‘ಅರಳಿಮರ’, ಆರಂಭದ ದಿನಗಳಲ್ಲಿಯೇ ಆಧ್ಯಾತ್ಮಿಕ ನಾಸ್ತಿಕತೆಯ ಚರ್ಚೆಯನ್ನು ಆರಂಭಿಸಿತ್ತು. ಈ ಏಳು ತಿಂಗಳಲ್ಲಿ ಮತ್ತೆ ಮತ್ತೆ ಈ ಸಂಗತಿ ಹಲವು ಪ್ರಶ್ನೆಗಳಾಗಿ ಕೇಳಲ್ಪಡುತ್ತಿದೆ. ಆದ್ದರಿಂದ, ಮತ್ತೊಮ್ಮೆ ಚರ್ಚೆಗೆ ಇದನ್ನು ನಿಮ್ಮ ಮುಂದಿಡಲಾಗುತ್ತಿದೆ. ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ.
ನಾಸ್ತಿ ಪದದ ಶಬ್ದಾರ್ಥ `ಇಲ್ಲ ‘ ಎಂದು. ನಾಸ್ತಿಕತೆಯು ದೇವರು ಇಲ್ಲವೆಂಬ ವಾದ ಹೊಂದಿರುವವರ ಪಂಥ. ಈ ಪಂಥ ಯಾವುದೋ ಒಂದು ದೇಶ,ಕಾಲ, ಸಮುದಾಯಕ್ಕೆ ಸೀಮಿತವಾಗಿರುವಂಥದ್ದಲ್ಲ. ಅಸ್ತಿ (ಇರುವಿಕೆ) ವಾದದ ಜೊತೆಗೇ ನಾಸ್ತಿ ವಾದವೂ (ಇಲ್ಲದಿರುವಿಕೆ) ಹುಟ್ಟಿಕೊಂಡು ಒಂದಕ್ಕೊಂದು ಮುಖಾಮುಖಿಯಾಗುತ್ತ ಪರಸ್ಪರ ಕಲಿಕೆಯ ಮೂಲಕ ಬೆಳೆಯುತ್ತಾ ಬಂದಿವೆ. ಆಸ್ತಿಕತೆಯು `ಭಗವಂತ ಅಥವಾ ಜಗನ್ನಿಯಾಮಕನೊಬ್ಬನಿದ್ದಾನೆ. ಎಲ್ಲವೂ ಅವನ ನಿಯತಿ ಮತ್ತು ಸೃಷ್ಟಿ’ ಎಂದು ನಂಬುತ್ತದೆ. ಈ ಆಸ್ತಿಕರು ವಂಶ ಪಾರಂಪರ್ಯವಾದ ಧಾರ್ಮಿಕ ವಿಧಿವಿಧಾನಗಳ ಮೂಲಕ ಭಗವಂತನನ್ನು ಪೂಜಿಸುತ್ತಾರೆ. ಇಲ್ಲವೇ ತಾವು ಹೊಸದಾಗಿ ನಂಬಿಕೊಂಡ ದೇವರನ್ನು ಆರಾಧಿಸುತ್ತಾರೆ.
ನಾಸ್ತಿಕತೆಯು `ಜಗತ್ತು ರಾಸಾಯನಿಕ ಸಂಯೋಜನೆಯಷ್ಟೆ. ಅದು ತನ್ನಿಂತಾನೆ ನಡೆಯುತ್ತದೆ’ ಎನ್ನುತ್ತದೆ ಹಾಗೂ ಭಗವಂತನೊಬ್ಬ ಇರುವುದಾದರೆ ಅದಕ್ಕೆ ಪುರಾವೆಗಳನ್ನು ಕೊಡಿರೆಂದು ಕೇಳುತ್ತದೆ. ಈ ಮಂದಿ ಪೂಜೆ ಪುನಸ್ಕಾರಗಳಲ್ಲಿ ನಂಬಿಕೆ ಇಡದಿರುವುದು ಮಾತ್ರವಲ್ಲ, ಅವೆಲ್ಲ ಮೂರ್ಖತನವೆಂದು ಜರಿಯುತ್ತಾರೆ. ಅವುಗಳಿಂದ ದೂರವಿರುತ್ತಾರೆ.
