ಗಾಳಿಯಷ್ಟು ಅವಸರ ನನಗಿಲ್ಲವಾದರೂ ನಾನು ಹೋಗಲೇಬೇಕಾಗಿದೆ : ಬೀಳ್ಕೊಡುಗೆ ~ ಭಾಗ 1 : ಪ್ರವಾದಿ | ಅಧ್ಯಾಯ 28

ಸಂಜೆ ರಂಗೇರತೊಡಗಿತ್ತು.
ಭವಿಷ್ಯವನ್ನು ಕಣ್ಣಿಗೆ ಕಟ್ಟಿಕೊಂಡ ಅಲ್’ಮಿತ್ರ ಮಾತನಾಡಿದಳು.
“ ಈ ದಿನ, ಈ ಜಾಗ, ಮತ್ತು
ಈವರೆಗೆ ಮಾತನಾಡಿದ ನಿನ್ನ ಚೇತನ
ಎಲ್ಲ, ಧನ್ಯ ಭಾಗ್ಯರು “

ಅವನು ಉತ್ತರಿಸಿದ:
ಮಾತನಾಡಿದವನು ನಾನೆ?
ಕೇಳಿದವನೂ ನಾನೇ ಅಲ್ಲವೆ?

ನಂತರ ಅವನು
ದೇವಸ್ಥಾನದ ಮೆಟ್ಟಲಿಳಿದ,
ಜನರೆಲ್ಲ ಅವನ ಹಿಂದೆ ಹೊರಟರು.

ಅವನು ನೇರವಾಗಿ ಹೊರಟು,
ತನ್ನ ಹಡಗು ಹತ್ತಿ
ಮೇಲಿನ ಅಂಗಳದಲ್ಲಿ ನಿಂತ.
ಜನರತ್ತ ಮುಖ ಮಾಡಿ
ದನಿ ಎತ್ತರಿಸಿ ಮಾತನಾಡತೊಡಗಿದ.

ಆರ್ಫಲೀಸ್ ನ ಮಹಾಜನರೇ,
ನಿಮ್ಮನ್ನು ಬಿಟ್ಟು ಹೋಗುವಂತೆ ಗಾಳಿ,
ನನಗೆ ಆದೇಶ ನೀಡುತ್ತಿದೆ.
ಗಾಳಿಯಷ್ಟು ಅವಸರ ನನಗಿಲ್ಲವಾದರೂ
ನಾನು ಹೋಗಲೇಬೇಕಾಗಿದೆ.

ನಾವು ಅಲೆಮಾರಿಗಳು,
ಏಕಾಂತದ ದಾರಿಗಳನ್ನು ಸದಾ ಹುಡುಕುವವರು,
ಎಲ್ಲಿ ದಿನವನ್ನು ಮುಗಿಸುತ್ತೇವೆಯೋ
ಅಲ್ಲಿಯೇ ಮತ್ತೊಂದು ದಿನವನ್ನು ಆರಂಭಿಸದವರು;
ಸೂರ್ಯಾಸ್ತ ಕಂಡ ಜಾಗದಲ್ಲೇ
ಸೂರ್ಯೋದಯವನ್ನು ಕಾಣದವರು.
ಭೂಮಿ ನಿದ್ದೆಯಲ್ಲಿರುವಾಗಲೂ
ಸಂಚಾರ ಮಾಡುವವರು.

ಗಟ್ಟಿ ಗಿಡದ ಬೀಜಗಳು ನಾವು,
ಪಕ್ವವಾದಾಗ, ಪರಿಪೂರ್ಣವಾದಾಗ
ಗಾಳಿಗೆ ಶರಣಾಗಿ
ಎಲ್ಲೆಡೆ ಚದುರಿ ಹೋಗುತ್ತೇವೆ.

ನಾನು ನಿಮ್ಮೊಡನೆ ಕಳೆದ ದಿನಗಳು
ಕೆಲವೇ ಕೆಲವು ಮತ್ತು
ನಿಮ್ಮ ಜೊತೆ ಆಡಿದ ಮಾತುಗಳು
ಇನ್ನೂ ಸಂಕ್ಷಿಪ್ತ.

