ಪರಸ್ಪರರನ್ನು ಕಂಡಾಗ ಉಂಟಾಗುವ ಆನಂದಾನುಭೂತಿ, ಸಹಜವಾಗಿ ಕೂಡುವುದರಿಂದ ಅನುಭವಿಸುವ ಪರಮಾನಂದ, ಶಾಂತಿ – ಸಮಾಧಾನಗಳೇ ಪ್ರೀತಿ. ನಿಜವಾದ ಪ್ರೀತಿ ಕಾಮವಿಕಾರವಲ್ಲ. ಅದು ಭಾವನಾತ್ಮಕವೂ ಅಲ್ಲ. ಪ್ರೀತಿ ನಿಮ್ಮ ಪರಿಪೂರ್ಣ ಅಂತರಂಗವನ್ನು ಪ್ರವೇಶಿಸಿ ನಿಮ್ಮನ್ನು ಪೂರ್ಣಗೊಳಿಸುವ ಉಪಸ್ಥಿತಿ. ಒಬ್ಬರ ಇರುವಿಕೆ, ನಿಮ್ಮನ್ನು ಪರಿಪೂರ್ಣ ವ್ಯಕ್ತಿಯಾಗಿಸುವ ಪ್ರಕ್ರಿಯೆ ~ ಓಶೋ ರಜನೀಶ್
ಪ್ರಬುದ್ಧ ದಾಂಪತ್ಯವೆಂದರೆ ಗಂಡನು ಹೆಂಡತಿಯೊಡನೆ ಸದಾ ಕಾವ್ಯಮಯವಾಗಿರುವುದು ಎಂದಲ್ಲ. ಜೀವನವನ್ನು ಯಥಾವತ್ತಾಗಿ ಅರಿಯುವುದು, ಜವಾಬ್ದಾರಿಗಳನ್ನು ಅರ್ಥ ಮಾಡಿಕೊಂಡು, ನಿಭಾಯಿಸುತ್ತಾ ಜೀವನ ಸಾಗಿಸುವುದು. ಗಂಡ – ಹೆಂಡತಿ ಪರಸ್ಪರ ಜೀವನವನ್ನು ಹಂಚಿಕೊಳ್ಳುವಾಗ, ಅಲ್ಲಿ ಉದ್ಧವವಾಗುವ ಸಮಸ್ಯೆಗಳನ್ನು ಸ್ವೀಕರಿಸಿ ನಿವಾರಿಸುವುದು. ನೆನಪಿಡಿ, ಸಮಸ್ಯೆಗಳಿಗೆ ಬೆನ್ನು ಹಾಕಿ ಓಡುವುದಲ್ಲ… ಮದುವೆ ಅಂದರೆ ಅಲ್ಲಿ ಸಮಸ್ಯೆಗಳಿದ್ದೇ ಇರುತ್ತವೆ. ಅದು ಕೇವಲ ಹೂವಿನ ತೋಟವೂ ಅಲ್ಲ, ಕೇವಲ ಮುಳ್ಳಿನ ದಾರಿಯೂ ಅಲ್ಲ. ಅದು ಹೂವು – ಮುಳ್ಳುಗಳಿಂದ ತುಂಬಿದ ಗುಲಾಬಿ ತೋಟ.
ಕೆಲವರು ಪ್ರೀತಿಸಿ ಮದುವೆಯಾಗುತ್ತಾರೆ. ಮದುವೆಯಾದ ನಂತರ ಪರಸ್ಪರ ಅಸಹನೆ, ಅನುಮಾನ ಬೆಳೆಸಿಕೊಳ್ಳತೊಡಗುತ್ತಾರೆ. ಕೆಲವು ಅತಿರೇಕಗಳಲ್ಲಿ ಅದು ದ್ವೇಷದ ಹಂತವನ್ನೂ ಮೀರಿ ವಿಚ್ಛೇದನದೊಂದಿಗೆ ಕೊನೆಯಾಗುತ್ತದೆ. ಪ್ರೀತಿಸಿ ಮದುವೆಯಾದವರು, ಮದುವೆಯಾಗಲೆಂದೇ ಪ್ರೀತಿಸಿದವರು ಹೀಗೇಕೆ ಮಾಡುತ್ತಾರೆ? ಹೀಗೇನಾದರೂ ಆದರೆ, ಅವರದ್ದು ಪರಸ್ಪರ ಪ್ರೀತಿಯಾಗಿರಲಿಲ್ಲ; ಅದು ಕೇವಲ ಆಕರ್ಷಣೆಯಾಗಿತ್ತು ಎಂದು ಅರ್ಥಮಾಡಿಕೊಳ್ಳಬೇಕು. ಅದರಲ್ಲೂ ದೈಹಿಕ ಆಕರ್ಷಣೆಯಾಗಿತ್ತು ಎಂದು.
