ಅಧ್ಯಾತ್ಮ ಡೈರಿ ~ ಮಾತು, ಮರು ಮಾತನ್ನು ಬಡಿದೆಬ್ಬಿಸುವಂತೆ ಇರಬಾರದು!

ಸ್ಪಂದನೆ ಮೌನವೂ ಆಗಬಹುದು. ಮತ್ತೊಂದು ಕ್ರಿಯೆಯಲ್ಲಿ ತೊಡಗಿಕೊಳ್ಳುವುದೂ ಆಗಬಹುದು. ಸ್ಪಂದನೆ, ಕೇಳಿಸಿಕೊಂಡ ಮಾತಿನ ಅರ್ಥಗ್ರಹಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವೂ ಆಗಬಹುದು. ಸಂಪೂರ್ಣ ಮಾತು ಕೇಳಿಸಿಕೊಂಡ ನಂತರ ಸ್ಪಂದನೆಯ ಸ್ವರೂಪ ನಿರ್ಧಾರಗೊಳ್ಳುವುದು. ಹಾಗೆಂದೇ ಬುದ್ಧ ಸಂಪೂರ್ಣ ಕೇಳಿಸಿಕೋ, ಆ ತಾಳ್ಮೆ ಬೆಳೆಸಿಕೋ ಅನ್ನೋದು ~ ಅಲಾವಿಕಾ

ಕೇಳುವಿಕೆ ನಮ್ಮಲ್ಲಿ ಮೌನವನ್ನು ಹುಟ್ಟಿಸಬೇಕೇ ಹೊರತು ಮಾತನ್ನಲ್ಲ. ಹಾಗೆಯೇ ನಮ್ಮ ಮಾತು ಕೂಡ ಮೌನವನ್ನು ಸ್ಥಾಪಿಸಬೇಕೇ ಹೊರತು ಮರುಮಾತನ್ನು ಬಡಿದೆಬ್ಬಿಸುವಂತಲ್ಲ. ಆದರೆ ನಾವೀಗ ಮಾತಾಡಲೆಂದೇ ಕೇಳಿಸಿಕೊಳ್ಳತೊಡಗಿದ್ದೇವೆ ಮತ್ತು ಪ್ರತಿಮಾತು ಹುಟ್ಟಲೆಂದೇ ಮಾತಾಡತೊಡಗಿದ್ದೇವೆ. ನಮ್ಮ ಮಾತಿಗೆ ಎದುರಿನವರ ಮೌನ ಸಮ್ಮತಿಯದೇ ಆಗಿದ್ದರೂ ಅದನ್ನು ಸಹಿಸಲು ನಮ್ಮ ಅಹಂಕಾರ ಅವಕಾಶ ಕೊಡುತ್ತಿಲ್ಲ. ಅಂಥ ಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಹಾಗೆಂದೇ ಸಮ್ಮತಿಯೋ ಅಸಮ್ಮತಿಯೋ…. ನಮ್ಮ ಮಾತಿಗೆ ಮೌನ ಸ್ಪಂದನೆ ದೊರೆಯುತ್ತಿರುವಷ್ಟೂ ಕಾಲ ನಮ್ಮಲ್ಲಿ ಚಡಪಡಿಕೆ. ಎದುರಿನವರು ಅದಕ್ಕೆ ಪ್ರತಿಕ್ರಿಯಿಸಲಿ ಅನ್ನುವ ತಹತಹ. ಹಾಗೆಂದೇ ಪ್ರಚೋದನೆಗೆ ಇಳಿಯುತ್ತೇವೆ. ಆಪಾದನೆಗಳನ್ನು ಹೊರಿಸುತ್ತೇವೆ. ಕತೆಗಳನ್ನು ಕಟ್ಟುತ್ತೇವೆ ಮತ್ತು  ನಡೆಯುವ ದಾರಿಯುದ್ದಕ್ಕೂ ಮಾತು ಮಾತು ಮಾತು… ಮಾತಿನ ಮುಳ್ಳುಗಳನ್ನೆ ಹಾಸುತ್ತೇವೆ.

