ಧರ್ಮ : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 27

Inspirational Quotes Kahlil Gibran Life Kahlil Gibran Quotes | K

ವೃದ್ಧ ಪೂಜಾರಿಯೊಬ್ಬ
ಧರ್ಮದ ಬಗ್ಗೆ ಕೇಳಿದ ಪ್ರಶ್ನೆಗೆ
ಅವನು ಉತ್ತರ ಕೊಡತೊಡಗಿದ.

ಈವರೆಗೆ ನಾನು ಮಾತನಾಡಿದ್ದು
ಬೇರೆ ಯಾವುದರ ಬಗ್ಗೆ ಮತ್ತೆ?
ಈ ಎಲ್ಲ ಚಿಂತನೆಗಳು, ಕ್ರಿಯೆಗಳು
ಧರ್ಮವಲ್ಲದೇ ಬೇರಿನ್ನೇನು ?

ಮತ್ತು ಯಾವುದು
ಚಿಂತನೆಯಲ್ಲವೋ, ಕ್ರಿಯೆ ಅಲ್ಲವೋ
ಆದರೆ, ಕೈಗಳು ಕಲ್ಲ ಕೆತ್ತುತ್ತಿರುವಾಗ
ಅಥವಾ ಮಗ್ಗ ನೇಯುತ್ತಿರುವಾಗ
ಆತ್ಮದೊಳಗೆ ಸದಾ ಚಿಮ್ಮುತ್ತಿರುತ್ತವೆಯೋ
ಆ ಕೌತುಕ, ಅಚ್ಚರಿಗಳು ಕೂಡ ಧರ್ಮವೇ ಅಲ್ಲವೆ?

ಯಾರು ತಾನೆ
ತಮ್ಮ ಕ್ರಿಯೆಗಳಿಂದ ಶ್ರದ್ಧೆಯನ್ನೂ
ಉದ್ಯೋಗಗಳಿಂದ ನಿಷ್ಠೆಯನ್ನೂ
ಬೇರೆ ಮಾಡಿ ನೋಡಲು ಸಾಧ್ಯ?

“ ಇದು ಭಗವಂತನ ಪಾಲು
ಇದು ನನ್ನ ಪಾಲು “
“ ಇದು ನನ್ನ ಆತ್ಮಕ್ಕೆ ಮೀಸಲು
ಇದು ನನ್ನ ದೇಹಕ್ಕೆ “
– ಹೀಗೆ ಯಾರಾದರೂ ಸಮಯವನ್ನು
ತಮ್ಮ ಮುಂದೆ ಹರವಿಕೊಂಡು ಕೂಡುವವರಿದ್ದಾರೆಯೆ?

ನಿಮ್ಮ ಎಲ್ಲ ಕಾಲವೂ
ಆಕಾಶದಲ್ಲಿ
ಆತ್ಮದಿಂದ ಆತ್ಮಕ್ಕೆ ಹಾರುತ್ತಿರುವ ಹಕ್ಕಿಯ
ಚಡಪಡಿಸುವ ರೆಕ್ಕೆಗಳೇ ಆಗಿವೆ.

ನೈತಿಕತೆಯೇ ತನ್ನ ಅತ್ಯುತ್ತಮ ಪೋಷಾಕು
ಎಂದು ಬೀಗುವವನು
ಬೆತ್ತಲಾಗಿರುವದೇ ಒಳಿತು.

ಸೂರ್ಯ ಮತ್ತು ಗಾಳಿ
ಅವನ ದೇಹವನ್ನು ಛಿದ್ರಗೊಳಿಸಲಾರವು.

ತನ್ನ ನಡತೆಯನ್ನು
ನ್ಯಾಯ ನೀತಿಗಳ ಮೂಲಕ
ವ್ಯಾಖ್ಯಾನ ಮಾಡುವವನು
ತನ್ನ ಹಾಡುಹಕ್ಕಿಯನ್ನು ಪಂಜರದಲ್ಲಿ
ಕೈದು ಮಾಡಿರುತ್ತಾನೆ.

ಕಂಬಿ, ಸರಳುಗಳ ಹಿಂದಿನಿಂದ
ಕೇಳಿಸುವುದಿಲ್ಲ ನಿರಾಳ ಹಾಡು.

