ಆದಿ ಶಕ್ತಿಯ ಒಂಭತ್ತು ರೂಪಗಳು : ನವರಾತ್ರಿ ವಿಶೇಷ

ಸಾಮಾನ್ಯ ಮನುಷ್ಯ ಯೋನಿಯಲ್ಲಿ ಜನಿಸಿದ ಪಾರ್ವತಿಯು ತನ್ನೊಳಗಿನ ಮಹಾಕಾಳಿ ಸ್ವರೂಪವನ್ನು ಕಂಡುಕೊಂಡು ಲೋಕೋಪಕಾರಿಯಾಗಿ ಮುನ್ನಡೆಯುವ ಹಲವು ಹಂತಗಳೇ ಆದಿಶಕ್ತಿಯ ನವ ರೂಪಗಳು. ಇವುಗಳ ಸಂಸ್ಮರಣೆಯೇ ನವರಾತ್ರಿ ~ ಆನಂದಪೂರ್ಣ

ಪ್ರಥಮಂ ಶೈಲಪುತ್ರೀ ಚ 
ದ್ವಿತೀಯಂ ಬ್ರಹ್ಮಚಾರಿಣಿ |
ತೃತೀಯಂ ಚಂದ್ರಘಂಟೇತಿ ಕೂಷ್ಮಾಂಡೇತಿ ಚತುರ್ಥಕಮ್ ||
ಪಂಚಮಂ ಸ್ಕಂದಮಾತೇತಿ 
ಷಷ್ಠಂ ಕಾತ್ಯಾಯಿನೀತಿ ಚ |
ಸಪ್ತಮಂ ಕಾಲರಾತ್ರಿಶ್ಚ 
ಮಹಾಗೌರೀತಿ ಚಾಷ್ಟಮಮ್ ||
ನವಮಂ ಸಿದ್ಧಿಧಾತ್ರೀ ಚ
ನವದುರ್ಗಾಃ ಪ್ರಕೀರ್ತಿತಾಃ |

ಸ್ವತಃ ಶಕ್ತಿಯೇ ಆಗಿರುವ ದೇವಿ ಒಂಭತ್ತು ರೂಪಗಳಲ್ಲಿ ಕಾಣಿಸಿಕೊಂಡು, ಸಕಲ ಜಡ ಚೇತನಗಳಲ್ಲಿ ಶಕ್ತಿ ತುಂಬುತ್ತಾಳೆ. ಈ ಒಂಭತ್ತೂ ರೂಪಗಳು ಒಂದೊಂದು ಸಂದೇಶವನ್ನು ನೀಡುತ್ತವೆ. ದೇವಿಯ ನವ ರೂಪಗಳನ್ನು ಆರಾಧಿಸುವುದೇ ನವರಾತ್ರಿಯ ಸಂಭ್ರಮಾಚರಣೆಗೆ ಹಿನ್ನೆಲೆ.
ಷಟ್ಚಕ್ರೋಪಾಸನೆಯಲ್ಲಿ ದೇವಿಯ ಮೊದಲ ಆರು ರೂಪಗಳ ಉಪಾಸನೆ ಮಾಡಲಾಗುತ್ತದೆ.

ಪ್ರಥಮಂ ಶೈಲಪುತ್ರೀ ಚ : ಮೊದಲನೆಯದಾಗಿ ಶೈಲಪುತ್ರಿ. ಹಿಮವಂತ – ಮೈನಾವತಿಯರ ಮಗಳಾಗಿ, ಮನುಷ್ಯ ಜನ್ಮದಲ್ಲಿ ಜನಿಸುವ ಪಾರ್ವತಿ ಶೈಲಪುತ್ರಿ ಎಂದು ಕರೆಸಿಕೊಳ್ಳುತ್ತಾಳೆ.
ಪ್ರತಿಯೊಂದು ಹೆಣ್ಣಿನಲ್ಲೂ ದೇವಿ ಇರುತ್ತಾಳೆ ಎಂಬುದನ್ನು ಈ ರೂಪವು ಸೂಚಿಸುತ್ತದೆ. ಮಾತ್ರವಲ್ಲ, ಪ್ರತಿಯೊಬ್ಬ ಮನುಷ್ಯರೊಳಗಿನ ದೈವತ್ವವನ್ನು ಇದು ಸಾರುತ್ತದೆ.
ಶಕ್ತಿಯು ಶೈಲಪುತ್ರೀ ರೂಪದಲ್ಲಿ ಮೂಲಾಧಾರದಲ್ಲಿ ನೆಲೆಸಿರುತ್ತಾಳೆ.