ನಿಮ್ಮ ಕಿವಿಗಳಲ್ಲಿನ ನನ್ನ ದನಿ ಕ್ಷೀಣವಾದಾಗ
ನಿಮ್ಮ ನೆನಪುಗಳಲ್ಲಿನ ನನ್ನ ಪ್ರೇಮ ನಾಶವಾದಾಗ
ನಾನು ಮತ್ತೆ ಇಲ್ಲಿಗೆ ಬರುತ್ತೇನೆ,
ಇನ್ನೂ ಶ್ರೀಮಂತ ಹೃದಯದೊಂದಿಗೆ,
ಚೇತನಕ್ಕೆ ಶರಣಾದ ತುಟಿಗಳೊಂದಿಗೆ
ಮತ್ತೆ ಮಾತನಾಡುತ್ತೇನೆ.

ಹೌದು ಸಮುದ್ರದ ಅಲೆಗಳನ್ನೇರಿ
ಮತ್ತೆ ಬರುತ್ತೇನೆ,
ಸಾವು ನನ್ನ ಮರೆಯಾಗಿಸಬಹುದು,
ಮಹಾ ಮಾನ ಬಾಯಿಕಟ್ಟಬಹುದು
ಆದರೂ, ಮತ್ತೆ ನಾನು
ನಿಮ್ಮ ತಿಳುವಳಿಕೆಯನ್ನು ಹುಡುಕಿಕೊಂಡು ಬರುತ್ತೇನೆ.

ನನ್ನ ಈ ಹುಡುಕಾಟ ವ್ಯರ್ಥವಲ್ಲ

ನನ್ನ ಮಾತುಗಳು ನಿಜವಾಗಿದ್ದರೆ
ಆ ನಿಜ ಮತ್ತಷ್ಟು ಸ್ಪಷ್ಟ ದನಿಯಲ್ಲಿ ಮತ್ತು
ನಿಮ್ಮ ಮನಸ್ಸಿಗೆ
ಇನ್ನೂ ಹತ್ತಿರವಾಗುವಂಥ ಶಬ್ದಗಳ ಮೂಲಕ
ಪ್ರಕಟವಾಗುವುದು.

ಆರ್ಫಲೀಸ್ ನ ಮಹಾಜನರೇ,
ಗಾಳಿಯೊಡನೆ ಹೋಗುತ್ತಿರುವೆ ಆದರೆ
ಶೂನ್ಯದ ಆಳಕ್ಕಲ್ಲ ;

ಮತ್ತು ಈ ದಿನ,
ನಿಮ್ಮ ಅಗತ್ಯಗಳಿಗೆ ಮತ್ತು ನನ್ನ ಪ್ರೇಮಕ್ಕೆ
ಸಮಾಧಾನ ನೀಡಿರದಿದ್ದರೆ,
ಅದು ಮತ್ತೊಂದು ದಿನದವರೆಗೆ ಭರವಸೆಯಾಗಿಯೇ ಉಳಿಯಲಿ.

ಮನುಷ್ಯನ ಅಗತ್ಯಗಳು ಬದಲಾಗುತ್ತವೆ,
ಆದರೆ ಅವನ ಪ್ರೀತಿಯಲ್ಲ,
ಅವನ ಅಗತ್ಯಗಳನ್ನು ಅವನ ಪ್ರೇಮ ಪೂರೈಸಬೇಕೆಂಬ
ಬಯಕೆಯೂ ಅಲ್ಲ.

ತಿಳಿದುಕೊಳ್ಳಿ,
ಆದ್ದರಿಂದಲೇ ನಾನು ಮತ್ತೆ ವಾಪಸ್ಸಾಗುವೆ
ಮಹಾ ಮೌನದ ಮೂಸೆಯೊಳಗಿಂದ.

ಬೆಳಿಗಿನಲ್ಲಿ ಹರಡಿಕೊಂಡು
ಆಮೇಲೆ ಮಾಯವಾಗಿಬಿಡುವ ಮಂಜು
ಗಿಡ ಮರ ಹೂ ಬಳ್ಳಿಗಳ ಮೇಲೆ ಬಿಟ್ಟು ಹೋಗುವ ಇಬ್ಬನಿ,
ಮೇಲಕ್ಕೇರಿ ಮೋಡವಾಗಿ
ಮತ್ತೆ ಮಳೆಯಾಗಿ ಇಳೆಗಿಳಿಯುತ್ತದೆ.
ನಾನು ಆ ಇಬ್ಬನಿಯಂತಲ್ಲದೇ ಬೇರೇನಲ್ಲ.

