ಮಹಮ್ಮದ್ ಅಲಿ ಬದುಕಿನ ಅತಿ ಶ್ರೇಷ್ಠ ಸಾಧನೆ ಅವರ ಯುದ್ಧ ನಿರಾಕರಣೆ. ಯುದ್ಧಕ್ಕೆ ಬೆನ್ನು ತಿರುಗಿಸೋದು ಎಲ್ಲ ಸಲವೂ ಹೇಡಿಗಳ ಲಕ್ಷಣವೇ ಆಗಿರೋದಿಲ್ಲ. ಬಹಳ ಸಲ ಅದಕ್ಕೆ ಹೆಚ್ಚಿನ ಎದೆಗಾರಿಕೆಯೇ ಬೇಕಾಗುತ್ತೆ. ಬಲವಿದ್ದೂ ಯುದ್ಧ ನಿರಾಕರಿಸುವುದು ಧೀರರಿಂದಷ್ಟೇ ಸಾಧ್ಯವಾಗುವ ಕೆಲಸ. ಮಹಮ್ಮದ್ ಅಲಿ ಅಂತಹ ಧೀರರಲ್ಲಿ ಒಬ್ಬರಾಗಿದ್ದರು ~ ಚೇತನಾ
“ನಾನು ಯುದ್ಧಕ್ಕೆ ಹೋಗೋದಿಲ್ಲ. ನಾನು ಬಾವುಟಗಳನ್ನ ಸುಡೋದಿಲ್ಲ. ಕೆನಡಾಕ್ಕೆ ಓಡೋ ಧಾವಂತ ನನಗಿಲ್ಲ. ನಾನಿಲ್ಲೇ ಇರುವವನು.
ನನ್ನನ್ನ ನೀವು ಸೆರೆಮನೆಗೆ ಕಳಿಸ್ತೀರೇನು!? ಒಳ್ಳೆಯದು!! ಈಗಲೇ ಆ ಕೆಲಸ ಮಾಡಿ. ನಾನು 400 ವರ್ಷಗಳಿಂದಲೂ ಸೆರೆಯಲ್ಲೇ ಇದ್ದವನು. ಹೆಚ್ಚುವರಿ ನಾಲ್ಕೈದು ವರ್ಷಗಳೇನು ಮಹಾ!?
ನಾನಂತೂ ಬಡಜನರನ್ನ ಕೊಲ್ಲಲು ಸಹಾಯ ಮಾಡೋಕೆ 10 ಸಾವಿರ ಮೈಲು ದೂರ ಪ್ರಯಾಣಿಸೋದಿಲ್ಲ. ನಾನು ಸಾಯೋದೇ ಆದರೆ ಇಲ್ಲೇ, ಈಗಲೇ, ನಿಮ್ಮೊಂದಿಗೆ ಹೋರಾಡುತ್ತಲೇ ಸತ್ತುಬಿಡುವೆ. ನಾನಂತೂ ಬಡ ವಿಯೆಟ್ನಾಮೀಯರನ್ನ ಕೊಲ್ಲಲು ಹೋಗೋದಿಲ್ಲ. ಅವರು ನನ್ನ ಶತ್ರುಗಳಲ್ಲ. ಚೀನೀಯರೂ ನನ್ನ ಶತ್ರುಗಳಲ್ಲ, ಜಪಾನೀಯರು ಕೂಡಾ.
ನೀವು, ನಮ್ಮನ್ನು ತುಳಿದು ಗುಲಾಮರಾಗಿಸಿಕೊಂಡ ನೀವು ನನ್ನ ಶತ್ರುಗಳು. ನನಗೆ ಸ್ವಾತಂತ್ರ್ಯ ಬೇಕೆಂದು ದನಿಯೆತ್ತಿದಾಗ ಸದ್ದಡಗಿಸಿದಿರಲ್ಲ, ನೀವು ನನ್ನ ಶತ್ರುಗಳು. ನನಗೆ ನ್ಯಾಯ ಬೇಕೆಂದು ಕೂಗಿದಾಗ ಕತ್ತು ಹಿಸುಕಿದಿರಲ್ಲ, ನೀವು ನನ್ನ ಶತ್ರುಗಳು.”
~ ಇಂಥದೊಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಸೆರೆವಾಸ ಅನುಭವಿಸಿದ ವ್ಯಕ್ತಿ, ಬಾಕ್ಸಿಂಗ್ ಚಾಂಪಿಯನ್ ಮಹಮ್ಮದ್ ಅಲಿ.
ಬಹುಶಃ ಮಹಮ್ಮದ್ ಅಲಿ ಬಾಕ್ಸಿಂಗ್ ಆಟಗಾರನಷ್ಟೇ ಆಗಿದ್ದಿದ್ದರೆ ಇಲ್ಲಿ ಇದನ್ನು ಬರೆಯುವ ಪ್ರಮೇಯ ಇರುತ್ತಿರಲಿಲ್ಲ. ಆದರೆ ಮಹಮ್ಮದ್ ಅಲಿ ಒಬ್ಬ ಅಪ್ಪಟ ಮನುಷ್ಯ. ಅವನೊಬ್ಬ ಸೂಫಿ. ಕಷ್ಟಗಳನ್ನುಣ್ಣುತ್ತಲೇ ಅದರಿಂದ ಬಲವರ್ಧನೆ ಮಾಡಿಕೊಂಡು ಬೆಳೆದ ಸಾಧಕ. ಜನಾಂಗೀಯ ತಾರತಮ್ಯಕ್ಕೆ ಒಳಗಾಗಿ, ಅದರ ವಿರುದ್ಧ ಸೆಟೆದುನಿಂತು, ಸಹಚರರನ್ನೂ ಆ ದಿಕ್ಕಿನಲ್ಲಿ ನಡೆಸಿದ ಹೋರಾಟಗಾರ. ಆತ ಪ್ರೇಮವೇ ಶಕ್ತಿಯೆಂದು ನಂಬಿಕೊಂಡಿದ್ದ ಅಕ್ಷರಶಃ ಸೂಫಿ. ಮಹಮ್ಮದ್ ಅಲಿ, ಯುದ್ಧಕ್ಕೆ ಬೆನ್ನು ತಿರುಗಿಸಿದ ನಿಜಾರ್ಥದ ಧೀರ.
ಹೌದು. ಮಹಮ್ಮದ್ ಅಲಿ ಬಾಕ್ಸಿಂಗ್ ರಿಂಗ್’ನಾಚೆಗೂ ಪ್ರೇರಕ ಶಕ್ತಿ. ಆತನ ಬದುಕೊಂದು ರೋಚಕ ಕಥನ. ಈತನ ಮೊದಲ ಹೆಸರು ಕ್ಯಾಸ್ಸಿಯಸ್ ಮಾರ್ಸೆಲ್ಲಸ್ ಕ್ಲೇ. ಕಳೆದುಹೋದ ಬೈಕ್ ಹುಡುಕಲುಹೋಗಿ ಬಾಕ್ಸಿಂಗ್ ಕಲಿಯತೊಡಗಿದ ದಿನದಿಂದ ಕ್ಲೇ ಬದುಕು ವಿಲಕ್ಷಣ ಬಯಲಿನಲ್ಲಿ ಸಾಗತೊಡಗಿತು. ಮುಂದೆ ಆತ ನಡೆದದ್ದೇ ದಾರಿಯಾಯ್ತು. ಈ ನಡಿಗೆಯಲ್ಲಿ ಅವನು ಕಂಡು – ಕಟ್ಟಿಕೊಟ್ಟ ಸತ್ಯಗಳು ದಾರಿದೀಪವಾದವು. ಮುಂದೆ ಈತ ಕ್ರಿಶ್ಚಿಯಾನಿಟಿಯಿಂದ ಇಸ್ಲಾಮ್’ಗೆ ಮತಾಂತರಗೊಂಡ.
