ಬಾಯಿಯಿಂದ ಹೊರಡುವ ಮಾತು ಸಶಬ್ದವಾಗಿ ಹೊರಗಿನ ಜಗತ್ತನ್ನು ತಲುಪುತ್ತದೆ. ಅದು ಮೆದುಳಿನಲ್ಲಿ ರೂಪುಗೊಂಡು ಗಂಟಲಲ್ಲಿ ಹುಟ್ಟಿ, ಗಾಳಿಯಲ್ಲಿ ಲೀನವಾಗುತ್ತದೆ. ಆದರೆ ಅಂತರಂಗದಲ್ಲಿ ಹುಟ್ಟಿಕೊಳ್ಳುವ ಶಬ್ದವಿಲ್ಲದ ಮಾತು ಹೊರಗೆ ಹೋಗಲು ದಾರಿಯಿಲ್ಲ. ಅದು ನಮ್ಮ ಹೃದಯದಲ್ಲೇ ಢಿಕ್ಕಿ ಹೊಡೆಯುತ್ತಾ, ಹೊರಹೋಗುವ ದಾರಿ ಕಾಣದೆ ನಮ್ಮ ವರ್ತನೆಯ ಮೂಲಕ ಹೊರಗೆ ಪ್ರಕಟಗೊಳ್ಳಲು ಕಾತರಿಸುತ್ತಾ ಇರುತ್ತದೆ. ಪರಿಣಾಮವಾಗಿ ನಾವು ಒಳಗೊಳಗೇ ಢಿಕ್ಕಿ ಹೊಡೆದು ಜರ್ಝರಿತವಾದ ಮಾತುಗಳ ಉದ್ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕತೊಡಗುತ್ತೇವೆ ~ ಚಿತ್ಕಲಾ
ಒತ್ತಡದಲ್ಲಿದ್ದೀರಾ? ಗೊಂದಲದಲ್ಲಿ ಮುಳುಗಿದ್ದೀರಾ? ಚಿಂತೆಗಳು ಕಾಡುತ್ತಿವೆಯೇ? ಹಾಗಿದ್ದರೆ ಧ್ಯಾನ ಮಾಡಿ! ಹೀಗೊಂದು ಸಲಹೆಯನ್ನು ನಾವು ಬಹಳ ಬಾರಿ ಕೇಳಿರುತ್ತೇವೆ. ಧ್ಯಾನ ಮಾಡುವುದು ಅಂದರೇನು? ಅನ್ನುವ ಪ್ರಶ್ನೆಯೂ ಜೊತೆಗೇ ಮೂಡಿರುತ್ತದೆ.
ಧ್ಯಾನ ಮಾಡುವುದು ಅಂದರೆ ಕಣ್ಣು ಮುಚ್ಚಿಕೊಂಡು ಮೌನವಾಗಿ ಒಂದಷ್ಟು ಹೊತ್ತು ಕುಳಿತುಕೊಳ್ಳುವುದು. ಹಾಗೆ ಕುಳಿತಾಗ ಮನಸಿನಲ್ಲಿ ಬರುವ ಆಲೋಚನೆಗಳನ್ನೆಲ್ಲ ತುಂಡರಿಸುತ್ತ ಹೋಗುವುದು. ಹಾಗೆ ತುಂಡರಿಸುತ್ತ ತುಂಡರಿಸುತ್ತ ಯೋಚನೆಗಳ ಹರಿವು ನಿಂತುಹೋಗುತ್ತದೆ. ಆಗ ಧ್ಯಾನ ಸಂಭವಿಸುತ್ತದೆ. ಮತ್ತು ಆ ಹೊತ್ತು ನಿಮ್ಮ ಮನಸ್ಸು ಶಾಂತಗೊಳ್ಳುತ್ತದೆ. ಅನಂತರ ನೀವು ಉಲ್ಲಾಸ ಹೊಂದುತ್ತೀರಿ, ಒತ್ತಡದಿಂದ ಹೊರಗೆ ಬರುತ್ತೀರಿ.
ಇದು ಬಹುತೇಕವಾಗಿ ಧ್ಯಾನಕ್ಕೆ ಸಿಗುವ ವಿವರಣೆ. ಈ ವಿವರಣೆ ಸರಿಯಾಗಿಯೇ ಇದೆ.