ದೈಹಿಕ ಆಕರ್ಷಣೆ ದೇಹಗಳ ಮಿಲದೊಂದಿಗೆ ಕೊನೆಗೊಳ್ಳುತ್ತದೆ. ಅಲ್ಲಿ ತೃಪ್ತಿ ಸಿಗದೆಹೋದರೆ, ಭ್ರಮನಿರಸನವಾದರೆ ಅಥವಾ ಅದಕ್ಕೆ ಅಂಟಿಕೊಂಡು ಪೊಸೆಸ್ಸಿವ್’ನೆಸ್ ಬೆಳೆದರೆ, ಆಗ ದಾಂಪತ್ಯದಲ್ಲಿ ವಿರಸ ಮೂಡುತ್ತದೆ.
ಏಕೆಂದರೆ, ನಿಜವಾದ ಪ್ರೀತಿಯನ್ನು ಯಾರೂ ಅಳಿಸಲಾರರು. ಆದರೆ, ನಿಮ್ಮಲ್ಲಿ ಇರುವುದು ನಿಜವಾದ ಪ್ರೀತಿಯೇ ಅಲ್ಲ. ಆದರೂ ನಿಮ್ಮನ್ನು ಪ್ರೇಮಿಗಳೆಂದು ಕರೆದುಕೊಳ್ಳುತ್ತೀರಿ. ನಿಮ್ಮ ನಡುವೆ ಇರುವುದು ಲೈಂಗಿಕ ತೃಷೆ ಅಥವಾ ಆಕರ್ಷಣೆ. ಅದನ್ನು ಅರ್ಥ ಮಾಡಿಕೊಳ್ಳಿ. ನೀವು ನಿಜವಾದ ಪ್ರೇಮಿಯಾಗಲು ಬಯಸಿದರೆ, ಪ್ರೀತಿಸಲು ಬಯಸಿದರೆ, ಪ್ರೇಮಿಯ ಮೇಲೆ ಒಡೆತನವನ್ನು ಬಿಟ್ಟುಕೊಡಿ. ಯಾವ ಅಪೇಕ್ಷೆಯೂ ಇಲ್ಲದೆ ಪ್ರೇಮವನ್ನು ವ್ಯಕ್ತಪಡಿಸಲು ಯತ್ನಿಸಿ.
