ನಾನಾ ವಿಧದ ನವರಾತ್ರಿ ~ 5 : ಗುಜರಾತಿನ ರಾಸಗರ್ಬಾ, ಮಹಾರಾಷ್ಟ್ರದ ಖಂಡೇ ನವಮಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ  ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ. 

ಗುಜರಾತಿನ ದಾಂಡಿಯಾ ದಸರೆ!
ನವರಾತ್ರಿ ಎಂದಾಕ್ಷಣ ನಮಗೆ ನೆನಪಾಗುವುದು ಗುಜರಾತಿ ಬಂಧುಗಳ ‘ರಾಸ-ಗರ್ಬಾ’ ಮತ್ತು ’ದಾಂಡಿಯಾ ರಾಸ’ ನೃತ್ಯಗಳು. ಇದರ ವೈಭವವನ್ನು ನೋಡಬೇಕೆಂದರೆ ನೀವು ಅಹಮದಾಬಾದಿಗೆ ಬರಬೇಕು. ಆಗ ಊರಿಗೆ ಊರೇ ನರ್ತಿಸುತ್ತಿದೆಯೇನೋ ಎಂಬಷ್ಟು ಸಂಭ್ರಮದ ವಾತಾವರಣ. ನವರಾತ್ರಿಯಲ್ಲಿ  ಗುಜರಾತಿನ ಯಾವ ಮೂಲೆಗೆ ಹೋದರೂ ನೀವು ಮೈಮರೆಯಿತ್ತೀರಿ, ಆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತೀರಿ. ಗುಜರಾತಿಗಳು ಅತ್ಯಂತ ಭಕ್ತಿ ಮತ್ತು ಶೃದ್ಧೆಯಿಂದ ಆಚರಿಸುವ ಹಬ್ಬವಿದು.

ಮಂದಿರಗಳಲ್ಲೆಲ್ಲ ವಿಶೇಷ ಅಲಂಕಾರ, ವಿಶೇಷ ಪೂಜೆ. ಕೆಲವು ಮನೆಗಳಲ್ಲೂ ದುರ್ಗಾ ಮಾತೆಯ ಪೂಜೆ ವಿಜೃಂಭಣೆಯಿಂದ ನಡೆಯುತ್ತದೆ.‘ರಾಸ-ಗರ್ಬಾ’ ಮತ್ತು ‘ದಾಂಡಿಯಾ ರಾಸ’ ನೃತ್ಯಗಳು ಈ ನಾಡಿನ ಸಂಸ್ಕೃತಿಯ ಪ್ರತೀಕಗಳು. ಈಗ ಜಗತ್ತಿನಾದ್ಯಂತ ಈ ನೃತ್ಯಗಳು ಪ್ರಚಲಿತಗೊಂಡಿವೆಯಾದರೂ ಈ ನೆಲದ ಸೊಗಡೇ ಬೇರೆ. ಇಲ್ಲಿ ಆ ಒಂಬತ್ತೂ ದಿನ ‘ರಾಸ-ಗರ್ಬಾ’ ಮತ್ತು ‘ದಾಂಡಿಯಾ ರಾಸ’ ನೃತ್ಯೋತ್ಸವ ನಡೆಯುತ್ತದೆ. ಆಗ ಜಗತ್ತಿನ ಎಲ್ಲ ದಾರಿಗಳೂ ಅಹಮದಾಬಾದಿನೆಡೆಗೇ ಹೆಜ್ಜೆ ಹಾಕಿದಂತೆ ತೋರುತ್ತದೆ!!

