ಸ್ವರ್ಗ  ಮತ್ತು ನರಕದ ದಾರಿ ಶುರುವಾಗೋದು ಎಲ್ಲಿಂದ? : ಝೆನ್ ಕಥೆ

ಸಮುರಾಯ್ ಯೋಧ ನೊಬೊಶಿ,ಝೆನ್ ಗುರು ಹಕುಇನ್ ಬಳಿ ಬಂದ.

ಅದೂ ಇದೂ ಮಾತಾಡುತ್ತ, “ಮಾಸ್ಟರ್…. ಸ್ವರ್ಗ ಮತ್ತು ನರಕದ ದಾರಿ ಶುರುವಾಗೋದು ಎಲ್ಲಿಂದ?” ಕೇಳಿದ.

ಅವನನ್ನೆ ದಿಟ್ಟಿಸುತ್ತ ಹಕುಇನ್ ಕೇಳಿದ, “ಯಾರು ನೀನು?”

“ನಾನು ನೊಬೊಶಿ. ನಾನೊಬ್ಬ ಸಮುರಾಯ್” ಉತ್ತರಿಸಿದ ನೊಬೊಶಿ.

ಹಕುಇನ್ ಗೇಲಿ ಮಾಡಿದ, “ಸಮುರಾಯ್! ಸೈನಿಕ !! ನಿನ್ನನ್ನು ನೋಡಿದರೆ ಒಂದು ಹುಳವೂ ಹೆದರಲಾರದು. ನೀನು ರಾಜ್ಯವನ್ನು ಹೇಗೆ ತಾನೆ ರಕ್ಷಿಸಬಲ್ಲೆ!”

ನೊಬೊಶಿಗೆ ಸಿಟ್ಟು ಬಂತು. ಒರೆಗೆ ಕೈ ಹಾಕಿ ಕತ್ತಿಯ ಸದ್ದು ಮಾಡಿದ.

“ಹೋ! ನಿನ್ನ ಬಳಿ ಕತ್ತಿ ಇದೆ… ಆದರೆ ಈ ಕತ್ತಿಯಿಂದ ನನ್ನನ್ನು ಕತ್ತರಿಸಲು ಸಾಧ್ಯವಿಲ್ಲ. ಅದು ನಿನ್ನ ಹಾಗೇ ಬಡ್ಡು” ಅಂದ ಹಕುಇನ್.

ಈಗ ನೊಬೊಶಿ ಕತ್ತಿಯನ್ನು ಒರೆಯಿಂದ ಹೊರಗೆಳೆದು ಹಕುಇನ್ ಕುತ್ತಿಗೆ ಬಳಿ ಹಿಡಿದ.

“ನೋಡು ಸಮುರಾಯ್, ಇಲ್ಲಿಂದ ಶುರುವಾಗುತ್ತೆ ನರಕ”

ಹಕುಇನ್ ಮಾತಿನ ಅರ್ಥ ನೊಬೊಶಿಗೆ ಹೊಳೆಯಿತು.

ಕೂಡಲೇ ನಾಚಿ ಕತ್ತಿಯನ್ನು ಒರೆಯೊಳಗೆ ಇಟ್ಟ. ಗುರುವಿನ ಕಾಲಿಗೆ ಬಿದ್ದ.

“ನೋಡು ನೊಬೊಶಿ… ಇಲ್ಲಿಂದ ಶುರುವಾಗುತ್ತೆ ಸ್ವರ್ಗ” ಹಕುಇನ್ ಮಾತು ಮುಗಿಸಿದ.

(ಸಂಗ್ರಹ ಮತ್ತು ಅನುವಾದ : ಅಲಾವಿಕಾ)

Leave a Reply