ಜಗತ್ತಿನಲ್ಲಿ ಈ ಎರಡನೆಯ ವರ್ಗದವರ ಸಂಖ್ಯೆ ಬಹಳ ಕಡಿಮೆ. ಏಕೆಂದರೆ ಬಹುತೇಕ ಮಂದಿ ದಿವ್ಯಶಕ್ತಿಯ ಇರುವಿಕೆಯನ್ನು ಒಪ್ಪಿಕೊಳ್ಳಲು ಬಯಸುತ್ತಾರೆ. ಅದು ಭಕ್ತಿ ಇಂದಲೇ ಎಂದೇನಲ್ಲ, ಭಯದಿಂದ. ಹಾಗೆ ನಂಬಿಕೊಳ್ಳದಿದ್ದರೆ ಎಲ್ಲಿ ತಮ್ಮ ಬದುಕಿನ ಪ್ರತಿಯೊಂದು ಜವಾಬ್ದಾರಿಯನ್ನೂ ತಾವೇ ಹೊರಬೇಕಾಗುತ್ತದೆಯೋ ಎನ್ನುವ ನುಣುಚಿಕೊಳ್ಳುವಿಕೆಯಿಂದ. ಇಂಥವರ ನಡುವೆಯೂ ಪರಿಶುದ್ಧವಾದ ಶ್ರದ್ಧಾಭಕ್ತಿಗಳಿಂದ, ಪ್ರೇಮ- ಜ್ಞಾನಗಳಿಂದ ಭಗವಂತನ ಸಾಕ್ಷಾತ್ಕಾರ ಪಡೆದುಕೊಂಡು ಆತನ ಇರುವನ್ನು ಖಾತ್ರಿ ಪಡಿಸಿಕೊಂಡವರಿದ್ದಾರೆ. ಇವರು ಆಸ್ತಿಕತೆ – ನಾಸ್ತಿಕತೆಗಳನ್ನು ಮೀರಿದ ಸಂತರು. ಇವರನ್ನು ಮುಮುಕ್ಷುಗಳು ಅಥವಾ ಜ್ಞಾನೋದಯ ಹೊಂದಿದವರೆಂದು ಕರೆಯಲಾಗುತ್ತದೆ.
ಈ ಮೂರು ವರ್ಗಗಳಿಗಿಂತ ಭಿನ್ನವಾದ ವರ್ಗವೊಂದಿದೆ. ಅದು ಆಧ್ಯಾತ್ಮಿಕ ನಾಸ್ತಿಕರ (ಸ್ಪಿರಿಚುವಲ್ ಏಥಿಸ್ಟ್ಸ್) ವರ್ಗ. ಈ ವರ್ಗದವರ ತಿಳಿವು – ನಂಬಿಕೆಗಳು, ತರ್ಕ ಸರಣಿಗಳು ಬಹಳ ಆಸಕ್ತಿಕರ. ಮುಮುಕ್ಷುಗಳು ನಮಗೆಷ್ಟು ಮಾರ್ಗದರ್ಶಿಗಳಾಗಬಲ್ಲರೋ ಈ ಆಧ್ಯಾತ್ಮಿಕ ನಾಸ್ತಿಕರೂ ಅಷ್ಟೇ ಮಟ್ಟದ ಜ್ಞಾನವನ್ನು ನಮಗೆ ನೀಡಬಲ್ಲರು. ಇವರ ಚಿಂತನ ಕ್ರಮ, ಅವರು ಕಂಡುಕೊಳ್ಳುವ ಸತ್ಯಗಳು ಅಷ್ಟು ಉಜ್ವಲವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ಬಗೆಯ ಸ್ಪಿರಿಚುವಲ್ ಏಥಿಸಮ್ ಹೆಚ್ಚಾಗುತ್ತಿದೆ.