ಆದರೆ, ಧ್ಯಾನಕ್ಕೆ ಕೂರುವುದು ಅಷ್ಟು ಸರಳವೇ? ಮನಸ್ಸಿನಲ್ಲಿ ಹರಿಯುವ ಯೋಚನಾಸರಣಿಯನ್ನು ತುಂಡರಿಸುತ್ತ ಹೋಗುವುದು ಅಷ್ಟು ಸುಲಭದ ಕೆಲಸವೇ? ನಮ್ಮ ತಲೆಯಲ್ಲಿ ಅದೆಷ್ಟು ವಿಚಾರಗಳನ್ನು ತುಂಬಿಕೊಂಡಿರುತ್ತೇವೆ ಅಂದರೆ, ಅಲ್ಲಿ ಹರಿವಿನ ಸರಕು ಮುಗಿಯುವುದೇ ಇಲ್ಲ. ಎದುರು ಬದುರಿಟ್ಟ ಕನ್ನಡಿಯ ಬಿಂಬಗಳಂತೆ ಒಂದರೊಳಗೊಂದು, ಅದರೊಳಗೊಂದು ಮೂಡುತ್ತಾ ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಲೇ ಹೋಗುತ್ತವೆ. ಇದರಿಂದ ಹೊರಗೆ ಬರುವುದು ಹೇಗೆ?
ಧ್ಯಾನಕ್ಕೆ ಕೂರುವುದಕ್ಕೇ ನಮಗೆ ಸಾಧ್ಯವಾಗುವುದಿಲ್ಲ. ಇನ್ನು ಆ ಪ್ರಕ್ರಿಯೆಯಲ್ಲಿ ತೊಡಗುವುದು ಅಷ್ಟು ಸುಲಭವೇ? ನಾವು ಒಗ್ಗಿಸಿಕೊಳ್ಳುವವರೆಗೆ ಯಾವ ಸಂಗತಿಯೂ ಸುಲಭವಾಗಿರುವುದಿಲ್ಲ. ಒಗ್ಗಿಸಿಕೊಂಡ ನಂತರ ಕಷ್ಟ ಅನ್ನುವ ಪದವೇ ನಮ್ಮ ಪಾಲಿಗೆ ಅಸ್ತಿತ್ವದಲ್ಲಿ ಇರುವುದಿಲ್ಲ!
ಏಕಾಏಕಿ ಧ್ಯಾನಕ್ಕೆ ಕೂರುವುದು ಈ ಕಾಲದ ಮಾನಸಿಕತೆಗೆ ಕಷ್ಟವೇ ಸರಿ. ಆದರೆ, ಕೂರದೆಯೂ ಧ್ಯಾನ ನಡೆಸುವ ಅಭ್ಯಾಸವನ್ನು ಖಂಡಿತವಾಗಿಯೂ ಮಾಡಿಕೊಳ್ಳಬಹುದು. ಕ್ರಮೇಣ ಈ ಅಭ್ಯಾಸ ನಮ್ಮನ್ನು ಸುಮ್ಮನೆ ಕೂರುವುದರವರೆಗೂ ಕೊಂಡೊಯ್ಯುತ್ತದೆ.
ಮೊದಲು, ಧ್ಯಾನವೆಂದರೆ ಏನೆಂದು ನೋಡೋಣ.
ವೇದಗಳಿಂದ ಹಿಡಿದು ಝೆನ್’ವರೆಗೆ, ಸಿದ್ಧರಿಂದ ಹಿಡಿದು ಬೈರಾಗಿ ಬಾವುಲರವರೆಗೆ ಧ್ಯಾನಕ್ಕೆ ಇರುವುದು ಒಂದೇ ವ್ಯಾಖ್ಯಾನ. ಅದು, ‘ಸುಮ್ಮನಿರುವುದು’. ಸುಮ್ಮನಿರುವುದು ಅಂದರೆ ಮಾತನಾಡದೆ ಇರುವುದು ಎಂದು. ಆದರೆ, ಸುಮ್ಮನಿರುವುದು ಅಂದರೆ ಮಾತನಾಡದೆ ಇರುವುದು ಎಂದಷ್ಟೇ ಅಲ್ಲ; ಅದಕ್ಕೆ ಮೌನವಾಗಿರುವುದು ಅನ್ನುವುದೇ ಹೆಚ್ಚಿನ ಅರ್ಥ. ಮೌನವಾಗಿರುವುದು ಅಂದರೆ ನಿಶ್ಶಬ್ದವಾಗಿರುವುದು ಎಂದಷ್ಟೇ ಅರ್ಥವಲ್ಲ, ಶಬ್ದಕ್ಕೆ ಸ್ಪಂದಿಸದೆ ಇರುವುದು ಎಂದೂ ಅರ್ಥ.
