ನಾನಾ ವಿಧದ ನವರಾತ್ರಿ ~ 6 : ನೆರೆಯ ದೇಶಗಳಲ್ಲಿ

ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರು ಮತ್ತು ಸಂಪ್ರದಾಯಗಳೊಡನೆ ನವರಾತ್ರಿ ಆಚರಣೆ ನಡೆಯುತ್ತದೆ. ಎಲ್ಲೆಲ್ಲಿ ಹೇಗೆ ಹೇಗೆ ಇದನ್ನು ಆಚರಿಸಲಾಗುತ್ತದೆ ಎಂಬ ಕಿರು ವಿವರವನ್ನು ಅರಳಿಬಳಗ ನೀಡುತ್ತಿದ್ದು, ಈ ಕಂತಿನಲ್ಲಿ ನೆರೆಯ ದೇಶಗಳಲ್ಲಿ ನಡೆಯುವ ನವರಾತ್ರಿ ಉತ್ಸವ ಮಾಹಿತಿ ಇದೆ. 

ನೇಪಾಳದ ದಶೈನ್
ನೇಪಾಳದ ಜನತೆ ನಮ್ಮ ಹಾಗೆಯೆ ಹತ್ತು ದಿನಗಳ ದಸರೆ ಹಬ್ಬವನ್ನು ‘ದಶೈನ್’ ಎಂಬುದಾಗಿ ಆಚರಿಸುತ್ತಾರೆ. ಅದು ಅಲ್ಲಿಯ ರಾಷ್ಟ್ರೀಯ ಹಬ್ಬ. ಅಲ್ಲಿಯೂ ಹತ್ತನೆಯ ದಿನ ‘ವಿಜಯದಶಮಿ’. ಅಂದು ಮನೆಯ ಹಿರಿಯರು ಕಿರಿಯರ ಹಣೆಗೆ ‘ಟೀಕಾ’ (ತಿಲಕ) ಇಟ್ಟು ‘ಜಮರಾ’ ಹಚ್ಚುತ್ತಾರೆ. ಜಮರಾ ಅಲ್ಲಿಯ ಒಂದು ಸಸ್ಯ. ಅದರ ಬೀಜಗಳನ್ನು ಹಬ್ಬದ ಮೊದಲ ದಿನ ಮಡಕೆಗಳಲ್ಲಿ ಹಸಿ ಮಣ್ಣು ಹಾಕಿ ಬಿತ್ತುತ್ತಾರೆ. ಹತ್ತನೆಯ ದಿನದ ಹೊತ್ತಿಗೆ ಅದು ಹಳದಿಯನ್ನು ಹೋಲುವ ಹಸಿರು ಸಸಿಯಾಗಿ 10–20 ಸೆಂ.ಮೀ.ನಷ್ಟು ಬೆಳೆಯುತ್ತದೆ. ಈ ಸಸಿ ‘ವಿಜಯದ ಸಂಕೇತ’ವಂತೆ.

ಆದಿವಾಸಿ ಜನಕ್ಕೆ ‘ಟೀಕಾ’ (ತಿಲಕ) ಮತ್ತು ‘ಜಮರಾ’ ದೊರೆಯುವುದು ಹತ್ತನೆಯ ದಿನ ಮಾತ್ರ . ಉಳಿದವರು ಮುಂದೆ ಹುಣ್ಣಿಮೆಯ ತನಕವೂ ಇವನ್ನು ಪಡೆಯಬಹುದು. ‘ಟೀಕಾ’ (ತಿಲಕ) ಮತ್ತು ‘ಜಮರಾ’  ಪಡೆದಾದ ಮೇಲೆ ಅವರವರ ಶಕ್ತ್ಯಾನುಸಾರ ‘ದಕ್ಷಿಣೆ’ ನೀಡಿ ನಮಸ್ಕರಿಸುತ್ತಾರೆ. ಎಂಟನೆಯ ದಿನ ದುರ್ಗಾಷ್ಟಮಿ. ಅಂದು ಪ್ರಾಣಿಗಳ ಬಲಿ ನೀಡುವ ವಾಡಿಕೆ ಇದೆ. ಆ ನಂತರ  ಪ್ರಸಾದರೂಪದಲ್ಲಿ ಮಾಂಸವನ್ನು ಸ್ವೀಕರಿಸುತ್ತಾರೆ. 

ದೇಶಾದ್ಯಂತದ ದುರ್ಗಾ ಮಂದಿರಗಳಲ್ಲಿ ದಿನವಿಡೀ ಜನಸಂದಣಿ. ನೇಪಾಳದಲ್ಲಿ ಈ ಸಂದರ್ಭದಲ್ಲಿ ಹಬ್ಬದ ರಜೆಗಳು. ಹೀಗಾಗಿ, ಮುಂದೆ ಹುಣ್ಣಿಮೆಯ ತನಕವೂ ಜನ ತಮ್ಮ ಸಂಬಂಧಿಕರನ್ನು ಕಂಡು ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಲೇ ಇರುತ್ತಾರೆ.  ಅಲ್ಲಿ ರಾಜಸತ್ತೆ ಇರುವ ತನಕ ಅಂದರೆ 2008 ರ ವರೆಗೂ ನೇಪಾಳದ ದೊರೆಯೇ ಅಲ್ಲಿಯ ಪ್ರಜೆಗಳ ಹಣೆಗೆ ‘ಟೀಕಾ’ (ತಿಲಕ) ಇಡುತ್ತಿದ್ದ. ನಮ್ಮಲ್ಲಿಯ ಹಾಗೆಯೇ ಅಲ್ಲಿಯೂ ಶಮೀ ಪತ್ರ (ಬನ್ನಿ ಎಲೆ) ವಿನಿಮಯದ ಪದ್ಧತಿ ಇದೆ.

