ನಾನಾ ವಿಧದ ನವರಾತ್ರಿ ~ 4 : ಈಶಾನ್ಯ ರಾಜ್ಯಗಳಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ. 

ಮಾತಾ ತ್ರಿಪುರೇಶ್ವರಿ ಮಂದಿರದಲ್ಲಿ…     
ಈಶಾನ್ಯ ಭಾರತದ ರಾಜ್ಯಗಳಲ್ಲೊಂದು ತ್ರಿಪುರಾ. ಮೂರು ಕಡೆ ಬಾಂಗ್ಲಾ ದೇಶ ಮತ್ತು ಒಂದು ಕಡೆ ಅಸ್ಸಾಮ್ ಹಾಗೂ ಮಿಜೊರಾಮ್  ಈ ರಾಜ್ಯವನ್ನು ಸುತ್ತುವರಿದಿವೆ. ಮಾತಾ ತ್ರಿಪುರೇಶ್ವರಿ ಅಥವಾ ಮಾತಾ ತ್ರಿಪುರಸುಂದರಿ ದೇವಿಯ ನೆಲೆಯಾದ್ದರಿಂದ ಈ ರಾಜ್ಯಕ್ಕೆ ತ್ರಿಪುರಾ ಎಂಬ ಹೆಸರು ಬಂತು. 

‘ಮಾತಾಬಾರಿ’ ಮಂದಿರ ಎಂದೂ ಕರೆಯಲ್ಪಡುವ ಮಾತಾ ತ್ರಿಪುರೇಶ್ವರಿ ದೇವಾಲಯ ಭಾರತದ 51 ಶಕ್ತಿಪೀಠಗಳಲ್ಲಿ ಒಂದಂತೆ. ಸತಿಯ ಬಲ ಪಾದ ಇಲ್ಲಿ ಬಿದ್ದಿತೆಂಬುದು ಪ್ರತೀತಿ. ಈ ತಾಯಿ ನೆಲೆಸಿರುವುದು ‘ಕೊಳಗಳ ಬೀಡು’ ಎಂದು ಪ್ರಸಿದ್ಧವಾಗಿರುವ ಉದೈಪುರ ಪಟ್ಟಣದಲ್ಲಿ.

ಭುಬನೇಶ್ವರಿ ಮಂದಿರ ಇಲ್ಲಿರುವ ಇನ್ನೊಂದು ಮಹತ್ವದ ದೇಗುಲ. ಕ್ರಿಸ್ತ ಶಕ 1501 ರಲ್ಲಿ ಮಹಾರಾಜ ಧನ್ಯಮಾಣಿಕ್ಯ ಡೆಬ್ಬರ್ಮಾ ಎಂಬಾತ ಮಾತಾ ತ್ರಿಪುರೇಶ್ವರಿ ಮಂದಿರವನ್ನು ಕಟ್ಟಿಸಿದನಂತೆ. ನವರಾತ್ರಿಯಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ನಿತ್ಯವೂ ಈ ದೇವಿಗೆ ಮೀಸಲು ಹಾಲಿನಲ್ಲಿ ಮಡಿಯಿಂದ ಮಾಡಿದ ಪೇಢಾದ ನೈವೇದ್ಯ. 

ಅಸ್ಸಾಮಿನ ಕಾಮಾಖ್ಯದಲ್ಲಿ… 
ಅಸ್ಸಾಂ ರಾಜ್ಯಕ್ಕೆ ಬರೋಣ. ಗುವಾಹಾಟಿಯಿಂದ ಕೆಲವೇ ಕಿಲೋಮೀಟರುಗಳ ಅಂತರದಲ್ಲಿರುವ ಕಾಮಾಖ್ಯ ಇನ್ನೊಂದು ಮಹತ್ವದ ಶಕ್ತಿಪೀಠ. ಭಾರತದ ಏಕಮಾತ್ರ ಗಂಡು ನದಿ ಬ್ರಹ್ಮಪುತ್ರಾದ ದಡದಲ್ಲಿ ನೀಲಾಚಲ ಪರ್ವತದ ಮೇಲೆ ನೆಲೆಸಿದ್ದಾಳೆ ದೇವಿ. ಇಲ್ಲಿ ತಾಂತ್ರಿಕ ಪದ್ಧತಿಯ ಪೂಜೆ.

