ಹೆಗೆಲ್ ಹೇಳಿದ್ದು…. ~ ಅರಳಿಮರ POSTER

“ದೇವರು ಒಬ್ಬನೆಂದರೆ ಒಬ್ಬನೇ. ಇಬ್ಬರೆಂದರೆ ಇಬ್ಬರು. ಮೂರು ಇದ್ದಾರೆಂದರೆ ಮೂರು. ಯಾರು ಎಷ್ಟು ಹೇಳುತ್ತಾರೋ ಅಷ್ಟು. ಇದು ಜಗತ್ತಿನ ಸ್ವಭಾವ” ಅನ್ನುತ್ತಾನೆ ಹತ್ತೊಂಭತ್ತನೇ ಶತಮಾನದಲ್ಲಿ ಆಗಿಹೋದ ಜರ್ಮನ್ ತತ್ತ್ವಜ್ಞಾನಿ ಜಾರ್ಜ್ ವಿಲ್ಹೆಮ್ ಫ್ರೆಡ್ರಿಕ್ ಹೆಗೆಲ್. 

hegel

ಕಂಡರಿಯದ ಸಂಗತಿಯ ಕುರಿತು ‘ಇದಮಿತ್ಥಂ’ – ಇದು ಹೀಗೇ ಎಂದು ಹೇಗೆ ಹೇಳುತ್ತೀರಿ? ನಿಮ್ಮ ಪಾಲಿಗೆ, ಅಥವಾ ನೀವು ನಂಬುವ ಗುರು/ ಸಾಧಕ/ಸಂತರ ಪಾಲಿಗೆ ಭಗವಂತ ಹೇಗೆ ಕಾಣುತ್ತಾನೋ ಅದೇ ಅಂತಿಮ ಸತ್ಯವೆಂದೇಕೆ ಭಾವಿಸುತ್ತೀರಿ?

ದೇವರು ಒಬ್ಬನೇ ಆಗಿ ಕಂಡರೆ ಹಾಗೆಯೇ ಆಗಲಿ. ದೇವರು ಒಬ್ಬನೇ. ಎರಡಾಗಿ ಕಂಡರೆ ಅದೂ ಇರಲಿ. ದೇವರು ಎರಡು. ಹತ್ತು, ಇಪ್ಪತ್ತು, ಮುಕ್ಕೋಟಿಯವರೆಗೂ… ಅದಕ್ಕಿಂತ ಹೆಚ್ಚಿಗೆಯೂ ದೇವರ ಸಂಖ್ಯೆ ಬೆಳೆಸುತ್ತಾ ಹೋಗಿ. ಯಾರಿಗೆ ನಷ್ಟ? ಒಬ್ಬ ನಂಬಿಕೆ ಒಂದು ಎಂದಿರಬಹುದು, ಮತ್ತೊಬ್ಬರ ನಂಬಿಕೆ ಮೂರು ಕೋಟಿ ಎಂದಿದ್ದರೆ (ಅಥವಾ vise versa) ಯಾರಿಗೆ ಸಮಸ್ಯೆ? ಏಕೆ ಒಬ್ಬರ ನಂಬಿಕೆಯನ್ನೇ ಇನ್ನೊಬ್ಬರೂ ಅನುಮೋದಿಸಬೇಕೆಂದು ಬಯಸಬೇಕು? ಒಬ್ಬರ ಅಭಿಪ್ರಾಯವನ್ನು ಮತ್ತೊಬ್ಬರ ಮೇಲೆ ಹೇರಬೇಕು?

ಹೆಗೆಲ್ ಹೇಳುತ್ತಾನೆ, “ಯಾರು ಎಷ್ಟು ಹೇಳುತ್ತಾರೋ ಅಷ್ಟು ದೇವರುಗಳು ಇದ್ದಾರೆ” ಎಂದು. ಎಲ್ಲಿಯವರೆಗೆ ಇಂದ್ರಿಯಾತೀತ ಸಂಗತಿಗಳು ವೈಯಕ್ತಿಕ ನಂಬುಗೆಯಾಗಿರುತ್ತವೆಯೋ ಅಲ್ಲಿಯವರೆಗೆ ಅವುಗಳಿಂದೇನೂ ತೊಂದರೆ ಇರದು. ಎಲ್ಲಿಯವರೆಗೆ ಅವು ಸಮಾಜಸ್ನೇಹಿಯೋ ಅಲ್ಲಿಯವರೆಗೆ ಆ ಬಗ್ಗೆ ಯೋಚಿಸಲೇಬೇಕಿಲ್ಲ. ದೇವ – ಧಾರ್ಮಿಕ ನಂಬಿಕೆಗಳನ್ನು ಮತ್ತೊಬ್ಬರ ಮೇಲೆ ದಬ್ಬಾಳಿಕೆಯಿಂದ ಹೇರಲು ಹೊರಟಾಗಷ್ಟೆ, ಅದರಿಂದ ಹಿಂಸೆ, ದ್ವೇಷಗಳನ್ನು ಬಿತ್ತಲಾರಂಭಿಸಿದರೆ ಮಾತ್ರ ಅವೆಲ್ಲ ಚರ್ಚೆಯ ವಿಷಯಗಳಾಗುತ್ತವೆ ಹೊರತು; ರಾಮಕೃಷ್ಣರು ಕೂಡಾ ಹೇಳಿರುವ ಹಾಗೆ “ಜತೋ ಮತ್ ತಥೋ ಪಥ್” – ಎಷ್ಟು ಅಭಿಪ್ರಾಯಗಳೋ ಅಷ್ಟು ಮಾರ್ಗಗಳು. ಹೆಗೆಲ್ ಕೂಡಾ ಹೇಳಿರುವಂತೆ “ಯಾರೆಷ್ಟು ಹೇಳುವರೋ ಅಷ್ಟು ದೇವರುಗಳು”!

Leave a Reply