ಬರಬಾರದೇ ಭವವೈದ್ಯ, ಬಯಕೆಯುಣ್ಣುತ್ತ ಜೀವ ಹಿಡಿದಿದೆ ಹೃದಯ! ~ ರಾಬಿಯಾ ಪದ್ಯ

ಮೂಲ: ರಾಬಿಯಾ ಅಲ್ ಅದವ್ವಿಯಾ | ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ಏಕಾಂತದಲಿ ಶಾಂತಿಯಿದೆ ನನಗೆ, ಸೋದರರೇ!
ಪ್ರಿಯತಮನ ಚಿರಸಂಗಾತವಿದೆ;
ಬೇರೇನೂ ಇಲ್ಲವೆನಗೆ ಅವನೊಲವ ಬದಲು.

ಮರ್ತ್ಯಲೋಕದಲಿ ಅವನೊಲವ ಸತ್ವಪರೀಕ್ಷೆ;
ಅವನ ಸೌಂದರ್ಯ ಧ್ಯಾನವೇ ನನಗೆ ಮಿಹ್ರಾಬ್…
ಅವನೆಡೆಗೆ ಚಲಿಸುವುದೆ ನನ್ನ ಕಿಬ್ಲಾಹ್!

“ಜೀವ ತೊರೆದು ಹೋದರೆ ನಾನು ತೃಪ್ತಳಾಗುವ ಮೊದಲೇ!?”
ಅಯ್ಯೋ! ಪೀಡಿಸುತಿದೆ ಎದೆಯ ಯಾತನೆ,
ಬರಬಾರದೇ ಭವವೈದ್ಯ, ಬಯಕೆಯುಣ್ಣುತ್ತ ಜೀವ ಹಿಡಿದಿದೆ ಹೃದಯ
ಮದ್ದಾಗುವುದು ಅವನ ಮಿಲನ, ಆನಂದದಲಿ ಆತ್ಮದಾಹ ಶಮನ!

ಅವನೆನ್ನ ಜೀವ ಸ್ರೋತ, ಅವನಲ್ಲೆ ನನ್ನ ಭಾವಪರವಶ
ಜಗದೆಲ್ಲ ಜಡಚೇತನವ ತೊರೆದು ಹೊರಟಿರುವೆ,
ಅವನ ಕೂಡಿ ಕೊನೆಯಾಗುವುದೆ ಚರಮ ಗುರಿ ನನಗೆ.

 

Leave a Reply