ಶುದ್ಧೀಕರಣ : ತಾವೋ ಧ್ಯಾನ ~ 2

ಶುದ್ಧೀಕರಣವೆಂದ ಕೂಡಲೇ ನಾವು ಅಂತರ್ಮುಖರಾಗುವುದು ಸಹಜ. ನಂಬಿಕೆಯ ಪ್ರಕಾರ ನಮ್ಮ ದೇಹದೊಳಗೆ 36,000 ದೇವತೆಗಳಿದ್ದಾರೆ. ದೇಹಕ್ಕೆ ಸಹಜವಲ್ಲದ ಹಾನಿಕಾರಕ ಆಹಾರವನ್ನು ನಾವು ಸೇವಿಸುವುದಾದರೆ, ನಮ್ಮ ದೇಹವನ್ನು ವಿಷಮಯವನ್ನಾಗಿ ಮಾಡುವುದಾದರೆ ನಮ್ಮೊಳಗಿನ ದೇವತೆಗಳು ಅಸಹ್ಯದಿಂದ ನಮ್ಮನ್ನು ದೂರ ಮಾಡುವುದರಲ್ಲಿ ಸಂಶಯವಿಲ್ಲ ~ ಡೆಂಗ್ ಮಿಂಗ್ ದಾವೋ | ಅನುವಾದ : ಚಿದಂಬರ ನರೇಂದ್ರ

tao

ಪ್ರಾತಃಕಾಲ, ಶುದ್ಧೀಕರಣದ ಕಾಲ,
ಕನಸುಗಳ ತೊಳೆಯಬೇಕು.
ಒಳಗಿನ ದೇವರುಗಳನು ತೊಳೆಯಬೇಕು.
ಮತ್ತು ಚೇತನದ ಸ್ಪಷ್ಟತೆಯನ್ನು ಸಾರಬೇಕು.

ಎಲ್ಲ ಅಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಶುದ್ಘೀಕರಣ ಮೊಟ್ಟ ಮೊದಲ ಪ್ರಕ್ರಿಯೆ. ಅದರಲ್ಲೂ ಮೊದಲು ಬರುವುದು ದೇಹದ ಶುದ್ಧೀಕರಣ. ದೇಹದ ಶುದ್ಧೀಕರಣವೆಂದರೆ, ದೇಹದ ಮಹತ್ವವನ್ನು ನಿರಾಕರಿಸುವುದಲ್ಲ ಬದಲಾಗಿ ಅದರ ಮಹತ್ತತೆಯನ್ನು ಮತ್ತೊಮ್ಮೆ ಒತ್ತಿ ಹೇಳುವುದು. ಒಮ್ಮೆ ದೇಹ ಶುದ್ಧವಾಯಿತೆಂದರೆ ದಿವ್ಯವನ್ನು ಮುಟ್ಟುವ ಕ್ರೀಯೆ ಮತ್ತಷ್ಟು ಹಗುರವಾಗುವುದು.

ಕನಸುಗಳನ್ನು ತೊಳೆಯುವುದೆಂದರೆ, ಬರೀ ನಿದ್ದೆಯಲ್ಲಿನ ನಮ್ಮ ಭ್ರಮೆಗಳನ್ನೂ, ತಲ್ಲಣಗಳನ್ನು ನಿವಾರಿಸಿಕೊಳ್ಳುವುದಲ್ಲ, ನಾವು ನಡೆದಾಡುವಾಗಿನ ಆತಂಕಗಳನ್ನೂ, ಬಯಕೆಗಳನ್ನೂ ಸಹ ಸ್ಷಷ್ಟವಾಗಿ ಗುರುತಿಸುವುದು. ಎಲ್ಲ ಬದುಕು, ಒಂದು ಕನಸು ಹೌದು, ಹಾಗೆಂದ ಮಾತ್ರಕ್ಕೆ ಬದುಕು ಇಲ್ಲ ಅಂತಲ್ಲ, ಬದಲಾಗಿ ನಾವು ಬದುಕಿನ ಮೇಲೆ ಆರೋಪಿಸಿರುವ ಅರ್ಥಗಳಿಗೆ ಸ್ಪಷ್ಟತೆಯಿಲ್ಲ ಎಂದು. ಕನಸುಗಳನ್ನು ತೊಳೆಯುವುದೆಂದರೆ ನಮ್ಮ ಈ ಚಾಳಿಯಿಂದ ಮುಕ್ತರಾಗುವುದು ಅಷ್ಟೇ.