‘ಸ್ಪಂದಿಸು, ಪ್ರತಿಕ್ರಿಯಿಸಬೇಡ…’ ಇದು ಬುದ್ಧಮಾತು. ಅವನು ಹೇಳುತ್ತಾನೆ, ‘ಕೇಳಿಸಿಕೋ, ಕೇಳಿ ಮುಗಿಯುವ ತನಕ ಮಾತಾಡಬೇಡ’. ಮಾತಿನ ವಿಷಯದಲ್ಲಿ ಪ್ರತಿಕ್ರಿಯೆ ಅಂದರೆ, ನಾವು ಕೇಳಿಸಿಕೊಂಡ ಮಾತಿಗೆ ಪ್ರತಿ ಮಾತನ್ನು ಆಡುವುದು. ಪ್ರತಿಮಾತು ಯಾವತ್ತೂ ಎದುರು ಮಾತೇ ಆಗಿರುತ್ತದೆ. ಸ್ಪಂದನೆ ಹಾಗಲ್ಲ. ಅದು ಮಾತಿಗೆ ಉತ್ತರವಾಗಿ ಮಾತಾಡಲೇಬೇಕಾದ ಅನಿವಾರ್ಯತೆಗೆ ಬೀಳೋದಿಲ್ಲ. ಸ್ಪಂದನೆ ಮೌನವೂ ಆಗಬಹುದು. ಮತ್ತೊಂದು ಕ್ರಿಯೆಯಲ್ಲಿ ತೊಡಗಿಕೊಳ್ಳುವುದೂ ಆಗಬಹುದು. ಸ್ಪಂದನೆ, ಕೇಳಿಸಿಕೊಂಡ ಮಾತಿನ ಅರ್ಥಗ್ರಹಿಸಿ ಅದಕ್ಕೆ ತಕ್ಕಂತೆ ನಡೆದುಕೊಳ್ಳುವ ಅಥವಾ ನಿರಾಕರಿಸುವ ಸ್ವಾತಂತ್ರ್ಯವೂ ಆಗಬಹುದು. ಸಂಪೂರ್ಣ ಮಾತು ಕೇಳಿಸಿಕೊಂಡ ನಂತರ ಸ್ಪಂದನೆಯ ಸ್ವರೂಪ ನಿರ್ಧಾರಗೊಳ್ಳುವುದು. ಹಾಗೆಂದೇ ಬುದ್ಧ ಸಂಪೂರ್ಣ ಕೇಳಿಸಿಕೋ, ಆ ತಾಳ್ಮೆ ಬೆಳೆಸಿಕೋ ಅನ್ನೋದು.

