ನಗರದ ಅರ್ಚಕಿಯೊಬ್ಬಳು ಪ್ರಾರ್ಥನೆಯ ಬಗ್ಗೆ
ಮಾಹಿತಿ ಕೇಳಿದಳು;
ಅವನು ಉತ್ತರಿಸತೊಡಗಿದ.
ದುಗುಡ ಮತ್ತು ಅಗತ್ಯಗಳು
ಸತಾಯಿಸಲು ಶುರುಮಾಡಿದಾಗ ಮಾತ್ರ
ನೀವು ಪ್ರಾರ್ಥನೆಗೆ ಮುಂದಾಗುತ್ತೀರಿ ;
ಖುಶಿಯ ಪರಿಪೂರ್ಣತೆಯಲ್ಲಿ,
ಸಮೃದ್ಧಿ ತುಂಬಿ ತುಳುಕುತ್ತಿರುವಾಗಲೂ
ಪ್ರಾರ್ಥನೆ ಸಾಧ್ಯವಾಗಲಿ.
ಏಕೆಂದರೆ,
ಚೈತನ್ಯಮಯಿ ಆಕಾಶದಲ್ಲಿ
ನಿಮ್ಮನ್ನು ನೀವು ಎತ್ತರೆತ್ತರಕ್ಕೆ ಏರಿಸಿಕೊಳ್ಳುವ
ಪ್ರಕ್ರಿಯೆಯೇ ಪ್ರಾರ್ಥನೆ.
ಸಮಾಧಾನಕ್ಕಾಗಿ ನಿಮ್ಮ ಕತ್ತಲನ್ನು
ಆಕಾಶಕ್ಕೆ ಸುರಿಯುತ್ತೀರಾದರೆ,
ಖುಶಿಗಾಗಿ, ಹೃದಯದ ಬೆಳಗನ್ನೂ ಸುರಿಯಬೇಕು.
ನಿಮ್ಮ ಆತ್ಮ, ಪ್ರಾರ್ಥನೆಗೆ ಕೂಗಿದಾಗ
ನಿಮ್ಮ ಅಳು ಇನ್ನೂ ನಿಂತಿಲ್ಲವಾದರೆ,
ನೀವು ನಗು ನಗುತ್ತ ಹೊರ ಬರುವವರೆಗೂ
ಆತ್ಮ ನಿಮ್ಮನ್ನು ಮತ್ತೆ ಮತ್ತೆ ಹುರಿದುಂಬಿಸಲಿ.
ನೀವು ಪ್ರಾರ್ಥನೆ ಮಾಡುವಾಗ,
ಅದೇ ಘಳಿಗೆಯಲ್ಲಿ ಪ್ರಾರ್ಥನೆ ಮಾಡುತ್ತಿರುವವರನ್ನೂ ಹಾಗೂ
ಪ್ರಾರ್ಥನೆಯ ಹೊರತಾಗಿ
ಬೇರೆಲ್ಲೂ ಸಂಧಿಸಲಾಗದವರನ್ನೂ
ಭೇಟಿಯಾಗಲು ಎತ್ತರಕ್ಕೇರುವಿರಿ.
ಅಂತೆಯೇ
ಅಗೋಚರ ದೇವಾಯಲಯದ
ಈ ನಿಮ್ಮ ಭೇಟಿ
ಕೇವಲ ದಿವ್ಯ ಆನಂದಕ್ಕೆ ಮತ್ತು
ಮಧುರ ಸಲ್ಲಾಪಕ್ಕೆ ಮೀಸಲಾಗಿರಲಿ.
ಬೇರೆ ಯಾವ ಉದ್ದೇಶಕ್ಕಲ್ಲದೆ
ಕೇವಲ ಬೇಡಲು
ನೀವು ದೇವಾಲಯವನ್ನು ಪ್ರವೇಶಿಸುವುದಾದರೆ
ಅಲ್ಲಿ ನಿಮಗೆ ಏನೂ ದೊರೆಯುವುದಿಲ್ಲ :
ಕೇವಲ ವಿನಮ್ರರಾಗಲು
ನೀವು ದೇವಾಲಯವನ್ನು ಪ್ರವೇಶಿಸುವುದಾದರೆ
ಅಲ್ಲಿ ನಿಮ್ಮನ್ನು ಎತ್ತರಕ್ಕೆ ಏರಿಸುವವರು ಯಾರೂ ಇಲ್ಲ :
ಅಥವಾ, ಕೇವಲ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲು
ನೀವು ದೇವಾಲಯದ ಮೆಟ್ಟಿಲು ತುಳಿಯುವಿರಾದರೆ
ಅಲ್ಲಿ ನಿಮ್ಮನ್ನು ಆಲಿಸುವವರು ಯಾರೂ ಇಲ್ಲ.