ಮಹಮ್ಮದ್ ಅಲಿಯ ಬದುಕು ಶುರುವಾಗಿದ್ದೇ ಸೋಲಿನಿಂದ. ಸೋಲು ಸದಾ ಗೆಲುವಿನ ಅವಕಾಶ ಹೊತ್ತುಕೊಂಡೇ ಇರುತ್ತದೆ. ಅದನ್ನು ದಕ್ಕಿಸಿಕೊಳ್ಳುವ ಛಲ ಇರಬೇಕಷ್ಟೆ. ಅಲಿಗೆ ಈ ಛಲ ಬದುಕಿನ ಅನಿವಾರ್ಯವೂ ಆಗಿತ್ತು. ಹಾಗೆಂದೇ ಗೆಲ್ಲುತ್ತ ಹೋದರು. ಬಾಕ್ಸಿಂಗ್ ಲೋಕದ ದಂತಕಥೆಯಾದರು. ಸಾಧನೆಯ ಆಕಾಶಕ್ಕೇರಿದರೂ ಅಲಿ ಗಾಳಿಯಲ್ಲಿ ತೇಲಲಿಲ್ಲ. ಯಾಕೆ ಗೊತ್ತಾ? ಅವರ ಕಾಲುಗಳು ನೆಲದಲ್ಲಿ ಭದ್ರವಾಗಿ ಬೇರೂರಿದ್ದವು. ಗೆಲುವು ಕೇವಲ ವ್ಯವಹಾರವಷ್ಟೆ ಅನ್ನುವ ಅರಿವು ಅವರಿಗಿತ್ತು. ತಾವು ಗೆದ್ದ ಮೊದಲ ಒಲಂಪಿಕ್ ಚಿನ್ನದ ಪದಕವನ್ನು ಒಹೈಯೋ ನದಿಗೆ ಎಸೆದಿದ್ದರು ಮಹಮ್ಮದ್ ಅಲಿ. “ಎದುರಾಳಿ ನನ್ನಿಂದ ಗೆಲುವನ್ನು ಕಸಿದುಕೊಳ್ಳಲು ಬಯಸಿದ್ದ. ನಾನು ಅದನ್ನು ಉಳಿಸಿಕೊಳ್ಳಲಿಕ್ಕಾಗಿ ಅವನಿಗೆ ಸಾಯುವಂತೆ ಹೊಡೆದೆ. ನಾನೀಗ ಆ ಗೆಲುವನ್ನು, ಪದಕವನ್ನು ನದಿಗೆ ಎಸೆದಿದ್ದೇನೆ. ನಾನೀಗ ನಿರಾಳ” ಎಂದವರು ಆತ್ಮಚರಿತ್ರೆ ‘ದ ಗ್ರೇಟೆಸ್ಟ್’ನಲ್ಲಿ ಬರೆದುಕೊಂಡಿದ್ದರು.
ಮಹಮ್ಮದ್ ಅಲಿ ಬದುಕಿನ ಅತಿ ಶ್ರೇಷ್ಠ ಸಾಧನೆ ಅವರ ಯುದ್ಧ ನಿರಾಕರಣೆ. ಯುದ್ಧಕ್ಕೆ ಬೆನ್ನು ತಿರುಗಿಸೋದು ಎಲ್ಲ ಸಲವೂ ಹೇಡಿಗಳ ಲಕ್ಷಣವೇ ಆಗಿರೋದಿಲ್ಲ. ಬಹಳ ಸಲ ಅದಕ್ಕೆ ಹೆಚ್ಚಿನ ಎದೆಗಾರಿಕೆಯೇ ಬೇಕಾಗುತ್ತೆ. ಬಲವಿದ್ದೂ ಯುದ್ಧ ನಿರಾಕರಿಸುವುದು ಧೀರರಿಂದಷ್ಟೇ ಸಾಧ್ಯವಾಗುವ ಕೆಲಸ. ಮಹಮ್ಮದ್ ಅಲಿ ಅಂತಹ ಧೀರರಲ್ಲಿ ಒಬ್ಬರಾಗಿದ್ದರು. ಅದು 1967ರ ಏಪ್ರಿಲ್ ತಿಂಗಳು. ಅಮೆರಿಕಾ, ವಿಯೆಟ್ನಾಮ್ ವಿರುದ್ಧ ಯುದ್ಧ ಸಾರಿತ್ತು. ಸೇನೆಗೆ ಸೇವೆ ಕಡ್ಡಾಯಗೊಳಿಸಲಾಗಿತ್ತು ಮತ್ತು ಅಮೆರಿಕಾ ಸರ್ಕಾರ ಮಹಮ್ಮದ್ ಅಲಿಯನ್ನು