ಇದು ಬಹಳ ಸುಲಭ. ಎದುರು ಕುಳಿತ ವ್ಯಕ್ತಿ ಮಾತಾಡುವಾಗ ನಾವು ಸುಮ್ಮನೆ ಕುಳಿತರಾಯ್ತು. ಇದು ಎಷ್ಟೊಂದು ಸರಳ! ಸುಮ್ಮನಿರುವುದು ಎಷ್ಟೊಂದು ಸುಲಭ! ಹಾಗೆಂದೇ ನಮ್ಮಿಂದ ಅದನ್ನು ಅನುಸರಿಸುವುದು ಸಾಧ್ಯವಿಲ್ಲ. ಸುಲಭವಾದ್ದನ್ನು, ಸರಳವಾದ್ದನ್ನು ನಾವು ಆಯ್ದುಕೊಳ್ಳಲಾರೆವು. ನಮ್ಮ ಅಹಂಕಾರವಕ್ಕೆ ಸವಾಲು ಎಸೆಯುವಂಥ, ಅದನ್ನು ತೃಪ್ತಿಪಡಿಸುವಂಥ ದಾರಿಗಳೇ ನಮಗೆ ಪ್ರಿಯವಾಗುತ್ತದೆ. ಹಾಗೆಂದೇ ನಾವು ಸುಮ್ಮನಿರುವುದಿಲ್ಲ. ಯಾರಾದರೂ ಮಾತಾಡುವಾಗ ನಮ್ಮಲ್ಲಿ ಅದಕ್ಕೆ ಸಮಾನಾಂತರವಾಗಿ ಪ್ರತಿಕ್ರಿಯೆ ಸಿದ್ಧವಾಗುತ್ತಾ ಇರುತ್ತದೆ. ಎದುರಿನವರ ಮಾತುಗಳು ನಮ್ಮ ಪ್ರತಿಕ್ರಿಯೆಯ ಸೀಮೆ ದಾಟಿ ಹೋಗುತ್ತಿದೆ ಅನ್ನಿಸಿದ ತಕ್ಷಣ ನಾವು ಬಾಯಿಹಾಕುತ್ತೇವೆ, ಸಿದ್ಧಪಡಿಸಿಟ್ಟುಕೊಂಡ ಉತ್ತರವನ್ನು ಹೇಳತೊಡಗುತ್ತೇವೆ. ಎದುರಿನ ವ್ಯಕ್ತಿ ಅದಕ್ಕೆ ಅವಕಾಶ ಮಾಡಿಕೊಡದೆ ಇರುವಾಗ ಅಹಂ ಕೆರಳುತ್ತದೆ ಮತ್ತು ಪರಿಣಾಮವಾಗಿ ನಮ್ಮ ದನಿ ಎತ್ತರಿಸುತ್ತೇವೆ, ಮತ್ತು ಪ್ರತಿಮಾತು ವಾಗ್ವಾದವಾಗಿ ಮಾರ್ಪಡುತ್ತದೆ. ಯಾವಾಗ ಎದುರಿನವರು ವಾಗ್ವಾದಕ್ಕೆ ತೊಡಗುತ್ತಾರೋ ಆಗ ನಮ್ಮ ಅಹಮ್ ಕೂಡ ಪ್ರತಿಕ್ರಿಯಿಸಿ ಅದನ್ನು ತನ್ನ ಮೇಲೆ ಹೇರಿಕೊಳ್ಳುತ್ತದೆ. ಅಲ್ಲಿ ಪ್ರತಿಕ್ರಿಯೆಯ ಬದಲು ಸ್ಪಂದನೆ ಇದ್ದರೆ ಎದುರು ಇರುವ ವ್ಯಕ್ತಿಯ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಸುಮ್ಮನಿರುವಂತೆ ಮಾಡುತ್ತಿತ್ತು. ಆದರೆ ಪ್ರತಿಕ್ರಿಯೆ ಸುಮ್ಮನಿರಲು ಬಿಡುವಂಥದ್ದಲ್ಲ.

~

ನಾವಿಂದು ಮಾಡುತ್ತಿರುವುದು ಏನು? ಕುಟುಂಬದಿಂದ ಹಿಡಿದು ಕಾರ್ಪೊರೇಟ್ ಝೋನ್’ವರೆಗೆ ಆಗುತ್ತಿರುವುದೇನು? ಮನರಂಜನೆ, ಮಾಧ್ಯಮಗಳು ಈ ಪ್ರತಿಕ್ರಿಯೆಯ ಪ್ರಕ್ರಿಯೆಯಿಂದ ಯಾವ ಹಂತಕ್ಕೆ ಬಂದು ತಲುಪಿವೆ? ಬಹುಪಾಲು ಜನಜೀವನದ ಅಂಗಭಾಗವೇ ಆಗಿಹೋಗಿರುವ ಸೋಷಿಯಲ್ ಮೀಡಿಯಾದಲ್ಲಿ ಈ ಬರಹ ಮಾತು ಮತ್ತು ಅದಕ್ಕೆ ಬರುವ ಪ್ರಕ್ರಿಯೆಗಳು ಹೇಗೆಲ್ಲ ಮನುಷ್ಯನ ಆಳದಲ್ಲಿ ಗಪ್ಪೆಂದು ಕುತಿದ್ದ ಬಗ್ಗಡವನ್ನು ಮೇಲಕ್ಕೇಳಿಸುತ್ತಿವೆ?