ರಾತ್ರಿಯ ಪ್ರಶಾಂತತೆಯಲ್ಲಿ
ನಾನು ನಿಮ್ಮ ರಸ್ತೆಗಳಲ್ಲಿ ಓಡಾಡಿದ್ದೇನೆ ಮತ್ತು
ನನ್ನ ಚೇತನ ನಿಮ್ಮ ಮನೆಗಳನ್ನು ಪ್ರವೇಶ ಮಾಡಿದೆ,

ನಿಮ್ಮ ಹೃದಯದ ಬಡಿತ
ನನ್ನ ಎದೆಯಲ್ಲಿ ಒಂದಾಗಿದೆ
ಮತ್ತು ನಿಮ್ಮ ಉಸಿರು ನನ್ನ ಮುಖದ ಮೇಲೆ
ತಂಗಾಳಿಯಂತೆ ಬೀಸಿದೆ.

ನಿಮ್ಮನ್ನೆಲ್ಲ ಬಲ್ಲೆ ನಾನು.
ಹೌದು, ನಿಮ್ಮ ಸುಖ ದುಃಖಗಳನ್ನೆಲ್ಲ
ಹತ್ತಿರದಿಂದ ನೋಡಿದ್ದೇನೆ ಮತ್ತು
ನಿದಿರೆಯಲ್ಲಿ ನೀವು ಕಾಣುವ ಕನಸುಗಳನ್ನ
ನನ್ನ ಕಣ್ಣಿಂದಲೂ ಕಂಡಿದ್ದೇನೆ.

ಬಹುತೇಕ ನಾನು, ನಿಮ್ಮ ನಡುವೆ
ಪರ್ವತಗಳ ನಡುವಿನ
ಸುಶಾಂತ ಸರೋವರದ ಹಾಗೆ.
ನಿಮ್ಮ ಎತ್ತರ, ಆಳ,
ಹಾಯ್ದು ಹೋಗುವ ವಿಚಾರ ಸರಣಿ, ಬಯಕೆ
ಎಲ್ಲವನ್ನೂ ನಾನು
ನನ್ನದೆಂಬಂತೆ ಪ್ರತಿಫಲಿಸಿರುವೆ.

ನಿಮ್ಮ ಮಕ್ಕಳ ನಗು, ತೊರೆಯಂತೆ
ಹರೆಯದವರ ತುಡಿತ, ನದಿಯಂತೆ
ನನ್ನ ಮೌನದೊಳಗೆ ಜಾಗ ಪಡೆದುಕೊಂಡಿವೆ.

ಆ, ನದಿಗಳು, ತೊರೆಗಳು
ನನ್ನ ಆಳವನ್ನು ಮುಟ್ಟಿದಮೇಲೂ
ತಮ್ಮ ನಿನಾದವನ್ನು ಮುಂದುವರೆಸಿವೆ.
ಆದರೆ, ಆ ನಗೆಗಿಂತಲೂ ಸಿಹಿಯಾದದ್ದು
ಆ ತುಡಿತಕ್ಕಿಂತಲೂ ತೀವ್ರವಾದದ್ದು
ನನ್ನನ್ನು ತಾಕಿದೆ.

ಅದೇ ನಿಮ್ಮೊಳಗಿನ ಅಸೀಮ ;
ಆ ಮಹಾ ಮಾನವನಲ್ಲಿ ನೀವೆಲ್ಲ
ಜೀವಕೋಶಗಳು, ಸ್ನಾಯುಗಳು.

ಅವನ ಬಗೆಗಿನ ನಿಮ್ಮ ಎಲ್ಲ ಹಾಡು
ನಿಶಬ್ದ ಕಂಪನವೇ ಸರಿ.
ಆ ಮಹಾ ಮಾನವನಲ್ಲಿ
ನೀವೂ ಕೂಡ ಮಹೋನ್ನತರು,
ಅವನನ್ನು ಕಣ್ತುಂಬಿಕೊಳ್ಳುವಾಗಲೇ
ನಾನು ನಿಮ್ಮನ್ನು ಕಂಡೆ, ಪ್ರೀತಿಸಿದೆ.

ಏಕೆಂದರೆ,
ಆ ಮಹಾ ಗೋಳದೊಳಿಲ್ಲದ
ಯಾವ ಅಂತರವನ್ನು ತಾನೇ
ಮುಟ್ಟಬಲ್ಲದು ಪ್ರೇಮ?