ಯುದ್ಧಕ್ಕೆ ಹಾಜರಾಗಲು ಸೂಚಿಸಿತು. ಆದರೆ ಅಲಿ ಒಂದೇ ಮಾತಿನಲ್ಲಿ ಅದನ್ನು ನಿರಾಕರಿಸಿಬಿಟ್ಟರು. “ವಿಯೆಟ್ನಾಮ್ ಜನರೊಡನೆ ನನಗೆ ಹೊಡೆದಾಟ ಬೇಕಿಲ್ಲ” ಅಂದುಬಿಟ್ಟರು. ಸೇನೆಯ ಕಡ್ಡಾಯ ಸೇವೆಯಿಂದ ತಪ್ಪಿಸ್ಕೊಳ್ಳೋದು ದಂಡನಾರ್ಹ ಅಪರಾಧವಾಗುತ್ತದೆಂದು ಸರ್ಕಾರ ಎಚ್ಚರಿಸಿತು. ಆದರೆ ಅಲಿ ಅವರ ಒಳಗಿದ್ದ ಸೂಫಿ ದಂಡನೆಗೆ ಹೆದರಲಿಲ್ಲ. ಅವರು ತಮ್ಮ ಮಾತಿಗೆ ಬದ್ಧವಾಗುಳಿದರು. ಪರಿಣಾಮ, ಜೂನ್ 20, 1967ರಂದು ಮಹಮ್ಮದ್ ಅಲಿಗೆ ಅಮೆರಿಕಾ ಸರ್ಕಾರ 5 ವರ್ಷಗಳ ಸೆರೆ, 10 ಸಾವಿರ ಡಾಲರ್ ದಂಡ ಹಾಗೂ 3 ವರ್ಷಗಳ ಕಾಲ ಬಾಕ್ಸಿಂಗ್’ನಲ್ಲಿ ಸ್ಪರ್ಧಿಸಲು ನಿಷೇಧದ ಸಜೆ ಹೇರಿತು.
ಮಹಮ್ಮದ್ ಅಲಿಯದ್ದು ಫೀನಿಕ್ಸ್ ಜೀವ. ಸೋತಷ್ಟೂ ಮರುಹುಟ್ಟು, ಮಹಾ ಜಿಗಿತ. ಕ್ಯಾಷಿಯಸ್ ಕ್ಲೇ ತನ್ನ ಗುಲಾಮೀ ಸಂಕೇತವಾದ ಕ್ರಿಶ್ಚಿಯಾನಿಟಿ ಮತ್ತು ಹೆಸರುಗಳನ್ನು ಬಿಟ್ಟುಕೊಟ್ಟು ಇಸ್ಲಾಮ್’ಗೆ ಮತಾಂತರಗೊಂಡು ಮಹಮ್ಮದ್ ಅಲಿ ಆದಾಗ ಬಿಳಿಯ ಅಮೆರಿಕನ್ನರು ಮುಖ ತಿರುವಿದರು. ಅಮೆರಿಕಾದಲ್ಲಿ ತನ್ನ ಜನಪ್ರಿಯೆತಗೆ ಕುಂದು ಉಂಟಾಯ್ತೆಂದು ಅಲಿ ಬಾಗಲಿಲ್ಲ, ಅದು ತನ್ನ ವಿಜಯವೆಂದು ಬೀಗಿದರು. ಯುದ್ಧದಲ್ಲಿ ಕಡ್ಡಾಯ ಸೇವೆ ನಿರಾಕರಿಸಿ ಜೈಲು ಸೇರಿದಾಗಲೂ ಅಷ್ಟೇ. ಪ್ರತಿರೋಧ ಮತ್ತು ಹೋರಾಟಗಳು ಗೆಲುವಿನ ಮುಖಗಳೇ ಅನ್ನೋದು ಅಲಿಯ ತಿಳಿವಳಿಕೆಯಾಗಿತ್ತು. ಸೆರೆಮನೆಯಿಂದ ಮರಳಿದ ಮೇಲೆ ಅಲಿ ಮತ್ತೆ ತಮ್ಮ ಫಾರ್ಮ್ ಕಂಡುಕೊಂಡರೂ 40ನೇವಯಸ್ಸಿಗೆ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿ ಹಿಂದೆ ಸರಿಯಬೇಕಾಯ್ತು. ಅಲಿಯ ದೇಹ ಬಸವಳಿದಿದ್ದರೂ ಚೇತನಕ್ಕೆಲ್ಲಿಯ ಸೋಲು!?