ಒಂದು ಮಾತಿನಲ್ಲಿ ಹೇಳುವುದಾದರೆ, ಹೊರಗಿನ ಶಬ್ದಕ್ಕೆ ಸ್ಪಂದಿಸದೆ ಇರುವುದು ಮೌನ. ಒಳಗಿನಲ್ಲಿ ಶಬ್ದರಹಿತ ಕಂಪನಕ್ಕೆ ಅವಕಾಶ ಕೊಡದೆ ಇರುವುದು ಮೌನ. ಶಬ್ದ ಹೊರಡುವುದು ತರಂಗಗಳಿಂದ. ಅಂತರಂಗದಲ್ಲಿ ಆಲೋಚನಾ ತರಂಗಗಳು ಏಳದಂತೆ ಇರುವ ಸ್ಥಿತಿಯನ್ನು ರೂಢಿಸಿಕೊಳ್ಳುವುದೇ ಮೌನ.
ನಾವು ಬಾಯಿಯಲ್ಲಿ ಮಾತನಾಡುತ್ತ ಇರುವಾಗಲೂ ಅಂತರಂಗದಲ್ಲಿ ಮೌನವನ್ನು ಕಾಯ್ದುಕೊಳ್ಳಬಹುದು. ಸಶಬ್ದ ಮಾತು ಗಂಟಲಿನ ಕಂಪನ. ಅಂತರಂಗದ ಆಲೋಚನಾ ತರಂಗಗಳು ಕೂಡ ಮಾತು ಎಂದೇ ಕರೆಸಿಕೊಳ್ಳುತ್ತವೆ. ಆದರಿದು ಶಬ್ದವಿಲ್ಲದ ಮಾತು. ಸಶಬ್ದ ಮಾತುಗಳಿಗಿಂತ ಈ ಶಬ್ದರಹಿತ ಮಾತು ಧ್ಯಾನಕ್ಕೆ ಹೆಚ್ಚು ಆತಂಕಕಾರಿ. ಬಾಯಿಯಿಂದ ಹೊರಡುವ ಮಾತು ಸಶಬ್ದವಾಗಿ ಹೊರಗಿನ ಜಗತ್ತನ್ನು ತಲುಪುತ್ತದೆ. ಅದು ಮೆದುಳಿನಲ್ಲಿ ಹುಟ್ಟಿ ಗಂಟಲಲ್ಲಿ ರೂಪ ತಳೆದು, ಬಾಯಿಯ ಮೂಲಕ ಹೊರಹೊಮ್ಮಿ ಗಾಳಿಯಲ್ಲಿ ಲೀನವಾಗುತ್ತದೆ. ಆದರೆ ಅಂತರಂಗದಲ್ಲಿ ಹುಟ್ಟಿಕೊಳ್ಳುವ ಶಬ್ದವಿಲ್ಲದ ಮಾತು ಹೊರಗೆ ಹೋಗಲು ದಾರಿಯಿಲ್ಲ. ಅದು ನಮ್ಮ ಹೃದಯದಲ್ಲೇ ಢಿಕ್ಕಿ ಹೊಡೆಯುತ್ತಾ, ಹೊರಹೋಗುವ ದಾರಿ ಕಾಣದೆ ನಮ್ಮ ವರ್ತನೆಯ ಮೂಲಕ ಹೊರಗೆ ಪ್ರಕಟಗೊಳ್ಳಲು ಕಾತರಿಸುತ್ತಾ ಇರುತ್ತದೆ. ಪರಿಣಾಮವಾಗಿ ನಾವು ಒಳಗೊಳಗೇ ಢಿಕ್ಕಿ ಹೊಡೆದು ಜರ್ಝರಿತವಾದ ಮಾತುಗಳ ಉದ್ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕತೊಡಗುತ್ತೇವೆ.
ಆದ್ದರಿಂದ, ಮೌನ ಅಂದರೆ ಅಂತರಂಗದಲ್ಲಿ ಆಲೋಚನಾ ತರಂಗಗಳು ಎಳದಂತೆ ನೋಡಿಕೊಳ್ಳುವ ಸ್ಥಿತಿ ಎಂದಷ್ಟೆ. ಈ ಮೌನವನ್ನು ಸಾಧಿಸುವುದು ಹೇಗೆ?
ನಾಳೆ ನೋಡೋಣ…
Thumba chennagide namage adyathma da bagge ennu jasthi hele kodi pls