ಕವಿಯೊಬ್ಬ
ಚೆಲುವಿನ ಬಗ್ಗೆ ಮಾತಾಡಲು ಕೇಳಿಕೊಂಡಾಗ
ಅವನು ಮಾತನಾಡತೊಡಗಿದ.
ಚೆಲುವೇ ದಾರಿಯಾದ ಹೊರತು
ಚೆಲುವೇ ಕೈ ಹಿಡಿದು ನಡೆಸುವ ತನಕ
ಚೆಲುವನ್ನು ಹುಡುಕುವುದು,
ಕಂಡುಕೊಳ್ಳುವುದು ಸಾಧ್ಯವೆ?
ಚೆಲುವೇ ನಿಮ್ಮ ಮಾತುಗಳನ್ನು ನೇಯ್ದು
ಸಂಭಾಷಣೆ ಸಿದ್ಧಪಡಿಸುವ ತನಕ
ಚೆಲುವನ್ನು ಹಾಡಿ ಹೊಗಳುವುದು ಸಾಧ್ಯವೆ?
ನೊಂದವರು,
ಗಾಯಗೊಂಡವರ ಪ್ರಕಾರ
ಚೆಲುವು, ಸಭ್ಯ ಮತ್ತು
ಅಂತಃಕರುಣಿ,
ತನ್ನ ವೈಭವದ ಬಗ್ಗೆ ತಾನೇ ನಸು ನಾಚುತ್ತ
ನಮ್ಮ ನಡುವೆ ಓಡಾಡಿಕೊಂಡಿರುವ
ಹರೆಯದ ತಾಯಿ.
ಹುಚ್ಚು ಪ್ರೇಮಿಗಳಿಗೆ ಚೆಲುವು,
ರುದ್ರ, ಭಯಂಕರ,
ಕಾಲ ಕೆಳಗಿನ ನೆಲವನ್ನೂ
ತಲೆ ಮೇಲಿನ ಆಕಾಶವನ್ನೂ ನಡುಗಿಸುವ
ಭೀಕರ ಚಂಡಮಾರುತ.
ದಣಿದವರಿಗೆ,
ಬಳಲಿದವರಿಗೆ ಚೆಲುವು,
ಆತ್ಮವನ್ನು ಮುಟ್ಟಿ ಮಾತನಾಡಿಸುವ
ಮಧುರ ಪಿಸುಮಾತು.
ಚೆಲುವಿನ ದನಿ
ನಮ್ಮ ಮೌನಕ್ಕೆ ಶರಣಾಗುವ ರೀತಿ,
ನೆರಳಿಗೆ ಕಂಪಿಸುವ
ಮಂದ ಬೆಳಕಿನಷ್ಟೇ ನಾಜೂಕು.
ದುಗುಡ ತುಂಬಿದ ಜನ ಹೇಳುವಂತೆ,
ಬೆಟ್ಟ ಗುಡ್ಡಗಳ ನಡುವೆ
ಚೆಲುವು, ದೊಡ್ಡ ದನಿಯಲ್ಲಿ ಕೂಗಾಡುತ್ತದೆ.
ಈ ಚೀರಾಟದ ಹಿಂದೆಯೇ ಕೇಳಿಸುತ್ತದೆ
ಖರಪುಟದ ಸದ್ದು, ರೆಕ್ಕೆಗಳ ತೀವ್ರ ಚಡಪಡಿಕೆ
ಮತ್ತು, ಸಿಂಹಗಳ ಘೋರ ಘರ್ಜನೆ.
ಚೆಲುವು, ಮೂಡಣದಲ್ಲಿ
ಬೆಳಗಿನೊಂದಿಗೆ ಉದಯಿಸುತ್ತದೆ
ಎನ್ನುತ್ತಾನೆ, ನಗರದ ರಾತ್ರಿ ಕಾವಲುಗಾರ.
ಬಿಸಿಲು ನೆತ್ತಿಗೇರಿದಾಗ,
ಶ್ರಮಿಕರೂ, ದಾರಿಹೋಕರೂ
ಸೂರ್ಯಾಸ್ತದ ಕಿಟಕಿಯಲ್ಲಿ ತಾವು,
ಚೆಲುವು, ಭೂಮಿಯತ್ತ ಬಾಗುವುದನ್ನ
ಕಂಡ ಬಗ್ಗೆ ಸಾಕ್ಷ್ಯ ಹೇಳುತ್ತಾರೆ.
ಚಳಿಗಾಲದಲ್ಲಿ
ಹಿಮದಿಂದ ಸುತ್ತುವರೆದಿರುವವರ ಪ್ರಕಾರ
ಚೆಲುವು, ವಸಂತನ ಕೈ ಹಿಡಿದುಕೊಂಡು
ಬೆಟ್ಟ ಗುಡ್ಡಗಳ ಮೇಲೆ ಕುಪ್ಪಳಿಸುತ್ತ
ನೆಲಕ್ಕಿಳಿಯುತ್ತದೆ.
