ಝೆನ್ ಗುರು ಹೋಟೀ ಹೆಗಲ ಮೇಲೆ ಆಟಿಕೆ ಚೀಲ ಹೊತ್ತುಕೊಂಡು ಊರೂರು ತಿರುಗುತ್ತಿದ್ದ. ಮಕ್ಕಳಿಗೆ ಆಟಿಕೆ ನೀಡಿ ಖುಷಿಪಡಿಸುತ್ತಿದ್ದ.
ಇದನ್ನು ನೋಡಿದ ಊರಿನ ಜನ ಅವನನ್ನು ಕೇಳಿದರು, “ಹೋಟೀ, ನೀನೊಬ್ಬ ಝೆನ್ ಗುರು. ಹೀಗೆ ಆಟಿಕೆಗಳನ್ನು ಹೊತ್ತು ತಿರುಗುತ್ತಾ ಸಮಯ ವ್ಯರ್ಥ ಮಾಡುತ್ತಿರೋದು ಸರಿಯೇ? ಹೋಗಲಿ… ಝೆನ್ ಅಂದರೇನು ನಿನಗೆ ಗೊತ್ತೆ?”
ಹೋಟಿ ಕೂಡಲೇ ಹೆಗಲ ಮೇಲಿನ ಆಟಿಕೆ ಚೀಲ ಕೆಳಕ್ಕೆ ಹಾಕಿದ.
“ಏನಿದರ ಅರ್ಥ?” ಜನ ಕೇಳಿದರು.
“ಝೆನ್ ಅಂದರೆ, ಹೊರೆಯನ್ನು ಇಳಿಸುವುದು…”
“ಆಮೇಲೆ?”
ಹೋಟಿ ಕೆಳಕ್ಕೆ ಹಾಕಿದ್ದ ಆಟಿಕೆ ಚೀಲವನ್ನು ಹೆಗಲ ಮೇಲೆ ಹೊತ್ತು ನಡೆಯಲಾರಂಭಿಸಿದ.
“ನಿಲ್ಲು ಹೋಟಿ! ಅದೇನೆಂದು ಸರಿಯಾಗಿ ಹೇಳು…” ಜನ ತಾಕೀತು ಮಾಡಿದರು.
“ಹೊತ್ತಿರುವುದು ಹೊರೆಯಲ್ಲ, ಮಕ್ಕಳ ಆಟಿಕೆ ಚೀಲ ಎಂದು ಅರಿಯುವುದೇ ಮುಂದಿನ ಹೆಜ್ಜೆ” ಅನ್ನುತ್ತಾ ಹೋಟಿ ಹಿಂತಿರುಗಿ ನೋಡದೆ ಹೊರಟುಹೋದ.