ಸದಾ ಸುಳ್ಳು ಹೇಳುವವರು ಅನುಭವಿಸಬಹುದಾದ ಅತಿ ದೊಡ್ಡ ಶಿಕ್ಷೆ ಎಂದರೆ, ಅವರು ಅಪರೂಪಕ್ಕೆ ನಿಜ ಹೆಳಿದರೂ ಯಾರೂ ನಂಬದೇ ಇರುವುದು!
ಪ್ರಾಥಮಿಕ ಶಾಲೆಯಲ್ಲಿ ಓದಿದ “ಹುಲಿ ಬಂತು ಹುಲಿ” ಕಥೆ ನೆನಪಾಯಿತೇ? ಯಾವಾಗಲೂ ಸುಳ್ಳು ಹೇಳುವ ಕೆಟ್ಟ ರೂಢಿಯಾಗಿಬಿಟ್ಟರೆ; ಮೊದಲನೆಯದಾಗಿ, ನಮಗೆ ಅದರಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಎರಡನೆಯದಾಗಿ, ನಾವು ನಿಜ ಹೇಳತೊಡಗಿದರೂ ಯಾರೂ ನಂಬುವುದಿಲ್ಲ!
ಇದರಿಂದ ನಾವು ಹಲವು ಬಗೆಯ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಸಮಾಜದಲ್ಲಿ ಮಾನ ಹಾನಿಯಾಗುವುದಂತೂ ಖಾತ್ರಿ. ಜೊತೆಗೆ ಆರ್ಥಿಕ ನಷ್ಟ, ಉದ್ಯೋಗ ಸ್ಥಳದಲ್ಲಿ ಅಪನಂಬಿಕೆ ಮೊದಲಾದ ಸಾಧ್ಯತೆಗಳೂ ಇರುತ್ತವೆ. ಇವೆಲ್ಲಕ್ಕಿಂತ, ಪ್ರೀತಿಪಾತ್ರರ ವಿಶ್ವಾಸ ಕಳೆದುಕೊಳ್ಳುವುದು ನಾವು ಅನುಭವಿಸುವ ಬಹಳ ದೊಡ್ಡ ಶಿಕ್ಷೆ. ಸುಳ್ಳುಬುರಕರಾದ ನಾವು, ನಿಜ ಹೇಳಿದಾಗ ಇತರರು ನಂಬದೆಹೋದರೆ ಎಷ್ಟು ನೋವಾಗುತ್ತದೋ ಬಿಡುತ್ತದೋ… ನಮ್ಮ ಆಪ್ತರು, ತೀರಾ ನಮ್ಮ ಪ್ರೀತಿಪಾತ್ರರು ನಂಬದೆಹೋದರೆ, ಎದೆಬಿರಿಯುವಷ್ಟು ನೋವಾಗುತ್ತದೆ.
ಈ ನೋವೇ ನಮಗೆ ಶಿಕ್ಷೆ. ಆದ್ದರಿಂದ, ಸಾಧ್ಯವಾದಷ್ಟೂ ನಿಜವನ್ನೇ ಹೇಳುತ್ತಿರಲು ಪ್ರಯತ್ನಿಸಿ. ಗಂಭೀರ ಸುಳ್ಳುಗಳಿರಲಿ, ತಮಾಷೆಯ ಸುಳ್ಳುಗಳನ್ನೂ ಹತ್ತಿರ ಸುಳಿಯಲು ಬಿಡಬೇಡಿ. ಸುಳ್ಳಿನ ಮೇಲೆ ಕಟ್ಟಿದ ಸೌಧ, ಸುಳಿಗಾಳಿಗೂ ಉರುಳಿ ಬೀಳುತ್ತದೆ. ಸುಳ್ಳುಗಳ ಮೇಲೆ ನಿರ್ಮಿಸಿಕೊಂಡ ನಮ್ಮ ವ್ಯಕ್ತಿತ್ವವೂ ಹಾಗೆಯೇ….