ನಿಮ್ಮ SQ (spiritual quotient) ಯಾವ ಮಟ್ಟದಲ್ಲಿದೆ?

ಸ್ಪಿರಿಚುವಲ್ ಕೋಶೆಂಟ್ ಅಥವಾ ಎಸ್‍ಕ್ಯೂ, ಐಕ್ಯೂ ಮತ್ತು ಇಕ್ಯೂಗಳಿಗಿಂತ ಬಹಳ ಮೇಲ್ಮಟ್ಟದ್ದು. `ಒಂದು ಕಂಪ್ಯೂಟರಿಗೆ ಐಕ್ಯೂ ಇರುತ್ತದೆ. ಒಂದು ಪ್ರಾಣಿ ಇಕ್ಯೂ ಹೊಂದಿರಬಹುದು. ಹಾಗಿದ್ದ ಮೇಲೆ ಈ ಎರಡಕಿಂತ ಮೇಲ್‍ಮಟ್ಟದವನಾದ ಮನುಷ್ಯನಲ್ಲಿ ಎಸ್‍ಕ್ಯೂ ಇದ್ದಿರಲೇಬೇಕು. ಅದಿಲ್ಲವಾದರೆ ಆತ ಇನ್ನೂ ಆಂತರಿಕವಾಗಿ ಮನುಷ್ಯನಾಗಿ ವಿಕಾಸಗೊಂಡಿಲ್ಲ ಎಂದೇ ಅರ್ಥ’  ಅನ್ನುತ್ತಾನೆ ಮಾರ್ಷಲ್. ಆತನ ಈ ವಿವರಣೆ ನಾವು ಎಸ್‍ಕ್ಯೂ ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ  ~  ಗಾಯತ್ರಿ

ನುಷ್ಯನನ್ನು ವೈಚಾರಿಕವಾಗಿ ಚಿಂತಿಸಬಲ್ಲ ಪ್ರಾಣಿ ಎಂದು ಕರೆದ ಅರಿಸ್ಟಾಟಲ್. ಆತನ ಈ ಹೇಳಿಕೆ, ಇಪ್ಪತ್ತನೇ ಶತಮಾನದ ಆರಂಭಿಕ ಮನಶ್ಶಾಸ್ತ್ರಜ್ಞರನ್ನು ಯೋಚನೆಗೆ ಹಚ್ಚಿತು. ಮನುಷ್ಯನ ಬುದ್ಧಿಮತ್ತೆಯನ್ನು ಅಳೆಯುವ ಸಾಧನಗಳ ಹುಡುಕಾಟಕ್ಕೆ ಅವರು ತೊಡಗಿದರು. ತಾರ್ಕಿಕ ಪ್ರಶ್ನೆಗಳನ್ನು ಮುಂದಿಟ್ಟು ಮನುಷ್ಯನ ಬುದ್ಧಿಮತ್ತೆಯನ್ನು ಅಳೆಯುವ ಕೆಲಸ ಶುರುವಿಟ್ಟರು. ಅದನ್ನು ಇಂಟೆಲಿಜೆಂಟ್ ಕೋಶೆಂಟ್ – ಐಕ್ಯೂ ಎಂದು ಕರೆದರು. ಯಾರು ಹೆಚ್ಚು ಸಮರ್ಥವಾಗಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವರೋ ಅವರ ಐಕ್ಯೂ ಹೆಚ್ಚಿನದೆಂದು ಸಾರಿದರು.