ಯಾವ ಕಾಣ್ಕೆ, ಯಾವ ನಿರೀಕ್ಷೆ
ಯಾವ ಲೆಕ್ಕಾಚಾರ ತಾನೆ ಮೀರಬಲ್ಲದು
ಆ ಮಹಾ ಯಾತ್ರೆ.
ದೈತ್ಯ ಓಕ್ ಮರವನ್ನು ಆವರಿಸಿಕೊಂಡಿರುವ
ಸೇಬಿನ ಹೂಗಳ ಹಾಗೆ
ನಿಮ್ಮೊಳಗೆ ಆ ಮಹಾ ಮಾನವ .

ಅವನ ಕಸುವು ಕಟ್ಟಿಹಾಕಿದೆ ನಿಮ್ಮನ್ನು ಭೂಮಿಯೊಂದಿಗೆ,
ಅವನ ಸುಗಂಧ ಎತ್ತರಕ್ಕೇರಿಸಿದೆ ನಿಮ್ಮನ್ನು ಆಕಾಶದಲ್ಲಿ,
ಅವನ ನಿರಂತರತೆಯಲ್ಲಿಯೇ
ನೀವು ಸಾವಿನ ಭಯದಿಂದ ಮುಕ್ತರು.

ನಿಮಗೆ ಹೇಳಲಾಗಿದೆ,
ನೀವೊಂದು ಸರಪಳಿಯಂತೆ,
ಸರಪಳಿಯ ದುರ್ಬಲ ಕೊಂಡಿಯಷ್ಟೇ
ನೀವು ದುರ್ಬಲರೆಂದು।
ಆದರೆ ಇದು ಅರ್ಧ ಸತ್ಯ.
ನೀವು ಸರಪಳಿಯ ಬಲಶಾಲಿ ಕೊಂಡಿಯಷ್ಟೇ ಶಕ್ತಿಶಾಲಿಗಳು.

ನಿಮ್ಮ ಅತ್ಯಂತ ಸಣ್ಣ ಕೆಲಸದಿಂದ
ನಿಮ್ಮನ್ನು ಅಳೆಯುವುದೆಂದರೆ
ಸಾಗರದ ಸಾಮರ್ಥ್ಯವನ್ನು
ಅದರ ನೊರೆಯ ಕ್ಷಣಿಕತೆಯಿಂದ ಗುರುತಿಸಿದಂತೆ.
ನಿಮ್ಮ ಸೋಲುಗಳ ಮೂಲಕ
ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದೆಂದರೆ
ಋತುಗಳನ್ನು ಅವುಗಳ ಅಸ್ಥಿರತೆಗಾಗಿ ಹಳಿದಂತೆ.

ಹೌದು, ನೀವೊಂದು ಸಮುದ್ರದಂತೆ,
ಭಾರಿ ಭಾರದ ಹಡಗುಗಳು
ಸಮುದ್ರದ ತೀರದಲ್ಲಿ ಅಲೆಗಳಿಗಾಗಿ ಕಾಯುತ್ತಿರುವಾಗಲೂ
ಸಮುದ್ರದ ಹಾಗೆ; ನೀವೂ ಕೂಡ
ನಿಮ್ಮ ಅಲೆಗಳನ್ನು ಒತ್ತಾಯ ಮಾಡಲಾರಿರಿ.

ಋತುಗಳಂತೆ ನೀವೂ ಕೂಡ;
ನಿಮ್ಮ ಚಳಿಗಾಲದಲ್ಲಿ ನೀವು
ನಿಮ್ಮ ವಸಂತಕ್ಕೆ ಅವಕಾಶ ನೀಡುವುದಿಲ್ಲ,
ಆದರೂ, ನಿಮ್ಮೊಳಗೆ ವಿಶ್ರಾಂತಿಯಲ್ಲಿರುವ ವಸಂತ
ತನ್ನ ನಿದ್ದೆಗಣ್ಣಿನಲ್ಲಿ ಮುಗುಳ್ನಗುತ್ತದೆ,
ಸಿಟ್ಟು ಮಾಡಿಕೊಳ್ಳುವುದಿಲ್ಲ.

