“ಮೊದಲು ನಿಮ್ಮ ಮನಸ್ಸಿನ ಸಾಮರ್ಥ್ಯವನ್ನು ಅರಿಯಿರಿ. ಆಮೇಲೆ ಅದನ್ನು ಪಳಗಿಸುವ ಪ್ರಯತ್ನ ಮಾಡಿ” ಅನ್ನುತ್ತದೆ ಸಾಮವೇದ.
ತನ್ನ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಲ್ಲವರಷ್ಟೆ ಜೀವನದಲ್ಲಿ ಯಶಸ್ಸು ಗಳಿಸುತ್ತಾರೆ. ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸದೆ ಹೋದರೆ ಅದು ನಮ್ಮನ್ನು ತನ್ನ ಅಡಿಯಾಳಾಗಿ ಮಾಡಿಕೊಳ್ಳುತ್ತದೆ. ಹಾಗೇನಾದರೂ ಆದರೆ ನಾವು ಚಂಚಲಚಿತ್ತರಾಗಿಬಿಡುತ್ತೇವೆ. ಹೀಗಾದಾಗ ನಾವು ಯಾವುದೇ ವಿಷಯದಲ್ಲಿ ದೃಢನಿರ್ಧಾರ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ದೃಢ ನಿರ್ಧಾರ ತಾಳದ ಹೊರತು ಯಾವುದೇ ಕೆಲಸ ಸುಸೂತ್ರವಾಗಿ ನಡೆಯುವುದೂ ಸಾಧ್ಯವಿಲ್ಲ.
ಆದರೆ ಈ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದು ಅಷ್ಟು ಸುಲಭವೇ? ಖಂಡಿತಾ ಅಲ್ಲ. ಯಾವುದೇ ವಿಷಯದ ಮೇಲೆ ನಿಯಂತ್ರಣ ಸಾಧಿಸಲು, ಅದನ್ನು ಪಳಗಿಸಲು, ಮೊದಲು ಅದರ ಸಾಮರ್ಥ್ಯವನ್ನು ಅರಿತಿರುವುದು ಅಗತ್ಯ. ಹಾಗೆಯೇ ಮನಸ್ಸಿನದೂ ಕೂಡಾ. ನಮಗೆ ಅದರ ಸಾಮರ್ಥ್ಯದ ಅರಿವೇ ಇಲ್ಲದ ಮೇಲೆ ಅದನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಹೇಗೆ? ಮನಸ್ಸು ಗಾಳಿಗಿಂತ ವೇಗವಾಗಿ ಚಲಿಸುವಂಥದ್ದು. ಅದಕ್ಕೆ ಕಡಿವಾಣ ಹಾಕುವ ಮೊದಲು ನಾವು ಸರಿಯಾದ ಸಿದ್ಧತೆ ಮಾಡಿಕೊಳ್ಳಬೇಕು. ಮನಸ್ಸನ್ನು ನಿಯಂತ್ರಿಸುತ್ತೇವೆಂದು ಒಟ್ಟಾರೆ ಪ್ರಯೋಗಗಳನ್ನು ನಡೆಸಿ ಉಪಯೋಗವಿಲ್ಲ. ಅದು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯೂ ಇರುತ್ತದೆ.
ಆದ್ದರಿಂದಲೇ ಸಾಮವೇದ ಹೇಳುತ್ತದೆ; “ಮೊದಲು ನಿಮ್ಮ ಸಾಮರ್ಥ್ಯವನ್ನು ಅರಿಯಿರಿ. ಅನಂತರ ಅದರ ಮೇಲೆ ನಿಯಂತ್ರಣ ಸಾಧಿಸಲು ಪ್ರಯತ್ನ ನಡೆಸಿ” ಎಂದು.