ಓದುಗರ ಮೂರು ಪ್ರಶ್ನೆಗಳಿಗೆ ಉತ್ತರ : ಅರಳಿಮರ ಸಂವಾದ

ಅರಳಿಮರ ಫೇಸ್’ಬುಕ್ ಮತ್ತು ವಾಟ್ಸಪ್’ಗಳಲ್ಲಿ ಕೇಳಲಾಗಿದ್ದೆ ಪ್ರಶ್ನೆಗಳಿಗೆ ಉತ್ತರಿಸುವುದು ಕಾರಣಾಂತರಗಳಿಂದ ತಡವಾಗಿದೆ. ಮುಂದಿನ ದಿನಗಳಲ್ಲಿ ಶೀಘ್ರದಲ್ಲೇ ಸ್ಪಂದಿಸಲು ಪ್ರಯತ್ನಿಸುತ್ತೇವೆ. ಓದುಗರ ಪ್ರಶ್ನೆಗಳಲ್ಲಿ ಮೂರನ್ನು ಆಯ್ದು ಅರಳಿಬಳಗದ ಚಿತ್ಕಲಾ ಉತ್ತರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ಪ್ರಶ್ನೆಗಳಿಗೂ ಉತ್ತರಿಸಲಾಗುವುದು. 

ನಾಗರತ್ನ ಕೊಂಡ್ಲಿ ಅವರ ಪ್ರಶ್ನೆ :
ನಾನು ಪ್ರಾಮಾಣಿಕವಾಗಿ ನಮ್ಮ ಊರಿನ ಜನರಿಗೆ ಸಹಾಯ ಮಾಡಲು ನೋಡುತ್ತಿದ್ದೇನೆ. ನನಗೆ ಕೆಲವು ವ್ಯಕ್ತಿಗಳು ಹಾಗೂ ದುಷ್ಟ ಶಕ್ತಿಗಳು ತೊಂದರೆ ಕೊಡುತ್ತಿದ್ದಾರೆ. ಹೇಗೆ ಮಾಡುವುದು? ಏನು ಮಾಡುವುದು ನಾನಂತೂ ಯಾರಿಗೂ ಭಯ ಪಡುವುದಿಲ್ಲ…
ಚಿತ್ಕಲಾ :  ನಿಮ್ಮ ಊರಿನ ಪರಿಸರ, ತೊಂದರೆ ಕೊಡುತ್ತಿರುವ ವ್ಯಕ್ತಿಗಳ ವಿವರ ಇತ್ಯಾದಿ ತಿಳಿಯದೆ ಇದಕ್ಕೆ ಉತ್ತರಿಸಲು ಆಗುವುದಿಲ್ಲ. ಮುಖ್ಯವಾಗಿ; ನೀವು ಸಹಾಯ ಮಾಡುತ್ತಿರುವ ರೀತಿ ಸಾಂವಿಧಾನಿಕವಾಗಿದ್ದರೆ, ನಿಮಗೆ ತೊಂದರೆ ಕೊಡುತ್ತಿರುವವರು ನಿಮ್ಮ ಮೂಲಭೂತ ಹಕ್ಕುಗಳಿಗೆ ಚ್ಯುತಿ ತರುತ್ತಿದ್ದರೆ, ದಯವಿಟ್ಟು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಮುಂದಾಗಿ. ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. 
ಅನ್ಯಾಯ ಮಾಡುವುದು ಎಷ್ಟು ತಪ್ಪೋ ಅದನ್ನು ಸಹಿಸುವುದು ಕೂಡಾ ಅಷ್ಟೇ ದೊಡ್ಡ ತಪ್ಪಾಗುತ್ತದೆ. ನ್ಯಾಯಪಾಲನೆಗೆ ಕಾನೂನಿನ ಸದ್ಬಳಕೆ ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ಧರ್ಮವಿಲ್ಲ. ಆ ಧರ್ಮವನ್ನು ಸರಿಯಾಗಿ ಪಾಲಿಸದೆ ನೀವು “ಮತ್ತೊಬ್ಬರಿಗೆ ಸಹಾಯ ಮಾಡುವ” ನಿಮ್ಮ ಸಚ್ಚಿಂತನೆಯನ್ನು ಕಾರ್ಯರೂಪಕ್ಕೆ ತರಲಾಗುವುದಿಲ್ಲ.
ದಯವಿಟ್ಟು ಈ ನಿಟ್ಟಿನಲ್ಲಿ ಮುಂದುವರಿಯಿರಿ.