ವ್ಯಾಖ್ಯಾನ
ದೇವ ವಿರೋಧಿಗಳು ನಾಸ್ತಿಕರಲ್ಲ. ಅವರು ದೇವರ ಇರುವಿಕೆಯನ್ನು ಒಪ್ಪಿಕೊಂಡೇ ಅವರ ವಿರುದ್ಧ ಸಮರ ಸಾರುವವರು. ಹಿಂದಿನ ಅಸುರಾದಿಗಳು ಈ ಸಾಲಿಗೆ ಸೇರುವವರು. ಇಂದಿಗೂ ಅಂತಹ ಕೆಡುಕರ ಸಂಖ್ಯೆ ಸಾಕಷ್ಟಿದೆ. ದೇವರನ್ನು ನಿರಾಕರಿಸುವವರು ನಾಸ್ತಿಕರು. ಇಂತಹವರು ಕೂಡ ಹಿಂದೆ ಇದ್ದವರೇ. ನಮ್ಮ ಸುಪ್ರಸಿದ್ಧ ಚಾರ್ವಾಕ ಬಣ ಈ ವರ್ಗಕ್ಕೆ ಸೇರುತ್ತದೆ. ಮತ್ತು ಇಂದಿಗೂ ಕೂಡ ಸಮಾಜದ ಇತರರಿಗೆ ತೊಂದರೆಯಾಗದಂತೆ ತಮ್ಮ ನಾಸ್ತಿಕವಾದಕ್ಕೆ ಬದ್ಧರಾಗಿದ್ದುಕೊಂಡು ತಮ್ಮ ಪಾಡಿಗೆ ಇರುವವರು ಇಲ್ಲದಿಲ್ಲ. ಆದರೆ ಈ ಬಣ ಆಧ್ಯಾತ್ಮಿಕತೆಗೆ ಸಲ್ಲುವುದಿಲ್ಲ.
ದೇವರನ್ನು ನಿರಾಕರಿಸುತ್ತಲೇ ಅತೀತ ಶಕ್ತಿಯೊಂದರೆಡೆಗೆ ನಂಬಿಕೆ ಇರಿಸಿಕೊಂಡಿರುವ, `ಸ್ವ’ದ ಅರಿವಿನ ತುಡಿತವಿರುವ, ತಮ್ಮೊಳಗನ್ನು, ಆತ್ಮಚೈತನ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾಧನೆ ನಡೆಸುವ ವ್ಯಕ್ತಿಗಳು ಇದ್ದಾರೆ. ಇವರು ವೈಜ್ಞಾನಿಕವಾಗಿ ದೇವರನ್ನು, ಆತ್ಮವನ್ನು ವಿಶ್ಲೇಷಣೆಗೆ ಒಳಪಡಿಸಿ ತರ್ಕಿಸುತ್ತಾರೆ. ಇಂಥವರನ್ನೇ ಸ್ಪರಿಚುವಲ್ ಏಥಿಸ್ಟ್ಸ್ ಅಥವಾ ಆಧ್ಯಾತ್ಮಿಕ ನಾಸ್ತಿಕರು ಎನ್ನುವುದು. ನಮ್ಮ ಪ್ರಾಚೀನ ಋಷಿಗಳಾದ ನಾಗಾರ್ಜುನ, ಕಣಾದರಂತಹ ಅನೇಕರು ಇಂತಹ ಆಧ್ಯಾತ್ಮಿಕ ಹಾದಿಯಲ್ಲಿ ಸಾಧನೆ ಮಾಡಿಯೇ ವಿಜ್ಞಾನವನ್ನು ದಕ್ಕಿಸಿಕೊಂಡವರು. ಇವರು ದೇವರ ಅಸ್ತಿತ್ವದ, ಸೃಷ್ಟಿಯ ಕುರಿತಾದ ಸಿದ್ಧ ಘೋಷಣೆಗಳನ್ನು ಮೀರಿ ನ್ವೇಷಣೆ ನಡೆಸಲು ಹೊರಟಿದ್ದರಿಂದ `ನಾಸ್ತಿಕ’ರೆಂದು ಗುರುತಿಸಲ್ಪಡುತ್ತಿದ್ದವರು. ನಮ್ಮ ಇಂದಿನ ಅನೇಕ ವಿಜ್ಞಾನಿಗಳು ಈ ಸಾಲಿಗೆ ಸೇರುತ್ತಾರೆ.