ಮುಂದೆ 90ರ ದಶಕದಲ್ಲಿ ಡೇನಿಯಲ್ ಗೋಲ್‍ಮನ್ ಎನ್ನುವ ಮನಶ್ಶಾಸ್ತ್ರಜ್ಞ  ನರವಿಜ್ಞಾನ ಮತ್ತು ಮನಶ್ಶಾಸ್ತ್ರಗಳನ್ನು ಆಧರಿಸಿದ ಹೊಸ ಸಂಶೋಧನೆಯೊಂದನ್ನು ಮುಂದಿಟ್ಟ. ಬುದ್ಧಿಮತ್ತೆಯನ್ನು ಸಾರುವ ಇಂಟೆಲಿಜೆಂಟ್ ಕೋಶೆಂಟ್‍ಗಿಂತಲೂ ಆ ಬುದ್ಧಿಯನ್ನು ಯಾವಾಗ, ಎಲ್ಲಿ, ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಭಾವನಾತ್ಮಕವಾಗಿ ನಿರ್ಧರಿಸುವ `ಎಮೋಶನಲ್ ಕೋಶೆಂಟ್’ ಹೆಚ್ಚಿನದು ಎಂದು ವಾದಿಸಿದ. ಹಲವು ಸ್ತರಗಳಲ್ಲಿ ಸಾಬೀತಾದ ಆತನ ಈ ಸಂಶೋಧನೆ ಎಲ್ಲರ ಮನ್ನಣೆಗೆ ಪಾತ್ರವಾಯಿತು. ಇದರೊಂದಿಗೆ, ಉನ್ನತ ಐಕ್ಯೂ ಇರುವವರಿಗಿಂತ ಇಕ್ಯೂ ಉಳ್ಳವರು  ಹೆಚ್ಚು ಮೇಧಾವಿಗಳೆಂದು ಪರಿಗಣಿಸುವ ಪದ್ಧತಿ ಆರಂಭಗೊಂಡಿತು.

ಎರಡು ಸಾವಿರದ ಇಸವಿಯ ವೇಳೆಗೆ ಮತ್ತೊಂದು ವಾದ ಸುದ್ದಿ ಮಾಡತೊಡಗಿತು. ಎಷ್ಟು ಉನ್ನತ ಮಟ್ಟದ ಐಕ್ಯೂ, ಇಕ್ಯೂಗಳನ್ನು ಹೊಂದಿರುವವರು ಕೂಡ ಸಮಸ್ಯೆಯ ಸುಳಿಯಲ್ಲಿರುತ್ತಾರೆ. ಖಿನ್ನತೆ, ಅಶಾಂತಿಯೇ ಮೊದಲಾದ ಬಾಧೆಗಳಿಂದ ನಲಗುತ್ತಾರೆ. ಯಾವುದೇ ತೋರಿಕೆಯ ಜ್ಞಾನ ಹೊಂದಿರದ ಸಾಮಾನ್ಯ ಹಳ್ಳಿಗನೊಬ್ಬ ಹೆಚ್ಚು ಸಂತಸದಿಂದಿರುತ್ತಾನೆ. ತನ್ನ ವ್ಯಾಪ್ತಿಯ ಚಿಕ್ಕ-ದೊಡ್ಡ ಸಮಸ್ಯೆಗಳನ್ನು ಅನಾಯಾಸವಾಗಿ ಪರಿಹರಿಸಿಕೊಂಡು ಮುನ್ನಡೆಯುತ್ತಾನೆ. ಇದಕ್ಕೇನು ಕಾರಣ? ಈ ಪ್ರಶ್ನೆಯ ಬೆನ್ನು ಹತ್ತಿ ಸಂಶೋಧನೆ ನಡೆಸಿದ ಝೋಹರ್ ಮತ್ತು ಮಾರ್ಷಲ್, ಅಂಥವರಲ್ಲಿ  `ಅಧ್ಯಾತ್ಮಿಕ ಅರಿವಿನ’ ಇರುವಿಕೆಯನ್ನು ಪತ್ತೆ ಹಚ್ಚಿದರು. ಈ ಅರಿವನ್ನು `ಸ್ಪಿರಿಚುವಲ್ ಕೋಶೆಂಟ್’ ಎಂದು ಕರೆಯಲಾಯ್ತು.

ಸ್ಪಿರಿಚುವಲ್ ಕೋಶೆಂಟ್ ಅಥವಾ ಎಸ್‍ಕ್ಯೂ, ಐಕ್ಯೂ ಮತ್ತು ಇಕ್ಯೂಗಳಿಗಿಂತ ಬಹಳ ಮೇಲ್ಮಟ್ಟದ್ದು. `ಒಂದು ಕಂಪ್ಯೂಟರಿಗೆ ಐಕ್ಯೂ ಇರುತ್ತದೆ. ಒಂದು ಪ್ರಾಣಿ ಇಕ್ಯೂ ಹೊಂದಿರಬಹುದು. ಹಾಗಿದ್ದ ಮೇಲೆ ಈ ಎರಡಕಿಂತ ಮೇಲ್‍ಮಟ್ಟದವನಾದ ಮನುಷ್ಯನಲ್ಲಿ ಎಸ್‍ಕ್ಯೂ ಇದ್ದಿರಲೇಬೇಕು. ಅದಿಲ್ಲವಾದರೆ ಆತ ಇನ್ನೂ ಆಂತರಿಕವಾಗಿ ಮನುಷ್ಯನಾಗಿ ವಿಕಾಸಗೊಂಡಿಲ್ಲ ಎಂದೇ ಅರ್ಥ’  ಎನ್ನುತ್ತಾನೆ ಮಾರ್ಷಲ್. ಆತನ ಈ ವಿವರಣೆ ನಾವು ಎಸ್‍ಕ್ಯೂ ಬೆಳೆಸಿಕೊಳ್ಳಬೇಕಾದ ಅಗತ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