ದಶ-ಹರ ವಿಜಯೋತ್ಸವ
ಇಲ್ಲೆಲ್ಲ ಅಶ್ವಯುಜ ಅಥವಾ ಅಶ್ವಿನ ಮಾಸದ ಹತ್ತನೆಯ ದಿನ ಅಂದರೆ ದಶಮಿಯಂದು ದಸರೆ. ಅದಕ್ಕೂ ಮೊದಲಿನ ಮೂರುವರೆ ದಿನ ಅಂದರೆ ಸಪ್ತಮಿ, ಅಷ್ಟಮಿ, ನವಮಿಗಳು ಹಿಂದೂ ಚಾಂದ್ರಮಾನ ಪಂಚಾಂಗದ ಪ್ರಕಾರ ತುಂಬ ‘ಪ್ರಶಸ್ತ’ ಹಾಗೂ ‘ಪವಿತ್ರ’. ನವರಾತ್ರಿಯ ಆರಂಭದಲ್ಲಿ ಪ್ರತಿಸ್ಥಾಪಿಸಿದ ವಿಗ್ರಹಗಳನ್ನು ಹತ್ತನೆಯ ದಿನ ಅಂದರೆ ‘ದಶ-ಹರ’ದ ದಿನ ಜಲಾಶಯಗಳಲ್ಲಿ ವಿಸರ್ಜಿಸಲಾಗುತ್ತದೆ. ಇದೇ ದಿನ ಶ್ರೀರಾಮನಿಂದ ರಾವಣ ಸಂಹಾರ ನಡೆಯಿತೆಂಬ ಪೌರಾಣಿಕ ನಂಬಿಕೆಯಂತೆ ವಿಜಯೋತ್ಸವ ಆಚರಿಸಲ್ಪಡುತ್ತದೆ.

ವಿಜಯದಶಮಿಯ ಸಂಜೆ ಜನ ಹಿರಿಯರ ಆಶೀರ್ವಾದ ಪಡೆಯುತ್ತಾರೆ. ಸಂಬಂಧಿಕರನ್ನು, ಆಪ್ತರನ್ನು, ಮಿತ್ರರನ್ನು ಭೇಟಿಯಾಗಿ ಬನ್ನಿ (ಶಮೀ ಪತ್ರ) ವಿನಿಮಯಿಸಿಕೊಂಡು, ಶುಭ ಹಾರೈಸಿ ಸಿಹಿ ಹಂಚುತ್ತಾರೆ. ನಮ್ಮಲ್ಲಿರುವಂತೆಯೇ ಇಲ್ಲಿಯೂ ಬನ್ನಿಯನ್ನು ಬಂಗಾರ ಎಂದು ಭಾವಿಸುವುದುಂಟು. ನಮ್ಮಲ್ಲಿ ನವಮಿಯಂದು ಆಯುಧ ಪೂಜೆ ಇರುವಂತೆ ಮಹಾರಾಷ್ಟ್ರದಲ್ಲಿ ‘ಖಂಡೇ ನವಮಿ.’ ಎಲ್ಲ ವೃತ್ತಿಯವರು ಅಂದು ತಮ್ಮ ತಮ್ಮ ಉಪಕರಣಗಳನ್ನು ಸ್ವಚ್ಛವಾಗಿ ತೊಳೆದು, ಅಲಂಕರಿಸಿದ ವೇದಿಕೆಯ ಮೇಲೆ ಇರಿಸಿ ಪೂಜಿಸುತ್ತಾರೆ.

ಅಂದೇ ‘ಸೀಮೋಲ್ಲಂಘನ’. ಈ ಶುಭಸಂದರ್ಭದಲ್ಲಿ ತಮ್ಮ ಗಡಿ ದಾಟಿ ಪ್ರಗತಿಯೆಡೆ ಹೆಜ್ಜೆ ಹಾಕುವುದರ ಸಂಕೇತವಿದು. ಹೊಸ ಕೆಲಸಗಳ ಆರಂಭಕ್ಕೆ, ಹೊಸ ಉದ್ಯೋಗ, ವೃತ್ತಿಗಳಲ್ಲದೆ ಕಟ್ಟಡಗಳ ಗುದ್ದಲಿ ಪೂಜೆ, ಅಂಗಡಿಗಳ ಉದ್ಘಾಟನೆ ಮುಂತಾದ  ಈ ದಿನ ಅತ್ಯಂತ ಶುಭವಂತೆ. 

Leave a Reply