ದ್ವಿತೀಯಂ ಬ್ರಹ್ಮಚಾರಿಣೀ : ಆದಿ ಶಕ್ತಿಯ ಎರಡನೆ ರೂಪ ಬ್ರಹ್ಮಚಾರಿಣಿ. ಅರ್ಥಾತ್, ಬ್ರಹ್ಮಪಥದಲ್ಲಿ ಚಲಿಸುವವಳು.
ಬ್ರಹ್ಮ ಎಂದರೆ ತಪಸ್ಸು ಎಂಬರ್ಥವೂ ಇದೆ. ತಪಸ್ಸು ತ್ಯಾಗವನ್ನು ಬೇಡುತ್ತದೆ. ಪಾರ್ವತಿ ಶಿವನನ್ನು ಹೊಂದುವ ಏಕಮಾತ್ರ ಉದ್ದೇಶವನ್ನಿಟ್ಟುಕೊಂಡು ತಪಸ್ಸನ್ನು ಆಚರಿಸಲು ಸನ್ನದ್ಧಳಾದಳು. ಅದಕ್ಕಾಗಿ ಅವಳ ಯಾವ ತ್ಯಾಗವನ್ನಾದರೂ ಮಾಡಲು ನಿರ್ಧರಿಸಿದ್ದಳು.
ಸುದೀರ್ಘ ವರ್ಷಗಳ ಕಠಿಣ ತಪಸ್ಸಿನಿಂದ ಅವಳ ಬಯಕೆ ಈಡೇರಿತು. ಅವಿಚ್ಛಿನ್ನ ಭಕ್ತಿಭಾವದಲ್ಲಿ ಪಾರ್ವತಿ ತನ್ನನ್ನು ಶಿವನಿಗೆ ಸಮರ್ಪಿಸಿಕೊಂಡಳು. ಮತ್ತು, ಸ್ವತಃ ತಾನು ಮಹಾದೇವನ ಬದುಕಿನಲ್ಲಿ ಜೊತೆಯಾದಳು.
ನಮ್ಮ ಲಕ್ಷ್ಯವನ್ನು ಹೊಂದಲು ಅನುಸರಿಸಬೇಕಾದ ಮಾರ್ಗವನ್ನು ಬ್ರಹ್ಮಚಾರಿಣಿಯು ಬೋಧಿಸುತ್ತಾಳೆ. ಸತತ ಪ್ರಯತ್ನ ನಡೆಸಿದರೆ ಮಾತ್ರ ನಮ್ಮ ಗುರಿಯನ್ನು ತಲುಪುವುದು ಸಾಧ್ಯ ಎಂದು ಬ್ರಹ್ಮಚಾರಿಣಿಯ ರೂಪವು ತಿಳಿಸುತ್ತದೆ.
ಸಂಪೂರ್ಣ ನಿಷ್ಠೆಯಿಂದ, ಶ್ರದ್ಧೆಯಿಂದ ಪ್ರಯತ್ನ ನಡೆಸುತ್ತಲೇ ಇರಿ. ಸ್ವಯಂ ಭಗವಂತನೂ ನಿಮಗೆ ದಕ್ಕುತ್ತಾನೆ ಎಂದು ಬೋಧಿಸುತ್ತಾಳೆ.
ಆದಿ ಶಕ್ತಿಯು ಸ್ವಾಧಿಷ್ಟಾನ ಚಕ್ರದಲ್ಲಿ ಬ್ರಹ್ಮಚಾರಿಣೀ ರೂಪದಿಂದ ನೆಲೆಸಿರುತ್ತಾಳೆ.

ತೃತೀಯಂ ಚಂದ್ರಘಂಟೇತಿ : ಮೂರನೆಯದಾಗಿ ಚಂದ್ರಘಂಟಾ. ವಿವಾಹ ಸಂದರ್ಭದಲ್ಲಿ ಮಹಾದೇವ ಚಂದ್ರೇಶ್ವರನಾದರೆ, ಪಾರ್ವತಿ ಚಂದ್ರಘಂಟಾ ರೂಪ ಧರಿಸುತ್ತಾಳೆ.
ಚಂದ್ರೇಶ್ವರನ ದೇವಿ ಚಂದ್ರ ಘಂಟಾ, ವಿರಾಗಿ ಶಿವನನ್ನು ಗೃಹಸ್ಥನನ್ನಾಗಿ ಮಾಡುತ್ತಾಳೆ.
ಚಂದ್ರಘಂಟಾ, ಮಣಿಪೂರ ಚಕ್ರದಲ್ಲಿ ಸ್ಥಿತವಾಗಿರುತ್ತಾಳೆ. ಈ ಚಕ್ರದಿಂದ ಷಟ್ಚಕ್ರಗಳೆಲ್ಲವೂ ಒಂದು ಧಾರೆಯಲ್ಲಿ ಸೇರುತ್ತವೆ.
ಹಾಗೆಯೇ ಚಂದ್ರಘಂಟಾ, ಉಳಿದೆಲ್ಲ ರೂಪಗಳನ್ನೂ ಬೆಸೆಯುವ ಬಿಂದುವಾಗಿದ್ದಾಳೆ.

