ದ್ವೇಷವನ್ನು ದ್ವೇಷದಿಂದ ಗೆಲ್ಲಬಯಸುವುದೇ ನೀಚತನ! : ಬುದ್ಧಗಾಥೆ

ದ್ವೇಷವನ್ನು ಕ್ರೋಧದಿಂದ ಗೆಲ್ಲಲಾಗದು. ಅಕ್ರೋಧವೇ ದ್ವೇಷವನ್ನು ಮಣಿಸುವ ಮಾರ್ಗ ಅನ್ನುತ್ತಾನೆ ಬುದ್ಧ ಗುರು. ದ್ವೇಷವನ್ನು ಬಿಟ್ಟು, ಸಹನೆಯಿಂದ ನಡೆಯುವಂತೆ ಸೂಚಿಸುವ ಕೆಲವು ಬುದ್ಧ ಗಾಥೆಗಳು ಇಲ್ಲಿವೆ. 

  • ಸಹನೆಗಿಂತ ಮಿಗಿಲಾದ ಶಿಸ್ತಿನ ನಿಯಮವಿಲ್ಲ, ಸಹನೆಯು ತಪಗಳಲ್ಲೇ ಶ್ರೇಷ್ಠವಾದುದು. ಸಹನೆಗಿಂತ ಮಿಗಿಲಾದ ಶ್ರೇಷ್ಠ ಗುಣ ಇನ್ನೊಂದಿಲ್ಲ. ಯಾರ ಬಲವು ಸಹನೆಯೋ ಆತನೇ ಶ್ರೇಷ್ಠ.
  • ಡಕಾಯಿತರು ಗರಗಸದಿಂದ ತುಂಡು ತುಂಡಾಗಿ ಕತ್ತರಿಸಿದರೂ, ಯಾರ ಮನಸ್ಸು ದ್ವೇಷ ಭಾವನೆಯನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲವೋ ಅವರು ಶ್ರೇಷ್ಠರು.
  • ಕೋಪವನ್ನು ಜಯಿಸುವವರೇ ನಿಜವಾದ ವಿಜಯಿಗಳು. ಅದರ ಬದಲು ನೀವು ಕೋಪಿಯನ್ನು ಕೋಪದಿಂದ ಜಯಿಸಲು ಹೋದರೆ, ನೀವೇ ಪರಮ ನೀಚರಾಗಿಬಿಡುತ್ತೀರಿ ಮತ್ತು ಜಯಿಸಲು ಕಠಿಣವಾದ ನಿಜ ಯುದ್ಧದಲ್ಲಿ ಸೋಲುವಿರಿ. ನಿಮ್ಮ ಶತ್ರು ಆನಂದ ತಾಳುವ ಕಾರ್ಯ ಮಾಡುತ್ತಿದ್ದೀರಿ. ನೀವು ಮರದ ತುಂಡಿನ ಸಮಾನರಾಗುವಿರಿ.
  • ನಾವು ಪರರಿಗಾಗಿ ಏನನ್ನು ಬಯಸುತ್ತೇವೆಯೋ ಅವೆಲ್ಲವೂ ನಮಗೆ ಮರಳಿ ದೊರೆಯುತ್ತವೆ. ಅವೆಲ್ಲವೂ ಚಂಡಿನಂತೆ ಪುಟಿಯುತ್ತವೆ. ಪರರಿಗೆ ಕೆಟ್ಟದ್ದನ್ನು ಇಚ್ಛಿಸಿದರೆ ನಮಗೆ ಕೆಟ್ಟದಾಗುತ್ತದೆ. ಒಳಿತನ್ನು ಬಯಸಿದರೆ, ಒಳಿತು.
  • ಮಾನವರಲ್ಲಿ ಏನಾದರೂ ಒಂದು ಒಳ್ಳೆಯ ಗುಣ ಇದ್ದೇ ಇರುತ್ತದೆ. ಅದನ್ನು ನೆನೆಯುತ್ತಾ ಮೈತ್ರಿಯನ್ನು ತೋರಬೇಕು ಹೊರತು ಶತ್ರುತ್ವ ಸಾಧಿಸುವುದಲ್ಲ.
    ಹಾಗೂ ಒಂದು ವೇಳೆ ಆತನಲ್ಲಿ ಏನೂ ಒಳ್ಳೆಯ ಗುಣವಿಲ್ಲದಿದ್ದರೆ, ಆತನ ಮುಂದಿನ ಗತಿ ಅತ್ಯಂತ ಭೀಕರ ಎಂಬುದು ತಿಳಿದು ಆತನಲ್ಲಿ ಮೈತ್ರಿಯನ್ನು ತೋರಬೇಕು.
  • ದ್ವೇಷ ಭಾವನೆ ಉಳ್ಳವರು ಇತರರ ಸದ್ಗುಣವನ್ನುಕಾಣಲಾರರು. ಅವರಿಗೆ ಸತ್ಯ ನೋಡುವ ಬಯಕೆಯು ಇರುವುದಿಲ್ಲ. ಯಾವಾಗ ದ್ವೇಷವು ಮಾನವನ ಮನಸ್ಸನ್ನು ಆವರಿಸುವುದೋ ಆಗ ಬಲಿಷ್ಠವಾದ ಕತ್ತಲೆಯು, ಅಜ್ಞಾನವು ಆಳ್ವಿಕೆ ನಡೆಸುತ್ತದೆ
  • ಯಾರು ದ್ವೇಷವನ್ನು ದ್ವೇಷದಿಂದ ಗೆಲ್ಲಲು ಮುಂದಾಗುತ್ತಾರೋ, ಅವರು ಮೊದಲನೆಯವರಿಗಿಂತ ನೀಚರು. ಯಾರು ದ್ವೇಷಿಗೆ ದ್ವೇಷ ತೋರುವುದಿಲ್ಲವೋ ಅವರು ಕಠಿಣವಾದ ಯುದ್ಧದಲ್ಲಿ ಜಯಶಾಲಿಯಾಗುತ್ತಾರೆ. 
  • ಕ್ರೋಧದಿಂದ ದ್ವೇಷವು ನಾಶವಾಗಲಾರದು. ಅಕ್ರೋಧದಿಂದ ಮಾತ್ರ ಅದು ನಾಶವಾಗುತ್ತದೆ. ಇದೇ ಸನಾತನ ನಿಯಮ.

(ಆಕರ: ಅನೀಶ್ ಬೋಧ್  ಅವರ ಬರಹ ಸಂಗ್ರಹ)

Leave a Reply