ಶುದ್ಧೀಕರಣವೆಂದ ಕೂಡಲೇ ನಾವು ಅಂತರ್ಮುಖರಾಗುವುದು ಸಹಜ. ನಂಬಿಕೆಯ ಪ್ರಕಾರ ನಮ್ಮ ದೇಹದೊಳಗೆ 36,000 ದೇವತೆಗಳಿದ್ದಾರೆ. ದೇಹಕ್ಕೆ ಸಹಜವಲ್ಲದ ಹಾನಿಕಾರಕ ಆಹಾರವನ್ನು ನಾವು ಸೇವಿಸುವುದಾದರೆ, ನಮ್ಮ ದೇಹವನ್ನು ವಿಷಮಯವನ್ನಾಗಿ ಮಾಡುವುದಾದರೆ ನಮ್ಮೊಳಗಿನ ದೇವತೆಗಳು ಅಸಹ್ಯದಿಂದ ನಮ್ಮನ್ನು ದೂರ ಮಾಡುವುದರಲ್ಲಿ ಸಂಶಯವಿಲ್ಲ.

ಆದರೂ ನಮ್ಮ ಕಾಳಜಿ ದೇಹದೊಳಗಿನ ಈ ದೇವತೆಗಳನ್ನೂ ದಾಟಿ ಸರ್ವಶಕ್ತವಾದ ಆ ಪ್ರಕೃತಿಯೊಡನೆ ಒಂದಾಗುವುದೇ ಆಗಿದೆ. ದೇಹ ಬಾಧೆಗಳು, ದೇಹದ ವಿವಿಧ ಹಂತದ ಕೊಳೆಗಳು ಮತ್ತು ಅಸಂಖ್ಯಾತ ಭ್ರಾಂತಿಗಳನ್ನು ನಿವಾರಿಸಿಕೊಂಡ ಮೇಲೆ ನಮ್ಮ ದೇಹದೊಳಗಿನ ಈ ದೇವತೆಗಳನ್ನೂ ಹೊರ ಹಾಕಬೇಕು ಆಗಲೇ ಆತ್ಮದೊಡನೆ ನಮ್ಮ ವಹಿವಾಟು ನಿರಾತಂಕವಾಗಿ ಸಾಗುತ್ತದೆ.

ಸೂಫಿ ಹಜರತ್ ಶಾಹ್ ನಿಯಾಜ್ ನ ಸಾಲೊಂದು ಹೀಗಿದೆ,

ಅಕ್ಲ್ ಕೆ ಮದರಸೇ ಸೆ ಉಠ್, ಇಷ್ಕ್ ಕೆ ಮೈಕದೇ ಮೇ ಆ
ಜಾಮ್- ಏ ಫನಾ – ಓ ಬೇಖುದಿ, ಅಬ್ ತೋ ಪಿಯಾ, ಜೋ ಹೋ ಸೋ ಹೋ

ಬುದ್ಧಿಯ ಬಾವಿಯಿಂದೆದ್ದೇಳು, ಪ್ರೇಮದ ಮಧುಶಾಲೆಗೆ ಬಾ ಒಮ್ಮೆ
ಸಾವಿನ ಬಟ್ಟಲನ್ನೆತ್ತಿ ಕುಡಿ, ಪರವಶನಾಗು, ಏನಾಗುವುದೋ ಆಗಲಿ ಬಿಡು ಒಮ್ಮೆ.

 

1 Comment

Leave a Reply