ಇವತ್ತು ನೀವು ಒಂದರ್ಧ ಗಂಟೆ ಫೇಸ್ ಬುಕ್ ಗೋಡೆಗಳ ಮೇಲೆ ಕಣ್ಣು ಹಾಯಿಸಿದರೂ ಸಾಕು, ಸಮಾಜದ ಎಲ್ಲಾ ವಿಕಾರಗಳೂ ಕಣ್ಣಿಗೆ ರಾಚುತ್ತವೆ.  ಈ ದಿನಗಳಲ್ಲಿ ಮಾತು ದನಿಯ ರೂಪದಲ್ಲೇ ಇರಬೇಕೆಂದೇನೂ ಇಲ್ಲ. ಅದು ಅಕ್ಷರ ರೂಪದಲ್ಲಿಯೂ ಆಡಲ್ಪಡುತ್ತದೆ, ಮತ್ತು ಓದಿನ ಮೂಲಕವೂ ಕೇಳಲ್ಪಡುತ್ತದೆ. ಬರಹವು ಸಂಭಾಷಣೆಯ ಮತ್ತೊಂದು ರೂಪವಾಗಿ ಕಾಲಗಟ್ಟಲೆಯಾಗಿದ್ದರೂ ಬರಹವೇ ಮಾತಾಗಿ ಆಕ್ರಮಿಸಿಕೊಳ್ಳತೊಡಗಿದ್ದು ಇತ್ತೀಚೆಗೆ. ಸಾಮಾಜಿಕ ಜಾಲತಾಣಗಳಲ್ಲಂತೂ ಇದು ಪ್ರತಿಕ್ರಿಯೆ ನೀಡಲು ತಗಲುತ್ತಿದ್ದ ಕಾಲದ ಅಂತರವನ್ನು ಕಡಿಮೆ ಮಾಡಿದೆ. ಒಂದು ಮಾತಿಗೂ ಮತ್ತೊಂದಕ್ಕೂ ಕೇಳುವ, ಯೋಚಿಸುವ, ಮಥನ ಮಾಡುವ ಕಾಲಾವಕಾಶವೇ ಇಲ್ಲವಾಗಿದೆ.

buddha

ಬುದ್ಧ ಮತ್ತೆ ಮತ್ತೆ ನೆನಪಾಗೋದು ಇದಕ್ಕಾಗಿಯೇ. ಆತ ಕೇಳಿಸಿಕೊಳ್ಳುವಿಕೆ, ಸಂಯಮ, ಸ್ಪಂದನೆಯ ಪ್ರಾಮುಖ್ಯವನ್ನು ಸಾರುವ ಒಂದು ಘಟನೆ ಹೀಗಿದೆ.

ಶ್ರಾವಸ್ತಿಯ ಮಾವಿನ ತೋಪಿನಲ್ಲಿ ಬುದ್ಧಗುರು ಮತ್ತವನ ಭಂತೇಗಣ. ಆತನ ಅರೆತೆರೆದ ಕಣ್ಣುಗಳು ನೆರೆದಿದ್ದ ಶಿಷ್ಯ ಸಮೂಹದ ಮೇಲೆ ಪ್ರೇಮವನ್ನು ಸುರಿಸುತ್ತಿದ್ದವು. ಮೌನವೇ ಅಲ್ಲಿದ್ದ ಅತಿ ದೊಡ್ಡ ಸದ್ದು. ಮೌನವೇ ಅಲ್ಲಿ ನಡೆಯುತ್ತಿದ್ದ ಸಂಭಾಷಣೆ.

ಇಂಥಾ ಹೊತ್ತಲ್ಲಿ ಒಬ್ಬ ಹಳ್ಳಿಯವ ಬಂದ. ಮೊದಲು ಶ್ರಾದ್ಧಾದಿ ವೈದಿಕ ಕರ್ಮಗಳನ್ನು ಖಂಡಿಸುವ ಬುದ್ಧನನ್ನು ಬೈದ. ಆಮೇಲೆ ಅವನೊಬ್ಬ ಸೋಮಾರಿ ಎಂದು ನಿಂದಿಸಿದ. ಕಳ್ಳಸನ್ಯಾಸಿ ಎಂದ. ಹೀಗೇ ಒಂದರ್ಧ ಗಂಟೆ ಏನೇನೋ ಮಾತಾಡಿ ಹೊರಟುಹೋದ. ಬುದ್ಧ ಸುಮ್ಮನಿದ್ದ. ಅವನನ್ನು ಅನುಸರಿಸಿ ಅವನ ಶಿಷ್ಯರೂ ಕೂಡಾ.