“ ಅವನು ನಮ್ಮನ್ನು ಹೊಗಳಿದ “
“ ಅವನು ನಮ್ಮಲ್ಲಿ ಒಳ್ಳೆಯದನ್ನು ಮಾತ್ರ ಕಂಡ “
ನೀವು ಪರಸ್ಪರ ಮಾತಾಡಿಕೊಳ್ಳುವಾಗ
ಹೀಗೆ ಮಾತಾಡಿಕೊಳ್ಳಲಿ
ಎಂದು ನಾನು ಹಾಗೆ ಮಾತಾಡಲಿಲ್ಲ,

ನಿಮ್ಮನ್ನು ನೀವು ಮನಸ್ಸಿನಲ್ಲಿ
ಅರಿತುಕೊಂಡ ಭಾಷೆಯಲ್ಲಿಯೇ ನಾನು ಮಾತನಾಡಿದ್ದೇನೆ ಅಷ್ಟೇ.
ಮತ್ತು ಈ ಶಬ್ದ ಜ್ಞಾನ,
ಶಬ್ದ ರಹಿತ ಜ್ಞಾನದ ನೆರಳಲ್ಲದೆ ಬೇರಿನ್ನೇನು?

ನಮ್ಮ ನಿನ್ನೆಯ ರಾತ್ರಿಗಳ, ಮತ್ತು
ಭೂಮಿ ಇನ್ನೂ ನಮ್ಮನ್ನಷ್ಟೇ ಅಲ್ಲ
ತನ್ನನ್ನೂ ಅರಿತಿರದ ಪುರಾತನ ದಿನಗಳ,
ಹಾಗು , ಭೂಮಿ ತನ್ನ ಗೊಂದಲಗಳ ವಿರುದ್ದ
ತಾನೇ ಬಂಡೆದ್ದ ರಾತ್ರಿಗಳ
ದಾಖಲೆಗಳನ್ನು ಕಾಪಿಟ್ಟ
ನಮ್ಮ ನೆನಪಿನ ಮುದ್ರೆಯಿಂದ ಹೊಮ್ಮುತ್ತಿರುವ
ತರಂಗಳು ಅಲ್ಲವೇ
ನಿಮ್ಮ ಚಿಂತನೆ, ನನ್ನ ಮಾತು?

ಜ್ಞಾನಿಗಳು
ತಮ್ಮ ಜ್ಞಾನವನ್ನು ನಿಮಗೆ ಹಂಚಲೆಂದು
ಹಿಂದೆ, ಬಂದು ಹೋಗಿದ್ದಾರೆ

ನಾನು ಬಂದಿದ್ದು
ನಿಮ್ಮಿಂದ ಜ್ಞಾನ ಗಳಿಸಲೆಂದು:
ಆದರೆ ಪಡೆದುಕೊಂಡದ್ದು ಮಾತ್ರ
ಜ್ಞಾನಕ್ಕಿಂತಲೂ ಮಿಗಿಲಾದದ್ದು.
ಅದೇ, ತನ್ನನ್ನು ತಾನು ವೃದ್ಧಿಸಿಕೊಳ್ಳುತ್ತಲೇ
ನಿಮ್ಮೊಳಗೆ ಸದಾ ಹೊತ್ತಿ ಉರಿಯುತ್ತಿರುವ
ಜ್ವಲಂತ ಚೇತನ.

ಆ ಚೇತನದ ವಿಕಾಸದ ಬಗ್ಗೆ
ನಿಮಗೆ ಗಮನವಿರದೇ ಹೋದರೂ
ನೀವು ಮಾತ್ರ
ಕ್ಷೀಣಿಸುತ್ತಿರುವ ನಿಮ್ಮ ಆಯುಷ್ಯದ ಬಗೆಗೆ
ತಕರಾರು ಮಾಡುತ್ತಲೇ ಇರುತ್ತೀರಿ.

ಗೋರಿಗಳಿಗಂಜುತ್ತಿರುವ ದೇಹಗಳಲ್ಲಿನ
ಬದುಕನ್ನು ಹುಡುಕುತ್ತಿರುವ ಬದುಕೇ
ಆ ಜ್ವಲಂತ ಚೇತನ.

ಗೋರಿಗಳಿಲ್ಲ ಇಲ್ಲಿ.
ಬೆಟ್ಟ ಗುಡ್ಡಗಳು, ಬಯಲುಗಳು
ತೊಟ್ಟಿಲಿನಂತೆ, ಮೆಟ್ಟಿಲುಗಳಂತೆ.