ಅಮೆರಿಕದ ರೈಸ್ ಯುನಿವರ್ಸಿಟಿ ಕಳೆದ ವರ್ಷ ಒಂದು ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ, 1,475 ವಿಜ್ಞಾನಿಗಳಲ್ಲಿ ಶೇ.50 ಮಂದಿ ತಮ್ಮನ್ನು ತಾವು ಆಸ್ತಿಕರೆಂದೂ ಧರ್ಮ ಮತ್ತು ವಿಜ್ಞಾನಗಳು ಒಂದಕ್ಕೊಂದು ಪೂರಕ ಎಂದೂ ಅಭಿಪ್ರಾಯ ಪಟ್ಟಿದ್ದಾರೆ. ಉಳಿದ ಶೇ.20 ಮಂದಿ ತಾವು ಧಾರ್ಮಿಕ ನಂಬಿಕೆ ಮತ್ತು ಆಚರಣೆಗಳಿಗೆ ವಿರೋಧಿಗಳೆಂದು ಹೇಳುತ್ತಲೇ ಸ್ವಯಂ ಅರಿವಿನ ಪ್ರಕ್ರಿಯೆಯಲ್ಲಿ ಹುಡುಕಾಟ ನಡೆಸುತ್ತಿರುವ ಅಧ್ಯಾತ್ಮ ಮನಸ್ಕರೆಂದು ಹೇಳಿಕೊಂಡಿದ್ದಾರೆ. `ಇಂತಹ ಅಧ್ಯಾತ್ಮ ಮನಸ್ಕತೆ ವಿಜ್ಞಾನಿಗಳನ್ನು ಜೀವವಿರೋಧಿ ಸಂಶೋಧನೆಗಳಿಂದ ದೂರ ನಿಲ್ಲಿಸುತ್ತದೆ. ಅವರು ಜಾಗತಿಕ ಏಳಿಗೆಗೆ, ಸೌಹಾರ್ದಕ್ಕೆ ಪೂರಕವಾಗಿ ಚಿಂತಿಸುವಂತೆ ಮಾಡುತ್ತದೆ’ ಎನ್ನುವುದು ಸಮೀಕ್ಷಕಾರರ ಟಿಪ್ಪಣಿ.