ಪ್ರೀತಿಯನ್ನು ತಪ್ಪಾಗಿ ಅರ್ಥೈಸಬೇಡಿ. ನಿಜವಾದ ಪ್ರೀತಿ ಇದ್ದವರು “ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳುವ ಅಗತ್ಯವೇ ಬರುವುದಿಲ್ಲ. ಪರಸ್ಪರರನ್ನು ಕಂಡಾಗ ಉಂಟಾಗುವ ಆನಂದಾನುಭೂತಿ, ಸಹಜವಾಗಿ ಕೂಡುವುದರಿಂದ ಅನುಭವಿಸುವ ಪರಮಾನಂದ, ಶಾಂತಿ – ಸಮಾಧಾನಗಳೇ ಪ್ರೀತಿ. ನಿಜವಾದ ಪ್ರೀತಿ ಕಾಮವಿಕಾರವಲ್ಲ. ಅದು ಭಾವನಾತ್ಮಕವೂ ಅಲ್ಲ. ಪ್ರೀತಿ ನಿಮ್ಮ ಪರಿಪೂರ್ಣ ಅಂತರಂಗವನ್ನು ಪ್ರವೇಶಿಸಿ ನಿಮ್ಮನ್ನು ಪೂರ್ಣಗೊಳಿಸುವ ಉಪಸ್ಥಿತಿ. ಒಬ್ಬರ ಇರುವಿಕೆ, ನಿಮ್ಮನ್ನು ಪರಿಪೂರ್ಣ ವ್ಯಕ್ತಿಯಾಗಿಸುವ ಪ್ರಕ್ರಿಯೆ. ಇನ್ನೊಬ್ಬರ ಇರುವಿಕೆ ನಿಮ್ಮ ಇರುವಿಕೆಯನ್ನು ವಿಕಾಸಗೊಳಿಸುತ್ತ ಹೋಗುತ್ತದೆ. ನಿಮ್ಮನ್ನು ಅದು ಸಂಪೂರ್ಣವಾಗಿ ಮುಕ್ತರನ್ನಾಗಿಸುತ್ತದೆ, ಸ್ವತಂತ್ರವಾಗಿಸುತ್ತದೆ; ಅದು ಒತ್ತಾಯದ ಹೇರಿಕೆಯಲ್ಲ, ಮತ್ತೊಬ್ಬರ ಮೇಲೆ ಒಡೆತನ ಸಾಧಿಸುವುದಲ್ಲ.
ಪ್ರೀತಿ ನಿಮ್ಮಲ್ಲಿ ಕ್ಷಣ ಮಾತ್ರಕ್ಕೂ ಕಹಿಯನ್ನು ಹುಟ್ಟಿಸದು. ಅದು ಸದಾ ಮಧುರ ಅನುಭವವನ್ನೇ ನೀಡುವುದು. ಈ ಅನುಭವದಲ್ಲಿ ನಿಮ್ಮ ಕಷ್ಟಕಾರ್ಪಣ್ಯಗಲೆಲ್ಲವೂ ನಿಮಗೇ ಅರಿವಿಲ್ಲದಂತೆ ನಿಮ್ಮನ್ನು ದಾಟಿ ಹೋಗಿಬಿಡುವವು. ಅತ್ಯುನ್ನತ ಪ್ರೇಮದಲ್ಲಿ ನಿಮ್ಮನ್ನು ಯಾರೂ, ಯಾವುದೂ ಕಾಡಲಾರವು.
ಜೀವನದ ಅನಿವಾರ್ಯ ಸಂಕಷ್ಟಗಳನ್ನು, ಒತ್ತಡಗಳನ್ನು ಎದುರಿಸುವ ಮನಸ್ಸು ಈ ಪ್ರೀತಿಯಿಂದ ಸಾಕಷ್ಟು ಸದೃಢವಾಗುತ್ತದೆ. ಹಾಗಾಗಿ ನಿಮ್ಮಲ್ಲಿ ನಿರಂತರವಾಗಿ ಸುಂದರವಾದ ಹೂವುಗಳು ಅರಳಿದಂತೆ, ಸುಮಧುರ ಭಾವನೆಗಳು ಅರಳುತ್ತವೆ. ಅಲ್ಲಿ ಯಾವ ದ್ವೇಷ, ಅಸೂಯೆ, ಸ್ವಾಮ್ಯಗಳಿಗೆ ಅವಕಾಶವಿಲ್ಲ. ಅಲ್ಲಿ ಇರುವುದೆಲ್ಲಾ ಸಹಾನುಭೂತಿ ಮತ್ತು ಕೇವಲ ಪ್ರೀತಿ… ಪ್ರೀತಿ…. ಮತ್ತು, ಪ್ರೀತಿ.
ಪ್ರೀತಿಯೆಂಬುದು ಶಾಶ್ವತ ಆನಂದದ ಸ್ಥಿತಿ. ಅದು ನಿರಂತರ ವಿಕಾಸವಾಗುತ್ತ ಹೋಗುತ್ತದೆ. ಪ್ರೀತಿಗೆ ಆರಂಭ ಮಾತ್ರ ಗೊತ್ತು; ಅಂತ್ಯವಿಲ್ಲ.