ಎಂದಾದರೂ ನೀವು
ನಿಮ್ಮ ಪೂರ್ವಜರನ್ನು ಮಲಗಿಸಿರುವ
ಗೋರಿಗಳ ಮೂಲಕ ಹಾಯ್ದು ಹೋಗುವಾಗ
ಅವುಗಳ ಮೇಲೆ ಕೊಂಚ ಕಣ್ಣು ಹಾಯಿಸಿ,
ಅಲ್ಲಿ ನೀವು, ನಿಮ್ಮ ಮಕ್ಕಳು
ಕೈ ಕೈ ಹಿಡಿದುಕೊಂಡು ಕುಣಿದಾಡುವುದನ್ನು ಕಾಣುವಿರಿ.
ಬಹುತೇಕ ನೀವು
ನಿಮಗರಿವಿಲ್ಲದಂತೆಯೇ ಖುಶಿ ಖುಶಿಯಾಗಿರುತ್ತೀರಿ.

ಇಲ್ಲಿಗೆ ಸಾಕಷ್ಟು ಜನ ಬಂದರು,
ನಿಮ್ಮ ನಂಬಿಕೆಗೆ ಹೊಂದುವ
ಸಾಕಷ್ಟು ಬಂಗಾರದಂಥ ವಾಗ್ದಾನಗಳನ್ನು ಮಾಡಿದರು,
ನೀವೂ ಅವರಿಗೆ ಸಾಕಷ್ಟು
ಸಂಪತ್ತು, ಅಧಿಕಾರ, ಗೌರವ ಕೊಟ್ಟಿರಿ.

ನಾನು ಯಾವ ವಾಗ್ದಾನವನ್ನೂ ಮಾಡಲಿಲ್ಲ
ಆದರೂ ನೀವು ನನಗೆ ಹೆಚ್ಚಿನ ಉದಾರತೆಯನ್ನೇ ತೋರಿದಿರಿ.
ಬದುಕಿನಾಚೆಯ ಬಗೆಗಿನ
ನನ್ನ ತೃಷೆಯನ್ನು ಇನ್ನೂ ಆಳವಾಗಿಸಿದಿರಿ.

ನಮ್ಮ ಎಲ್ಲ ಉದ್ದೇಶಗಳನ್ನೂ
ಬಾಯಾರಿದ ತುಟಿಗಳನ್ನಾಗಿ,
ಎಲ್ಲ ಬದುಕನ್ನೂ ಕಾರಂಜಿಯನ್ನಾಗಿ
ಬದಲಾಯಿಸುವ ಉಡುಗೊರೆಗಿಂತ
ದೊಡ್ಡ ಉಡುಗೊರೆ
ನಿಸ್ಸಂಶಯವಾಗಿ ಬೇರಾವುದೂ ಇಲ್ಲ.
ಮತ್ತು ಇದರಲ್ಲೇ ಒಂದಾಗಿದೆ ನನ್ನ
ಬಹುಮಾನ ಮತ್ತು ಗೌರವ.

ಈ ಬುಗ್ಗೆಯ ಬಳಿ ನಾನು ಬಾಯಾರಿ ಬಂದಾಗಲೆಲ್ಲ
ಚಿಮ್ಮುವ ನೀರೇ ಬಾಯಾರಿದಂತೆ
ನನಗೆ ಕಾಣಿಸಿದೆ ;
ನಾನು ಅದನ್ನು ಕುಡಿಯುವಾಗ
ಅದು ನನ್ನನ್ನು ಕುಡಿಯುತ್ತದೆ.

ಉಡುಗೊರೆಗಳನ್ನು ಸ್ವೀಕರಿಸುವ ವಿಷಯದಲ್ಲಿ,
ನಿಮ್ಮಲ್ಲಿ ಕೆಲವರು ನನ್ನನ್ನು
ಸ್ವಾಭಿಮಾನಿಯೆಂದೂ
ಸಂಕೋಚದ ಸ್ವಭಾವದವನೆಂದೂ ತಿಳಿದುಕೊಂಡಿದ್ದೀರಿ.
ಹೌದು ನಾನು ಮಹಾ ಸ್ವಾಭಿಮಾನಿ
ಕೂಲಿಯ ವಿಷಯದಲ್ಲಿ ಮಾತ್ರ
ಉಡುಗೊರೆಯ ವಿಷಯದಲ್ಲಿ ಅಲ್ಲ.

