“ಸತ್ಯಕ್ಕೆ ದಾರಿಗಳಿಲ್ಲ. ಯಾವ ಪೂರ್ವನಿಶ್ಚಿತ ದಾರಿಯಿಂದಲೂ ಸತ್ಯದ ನೆಲೆ ತಲುಪಲು ಸಾಧ್ಯವಿಲ್ಲ. ಗುಡಿ, ಮಂದಿರಗಳಿಗೆ ಹೋಗುವುದು, ಗ್ರಂಥಗಳ ಶುಷ್ಕ ಪಠಣ, ಸಂಪ್ರದಾಯಗಳ ಅಂಧಾನುಕರಣೆ – ಈ ಯಾವುದೂ ಧಾರ್ಮಿಕತೆಯ ಲಕ್ಷಣಗಳಲ್ಲ. ದುಷ್ಟ ಆಲೋಚನೆಗಳಿಲ್ಲದ, ಪ್ರೇಮಪೂರ್ಣ ಮನಸ್ಸನ್ನು ಹೊಂದಿರುವುದೇ ನಿಜವಾದ ಧಾರ್ಮಿಕತೆ” ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ.
ಯಾರೋ ಹೇಳಿದ ದಾರಿಯಲ್ಲಿ ನಡೆದು ನಾವು ಧರ್ಮವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಧರ್ಮ ಸ್ವಯಂಧಾರಣೆ. ನಾವು ಏನನ್ನು ಧರಿಸುತ್ತೇವೋ ಅದು ಧರ್ಮ. ಇನ್ಯಾರೋ ಕಂಡುಕೊಂಡ ದಾರಿ ಅವರ ಧರ್ಮ, ಅವರ ಧಾರಣೆ. ಮೌಢ್ಯತೆಯನ್ನು. ಕುರುಡು ಅನುಕರಣೆಯನ್ನು, ಸಂಪ್ರದಾಯಗಳ ಆಚರಣೆಯನ್ನು ಮಾಡಿದ ಮಾತ್ರಕ್ಕೆ ಯಾರೂ ಧಾರ್ಮಿಕರಾಗುವುದಿಲ್ಲ. ನಿಷ್ಕಲ್ಮಶ ಮತ್ತು ಪ್ರೇಮಪೂರ್ಣ ಮನಸ್ಸನ್ನು ಧರಿಸಿದ್ದರೆ, ಅದೇ ಪರಿಪೂರ್ಣ ಧರ್ಮ – ಅನ್ನುವುದು ಜಿಡ್ಡು ಕೃಷ್ಣಮೂರ್ತಿಯವರ ಹೇಳಿಕೆಯ ವಿಸ್ತೃತಾರ್ಥ.