ಕೂಷ್ಮಾಂಡೇತಿ ಚತುರ್ಥಕಮ್ : ನಾಲ್ಕನೆಯದಾಗಿ ಕೂಷ್ಮಾಂಡಾ. ವಾಸ್ತವದಲ್ಲಿ ಆದಿಶಕ್ತಿ ಶಿವೆಯೇ ಸೃಷ್ಟಿಯ ಶಕ್ತಿಮೂಲ.
ಸೂರ್ಯನ ತೇಜಸ್ಸಿನ ಮೂಲಸ್ರೋತವೂ ಅವಳೇ ಆಗಿದ್ದಾಳೆ. ದೇವಿಯ ಪ್ರಖರವಾದ ಈ ಮೂಲ ರೂಪವು ಕೂಷ್ಮಾಂಡಾ ಎಂದು ಕರೆಯಲ್ಪಡುತ್ತದೆ.
ಕು – ಅಂದರೆ ಚಿಕ್ಕದು. ಊಷ್ಮ – ಅಂದರೆ ತೇಜಸ್ಸು. ಅಂಡ – ಅಂದರೆ ಗರ್ಭ. ಕೂಷ್ಮಾಂಡ – ಅಂದರೆ ತೇಜಸ್ಸಿನ ಚಿಕ್ಕ ಬೀಜವೊಂದು ತನ್ನ ಗರ್ಭದಲ್ಲಿ ಇಡೀ ಸೃಷ್ಟಿಯನ್ನೇ ಇರಿಸಿಕೊಂಡು ಪೊರೆಯುತ್ತಿದೆ ಎಂದರ್ಥ.
ಆದಿಶಕ್ತಿಯು ಕೂಷ್ಮಾಂಡಾ ಸ್ವರೂಪದಲ್ಲಿ ಜಗತ್ತನ್ನು ಪಾಲಿಸುತ್ತಿದ್ದಾಳೆ. ಅವಳು ಬ್ರಹ್ಮಾಂಡದ ಪ್ರತೀಕವಾಗಿದ್ದಾಳೆ. ಶಿವಶಕ್ತಿ ಇಬ್ಬರೂ ಒಬ್ಬರನ್ನೊಬ್ಬರು ಪರಿಪೂರ್ಣಗೊಳಿಸುತ್ತಾರೆ.
ಆದಿ ಶಕ್ತಿಯು ಕೂಷ್ಮಾಂಡಾ ರೂಪದಿಂದ ಅನಾಹತ ಚಕ್ರದಲ್ಲಿ ನೆಲೆಸಿರುತ್ತಾಳೆ.

ಪಂಚಮಂ ಸ್ಕಂದಮಾತೇತಿ: ಐದನೆಯದಾಗಿ ಸ್ಕಂದ ಮಾತೆ. ಸ್ಕಂದ ಎಂದರೆ ಕಾರ್ತಿಕೇಯ. ಕಾರ್ತಿಕೇಯನನ್ನು ರಕ್ಷಿಸಲು ತಾರಕಾಸುರನನ್ನು ಎದುರಿಸಿದ ಧೀರಮಾತೆ ಇವಳು.
ಮಾತೆಯು ಪುತ್ರನನ್ನು ನಿಯಂತ್ರಿಸುವಂತೆ ಶಕ್ತಿಯ ಈ ರೂಪವು ಸಕಲವನ್ನೂ ನಿಯಂತ್ರಿಸುತ್ತದೆ.
ಸ್ಕಂದಮಾತೆಯು ಆಜ್ಞಾ ಚಕ್ರದಲ್ಲಿ ನೆಲೆಸಿರುತ್ತಾಳೆ.

ಷಷ್ಠಂ ಕಾತ್ಯಾಯಿನೀತಿ ಚ : ಆರನೆಯ ಕಾತ್ಯಾಯನೀ ರೂಪವು ತ್ರಿಮೂರ್ತಿಗಳ ಶಕ್ತಿಯೊಡನೆ ಮಿಳಿತವಾಗಿ ಹೊರಹೊಮ್ಮಿದ ಪಾರ್ವತಿಯ ಸರ್ವಶಕ್ತ ರೂಪ. ಕಾತ್ಯಾತನಿಯು ಮಹಿಷಾಸುರ ಮರ್ದಿನಿಯಾಗಿ ನಮ್ಮೊಳಗಿನ ಮಾನವೇತರ ಸ್ವಭಾವವನ್ನು (ಮೃಗೀಯ ಸ್ವಭಾವವನ್ನು) ತೊಡೆದು ಹಾಕುತ್ತಾಳೆ. ಇವಳಿಗೆ ‘ದುರ್ಗಾ’ ಎಂಬ ಹೆಸರೂ ಇದೆ. 