ಬಿರು ಬೇಸಿಗೆಯಲ್ಲಿ,
ಬೆಳೆ ಕಟಾವು ಮಾಡುತ್ತಿರುವ ರೈತರು ನೋಡಿದಂತೆ
ಚೆಲುವು, ಶರತ್ಕಾಲದ ಎಲೆಗಳನ್ನು ಮುದ್ದಿಸುತ್ತ
ಹೆರಳಲ್ಲಿ ಹಿಮ ಮುಡಿದುಕೊಂಡು
ಅವತಾರ ತಾಳುತ್ತದೆ.
ಚೆಲುವಿನ ಬಗ್ಗೆ
ಇಷ್ಟೆಲ್ಲ ಪರಿಭಾಷೆಗಳಿರುವಾಗಲೂ
ನಿಜದಲ್ಲಿ ನೀವು
ಚೆಲುವಿನ ಬಗ್ಗೆ ವ್ಯಾಖ್ಯಾನ ಮಾಡುತ್ತಿಲ್ಲ
ಬದಲಾಗಿ ನಿಮ್ಮ ಅತೃಪ್ತ ಅವಶ್ಯಕತೆಗಳ ಬಗ್ಗೆ
ಮಾತನಾಡುತ್ತಿದ್ದೀರಿ ಅಷ್ಟೇ.
ಆದರೆ ನಿಮಗೆ ತಿಳಿದಿರಲಿ
ಚೆಲುವು ಅವಶ್ಯಕತೆಯಲ್ಲ, ಭಾವ ಪರವಶತೆ.
ಚೆಲುವು
ಬಾಯಾರಿದ ಬಾಯಿಯಲ್ಲ,
ಅಲ್ಲ, ಮುಂದೆ ಚಾಚಿಕೊಂಡ ಖಾಲಿ ಕೈ ಕೂಡ.
ಚೆಲುವು
ಒಂದು ಉದ್ವಿಗ್ನ ಹೃದಯ, ಮಂತ್ರ ಮುಗ್ಧ ಆತ್ಮ.
ಚೆಲುವು
ನೀವು ಕಾಣಬಯಸುವ ಆಕಾರವಲ್ಲ
ಕೇಳಬಯಸುವ ಸಂಗೀತದ ಝೇಂಕಾರವೂ ಅಲ್ಲ.
ಬದಲಾಗಿ ಚೆಲುವು
ನೀವು ಕಣ್ಣು ಮುಚ್ಚಿಕೊಂಡಾಗಲೂ,
ಕಾಣುವ ಪ್ರತಿಮೆ
ಕಿವಿ ಮುಚ್ಚಿಕೊಂಡಾಗಲೂ
ಕೇಳಿಸುವ ಸಂಗೀತ.
ಚೆಲುವು
ಮರದ ತೊಗಟೆಯ ಸೀಳುಗಳ ನಡುವೆ
ಹರಿಯುತಿಹ ಜೀವರಸವಲ್ಲ,
ಉಗುರಿನ ಮೊನೆಗಂಟಿಕೊಂಡಿರುವ
ರೆಕ್ಕೆಯೂ ಅಲ್ಲ.
ಬದಲಾಗಿ ಚೆಲುವು
ಸದಾ ನಳನಳಿಸುತ್ತಿರುವ ಹೂವಿನ ತೋಟ
ಸದಾ ವಿಹಾರದಲ್ಲಿರುವ ಗಂಧರ್ವರ ತಂಡ.
ಆರ್ಫಲೀಸ್ ನ ಮಹಾಜನರೆ,
ಚೆಲುವು, ಬೇರೇನೂ ಅಲ್ಲ
ತನ್ನ ಪರಿಪೂರ್ಣ ಚಹರೆಯ ಮೇಲಿನ
ಪರದೆ ಸರಿಸಿಕೊಂಡ ಬದುಕೇ ಹೌದು.
ಆದರೆ ನೀವೇ ಆ ಬದುಕು, ನೀವೇ ಆ ಪರದೆ
ಚೆಲುವು
ಕನ್ನಡಿಯಲ್ಲಿ ತನ್ನನ್ನು ತಾನು
ದಿಟ್ಟಿಸಿ ನೋಡಿಕೊಳ್ಳುತ್ತಿರುವ ಅಮರತ್ವ.
ಆದರೆ, ನೀವೇ ಆ ಅಮರತ್ವ, ನೀವೇ ಆ ಕನ್ನಡಿ.
ಮುಂದುವರೆಯುತ್ತದೆ……….
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/10/13/pravadi-11/
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.