ಇಂದಿನ ಅಗತ್ಯ
ಇಂದಿನ ಬಹುತೇಕ ವೈಷಮ್ಯಗಳಿಗೆ ಧಾರ್ಮಿಕತೆಯೇ ಮೂಲ ಕಾರಣವಾಗುತ್ತಿದೆ. ಯಾವುದೋ ಒಂದು ಧರ್ಮ ವಿಶ್ವವ್ಯಾಪಿಯಾಗಬೇಕು. ಅತಿ ದೊಡ್ಡ ಸಂಖ್ಯೆಯ ಧರ್ಮವೆಂದು ಗುರುತಿಸಿಕೊಳ್ಳಬೆಕು. ತಮ್ಮ ಧರ್ಮದ ಗುರುಗಳಿಗೇ ಮನ್ನಣೆ ದೊರೆಯಬೇಕು. ತಮ್ಮ ಧಾರ್ಮಿಕ ರೀತಿ ರಿವಾಜುಗಳು ಸರ್ವ ಮಾನ್ಯವಾಗಬೇಕು…. ಇಂತಹ ಸಂಕುಚಿತ ಬಯಕೆಗಳು ಜಗತ್ತಿನಲ್ಲಿ ಅಸಹನೆ ಹುಟ್ಟುಹಾಕುತ್ತಿದೆ. ಎಲ್ಲಿ ಇಂತಹ ಧಾರ್ಮಿಕ ಮೂಲಭೂತವಾದ, ಮತಾಂಧತೆಗಳು ಇರುತ್ತವೆಯೋ ಅಲ್ಲೆಲ್ಲ ಜನಜೀವನ ನರಕವಾಗಿದೆ. ಇದು ಯಾವುದೋ ನಿರ್ದಿಷ್ಟ ಮತಪಂಥಗಳ ಮಾತಲ್ಲ. ಸಹಿಷ್ಣುತೆಯಿಲ್ಲದ, ಸಂಕುಚಿತ ಮನೋಭಾವ ಹೊಂದಿರುವಂತಹ ಒಂದು ಗುಂಪು ಬಹುತೇಕ ಎಲ್ಲ ಪ್ರಮುಖ ಧರ್ಮಗಳಲ್ಲಿಯೂ ಇರುತ್ತದೆ.
ಈ ನಿಟ್ಟಿನಿಂದ ನೋಡಿದರೆ ಧಾರ್ಮಿಕೇತರವಾದ ಆಧ್ಯಾತ್ಮಿಕ ಚಿಂತನೆ ಇಂದಿನ ಯುಗಕ್ಕೆ ಸೂಕ್ತವೆನ್ನಿಸುತ್ತದೆ. ಇಲ್ಲಿ ವ್ಯಕ್ತಿಯ ಆಂತರ್ಯ ವಿಕಸನ, ಜೀವನ ತತ್ತ್ವದ ಚಿಂತನೆಗಳಿರುವುದರಿಂದ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ.
ಸೆಮೆಟಿಕ್ ಚಿಂತನೆಯ ಪ್ರಕಾರ ಏಕದೇವ ವಾದವನ್ನು ನಿರಾಕರಿಸುವವರೂ ನಾಸ್ತಿಕರೇ. ಪಶ್ಚಿಮ ದೇಶಗಳ `ಏಥಿಸ್ಟ್ ಫೋರಮ್’ ಹಿಂದೂ ಧರ್ಮವನ್ನೂ ನಾಸ್ತಿಕ ಧರ್ಮವೆಂದೇ ಗುರುತಿಸುತ್ತದೆ! ಈ ನಿರ್ವಚನೆಯ ಪ್ರಕಾರ ಚಿಂತಿಸಿದರೆ ಒಂದು ಧರ್ಮ ಅಥವಾ ವಿಚಾರಕ್ಕೆ ಅಂಟಿಕೊಳ್ಳದೆ ಎಲ್ಲ ಧರ್ಮಗಳ ಸದ್ವಿಚಾರವನ್ನೂ ತಮಗೆ ಇಷ್ಟವೆನ್ನಿಸುವ ಎಲ್ಲ ದೇವತಾ ರೂಪಗಳನ್ನೂ ಗೌರವಿಸುವವರು ಕೂಡ ನಾಸ್ತಿಕರು. ಇಂಥವರು ತಮ್ಮ ಅಂತರ್ಯಾನಕ್ಕೆ ಹೆಚ್ಚು ಮಹತ್ವ ಕೊಡುವ ಆಧ್ಯಾತ್ಮಿಕ ಪ್ರವೃತ್ತಿಯವರಾದ್ದರಿಂದಲೇ ಭೇದಭಾವಗಳಿಲ್ಲದಂತೆ ಪ್ರತಿಯೊಂದು ಉತ್ತಮ ವಿಚಾರವನ್ನು ತಮ್ಮೊಳಗೆ ಅಳವಡಿಸಿಕೊಳ್ಳುವರು.
