ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶ ನಿಷೇಧ ಪ್ರಾಚೀನ ಸಂಪ್ರದಾಯವಲ್ಲ : ಅರಳಿಮರ ಸಂವಾದ

ಶಬರಿಮಲೈ ದೇಗುಲ ಪ್ರವೇಶ ನಿಷೇಧ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಅರಳಿ ಬಳಗ ಸಂವಾದಕ್ಕೆ ಚಾಲನೆ  ನೀಡಿತ್ತು. ಈ ನಿಟ್ಟಿನಲ್ಲಿ ಅಪ್ರಮೇಯ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು (ಕೊಂಡಿ ಇಲ್ಲಿದೆ: https://aralimara.wordpress.com/2018/10/01/samvada-6/ ) ಸಂವಾದದ ಮುಂದುವರಿಕೆಯಾಗಿ ಲೀಲಾ ಹರಕೆರೆ ತಮ್ಮ ಅಭಿಪ್ರಾಯವನ್ನು ಇಲ್ಲಿ ಹಂಚಿಕೊಂಡಿದ್ದಾರೆ.  

ಬರಿಮಲೈ ದೇಗುಲಕ್ಕೆ ಪ್ರವೇಶಿಸಲು ಮಹಿಳೆಯರಿಗೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ‘ಅರಳಿಮರ’ ಸಂವಾದ ಗಮನಿಸಿದೆ.

ಅಪ್ರಮೇಯ ಅವರು ಬರೆದಿರುವ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ.

ಅದೇ ವೇಳೆಗೆ, ನಾವು ಗಮನಿಸಬೇಕಾದ ಮತ್ತೊಂದು ಅಂಶವಿದೆ. ಶಬರಿಮಲೆ ದೇಗುಲ ಪ್ರವೇಶಕ್ಕೆ ಮಹಿಳೆಯರ ಮೇಲಿನ ನಿಷೇಧ ಪ್ರಾಚೀನ ಸಂಪ್ರದಾಯ ಅಲ್ಲವೇ ಅಲ್ಲ. ತೀರಾ ಇತ್ತೀಚಿನವರೆಗೆ; ಅಂದರೆ, 80ರ ದಶಕದವರೆಗೂ ಶಬರಿಮಲೆ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರು ಭೇಟಿ ನೀಡುತ್ತಿದ್ದ ಪುರಾವೆ ಇದೆ. ಅಷ್ಟೇ ಏಕೆ, 1986ರಲ್ಲಿ ಇಲ್ಲಿ ನಟಿಯೊಬ್ಬರು ನರ್ತಿಸುವ ಚಿತ್ರೀಕರಣವೂ ನಡೆದಿತ್ತು ಎನ್ನಲಾಗಿದೆ. ಕೆಲವು ಪುರುಷರು ಮಹಿಳೆಯರ ದೇಗುಲ ಭೇಟಿಯನ್ನು ಪ್ರಶ್ನಿಸಿ 1972ರಲ್ಲಿ ಮೊದಲ ಬಾರಿಗೆ ರಗಳೆ ತೆಗೆದಿದ್ದರು. 1990ರಲ್ಲಿ ಕೇರಳ ಹೈಕೋರ್ಟ್’ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ನಂತರ ನಿಷೇಧ ಜಾರಿಗೆ ಬಂದಿತು ಎಂದು ಅಧಿಕೃತ ಮೂಲಗಳು ತಿಳಿಸುತ್ತವೆ.

ಈ ಕುರಿತು ಸ್ಪಷ್ಟ ಮಾಹಿತಿಯೊಡನೆ ಸರಣಿ ಟ್ವೀಟ್ ಮಾಡಿದ್ದ ಲೇಖಕ ಎನ್.ಎಸ್.ಮಾಧವನ್, “1986ರಲ್ಲಿ ದೇಗುಲದ ಮೆಟ್ಟಿಲುಗಳ ಮೇಲೆಯೇ ತಮಿಳು ಸಿನೆಮಾವೊಂದರ ಚಿತ್ರೀಕರಣ ನಡೆದಿದ್ದು, ಅದರಲ್ಲಿ ನಟಿಯೊಬ್ಬರು ನರ್ತಿಸಿದ್ದರು. ಇದಕ್ಕೆ ದೇವಸ್ವಂ 7,500 ರೂ.ಗಳ ರಾಯಧನ ಪಡೆದಿತ್ತು” ಎಂಬ ಮಾಹಿತಿ ನೀಡಿದ್ದಾರೆ.

ಟಿಕೆ ನಾಯರ್ ಕೂಡಾ ತಮ್ಮ ‘ಚೋರೂಣು’ (ಅನ್ನಪ್ರಾಶನ) ನಡೆದಿದ್ದು ಶಬರಿಮಲೈನಲ್ಲೇ. ನನ್ನ ತಾಯಿಯೇ ದೇವಸ್ಥಾನದಲ್ಲಿ ನನಗೆ ಅನ್ನಪ್ರಾಶನ ಮಾಡಿಸಿದ್ದಾಗಿ ಹೇಳಿಕೊಂಡಿದ್ದಾರೆ. ಶಬರಿಮಲೈನಲ್ಲಿ ಮಕ್ಕಳಿಗೆ ‘ಚೋರೂಣು’ ಮಾಡಿಸಲು ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಶಬರಿಮಲೆಗೆ ಭೇಟಿ ನೀಡುತ್ತಿದ್ದರು ಎಂದು ಕೇರಳದ ಹಲವು ಹಿರಿಯರು ನೆನೆಸಿಕೊಂಡಿದ್ದಾರೆ.

ಈ ಎಲ್ಲವೂ ಶಬರಿಮಲೈನಲ್ಲಿ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇದು ಪ್ರಾಚೀನ ರೂಢಿಯೂ ಅಲ್ಲ, ಸಂಪ್ರದಾಯವೂ ಅಲ್ಲ. ಇದು ಪಾರಂಪರಿಕ ಧಾರ್ಮಿಕ ನಂಬಿಕೆಯಂತೂ ಆಗಿರಲೇ ಇಲ್ಲ. ಹಾಗಾದರೆ ಸುಪ್ರೀಂ ತೀರ್ಪಿನಿಂದ ಧಕ್ಕೆ ಆಗಿದ್ದು ಯಾರಿಗೆ!? ಇತ್ತೀಚೆಗೆ ಮಹಿಳೆಯರಿಗೆ ನಿರ್ಬಂಧ ಹೇರಿದ್ದ ಪುರುಷರಿಗೆ ಮತ್ತು ಅವರಿಂದ ಪ್ರಭಾವಿತಗೊಂಡ ಮನಸ್ಥಿತಿಗಳಿಗೆ ಅಲ್ಲವೆ? 

ಇಷ್ಟಕ್ಕೂ ಅವರು ಶಬರಿಮಲೈನಲ್ಲಿ ಮಹಿಳೆಯರ ಪ್ರವೇಶ ನಿಷೇಧಕ್ಕೆ “ಸಂಪ್ರದಾಯ”ದ ಕಾರಣವೊಡ್ಡಿ, “ಧಾರ್ಮಿಕ ನಂಬುಕೆ” ಎಂದು ಭಾವುಕವಾಗಿ ಸುಳ್ಳನ್ನು ಬಿತ್ತುತ್ತಿರುವುದು ಯಾವ ಕಾರಣಕ್ಕೆ? ಸುಳ್ಳಿನಿಂದ ಧರ್ಮವನ್ನು ಉಳಿಸಲಾಗುತ್ತದೆಯೇ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ.

 

 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.