ದೇಗುಲಗಳಿಗೆ ಪ್ರವೇಶ ನಿಷೇಧವೇ ಧರ್ಮ ಬಾಹಿರ : ಅರಳಿಮರ ಸಂವಾದ

ಮಹಿಳೆಯರು ಕೆಲವು ದೇವಾಲಯಗಳನ್ನು ಪ್ರವೇಶಿಸುವದಕ್ಕೆ ನಿಷೇಧವೇಕೆ? ಈ ಪ್ರಶ್ನೆ ‘ಶಬರಿಮಲೆ ತೀರ್ಪು’ ಹಿನ್ನೆಲೆಯಲ್ಲಿ ಮತ್ತೆ ಚಾಲ್ತಿಗೆ ಬಂದಿದೆ. ಈ ಚರ್ಚೆಯ ಜಾಡು ಹಿಡಿದು ನಾವು ತಿಳಿಯ ಬೇಕಾದ ಸಾಕಷ್ಟು ಸಂಗತಿಗಳಿವೆ. ಹಲವು ಆಯಾಮಗಳಿಂದ ನಾವು ಇದನ್ನು ನೋಡಬೇಕಾಗಿದೆ. ಈ ನಿಟ್ಟಿನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಬಹಳ ಮನೋಜ್ಞವಾಗಿ ಮತ್ತು ಆಧಾರಗಳೊಡನೆ ಬರೆಯುವ ಅಧ್ಯಾತ್ಮಾಸಕ್ತಿಯ ಯುವಕ ಅಪ್ರಮೇಯ ಅವರ ಸ್ಪಂದನೆಯನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ನೀವೂ ಈ ಚರ್ಚೆಯನ್ನು ಮುಂದುವರಿಸಬಹುದು. ಅರಳಿಬಳಗವೂ ಇದನ್ನು ಮುನ್ನಡೆಸಲಿದೆ. 

ನಿಮ್ಮ ಸ್ಪಂದನೆಯನ್ನು aralimara123@gmail.comಗೆ mail ಮಾಡಿ.

wo
ಈ ಚಿತ್ರವನ್ನು The Quint ಜಾಲತಾಣದಿಂದ ತೆಗೆದುಕೊಳ್ಳಲಾಗಿದೆ

ಅಪ್ರಮೇಯ

ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ಪ್ರವೇಶಿಸಬಹುದೇ ? 
ಮೊದಲನೆಯದಾಗಿ ಅಧ್ಯಾತ್ಮ ಔನತ್ಯದ ಉತ್ತುಂಗದಲ್ಲಿರುವವರಿಗೆ ಇದೊಂದು ಅತ್ಯಂತ ಬಾಲಿಶವಾದ ಸಂಗತಿ.

ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರು ಪ್ರವೇಶ ಮಾಡಬಾರದು ಎನ್ನುವುದಾದರೆ ಪ್ರತಿಯೊಂದು ಗ್ರಾಮಗಳಿಂದ ಹಿಡಿದು ಹಳ್ಳಿ ಹಳ್ಳಿಯಲ್ಲಿಯೂ ಇರುವ ಗ್ರಾಮ ದೇವತೆಯ ದೇವಾಲಯದೊಳಗೆ ಪುರುಷರು ಪ್ರವೇಶಿಸುವುದು ಯಾವ ನ್ಯಾಯ ?

ಎಲ್ಲರೂ ದೇವರ ಮಕ್ಕಳು ಎನ್ನುವುದನ್ನು ವಿರೋಧವಿಲ್ಲದೆ ಒಪ್ಪಿಕೊಳ್ಳುತ್ತೇವೆ. ಆದರೆ ಆ ತಂದೆ ಎನಿಸಿಕೊಂಡ ದೇವರ ಸನ್ನಿಧಿಯಲಲ್ಲೆ ಈ ತಾರತಮ್ಯ ಬೇಕೆ ?
ತಮ್ಮ ಮಕ್ಕಳಲ್ಲೇ ಭೇದ ತಾರತಮ್ಯ ಮಾಡುವಂತಹ ನೀಚನೆ ಅವನು ?

ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ | 
ಈ ಭೂಮಿಯೇ ತಾಯಿ ನಾನವಳ ಪುತ್ರ ಅನ್ನುತ್ತದೆ ಅಥರ್ವ ವೇದ.
[ ಅಥರ್ವ ವೇದ 12.1.12 ]

ಧರ್ಮ ವಿರೋಧಿಗಳೇ ಹೇಳಿ… ಮಹಿಳೆಯರು ಅಯ್ಯಪ್ಪನ ಸನ್ನಿಧಿಗೆ ಪ್ರವೇಶಿಸಬಾರದೆಂದಿದ್ದರೆ ಸನಾತನಿಗಳ ಪರಮಪ್ರಮಾಣವಾದ ವೇದವು ಈ ಭೂಮಿಯೇ ತಾಯಿ ಎಂದು ಹೇಳಿದ್ದು ಯಾವ ಪುರುಷಾರ್ಥಕ್ಕೆ ?