ನೀವು ಜೊತೆಗೆ ಊಟಕ್ಕೆ ಕರೆದರೂ
ನಾನು ಬೆಟ್ಟ ಗುಡ್ಡಗಳಲ್ಲಿ ಅಲೆದಾಡುತ್ತ
ಹಣ್ಣು ಆರಿಸಿಕೊಂಡು ತಿಂದೆ,
ನೀವು ನನ್ನ, ನಿಮ್ಮ ಮನೆಗೆ ಕರೆದರೂ
ನಾನು ದೇವಸ್ಥಾನದ ಪ್ರಾಂಗಣದಲ್ಲಿ ನಿದ್ದೆ ಹೋದೆ.

ಆದರೂ ನನ್ನ ದಿನಗಳ ಮತ್ತು
ರಾತ್ರಿಯ ಬಗೆಗಿನ ನಿಮ್ಮ ಪ್ರೇಮ ಭಾವವೇ ಅಲ್ಲವೇ,
ಊಟವನ್ನು ನನ್ನ ಬಾಯಿ, ಪ್ರೀತಿಸುವಂತೆ ಮಾಡಿದ್ದು,
ನಿದಿರೆಯನ್ನು, ಚಿಂತನೆಗಳಿಂದ ಕಟ್ಟಿಹಾಕಿದ್ದು.

ಇದಕ್ಕಾಗಿಯೇ ನನ್ನ ಹೆಚ್ಚಿನ ಹಾರೈಕೆಗಳು ನಿಮಗೆ.
ನೀವು ನನಗೆ ಸಾಕಷ್ಟು ಕೊಟ್ಟಿದ್ದರೂ
ನಿಮಗೆ ಆ ಬಗ್ಗೆ ಗೊತ್ತೇ ಇಲ್ಲ.

ಬಹುತೇಕ, ತನ್ನನ್ನು ತಾನು
ಕನ್ನಡಿಯಲ್ಲಿ ನೋಡಿಕೊಳ್ಳುವ ‘ಅಂತಃಕರಣ’
ಕಲ್ಲಾಗಿ ಬದಲಾಗುತ್ತದೆ.
ತನ್ನನ್ನು ತಾನು
ಸುಂದರ ಹೆಸರಿನಿಂದ
ಕರೆದುಕೊಳ್ಳುವ ‘ಒಳ್ಳೆಯ ಕೆಲಸ’
ಪಾಪದ ತಾಯಿಯಾಗಿ ರೂಪಾಂತರಗೊಳ್ಳುತ್ತದೆ.

ನಿಮ್ಮಲ್ಲಿ ಕೆಲವರು ;
ನನ್ನನ್ನು, ನಿರ್ಲಿಪ್ತನೆಂದೂ, ಏಕಾಂಗಿತನದ ಸೊಕ್ಕನ್ನು
ತಲೆಗೇರಿಸಿಕೊಂಡವನೆಂದು ತಿಳಿದುಕೊಂಡಿದ್ದೀರಿ,

ಗಿಡ ಮರಗಳು ಕರೆದ ಸಭೆಗೆ ಹೋಗುತ್ತಾನೆಂದೂ
ಮನುಷ್ಯರನ್ನು ನಿರ್ಲಕ್ಷಿಸುತ್ತಾನೆಂದೂ
ಮಾತನಾಡಿಕೊಳ್ಳುತ್ತಿರಿ,
ಬೆಟ್ಟ ಗುಡ್ಡಗಳ ಮೇಲೆ ಕುಳಿತು
ನಮ್ಮ ಊರನ್ನು ಕೀಳಾಗಿ ಕಾಣುತ್ತಾನೆಂದು
ಭಾವಿಸಿರುತ್ತೀರಿ.

ಹೌದು ನಿಜ, ನಾನು ಬೆಟ್ಟಗಳನ್ನೇರಿದ್ದು
ದುರ್ಗಮ ಜಾಗಗಳಲ್ಲಿ ಓಡಾಡಿದ್ದು.
ಅಷ್ಟು ಮೇಲೆ ಹತ್ತದೆ, ಅಷ್ಟು ದೂರ ಹೋಗದೆ
ನಿಮನ್ನೆಲ್ಲ ನೋಡುವುದು ಸಾಧ್ಯವಿತ್ತೆ?

ದೂರ ಹೋಗದ ಹೊರತು
ಹತ್ತಿರವಾಗೋದು ಹೇಗೆ ಸಾಧ್ಯ ?

ಮುಂದುವರೆಯುತ್ತದೆ……….

gibranಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.  

ChiNa

ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ.  ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.

 

Leave a Reply