ಮಹಮ್ಮದ್ ಅಲಿಯದ್ದು ನಿರಂತರ ಹುಡುಕಾಟದ ಹಾದಿ. ಕಳೆದುಕೊಮಡ ಬೈಕ್ ಹುಡುಕುತ್ತ ಬಾಕ್ಸಿಂಗ್ ಅಖಾಡಕ್ಕೆ ಬಂದು ನಿಂತ ಹಾಗೇ ಬದುಕಿಗೊಂದು ಶ್ರದ್ಧೆ ಹುಡುಕುತ್ತ ಇಸ್ಲಾಮ್’ನ ಕದ ತಟ್ಟಿದ್ದರು. ಆದರೆ ಅಲ್ಲಿ ತೆರೆದುಕೊಂಡಿದ್ದು ಸೂಫೀ ಪಂಥ. ತಮ್ಮ 33ನೇ ವಯಸ್ಸಿನಲ್ಲಿ ಇಸ್ಲಾಮ್ ಸ್ವೀಕರಿಸಿದ್ದ ಅಲಿ, ಅದರ ಮೂಲಗುಣಗಳನ್ನು ಮೆಚ್ಚಿಕೊಂಡಿದ್ದರು. ಚಾಚೂತಪ್ಪದೆ ಧರ್ಮಪಾಲನೆ ಮಾಡುತ್ತಿದ್ದರು. ಅವರೇ ಹೇಳಿಕೊಂಡಿರುವಂತೆ, ಇಸ್ಲಾಮ್’ನಲ್ಲಿಯೂ ಕಂಡುಬಂದ ಸಂಕುಚಿತತೆ, ತೀವ್ರವಾದ ಮತ್ತು ಹಿಂಸೆಗಳನ್ನು ಕಂಡು ನೊಂದರು. ಸುನ್ನಿ ಮುಸ್ಲಿಮ್ ಪಂಥೀಯರಾಗಿದ್ದ ಅಲಿ, 2005ರಲ್ಲಿ ಸೂಫೀ ಪಂಥದ ಹಾದಿ ಹಿಡಿದರು. ಆ ಮೊದಲಿಂದಲೂ ಅವರೊಳಗಿದ್ದ ಶಾಂತಿಪ್ರಿಯ ಜೀವನಪ್ರೇಮಿಗೆ ನಿಜದ ನಲ್ದಾಣ ದೊರೆತಂತಾಗಿತ್ತು.
ಮಹಮ್ಮದ್ ಅಲಿ ಬಾಕ್ಸಿಂಗ್ ರಿಂಗ್’ನಾಚೆಗೂ ಇಷ್ಟವಾಗೋದು ಈ ಎಲ್ಲ ಕಾರಣಗಳಿಗಾಗಿಯೇ. ಅಲಿ ಇಲ್ಲವಾಗಿ ಎರಡು ವರ್ಷ ಕಳೆದಿವೆ. ಈ ಹೊತ್ತು ನಾವು ಅವರನ್ನು; ಖುದ್ದು ಅಲಿ ಬಯಸಿದ್ದಂತೆ ಒಬ್ಬ ‘ಕಪ್ಪು’ ಮನುಷ್ಯನಾಗಿ, ಹೆವಿವೈಟ್ ಚಾಂಪಿಯನ್ ಆಗಿ, ‘ಹಾಸ್ಯಪ್ರಜ್ಞೆಯ’ ವ್ಯಕ್ತಿಯಾಗಿ, ತರತಮ ವಿರುದ್ಧದ ಹೋರಾಟಗಾರನಾಗಿ, ಯುದ್ಧವಿರೋಧಿಯಾಗಿ ನೆನೆಯಬೇಕಿದೆ. ಅವರೊಂದು ಪ್ರೀತಿಪೂರ್ಣ ಹೃದಯದ ಚೆಂದದ ಜೀವವಾಗಿದ್ದರು ಎಂದು ಕೂಡಾ!
1 Comment