ ಪಂಚೇಂದ್ರಿಯಗಳ ಮೂಲಕ ಅನುಭವಿಸುವ ಭೋಗಭಾಗ್ಯಗಳು. ಇಂದ್ರಿಯ ಭೋಗಗಳ ಮೋಹಕ್ಕೆ ಒಳಗಾದ ಜೀವಾತ್ಮನು ಅವನ್ನು ಸವಿಯುವಾಗ ಉದ್ವೇಗಗಕ್ಕೆ ಒಳಗಾಗಿ ಯಾತನೆ ಪಡುತ್ತಾನೆ. ಸವಿದಷ್ಟೂ ತೃಪ್ತಿಯಿರದ ಕಾರಣ ಜನನ ಮರಣದ ನಿರಂತರ ಚಕ್ರದಲ್ಲಿ ಸಿಲುಕಿಕೊಳ್ಳುತ್ತಾನೆ. ಮರದ ಮೇಲೆ ಕುಳಿತಿರುವ ತನಗೆ ಹಣ್ಣು ತಿನ್ನುವುದೊಂದೇ ಉದ್ದೇಶವೆಂದು ಭಾವಿಸುತ್ತಾನೆ.
ಆದರೆ ಯಾವಾಗ ಜೀವಾತ್ಮನು ಈ ಫಲವುಣ್ಣುವ ಧಾವಂತದಿಂದ ಹೊರಳಿ ಗೆಳೆಯನತ್ತ ನೋಡುತ್ತಾನೋ, ಆಗ ಅವನಿಗೆ ಪರಮಾತ್ಮನ ಮಹಿಮೆ ಅರಿವಾಗುತ್ತದೆ. ಅದರೊಂದಿಗೆ ತನ್ನ ವಾಸ್ತವದ ಸ್ಮರಣೆಯೂ ಉಂಟಾಗುತ್ತದೆ. ಆ ಕ್ಷಣದಲ್ಲಿ ಯಾತನೆ ಕಳೆದು, ತಾನೂ ಗೆಳೆಯನಂತೆ ಸಾಕ್ಷೀಭಾವದಿಂದ ಜಗತ್ತನ್ನು ಕಾಣಲು ಆರಂಭಿಸುತ್ತಾನೆ.