‘ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/08/12/gibran9/
ನೇಕಾರನೊಬ್ಬನ
ಬಟ್ಟೆಗಳ ಬಗೆಗಿನ ಸಂದೇಹಗಳಿಗೆ
ಅವನು ಉತ್ತರ ಕೊಡತೊಡಗಿದ.
ನಿಮ್ಮ ಬಟ್ಟೆ
ನಿಮ್ಮ ಬಹುತೇಕ ಚೆಲುವಿಗೆ
ಪರದೆ ಹಾಕಬಲ್ಲದಾದರೂ
ಕುರೂಪವನ್ನು ಮುಚ್ಚಿಡುವುದಿಲ್ಲ.
ಬಟ್ಟೆಗಳಲ್ಲಿ ನಿಮ್ಮತನ ವಿಜೃಂಭಿಸಬೇಕೆಂದು
ನೀವು ಬಯಸುತ್ತಿರಾದರೂ
ಅಲ್ಲಿ ನಿಮ್ಮನ್ನು ಕಟ್ಟಿಹಾಕಲಾಗಿದೆ,
ಸೂರ್ಯನಿಗೆ ಮತ್ತು ಗಾಳಿಗೆ
ಆದಷ್ಟು ಹೆಚ್ಚು ನಿಮ್ಮ ಮೈಯನ್ನು ಪರಿಚಯಿಸಿ.
ಬದುಕಿನ ಉಸಿರು ಇರುವುದೇ
ಸೂರ್ಯನ ಬಿಸಿಲಲ್ಲಿ
ಬದುಕು ಮುಂದೇ ಸಾಗುವುದೇ
ಗಾಳಿ, ಕೈ ಹಿಡಿದು ನಡೆಸಿದಾಗ.
ನಿಮ್ಮಲ್ಲಿ ಕೆಲವರ ಪ್ರಕಾರ
ಉತ್ತರದ ಗಾಳಿಯೇ ನಮ್ಮ ಬಟ್ಟೆ ನೇಯ್ದದ್ದು.
ಹೌದು, ಉತ್ತರದ ಗಾಳಿಯೇ.
ಲಜ್ಜೆ ಎಂಬ ಮಗ್ಗದಲ್ಲಿ
ಕೋಮಲ ಸ್ನಾಯುಗಳನ್ನೇ ನೂಲು ಮಾಡಿ.
ಕೆಲಸ ಮುಗಿದದ್ದೇ ತಡ
ಈ ತಮಾಷೆಯ ನೆನೆದು ಉತ್ತರದ ಗಾಳಿ
ಕಾಡಿಗೆ ಹೋಗಿ ನಕ್ಕು ಬಿಟ್ಟಿತು.
ನೆನಪಿನಲ್ಲಿರಲಿ
ಸಂಕೋಚ, ನಾಚಿಗೆ
ಕೆಟ್ಟ ಕಣ್ಣುಗಳಿಂದ ನಮ್ಮನ್ನು ರಕ್ಷಿಸುವ
ಗುರಾಣಿಗಳು ಅಷ್ಟೇ.
ಕೆಟ್ಟ ಕಣ್ಣುಗಳೇ ಇಲ್ಲದಾಗ
ಸಂಕೋಚ, ನಾಚಿಕೆ
ಮನಸ್ಸಿನ ಕಟ್ಟು ಪಾಡು ಮಾತ್ರ
ಬಲಹೀನತೆ ಮಾತ್ರ.
ಮರೆಯಬೇಡಿ
ನೆಲಕ್ಕೆ, ನಿಮ್ಮ ಬೆತ್ತಲೆ ಕಾಲುಗಳಿಂದ ತುಳಿಸಿಕೊಂಡು
ಪುಳಕಗೊಳ್ಳುವ ತವಕ,
ಗಾಳಿಗೆ ನಿಮ್ಮ ಮುಂಗುರುಳಿನ ಜೊತೆ
ಚೆಲ್ಲಾಟವಾಡುವ ಬಯಕೆ.
ಮುಂದುವರೆಯುತ್ತದೆ……….
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.
One thought on “ಬಟ್ಟೆ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 10”