ಜೂನ್ ತಿಂಗಳಲ್ಲಿ ವಿಶೇಷ ಜಾತ್ರೆ ನಡೆಯುತ್ತದಾದರೂ ನವರಾತ್ರಿಯಲ್ಲೂ ಇಲ್ಲಿ ವಿಶೇಷ ಜನಸಂದಣಿಯಿರುತ್ತದೆ. ಆಗ ಇಲ್ಲಿ ಮೂರು ದಿನದ ದುರ್ಗಾ ಪೂಜಾ ಮಹೋತ್ಸವ. ಅಸಂಖ್ಯ ಭಕ್ತರು ಪಾಲ್ಗೊಳ್ಳುತ್ತಾರೆ. ಇದೇ ಪರ್ವತದ ಮೇಲೆ ದಶ ಮಹಾ ವಿದ್ಯಾ (ಕಾಳಿ,ತಾರಾ, ಭುವನೇಶ್ವರಿ, ತ್ರಿಪುರ ಸುಂದರಿ, ಭೈರವಿ, ಚಿನ್ನಮಸ್ಥಾ, ಧೂಮಾವತಿ, ಬಗಳಾ, ಮಾತಂಗಿ, ಮತ್ತು ಕಮಲಾ) ಮಂದಿರಗಳೂ ಇವೆ.  
ಇನ್ನುಳಿದಂತೆ ಅಸ್ಸಾಮಿನ ಎಲ್ಲೆಡೆಯೂ ದುರ್ಗಾ ಪೂಜೆಗೆ ಹೆಚ್ಚಿನ ಮಹತ್ವ.   

ಒಡಿಸ್ಸಾದ ವಿಜೊಯ ದೊಶೊಮಿ   
ಒಡಿಸ್ಸಾದಲ್ಲಿ ಎರಡು ಬಗೆಯ ದಸರಾ. ಇಲ್ಲಿದು ‘ವಿಜೊಯ ದಶೋಮಿ’ ಅಥವಾ ‘ದಸ್ಸೇರಾ’. ಈ ಸಂದರ್ಭದಲ್ಲಿ ದುರ್ಗಾ ಮಾತೆಯ ಪೂಜೆಯೇ ಮುಖ್ಯ. ಇದರಲ್ಲೂ  ಎರಡು ಬಗೆಯಿದೆ : ಶಕ್ತಿಪೀಠಗಳೆಂದು ಕರೆಯಲ್ಪಡುವ ದೇವೀಮಂದಿರಗಳಲ್ಲಿ 10 ರಿಂದ 16  ದಿನಗಳ ಕಾಲ ಅತಿ ಕಟ್ಟುನಿಟ್ಟಾದ ವಿಧಿವಿಧಾನಗಳೊಂದಿಗೆ ನಡೆಯುವ ‘ಶೋಡಷ  ಉಪಚಾರ’  ವಿಶೇಷ ಪೂಜೆ; ಮತ್ತು ಅಸ್ಸಾಮ್, ಬಂಗಾಲಗಳಂತೆ ಅಲಂಕೃತ ಪೆಂಡಾಲುಗಳಲ್ಲಿ ಸಾರ್ವಜನಿಕ ದುರ್ಗಾ ಪೂಜೆ. ಕೊನೆಯ ದಿನ ಅಂದರೆ ವಿಜಯದಶಮಿಯಂದು ಇಲ್ಲಿ ‘ಶಾರೋದೀಯ ದುರ್ಗಾ ಪೂಜಾ.’  

ಕಟ್ಟಕಡೆಯ ಪೂಜಾ ವಿಧಿಯ ನಂತರ ನಡೆಯುವ ‘ಅಪರಾಜಿತಾ ಪೂಜಾ’ ಒಂದು ಅರ್ಥದಲ್ಲಿ ದೇವಿಗೆ ಬೀಳ್ಕೊಡುಗೆ. ಈ ಸಂದರ್ಭದಲ್ಲಿ ಸ್ತ್ರೀಯರು ದೇವಿಗೆ ‘ದೊಹಿ-ಪಖಾಳ್’  (ನೀರು ಮತ್ತು ಮೊಸರಿನಲ್ಲಿ ಬೇಯಿಸಿದ ಅನ್ನ), ಪಿಠಾ (ರೊಟ್ಟಿ), ಮಿಠಾ (ಸಿಹಿ ತಿನಿಸು) ಮತ್ತು ಹುರಿದ ಮೀನಿನ ಎಡೆ ತೋರಿಸುತ್ತಾರೆ.

ಸಾರ್ವಜನಿಕ ದುರ್ಗಾ ಪೂಜೆಯ ಕೊನೆಯ ದಿನ ದೇವಿ ಮತ್ತಿತರ ವಿಗ್ರಹಗಳನ್ನು ‘ಭಾಸನಿ ಜಾತ್ರಾ’  ಅಥವಾ ‘ಬಿಸರ್ಜನ್ ಜಾತ್ರಾ’ ಎಂದು ಕರೆಯಲ್ಪಡುವ ಮೆರವಣಿಗೆಯಲ್ಲಿ ಮುಖ್ಯ ಬೀದಿಗಳಲ್ಲಿ ಕೊಂಡೊಯ್ದು ಸನಿಹದ ನದಿ, ಹೊಳೆ ಇಲ್ಲವೇ ಕೊಳಗಳಲ್ಲಿ ವಿಸರ್ಜಿಸಲಾಗುತ್ತದೆ. ಅದೇ ಹೊತ್ತಿಗೆ ರಾಜ್ಯದಾದ್ಯಂತ ಜನ ‘ರಾವಣ್ ಪೋಡಿ’ ಅಥವಾ ಹುಲ್ಲಿನ ರಾವಣನ ಪ್ರತಿಕೃತಿಯನ್ನು ಸುಡುತ್ತಾರೆ. 

Leave a Reply