ಮರುದಿನವೂ ಅದೇ ಘಟನೆ ನಡೆಯಿತು. ಮತ್ತೊಂದು ದಿನವೂ ಅದೇ ಪುನರಾವರ್ತನೆ. ಹೀಗೆ ನಾಲ್ಕೈದು ದಿನಗಳು ನಡೆದರೂ ಬುದ್ಧನ ಉತ್ತರ ಮೌನ. ಬೈಗುಳದ ಹಳ್ಳಿಯವ ಹೊರಟುಹೋದ ಮೇಲೆ ಕಸ್ಸಪ ಕೇಳಿದ, “ಬುದ್ಧ, ನೀನೇಕೆ ಸುಮ್ಮನಿದ್ದೆ?”

“ನಿನಗೀಗ ಹಾದಿಹೋಕನೊಬ್ಬ ಬಂದು ಕಲ್ಲುಗಳನ್ನು ಕೊಟ್ಟರೆ ಏನು ಮಾಡುತ್ತೀಯ ಕಸ್ಸಪ?”

“ಕಲ್ಲುಗಳನ್ನಾ? ನಾನ್ಯಾಕೆ ತೆಗೆದುಕೊಳ್ಳಲಿ?”

“ಮತ್ತೇನು ಮಾಡುತ್ತೀಯ?”

“ಮಾಡೋದೇನು? ತೆಗೆದುಕೊಳ್ಳೋದಿಲ್ಲ, ಅಷ್ಟೇ”

“ಆಗೇನಾಗುತ್ತದೆ?”

“ಕಲ್ಲುಗಳು ಅವನ ಬಳಿಯೇ ಉಳಿಯುತ್ತದೆ”

“ಹಾಗೆಯೇ, ಕಸ್ಸಪ… ಅವನ ಬೈಗುಳಗಳನ್ನು ನಾನು ತೆಗೆದುಕೊಳ್ಳಲಿಲ್ಲ. ಈಗೇನಾಯಿತು?”

“ಅವು ಅವನಲ್ಲಿಯೇ ಉಳಿಯುತ್ತವೆ ಗುರುವೇ!!”

ಈ ಸಂಭಾಷಣೆಯ ನಡುವೆ ಆನಂದನಲ್ಲಿ ಪ್ರಶ್ನೆ ಹುಟ್ಟಿತು.

“ಗುರುವೇ, ನೀವು ಸ್ವೀಕರಿಸದೆ ಇರುವುದರಿಂದ ಬೈಗುಳ ಅವನಲ್ಲೇ ಉಳಿದು ಅವನು ಭಾರವಾಗುತ್ತಾನಲ್ಲವೆ? ಅದರ ಬದಲು ಅವನನ್ನು ತಡೆದಿದ್ದರೆ ಅವನು ಸಮಾಧಾನಗೊಳ್ಳುತ್ತಿದ್ದನೇನೋ”

“ಸೌಮ್ಯ ಆನಂದ, ಅವನ ವ್ಯಗ್ರತೆಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅವನು ತನ್ನೊಳಗೆ ತಾನು ಕಲ್ಲೆಸೆದುಕೊಳ್ಳುತ್ತ ಕಂಪನ ಹುಟ್ಟಿಸಿಕೊಂಡಿದ್ದಾನೆ. ಅವನು ಕಲ್ಲೆಸೆಯೋದು ನಿಲ್ಲಿಸಿದರೆ ಕಂಪನವೂ ನಿಲ್ಲುವುದು”

ಮರುದಿನ ಇಳಿ ಮಧ್ಯಾಹ್ನ ಹಳ್ಳಿಯವ ಬಂದ. ಬುದ್ಧಗುರುವಿನ ಕಾಲಿಗೆ ಬಿದ್ದ. ಶಿಷ್ಯಸಾಗರಕ್ಕೆ ಮತ್ತೊಂದು ಹನಿ ಸೇರಿಕೊಂಡಿತು.

 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.