ಯಾರು ಅರ್ಚನಾ ಭಾವವನ್ನು
ಬೇಕೆಂದಾಗ ತೆರೆಯುವ ಹಾಗು
ಮುಚ್ಚಬಹುದಾದ ಕಿಟಕಿ ಎಂದುಕೊಂಡಿರುವರೋ
ಅವರು ಇನ್ನೂ ತಮ್ಮ ಆತ್ಮದ ಮನೆಗೆ ಭೇಟಿ ನೀಡಿಲ್ಲ.
ಆತ್ಮದ ಕಿಟಕಿಗಳು
ಬೆಳಗಿನಿಂದ ಬೆಳಗಿಗೆ ಚಾಚಿಕೊಂಡಿವೆ.

ನಿಮ್ಮ ನಿತ್ಯದ ಬದುಕೇ
ನಿಮ್ಮ ದೇವಸ್ಥಾನ, ನಿಮ್ಮ ಧರ್ಮ.

ಇಂಥ ದೇವಸ್ಥಾನದ ಒಳಗೆ ಕಾಲಿಡುವ ಮೊದಲು
ನಿಮ್ಮ ಸಮಸ್ತವನ್ನೂ ಬೆನ್ನಿಗೆ ಕಟ್ಟಿಕೊಳ್ಳಿ.

ನಿಮ್ಮ ಅಗತ್ಯದ, ನಿಮ್ಮ ಸಂತೋಷದ
ನೇಗಿಲು, ಕುಲುಮೆ,
ಸುತ್ತಿಗೆ, ಕೊಳಲು ನಿಮ್ಮ ಜೊತೆಗಿರಲಿ.

ಕಲ್ಪನೆಗಳ ಲೋಕದಲ್ಲಿ ನೀವು
ನಿಮ್ಮ ಸಾಧನೆಗಳಿಗಿಂತ ಮೇಲೇರಲಾರಿರಿ
ಸೋಲುಗಳಿಗಿಂತ ಕೆಳಗೆ ಕುಸಿಯಲಾರಿರಿ.

ನಿಮ್ಮವರೆಲ್ಲ ನಿಮ್ಮೊಂದಿಗಿರಲಿ;
ಏಕೆಂದರೆ, ಭಕ್ತಿಯಲ್ಲಿ ನೀವು
ಅವರ ನಿರೀಕ್ಷೆಗಳನ್ನು ಮೀರಲಾರಿರಿ
ನಿರಾಸೆಗಳಿಗಿಂತ ಕೆಳಗೆ ಇಳಿಯಲಾರಿರಿ.

ದೇವರನ್ನು ಕಂಡುಕೊಳ್ಳಲು ಬಯಸುವಿರಾದರೆ
ನಿಗೂಢತೆಯನ್ನು ಹಾಗೆಯೇ ಕಾಯ್ದುಕೊಳ್ಳಿ .

ಬದಲಾಗಿ, ಸುತ್ತ ಮುತ್ತ ಗಮನಿಸಿ
ಅವನು ಅಲ್ಲೇ ಎಲ್ಲೋ
ನಿಮ್ಮ ಮಕ್ಕಳೊಡನೆ ಆಟಕ್ಕೆ ನಿಂತಿರುತ್ತಾನೆ.
ತಲೆಯೆತ್ತಿ, ಆಕಾಶದತ್ತ ನೋಡಿ,
ಮೋಡಗಳ ಮೇಲೆ ದಾಪುಗಾಲಿಡುತ್ತ
ಮಿಂಚುಗಳಿಗೆ ಕೈ ಚಾಚುತ್ತ
ಮಳೆಯಾಗಿ ಇಳೆಗೆ ಇಳಿಯುತ್ತಿರುತ್ತಾನೆ.

ಅವನು
ಹೂವುಗಳಲ್ಲಿನಿಂತಿರುತ್ತಾನೆ ನಗುತ್ತ, ಮತ್ತು
ಗಿಡ ಮರಗಳ ನಡುವೆ ಕೈ ಬೀಸುತ್ತ.

ಮುಂದುವರೆಯುತ್ತದೆ……….

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.  

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

3 Comments

Leave a Reply