ಜಯಪ್ರಕಾಶ್ ಜೆ.ಪಿ ಅವರ ಪ್ರಶ್ನೆ:
ಒಬ್ಬ ಮನುಷ್ಯ ಸಕಾರಾತ್ಮಕ ಚಿಂತನೆಗಳು ಮಾಡುವುದು ಹೇಗೆ ಸಕಾರಾತ್ಮಕ ಚಿಂತನೆ ಎಂದರೇನು ಮತ್ತು ಅವುಗಳನ್ನು ಹೇಗೆ ತೊಡಗಿಸಿಕೊಳ್ಳುವುದು?
ಚಿತ್ಕಲಾ : ಇದು ಬಹಳ ಸರಳ. ಯಾವ ಚಿಂತನೆಗಳು ಮತ್ತೊಬ್ಬರಿಗೆ ಕೆಡುಕು ಉಂಟು ಮಾಡುವುದಿಲ್ಲವೋ ಅವು ಸಕಾರಾತ್ಮಕ ಚಿಂತನೆಗಳು. ಕೇಡಿಲ್ಲದ ಚಿಂತನೆ, ಕೇಡು ತಾರದ ಕೆಲಸಗಳಲ್ಲಿ ತೊಡಗಿಕೊಳ್ಳುವುದೇ ಸಕಾರಾತ್ಮಕ ಬದುಕು. ನೀವು ಇದರಲ್ಲಿ ಪ್ರಜ್ಞಾಪೂರ್ವಕವಾಗಿ ತೊಡಗಿಕೊಳ್ಳಬೇಕು ಎಂದಿದ್ದರೆ, ಪ್ರತಿದಿನ ಮುಂಜಾನೆ ಎದ್ದು ಸಂಕಲ್ಪ ಮಾಡಿಕೊಳ್ಳಿ : “ಇಂದು ಯಾರನ್ನೂ ನೋಯಿಸುವುದಿಲ್ಲ. ನಿರಾಶಾಭಾವ ತಾಳುವುದಿಲ್ಲ. ಕೆಲಸಗಳನ್ನು ನಡುವಿನಲ್ಲಿ ಕೈಬಿಡುವುದಿಲ್ಲ. ಗೊಣಗಾಡುವುದಿಲ್ಲ. ಸರಿ ಅನ್ನಿಸುವ – ನಿಜವಾಗಿಯೂ ಸರಿಯಾದ ಮೌಲ್ಯವನ್ನು ಹೊಂದಿರುವ ಕೆಲಸಗಳನ್ನು ಮಾಡುತ್ತೇನೆ. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಧರ್ಮದ ಹೆಸರಿನಲ್ಲಿ ದುರ್’ವ್ಯವಹಾರ ಮಾಡುವುದಿಲ್ಲ” ಎಂದು.
ರಾತ್ರಿ ಊಟವಾದ ಎರಡು ಗಂಟೆ ಕಾಲದ ನಂತರ, ಮಲಗುವ ಮುನ್ನ, ಹಾಸಿಗೆಯ ಮೇಲೆ ಕುಳಿತು ನಿಮ್ಮ ಸಂಕಲ್ಪಕ್ಕೂ ನಿಮ್ಮ ಆ ದಿನದ ನಡತೆಗೂ ತಾಳೆಯಾಗುತ್ತದೆಯೇ ನೋಡಿ. ನೀವು ತಪ್ಪಿ ನಡೆದಿದ್ದರೆ ಅದನ್ನು ಸರಿಪಡಿಸಿಕೊಳ್ಳುವ ಸಂಕಲ್ಪದೊಂದಿಗೆ ನಿದ್ರೆ ಮಾಡಿ.
ಮರುದಿನವೂ ಇದನ್ನೇ ಪುನರಾವರ್ತನೆ ಮಾಡಿ. ಯಾವುದೇ ಸಂಗತಿಯನ್ನು ಸತತವಾಗಿ ಮಾಡಿದರೆ ನಮಗೆ ಅಭ್ಯಾಸವಾಗುತ್ತದೆ. ಹೀಗೆ ಸಕಾರಾತ್ಮಕ ಬದುಕು ಕ್ರಮೇಣ ಸಿದ್ಧಿಸುತ್ತದೆ.

ರೋಹಿತ್ ಸುಭಾಷ್ ಅವಟಿಯವರ ಪ್ರಶ್ನೆ:
ಅಚಲವಾದ ಏಕಾಗ್ರತೆಯನ್ನು ಸಾಧಿಸುವುದು ಹೇಗೆ?
ಚಿತ್ಕಲಾ :  ಚುಟುಕು ಉತ್ತರ – ಸತತ ಅಭ್ಯಾಸದಿಂದ.
ವಿವರಿಸಿ ಹೇಳುವುದಾದರೆ, ಧ್ಯಾನದ ಮೂಲಕ, ನೀವು ಇದನ್ನು ಸಾಧಿಸಬಹುದು. ಧ್ಯಾನಕ್ಕೆ ಕುಳಿತಾಗ ಮನಸಿನಲ್ಲಿ ಮೂಡುವ ಆಲೋಚನಾ ತರಂಗಗಳನ್ನು ಶಾಂತಗೊಳಿಸುವ ಪ್ರಯತ್ನ ಸತತವಾಗಿ ನಡೆಯುತ್ತದೆ. ಕೊನೆಗೊಮ್ಮೆ ಆಲೋಚನಾ ತರಂಗಗಳು ಶಾಂತವಾದಾಗ ಧ್ಯಾನ ಘಟಿಸುತ್ತದೆ. ಏಕಾಗ್ರತೆಗೆ ಈ ಆಲೋಚನಾತರಂಗಗಳೇ ಅಡ್ಡಿ. ಧ್ಯಾನ ಪ್ರಕ್ರಿಯೆಯ ಮೂಲಕ ಈ ತರಂಗಗಳ ಮೇಲೆ ನಿಯಂತ್ರಣ ಸಾಧ್ಇಸಲು ಕಲಿತರೆ, ನೀವು ಏಕಾಗ್ರತೆ ಸಾಧಿಸುವುದು ಸುಲಭ.
ಇನ್ನು, ಏಕಾಗ್ರತೆ ಅಂದರೇನೇ “ಅಚಲವಾದದ್ದು”. “ಅಚಲ ಏಕಾಗ್ರತೆ” ಎಂಬ ಪ್ರತ್ಯೇಕವಾದ ಪರಿಕಲ್ಪನೆಯೇನಿಲ್ಲ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.