ಚೈನಾ ದೇಶದಲ್ಲಿ ಒಬ್ಬ ಮುದುಕಿಯಿದ್ದಳು. ಸುಮಾರು ಇಪ್ಪತ್ತು ವರ್ಷಗಳಿಂದ ಆಕೆ ಸನ್ಯಾಸಿಯೊಬ್ಬನ ಯೋಗಕ್ಶೇಮ ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಗುಡಿಸಲು ಕಟ್ಚಿಸಿ ಕೊಟ್ಟಿದ್ದಳು. ಅವನು ಧ್ಯಾನ ಮಾಡುವಾಗ ಅವನ ಸಕಲ ಬೇಕು ಬೇಡಗಳ ಬಗ್ಗೆ ನಿಗಾ ವಹಿಸುತ್ತಿದ್ದಳು.
ಹೀಗಿರುವಾಗ ಮುದುಕಿಗೆ ಸನ್ಯಾಸಿಯನ್ನು ಅವನ ಧ್ಯಾನ, ಅಧ್ಯಾತ್ಮದ ವಿಷಯವಾಗಿ ಪರೀಕ್ಷಿಸುವ ಮನಸ್ಸಾಯಿತು. ಆಕೆ ಒಬ್ಬ ಸುಂದರ ಯುವತಿಯನ್ನು ಕರೆಸಿ, ಸನ್ಯಾಸಿಯನ್ನು ಅಪ್ಪಿಕೊಂಡು, ಉತ್ತೇಜಿಸುವಂತೆ ಮನವಿ ಮಾಡಿದಳು.
ಯುವತಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಅವನನನ್ನು ಅಪ್ಪಿಕೊಂಡು “ ಮುಂದೇನು “ ಎಂದು ಕೇಳಿದಳು.
“ ಚಳಿಗಾಲದ ಕೊರೆಯುವ ಬಂಡೆಯ ಮೇಲೆ, ಹಳೆಯ ಮರವೊಂದು ಮತ್ತೆ ಚಿಗಿತು ಕೊಳ್ಳುತ್ತದೆ. ಎಲ್ಲೂ ಅನ್ಯೋನ್ಯತೆಗೆ ಜಾಗವಿಲ್ಲ”
ಸನ್ಯಾಸಿ ಕಾವ್ಯಮಯವಾಗಿ ಉತ್ತರಿಸಿದ.
ಯುವತಿ ನಡೆದ ಸಂಗತಿಯನ್ನೆಲ್ಲ ಮುದುಕಿಗೆ ವಿವರಿಸಿದಳು. ಮುದುಕಿಗೆ ಭಯಂಕರ ಸಿಟ್ಟು ಬಂತು. “ ನಿನ್ನ ಬಯಕೆಗಳ ಬಗ್ಗೆ, ಅಗತ್ಯದ ಬಗ್ಗೆ ಅವನು ವಿಚಾರ ಮಾಡಲಿಲ್ಲ, ನಿನ್ನ ಸ್ಥಿತಿಯ ಬಗ್ಗೆ ಕಾರಣ ಕೇಳಲಿಲ್ಲ. ಅವನು ನಿನ್ನ ಉತ್ತೇಜನಕ್ಕೆ ಪ್ರತಿಕ್ರಿಯಿಸಬೇಕಿರಲಿಲ್ಲ ಆದರೆ ನಿನ್ನ ಬಗ್ಗೆ , ನಿನ್ನ ಸ್ಥಿತಿಯ ಬಗ್ಗೆ ಸಹಾನೂಭೂತಿಯಿಂದ ವರ್ತಿಸಬೇಕಿತ್ತು”
ಎನ್ನುತ್ತಾ ಮುದುಕಿ, ಸನ್ಯಾಸಿಯ ಗುಡಿಸಲಿಗೆ ಬೆಂಕಿ ಹಚ್ಚಿಬಿಟ್ಟಳು.
(ಸಂಗ್ರಹ ಮತ್ತು ಅನುವಾದ: ಚಿದಂಬರ ನರೇಂದ್ರ)