ಸಪ್ತಮಂ ಕಾಲರಾತ್ರಿಶ್ಚ : ಏಳನೆಯ ಕಾಲರಾತ್ರೀ ಸ್ವರೂಪವು ತಮಸ್ಸಿನ ನಿವಾರಣೆಗಾಗಿಯೇ ಇದೆ. ಈ ಸ್ವರೂಪದಲ್ಲಿ ಆದಿಶಕ್ತಿಯು ಶುಂಭನ ಸಂಹಾರ ಮಾಡಿದಳು.
ಅಜ್ಞಾನ, ಅಂಧಕಾರಗಳ ನಿವಾರಣೆಯನ್ನು ಕಾಲರಾತ್ರೀ ಸ್ವರೂಪವು ಸೂಚಿಸುತ್ತದೆ.

ಮಹಾಗೌರೀತಿ ಚಾಷ್ಟಮಮ್ : ಎಂಟನೆಯದಾಗಿ ಮಹಾ ಗೌರಿ. ಈಕೆ ಮಹಾದೇವನ ಗೌರಿ. ಈ ರೂಪ ಮಹಾದೇವನಿಗೆ ಅತ್ಯಂತ ಪ್ರಯವಾದ ರೂಪ. ಮಹಾಗೌರಿಯು ವಿಸ್ಮರಣೆಯ ಕಶ್ಮಲವನ್ನು ಶುದ್ಧಗೊಳಿಸಿ, ಸ್ವರೂಪದ ಸಾಕ್ಷಾತ್ಕಾರ ಮಾಡಿಸುವ ಚಕ್ರವಾದ ವಿಶುದ್ಧಿ ಚಕ್ರದಲ್ಲಿ ನೆಲೆಸಿರುತ್ತಾಳೆ.
ಆದಿಶಕ್ತಿಯು ಮಹಾಕಾಲನನ್ನು ಪತಿಯಾಗಿ ಸ್ವೀಕರಿಸಿದ್ದು ಮಹಾಗೌರಿಯ ರೂಪದಲ್ಲೇ.

ನವಮಂ ಸಿದ್ಧಿ ಧಾತ್ರೀ ಚ: ಪಂಭತ್ತನೆಯದಾಗಿ ಸಿದ್ಧಿಧಾತ್ರಿ…. ದೇವಿಯ ಈ ರೂಪವು ಸಕಲಸಿದ್ಧಿಗಳನ್ನು ಕರುಣಿಸುತ್ತದೆ. ವಿಶೇಷವಾಗಿ ಸಾಧಕರು ದೇವಿಯ ಈ ಸ್ವರೂಪದ ಆರಾಧಕರು. ಇದು ಆದಿಶಕ್ತಿಯ ಅತ್ಯಂತ ವಿಶಿಷ್ಟ ರೂಪ. ಮಹಾದೇವನ ನಾಭಿಯಿಂದ ಒಡಮೂಡಿದ ಸಿದ್ಧಿ ಧಾತ್ರಿ, ಸಕಲ ಸಿದ್ಧಿಗಳ ಒಡತಿ. 

ಬ್ರಹ್ಮಚಾರಿಣಿಯಾಗಿದ್ದ ಶೈಲಪುತ್ರಿಯು ಚಂದ್ರೇಶ್ವರನ ಚಂದ್ರಘಂಟಾ ದೇವಿಯಾದಳು. ಕೂಷ್ಮಾಂಡಾ ದೇವಿಯಾಗಿ, ಮಹಾಗೌರಿಯಾದಳು. ಮಹಾಗೌರಿಯು ಸ್ಕಂದ ಮಾತೆಯಾದಳು. ಹೀಗೆ ಪ್ರತಿಯೊಂದು ರೂಪವೂ ಅವಳನ್ನು ಒಂದು ಹೆಜ್ಜೆ ಮುಂದೆ ಕೊಂಡೊಯ್ದಿತು. ಮಹಾಶಿವನ ಮಹಾ ಶಕ್ತಿಯನ್ನಾಗಿ ಮಾಡಿತು.

ಸಾಮಾನ್ಯ ಮನುಷ್ಯ ಯೋನಿಯಲ್ಲಿ ಜನಿಸಿದ ಪಾರ್ವತಿಯು ತನ್ನೊಳಗಿನ ಮಹಾಕಾಳಿ ಸ್ವರೂಪವನ್ನು ಕಂಡುಕೊಂಡು ಲೋಕೋಪಕಾರಿಯಾಗಿ ಮುನ್ನಡೆಯುವ ಹಲವು ಹಂತಗಳೇ ಈ ನವ ರೂಪಗಳು. ಇವುಗಳ ಸಂಸ್ಮರಣೆಯೇ ನವರಾತ್ರಿ.

Leave a Reply