ತಾಮಸಿಕ, ರಾಜಸಿಕ, ಸಾತ್ವಿಕ ಗುಣಗಳು….

ಭಗವದ್ಗೀತೆಯಲ್ಲಿ ತಾಮಸಿಕ, ರಾಜಸಿಕ ಹಾಗೂ ಸಾತ್ವಿಕ ಎಂಬ ಮೂರು ಗುಣಗಳ ಬಗ್ಗೆ ಹೇಳಲಾಗಿದೆ. ಅವನ್ನು ಮೇಲಿನ ಐಕ್ಯೂ, ಇಕ್ಯೂ ಹಾಗೂ ಎಸ್‍ಕ್ಯೂಗಳಿಗೆ ಹೋಲಿಸಬಹುದು. ಕೇವಲ ಬುದ್ಧಿವಂತಿಕೆಯನ್ನು ಯಾರು ಬೇಕಾದರೂ ಹೊಂದಿರಬಲ್ಲರು. ಒಬ್ಬ ಭಯೋತ್ಪಾದಕ ಕೂಡ ಚುರುಕು ಬುದ್ಧಿಯನ್ನು, ಕಾರ್ಯಚಾಣಾಕ್ಷತೆಯನ್ನು ಹೊಂದಿರಬಲ್ಲ. ತನ್ನ ಕಾರ್ಯದತ್ತ ದೃಢಮನಸ್ಕನಾಗಿ ತೊಡಗಿಕೊಳ್ಳಬಲ್ಲ, ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲ. ಹೀಗೆ ಅವನ ಐಕ್ಯೂ ಅತ್ಯುನ್ನತ ಮಟ್ಟದ್ದಾಗಿದೆ ಎಂದ ಮಾತ್ರಕ್ಕೆ ಆತ ಶ್ರೇಷ್ಠ ವ್ಯಕ್ತಿಯಾಗಬಲ್ಲನೆ? ಆತನಿಗೆ ಬುದ್ಧಿ ಇದೆಯೇನೋ ಸರಿ, ಆದರೆ ಸರಿ ತಪ್ಪು ನಿರ್ಧರಿಸಬಲ್ಲ ಎಮೋಷನಲ್ ಕೋಶೆಂಟ್ ಅತ್ಯಂತ ತಳಮಟ್ಟದಲ್ಲಿರುತ್ತದೆ. ಅಂತಹ ವ್ಯಕ್ತಿ ಶ್ರೇಷ್ಠತೆಯ ನೆರಳನ್ನೂ ಸೋಕಲಾರ. ಇಂತಹವರನ್ನು ಭಗವದ್ಗೀತೆ ತಮೋಗುಣವುಳ್ಳವರು ಎಂದು ಕರೆಯುತ್ತದೆ.