ಯಾರಿಗೂ ಕಾಣದಂತೆ
ದೇವಾಲಯದೊಳಗೆ ಹೊಕ್ಕು ಬಿಡಿ
ಅಷ್ಟು ಸಾಕು.
ಶಬ್ದಗಳಲ್ಲಿ ಪ್ರಾರ್ಥನೆಯನ್ನು ನಾನು
ನಿಮಗೆ ಹೇಳಿಕೊಡಲಾರೆ.
ಭಗವಂತ, ಸ್ವತಃ ತಾನೇ
ನಿಮ್ಮ ತುಟಿಗಳ ಮೇಲೆ ಕುಳಿತು
ಆಡುವ ಮಾತುಗಳನ್ನು ಹೊರತುಪಡಿಸಿ
ಬೇರಾವ ಮಾತುಗಳನ್ನೂ ಕೇಳಲು ಇಷ್ಟಪಡುವುದಿಲ್ಲ.
ಮತ್ತು
ನಾನು ನಿಮಗೆ
ಸಮುದ್ರ, ಕಾಡು, ಬೆಟ್ಟ ಗುಡ್ಡಗಳ
ಪ್ರಾರ್ಥನೆಯನ್ನು ಕಲಿಸಿ ಕೊಡಲಾರೆ.
ಈ ಪರ್ವತಗಳಿಂದ, ಕಾಡುಗಳಿಂದ,
ಸಮುದ್ರಗಳಿಂದಲೇ ಸೃಷ್ಟಿಯಾದವರು ನೀವು
ಅವುಗಳ ಪ್ರಾರ್ಥನೆಯನ್ನು
ನಿಮ್ಮ ಎದೆಯಲ್ಲೇ ಕಂಡುಕೊಳ್ಳಬಹುದು.
ರಾತ್ರಿಯ ಮಾತು ನಿಂತ ಸಮಯದಲ್ಲಿ
ನೀವು ಗಮನವಿಟ್ಟು ಕೇಳುವಿರಾದರೆ
ಪರ್ವತ, ಕಾಡು, ಸಮುದ್ರ
ತಮ್ಮೊಳಗೆ ತಾವೇ ಆಡಿಕೊಳ್ಳುವ ಈ ಮಾತು
ನಿಮಗೆ ಕೇಳಿಸುವುದು :
“ ಓ ಭಗವಂತ,
ಗರಿ ಬಿಚ್ಚಿ ಹಾರುತ್ತಿರುವ ನಮ್ಮ ಆತ್ಮ,
ನಿನ್ನ ನಿರ್ಧಾರವೇ
ನಮ್ಮ ಸಂಕಲ್ಪ ಶಕ್ತಿಯಾಗಿ ಹರಳುಗಟ್ಟಿದೆ.
“ ನಿನ್ನ ಆಸೆಯೇ
ನಮ್ಮ ಬಯಕೆಯಾಗಿ ಕವಲೊಡೆದಿದೆ”
“ ನಮ್ಮೊಳಗಿನ ನಿನ್ನ ಒತ್ತಡ,
ನಿನ್ನವೇ ಆದ ನಮ್ಮ ರಾತ್ರಿಗಳನ್ನು
ನಿನ್ನವೇ ಆದ ನಮ್ಮ ಹಗಲುಗಳನ್ನಾಗಿ
ಬದಲಾಯಿಸುತ್ತದೆ.
“ ನಿನ್ನ ಬೇಡುವುದಾದರೂ ಏನು?
ನಮ್ಮ ಅಗತ್ಯಗಳನ್ನು
ಅವು ಹುಟ್ಟುವುದಕ್ಕಿಂತಲೂ ಮುಂಚೆಯೇ
ಬಲ್ಲವನು ನೀನು”
“ ನೀನೇ ನಮ್ಮ ಪರಮ ಅಗತ್ಯ
ನಿನ್ನನ್ನು ಹೆಚ್ಚು ಹೆಚ್ಚಾಗಿ
ನಮ್ಮೊಡನೆ ಹಂಚಿಕೊಳ್ಳುವ ಮೂಲಕವೇ
ನಮಗೆ ಎಲ್ಲವನ್ನೂ ಹಂಚುತ್ತಿದ್ದೀ.”
ಮುಂದುವರೆಯುತ್ತದೆ……….
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/10/07/pravadi-10/
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.
[…] ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/10/13/pravadi-11/ […]