ಭೂಮಾತೆ, ಭಾರತ ಮಾತೆ, ಕರ್ನಾಟಕ ಮಾತೆ ವೇದ ಮಾತೆ ,ಗೋ ಮಾತೆ ಇತ್ಯಾದಿ ಇತ್ಯಾದಿಯಾಗಿ ನಮ್ಮ ಧರ್ಮ ಹಾಗೆ ಹೀಗೆ ಎಂದು ಪುಂಖಾನು ಪುಂಖವಾಗಿ ಬಾಷಣ ಬಿಗಿಯುವವರು ತಮ್ಮ ಧರ್ಮದ ಧ್ಯೇಯವಾಕ್ಯಗಳನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದಾರೆ ಎನ್ನುವುದು ಈ ಮೂಲಕ ವ್ಯಕ್ತವಾಗುತ್ತಿದೆ.

ಅಯ್ಯಪ್ಪನ ಸನ್ನಿಧಿ ಭೂಮಾತೆಯ ಹೊರಗಿದೆಯೋ ? ಒಳಗಿದೆಯೋ ? ಮಾತೆ ಎದೆಯ ಮೇಲೆ ನಿಂತು ಮಹಿಳೆಯರಿಗೆ ದೇವಾಲಯದೊಳಗೆ ಪ್ರವೇಶವಿಲ್ಲ ಎನ್ನುವುದು ಅತ್ಯಂತ ಬಾಲಿಶವೆನಿಸದೆ ಇರಲಾರದು. ಇದೊಂದು ಧರ್ಮದ್ರೋಹವಲ್ಲದೆ ಮತ್ತಿನ್ನೇನು ?

ಬ್ರಹ್ಮಚರ್ಯವೆಂದರೆ ಬಲವಂತವಾಗಿ ಒತ್ತಾಯ ಪೂರ್ವಕವಾಗಿ ಮಾಡುವಂತದ್ದಲ್ಲ ಅದು ಸಹಜವಾಗಿ ಬರುವಂತಾದ್ದು.

ಧರ್ಮದ ಆಧಾರವೇ ಇಲ್ಲದ ಕೆಲವು ವ್ಯಕ್ತಿಗಳ ಅಜ್ಞಾನದ ಫಲವೇ ”ಮಸೀದಿ, ಮಂದಿರದೊಳಗೆ ಮಹಿಳೆಯರು, ಪ್ರವೇಶಿಸಬಾರದೆನ್ನುವುದು” ಧರ್ಮದ ಆಧಾರವಿಲ್ಲದ ಅಜ್ಞಾನಭರಿತ ಇಂತಹ ಆಚರಣೆ ನಂಬಿಕೆಗಳೇ ಇಂದು ಸನಾತನ ಧರ್ಮದಮೂಲ ತತ್ವಗಳ ಮೇಲೆ ಸವಾರಿ ಮಾಡುತ್ತಿವೆ. ಧರ್ಮ ತಿರುಳನ್ನೇ ತಿಳಿಯದೆ ಜ್ಞಾನ ರಹಿತ ಆಚರಣೆಯನ್ನೇ ಧರ್ಮವೆಂದು ಭ್ರಮಿಸಿ ವಿಚಾರಮಂಥನವನ್ನು ವಿರೋಧಿಸುವವರೆ ಧರ್ಮಕ್ಕೆ ಮೂಲ ಕಂಟಕವಾಗಿರುವುದು.

ಮೌನದ ಪ್ರತಿಕವೇ ಮೂರ್ತಿ
ತಾದಾತ್ಮ್ಯವೇ ದರ್ಶನ
ಅನುಸಂಧಾನವೇ ಭಕ್ತಿ
ಅನಂದವೇ ಪ್ರಸಾದ

ಸಹೃದಯಂ ಸಾಂಮನಸ್ಯನಮಿದ್ವೇಷಂ ಕೃಣೋಮಿ ವಃ | 
ಅನ್ಯೋ ಅನ್ಯಮಭಿಹರ್ಯತ ವತ್ಸಂ ಜಾತಮಿವಾನ್ಮಾ || 
[ಅಥರ್ವ ವೇದ] 

ನಿಮ್ಮ-ನಿಮ್ಮೊಳಗೆ ತಾರತಮ್ಯದಿಂದ ಜಗಳವಾಡುವ ಮನುಷ್ಯರೇ ! ಪರಸ್ಪರ ದ್ವೇಷಭಾವನೆಯನ್ನು ಅಳಿಸಿಹಾಕಿ, ಹಸುವು ವಾತ್ಸಲ್ಯದಿಂದ ಕರುವನ್ನು ಪ್ರೀತಿಸುವಂತೆ ಒಬ್ಬರನ್ನೊಬ್ಬರು ಪ್ರೀತಿಸಿ ಒಬ್ಬರು ಮತ್ತೊಬ್ಬರ ಮನಸ್ಸನ್ನು ಗೆಲ್ಲಿರಿ.
ಅಥರ್ವ ವೇದದ ಈ ವಾಕ್ಯವು ಎಲ್ಲರಿಗೂ ಸ್ಪೂರ್ತಿದಾಯಕವಾಗಲಿ.

 

3 Comments

Leave a Reply