ಮಹಾಭಾರತದಲ್ಲಿ ದುರ್ಯೋಧನ `ಜಾನಾಮಿ ಧರ್ಮಮ್ ನ ಚ ಮೇ ಪ್ರವೃತ್ತಿಃ ಜಾನಾಮ್ಯಧರ್ಮಮ್ ನ ಚ ಮೇ ನಿವೃತ್ತಿಃ’ ಎನ್ನುತ್ತಾನೆ. ದುರ್ಯೋಧನ ಮಹಾನ್ ಚಾಣಾಕ್ಷ. ಅವನ ಐಕ್ಯೂ ಉನ್ನತ ಮಟ್ಟದಲ್ಲಿದೆ. ಆತ ಧರ್ಮಾಧರ್ಮಗಳನ್ನು ಅರಿಯಬಲ್ಲವನಾಗಿದ್ದಾನೆ. ಆದ್ದರಿಂದ ಅವನ ಇಕ್ಯೂ ಕೂಡ ಸಾಕಷ್ಟು ಹೆಚ್ಚಿನದಾಗಿದೆ. ಮಹಾಭಾರತದ ಪ್ರಕ್ಷೇಪಗಳಲ್ಲಿ ದುರ್ಯೋಧನನ ತಾಜ್ಯ ಸುಭಿಕ್ಷವಾಗಿತ್ತೆಂದೂ ಆತನ ಆಡಳಿತ ಉತ್ತಮವಾಗಿತ್ತೆಂದೂ ಹೇಳಲಾಗಿದೆ. ಹೀಗಿರುವಾಗ ಆತನೇಕೆ ಯಶಸ್ಸು ಕಾಣಲಿಲ್ಲ? ಲೋಕಮಾನ್ಯನಾಗಲಿಲ್ಲ? ಕಾರಣವಿದೆ. ದುರ್ಯೋಧನನದ್ದು ರಜೋಗುಣ. ಆತನಲ್ಲಿ ತಾನು ಅರಿತುಕೊಂಡ ಹಾದಿಯಲ್ಲಿ ನಡೆಯಬೇಕೆಂಬ ಬದ್ಧತೆಯಿಲ್ಲ. ದುರ್ಯೋಧನನಲ್ಲಿ ಎಸ್‍ಕ್ಯೂ ಕನಿಷ್ಠ ಮಟ್ಟದಲ್ಲಿದ್ದುದೇ ಈ ಕೊರತೆಗೆ ಮುಖ್ಯ ಕಾರಣ.

ಒಂದೇ ಕುಟುಂಬ, ಒಂದೇ ಹಿನ್ನೆಲೆಯಿಂದ ಬಂದವರಾದ ಪಾಂಡವರು ದುರ್ಯೋಧನಾದಿಗಳಿಗಿಂತ ಭಿನ್ನರಾಗುವುದು, ಅವರು ಎಸ್‍ಕ್ಯೂ ಅನ್ನು ಹೊಂದಿದ್ದ ಕಾರಣದಿಂದಲೇ. ಸರಿ ತಪ್ಪುಗಳನ್ನು ತಿಳಿಯುವುದಷ್ಟೆ ಅಲ್ಲ, ಆ ಮಾರ್ಗದಲ್ಲಿ ನಡೆಯಬೇಕೆನ್ನುವ ಅರಿವೂ ಅವರಲ್ಲಿದ್ದುದು ಅವರ ಆಧ್ಯಾತ್ಮಿಕ ಅರಿವಿನ ಫಲ. ಯಾರಲ್ಲಿ ಸ್ಪಿರಿಚುವಲ್ ಕೋಶೆಂಟ್ ಉನ್ನತ ಹಂತದಲ್ಲಿರುತ್ತದೆಯೋ ಅವರು ಸಾತ್ವಿಕರಾಗಿರುತ್ತಾರೆ. ಅವರ ಸಾಮರ್ಥ್ಯ ಉಳಿದೆಲ್ಲರಿಗಿಂತ ಹೆಚ್ಚಿನದು.

SQ ಹೊಂದಿದ್ದರೇನು ಲಾಭ?

ಐಕ್ಯೂ, ಇಕ್ಯೂ ಮತ್ತು ಎಸ್‍ಕ್ಯೂಗಳನ್ನು ಪಿರಮಿಡ್ ಆಕೃತಿಯಲ್ಲಿ ಹೊಂದಿಸಿದರೆ, ಐಕ್ಯೂ ಪಿರಮಿಡಡಿನ ತುತ್ತ ತುದಿ, ಎಸ್‍ಕ್ಯೂ ತಳಪಾಯದಂತೆ. ಸ್ಪಿರಿಚುವಲ್ ಕೋಶೆಂಟ್‍ನ ಪ್ರಮಾಣದ ಮೇಲೆ ಉಳಿದೆರಡರ ಸಾರ್ಥಕತೆ ನಿರ್ಧಾರಗೊಳ್ಳುತ್ತದೆ. ಪಿರಮಿಡ್ಡಿನ ತುದಿ ದೂರದೂರಕ್ಕೂ ಕಾಣುವಂತೆ ಐಕ್ಯೂ ಬಹಳ ಬೇಗ ಗಮನಕ್ಕೆ ಬರುವಂಥದ್ದು. ಆದರೆ ಅದರ ಮಹತ್ವ ಆ ತುದಿಯ ವ್ಯಾಪ್ತಿಯಷ್ಟೇ ಸಂಕುಚಿತವಾಗಿರುತ್ತದೆ. ಹಾಗೆಯೇ ಹತ್ತಿರ ಬರದ ಹೊರತು ಸುಲಭಕ್ಕೆ ಕಾಣಸಿಗದ ತಳಪಾಯದಂತೆ ಸ್ಪಿರಿಚುವಲ್ ಕೋಶೆಂಟ್ ಕೂಡಾ. ಮಹತ್ವದ ದೃಷ್ಟಿಯಿಂದಲೂ ಅದು ತಳಪಾಯದಷ್ಟೇ ಪ್ರಾಮುಖ್ಯತೆಯುಳ್ಳದ್ದು, ವ್ಯಾಪ್ತವಾದದ್ದು. 