ಬಾಂಗ್ಲಾದೇಶದಲ್ಲಿ ಬಿಜಯಾ ಸಂಮೇಲನಿ
ಮೊದಲು ಭಾರತದ ಭಾಗವೇ ಆಗಿದ್ದದ್ದು ಈಗಿನ ಬಾಂಗ್ಲಾದೇಶ. ಬಂಗಾಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿದ್ದು ಮಂಟಪಗಳಲ್ಲಿ ಐದು ದಿನಗಳ ದುರ್ಗಾ ಪೂಜೆ  ನಡೆಯುತ್ತದೆ. ರಾಜಧಾನಿ ಢಾಕಾದ ಢಾಕೇಶ್ವರಿ ಮಂದಿರ ಹಾಗೂ ರಾಮಕೃಷ್ಣ ಮಿಷನರಿಗಳಲ್ಲಿ ನಡೆಯುವ ಉತ್ಸವಗಳು ಅತಿ ವಿಜೃಂಭಣೆಯದು. ಇವು ಸರಕಾರದ ಉಸ್ತುವಾರಿಯಲ್ಲಿದೆ. 

‘ಢಾಕೇಶ್ವರಿ ಜಾತೀಯ ಮಂದಿರ್’ ಎಂದು ಕರೆಯಲ್ಪಡುವ ಇದು ಕೂಡ ಒಂದು ಶಕ್ತಿಪೀಠ ಎಂದು ಹೇಳಲಾಗುತ್ತಿದ್ದು, ಇಲ್ಲಿ ಸತಿ ದೇವಿಯ ಕಿರೀಟದಿಂದ ವಜ್ರ ಕಳಚಿ ಬಿದ್ದಿತೆಂದು ಪ್ರತೀತಿ. (ಆದರೆ ಇದು ನಿರಾಧಾರದ ಹೇಳಿಕೆ ಎಂದೂ ವಾದವಿದೆ.) ದಸರೆಯ ಸಂದರ್ಭದಲ್ಲಿ ಈ ಮಂದಿರಕ್ಕೆ ನಿತ್ಯವೂ ಬರುವ ಸಾವಿರ ಸಾವಿರ ಭಕ್ತರಿಗೂ, ಮತ್ತು ಅಲ್ಲಿ ಪೂಜಾ ಸಾಮಗ್ರಿಗಳ ಅಂಗಡಿ ಮುಂಗಟ್ಟುಗಳನ್ನು ಇಟ್ಟುಕೊಂಡವರಿಗೂ (ಇವರಲ್ಲಿ ಮುಸ್ಲಿಮರೆ ಅಧಿಕ) ಕಿಚಡಿಯ ಪ್ರಸಾದ ನೀಡಲಾಗುತ್ತದೆ.  

‘ದುರ್ಗಾ ಪೂಜೆ’ಯಾಗಿ ಕೆಲದಿನಗಳ ನಂತರ ‘ಬಿಜಯಾ ಸಂಮೇಲನಿ’ ಎಂಬ ಬೃಹತ್ ಸಾಂಸ್ಕೃತಿಕ ಸಮ್ಮೇಳನ ನಡೆಯುತ್ತದೆ. ಇದು ಢಾಕಾದ ಅತ್ಯಂತ ಮಹತ್ವದ ವಾರ್ಷಿಕ ಕಾರ್ಯಕ್ರಮ. ‘ದಶ-ಹರಾ’ದ ದಿನ, ದುರ್ಗಾ ಮಾತೆಯ ಮೃಣ್ ಮೂರ್ತಿಗಳನ್ನು ನದಿಗಳಲ್ಲಿ ವಿಸರ್ಜಿಸಲಾಗುತ್ತದೆ. ಆ ಸಂದರ್ಭದಲ್ಲಿ ದೇವಿಯ ವಿಗ್ರಹಕ್ಕೆ ಹೆಚ್ಚು ಪ್ರಮಾಣದ ಅರಿಶಿನ ಲೇಪನ ಇಲ್ಲಿಯ ವಿಶೇಷ. ಇನ್ನಿತರ ಪೂಜಾದ್ರವ್ಯಗಳ ಸಮೇತ ವಿಗ್ರಹವನ್ನು ನದಿಯಲ್ಲಿ ವಿಸರ್ಜಿಸುವುದರಿಂದ ಬರುವ ವರ್ಷದ ಬೆಳೆಗೆ ಅನುಕೂಲವೆಂಬುದು ಅಲ್ಲಿಯವರ ನಂಬಿಕೆ.   

Leave a Reply