ಜಾಗತಿಕ ಶಾಂತಿ ಸೌಹಾರ್ದಗಳ ಭರವಸೆಯು ಇಂತಹ ಸಂಯೋಜನೆಯ ಪೀಳಿಗೆಗಾಗಿ ಕಾದು ನಿಂತಿದೆ.
ಧರ್ಮ ಮತ್ತು ಅಧ್ಯಾತ್ಮ
ಅಧ್ಯಾತ್ಮ , ಸ್ವ ಅರಿವಿನ ಪ್ರಕ್ರಿಯೆ. ಧರ್ಮ, ಈ ಅರಿವನ್ನು ಪಡೆಯಲು ಅನುಸರಿಸುವ ಒಂದು ಹಾದಿ. ಧಾರ್ಮಿಕರಾಗದೆ ಇದ್ದವರೂ ಕೂಡ ತಮ್ಮನ್ನು ತಾವು ಅರಿತುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದನ್ನು, ಮಾಡುತ್ತಿರುವುದನ್ನು ನಾವು ಸಾಕಷ್ಟು ನೋಡಿದ್ದೇವೆ. ವಿಚಾರ, ತರ್ಕ, ಕಲಾ ಪ್ರಕಾರಗಳ ಮೂಲಕವೆಲ್ಲ ಅಧ್ಯಾತ್ಮವನ್ನು ದಕ್ಕಿಸಿಕೊಂಡವರು ಇದ್ದಾರೆ. ಅಧ್ಯಾತ್ಮಕ್ಕೂ ದೇವರಿಗೂ ಸಂಬಂಧವಿಲ್ಲ. ಆದರೆ ಧರ್ಮಕ್ಕೂ ದೇವರಿಗೂ ಸಂಬಂಧವಿದೆ. ಆದ್ದರಿಂದ ಧಾರ್ಮಿಕ ಮನೋವೃತ್ತಿಯ ಎಲ್ಲರೂ ಆಸ್ತಿಕರೇ. ಆದರೆ ಆಧ್ಯಾತ್ಮಿಕ ಮನೋಭಾವದ ವ್ಯಕ್ತಿಗಳು ಆಸ್ತಿಕರಾಗಿಯೇ ಇರಬೇಕೆಂದಿಲ್ಲ.
ಅಧ್ಯಾತ್ಮವು ಜೀವ, ಅಸ್ತಿತ್ವ ಮತ್ತು ಸಮಷ್ಟಿ ಪ್ರಜ್ಞೆಗಳ ಬಗ್ಗೆ ವೈಜ್ಞಾನಿಕ ಮತ್ತು ವೈಚಾರಿಕ ಜಿಜ್ಞಾಸೆಗೆ ಅನುವು ಮಾಡಿಕೊಡುತ್ತದೆ. ಇಲ್ಲಿ ಶ್ರದ್ಧೆಗಿಂತ ಪ್ರಾಶ್ನಿಕ ಬುದ್ಧಿಗೆ ಹೆಚ್ಚಿನ ಮನ್ನಣೆ. ಬಹುಶಃ ಈ ಕಾರಣದಿಂದಲೇ ಗಣನೀಯ ಸಂಖ್ಯೆಯ ಒಂದು ವರ್ಗ ಧಾರ್ಮಿಕತೆಗಿಂತ ಹೆಚ್ಚಾಗಿ ಆಧ್ಯಾತ್ಮಿಕತೆಯೊಂದಿಗೆ ಗುರುತಿಸಿಕೊಳ್ಳುತ್ತದೆ. ಇದರಲ್ಲಿ ಸಾಹಿತಿಗಳು, ಕಲಾವಿದರು ಹಾಗೂ ವಿಜ್ಞಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
1 Comment