ಈ  ಸ್ಪಿರಿಚುವಲ್ ಕೋಶೆಂಟ್ ಅನ್ನು ಹಲವು ಮಾನದಂಡಗಳಲ್ಲಿ ಅಳೆಯಲಾಗುತ್ತದೆ. ವ್ಯಕ್ತಿಯು ಎಷ್ಟು ಸಮಾಜಮುಖಿಯಾಗಿದ್ದಾನೆ, ಶೋಧನಾ ನಿರತನಾಗಿದ್ದಾನೆ (ಆಂತರಿಕ ಶೋಧನೆ), ಕಲಾತ್ಮಕ ಪ್ರವೃತ್ತಿಯವನಾಗಿದ್ದಾನೆ, ವಾಸ್ತವ ಪ್ರಜ್ಞೆಯುಳ್ಳವನಾಗಿದ್ದಾನೆ ಇತ್ಯಾದಿಗಳ ಆಧಾರದ ಮೇಲೆ ಆತನ ಆಧ್ಯಾತ್ಮಿಕತೆಯನ್ನು ಅಳೆಯಲಾಗುತ್ತದೆ. ಸ್ಪಿರಿಚುವಲ್ ಕೋಶೆಂಟ್‍ಗೂ ಧಾರ್ಮಿಕತೆಗೂ ಸಂಬಂಧವಿಲ್ಲ. ದಿನವಿಡೀ ಪ್ರಾರ್ಥನೆ ಸಲ್ಲಿಸುವವನ ಎಸ್‍ಕ್ಯೂ ಅತ್ಯುನ್ನತ ಮಟ್ಟದ್ದೆಂದು ಹೇಳಲು ಬರುವುದಿಲ್ಲ. ಹಾಗೆಯೇ ನಾಸ್ತಿಕನಿಗೆ ಎಸ್‍ಕ್ಯೂ ಇರುವುದೇ ಇಲ್ಲ ಎನ್ನುವುದೂ ದೊಡ್ಡ ಪ್ರಮಾದವಾದೀತು. ಯಾರು ಒತ್ತಡರಹಿತ ಜೀವನ ನಡೆಸುತ್ತಾರೋ, ಪ್ರತಿಯೊಂದು ಸಮಸ್ಯೆಗೂ ತಾವೇ ಮೂಲ ಎಂಬುದನ್ನರಿತುಕೊಂಡು ಪರಿಹಾರವನು ತಮ್ಮೊಳಗೇ ಹುಡುಕುತ್ತಾರೋ, ದುಶ್ಚಟಗಳಿಂದ ದೂರವಿರುತ್ತಾರೋ, ಸಮಾಜದ ಹಿತಚಿಂತನೆಯಲ್ಲಿ ತೊಡಗಿರುತ್ತಾರೋ, ಆತ್ಮವಿಶ್ವಾಸಿಗರಾಗಿರುತ್ತಾರೋ ಅವರ ಎಸ್‍ಕ್ಯೂ ಅತ್ಯುನ್ನತ ಸ್ತರದಲ್ಲಿರುತ್ತದೆ ಮತ್ತು ಅಂತಹ ವ್ಯಕ್ತಿ ಯಾವುದೇ ಹಿನ್ನೆಲೆಯಿಂದ ಬಂದಿದ್ದರೂ ಸರ್ವಮಾನ್ಯರಾಗುತ್ತಾರೆ.

 

Leave a Reply